Justice M Nagaprasanna and Karnataka HC's Dharwad Bench
Justice M Nagaprasanna and Karnataka HC's Dharwad Bench 
ಸುದ್ದಿಗಳು

ವೈದ್ಯಕೀಯ ಸಂಸ್ಥೆಗೆ ನಿರ್ದೇಶಕರನ್ನು ನೇಮಕ ಮಾಡುವಾಗ ಅರ್ಹತೆಯಲ್ಲಿ ರಾಜಿ ಮಾಡಿಕೊಳ್ಳಲಾಗದು: ಹೈಕೋರ್ಟ್‌

Bar & Bench

“ವೈದ್ಯಕೀಯ ಸಂಸ್ಥೆಗೆ ನಿರ್ದೇಶಕರನ್ನು ನೇಮಕ ಮಾಡುವಾಗ ಅರ್ಹತೆಯಲ್ಲಿ ರಾಜಿ ಮಾಡಿಕೊಳ್ಳಲಾಗದು” ಎಂದಿರುವ ಕರ್ನಾಟಕ ಹೈಕೋರ್ಟ್‌ನ ಧಾರವಾಡ ಪೀಠವು ಹಾವೇರಿ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಮೊದಲ ನಿರ್ದೇಶಕ ಸ್ಥಾನದಿಂದ ತನ್ನನ್ನು ತೆಗೆದು ಮೊದಲಿದ್ದ ಹುಬ್ಬಳ್ಳಿಯ ಕಿಮ್ಸ್‌ನಲ್ಲಿ ಪ್ರೊಫೆಸರ್‌ ಸ್ಥಾನದಲ್ಲಿ ಮುಂದುವರಿಸಿದ್ದನ್ನು ಪ್ರಶ್ನಿಸಿ ಡಾ.ಉದಯ್ ಮುಳುಗುಂದ್ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಾಲಯ ಈಚೆಗೆ ವಜಾಗೊಳಿಸಿದೆ.

ಡಾ.ಉದಯ್ ಮುಳಗುಂದ್ ಅವರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ನೇತೃತ್ವದ ಏಕಸದಸ್ಯ ಪೀಠವು ಯಾವುದೇ ವೈದ್ಯಕೀಯ ವಿಜ್ಞಾನ ಸಂಸ್ಥೆಗಳಲ್ಲಿನ ಮೊದಲ ಡೀನ್ ಕಮ್ ನಿರ್ದೇಶಕ ಸ್ಥಾನಕ್ಕೆ ನೇಮಕ ಮಾಡುವಾಗ ಯಾವುದೇ ಸಂದರ್ಭದಲ್ಲೂ ಅರ್ಹತೆಗಳನ್ನು ಗಾಳಿಗೆ ತೂರುವಂತಿಲ್ಲ ಎಂದು ಆದೇಶ ಮಾಡಿದೆ.

ಹಾವೇರಿ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ನಿಯಮ ಮತ್ತು ನಿಬಂಧನೆಗಳು 2017 ಪ್ರಕಾರ ಸೇವಾ ಷರತ್ತು ಅಥವಾ ನೇಮಕ ನಿಯಮಗಳನ್ನು ಪಾಲನೆ ಮಾಡಿಯೇ ಸರ್ಕಾರ ಆದೇಶ ಹೊರಡಿಸಿದೆ. ಭಾರತೀಯ ವೈದ್ಯಕೀಯ ಮಂಡಳಿಯ ನಿಬಂಧನೆಗಳ ಅನ್ವಯ ನಿರ್ದೇಶಕ ಸ್ಥಾನಕ್ಕೆ ಕನಿಷ್ಠ ಅರ್ಹತೆಗಳನ್ನು ಆಧರಿಸಿಯೇ ಮಾಡಬೇಕು. ಅದರಂತೆ ಹೊಸ ನೇಮಕಾತಿ ಮಾಡಲಾಗಿದೆ ಎಂದು ನ್ಯಾಯಾಲಯ ಆದೇಶಿಸಿದೆ.

ನಿಯಮದಂತೆ ನಿರ್ದೇಶಕ ಸ್ಥಾನಕ್ಕೆ ಪ್ರೊಫಸರ್ ಆಗಿ ಐದು ವರ್ಷ ಪೂರೈಸಿರುವ ಅರ್ಹತೆ ಇರಬೇಕಾಗಿತ್ತು. ಆದರೆ, ಆ ಅರ್ಹತೆ ಅರ್ಜಿದಾರರಿಗೆ ಇರಲಿಲ್ಲ. ಅವರು 2019ರಲ್ಲಿ ಪ್ರೊಫೆಸರ್ ಆಗಿದ್ದಾರೆ. ಹೀಗಾಗಿ ಅವರು ನಿರ್ದೇಶಕ ಸ್ಥಾನಕ್ಕೆ ಅರ್ಹರಲ್ಲ ಎಂದು ಪೀಠ ಅಭಿಪ್ರಾಯಪಟ್ಟಿದೆ.

ಅರ್ಜಿದಾರರು, ತನಗೆ ನಿರ್ದೇಶಕ ಸ್ಥಾನಕ್ಕೆ ಬೇಕಾದ ಎಲ್ಲಾ ಅರ್ಹತೆಗಳಿವೆ. ನೇರ ನೇಮಕಾತಿಗೆ ಮಾತ್ರ ನಿಗದಿತ ಮಾನದಂಡಗಳನ್ನು ಪಾಲಿಸಬೇಕು. ಆದರೆ ಸರ್ಕಾರ ಮಾಡುವ ನೇಮಕಗಳಿಗೆ ಅದು ಅನ್ವಯವಾಗುವುದಿಲ್ಲ. ನಾಲ್ಕು ವರ್ಷದ ಅವಧಿಯವರೆಗೆ, ಇಲ್ಲವೇ ಮುಂದಿನ ಆದೇಶದವರೆಗೆ ಎಂದು ತಮ್ಮನ್ನು ನೇಮಕ ಮಾಡಿ ಅವಧಿಗೆ ಮುನ್ನವೇ ಆ ಸ್ಥಾನದಿಂದ ಪದಚ್ಯುತಗೊಳಿಸಿರುವುದು ಕಾನೂನುಬಾಹಿರ ಎಂದು ವಾದಿಸಿದ್ದರು.

ಪ್ರಕರಣದ ಹಿನ್ನೆಲೆ: ಅರ್ಜಿದಾರರಿಗೆ 2019ರಲ್ಲಿ ಪ್ರೊಫೆಸರ್ ಹುದ್ದೆಗೆ ಬಡ್ತಿ ನೀಡಲಾಗಿತ್ತು. ಹುಬ್ಬಳ್ಳಿಯ ಕಿಮ್ಸ್‌ನಲ್ಲಿ ಮೂರು ವರ್ಷ ಪ್ರೊಫೆಸರ್ ಆಗಿ ಸೇವೆ ಸಲ್ಲಿಸಿದ ನಂತರ, ಅವರನ್ನು ಹಾವೇರಿಯಲ್ಲಿ ಹೊಸದಾಗಿ ಆರಂಭವಾಗಲಿರುವ ವೈದ್ಯಕೀಯ ವಿಜ್ಞಾನ ಸಂಸ್ಥೆಗೆ ವಿಶೇಷಾಧಿಕಾರಿಯನ್ನಾಗಿ ನೇಮಕ ಮಾಡಲಾಗಿತ್ತು. ಆನಂತರ 2022ರ ಜುಲೈ 12ರಂದು ನಾಲ್ಕು ವರ್ಷಗಳ ಅವಧಿಗೆ ಹಾವೇರಿ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ನಿರ್ದೇಶಕರಾಗಿ ನೇಮಕ ಮಾಡಲಾಗಿತ್ತು.  ಆದರೆ, ಅದಕ್ಕೂ ಮುನ್ನವೇ 2023ರ ಸೆಪ್ಟೆಂಬರ್‌ 12ರಂದು ವೈದ್ಯಕೀಯ ನಿರ್ದೇಶನಾಲಯ ಎಂ ವಿ ಪ್ರದೀಪ್ ಕುಮಾರ್ ಅವರನ್ನು ಹಾವೇರಿ ವೈದ್ಯಕೀಯ ಸಂಸ್ಥೆಗಳ ನಿರ್ದೇಶಕರನ್ನಾಗಿ ನೇಮಕ ಮಾಡಿ, ಉದಯ್ ಮುಳಗುಂದ್ ಅವರನ್ನು ಮತ್ತೆ ಹುಬ್ಬಳ್ಳಿಯ ಪ್ರೊಫೆಸರ್ ಹುದ್ದೆಗೆ ವಾಪಸ್ ಕಳುಹಿಸಿತ್ತು. ಈ ಆದೇಶ ಪ್ರಶ್ನಿಸಿ ಅವರು ಹೈಕೋರ್ಟ್ ಮೆಟ್ಟಿಲೇರಿದ್ದರು.

Dr. Uday Mulgund Vs State of Karnataka.pdf
Preview