Justice R Devdas, Karnataka High Court 
ಸುದ್ದಿಗಳು

ಒಕ್ಕಲಿಗರ ಸಂಘದ ಹಾಲಿ ಪದಾಧಿಕಾರಿಗಳ ವಿರುದ್ಧ ಅವಿಶ್ವಾಸ ನಿರ್ಣಯ ಮಂಡನೆ: ಹೊಸ ಪ್ರಕ್ರಿಯೆ ಪಾಲಿಸಲು ಹೈಕೋರ್ಟ್‌ ಆದೇಶ

ಪದೇ ಪದೇ ಪದಾಧಿಕಾರಿಗಳ ವಿರುದ್ಧ ಹಕ್ಕುಚ್ಯುತಿ ಮಂಡನೆ ತಪ್ಪಿಸಲು ಕಾರ್ಯಕಾರಿ ಸಮಿತಿ ಸದಸ್ಯರ ಆಯ್ಕೆ ನಂತರ ಒಂದು ವರ್ಷ ಅವಿಶ್ವಾಸ ನಿರ್ಣಯ ಮಂಡನೆ ಮಾಡದಂತೆ ಸಂಘದ ನಿಯಮಗಳಿಗೆ ತಿದ್ದುಪಡಿ ತರುವುದು ಸೂಕ್ತ ಎಂದಿರುವ ನ್ಯಾಯಾಲಯ.

Bar & Bench

ಒಕ್ಕಲಿಗರ ಸಂಘದ ಹಾಲಿ ಪದಾಧಿಕಾರಿಗಳ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸುವುದಾದರೆ ಆ ಪ್ರಕ್ರಿಯೆಯನ್ನು ಹೊಸದಾಗಿ ಕೈಗೊಳ್ಳಬೇಕು ಎಂದು ಕರ್ನಾಟಕ ಹೈಕೋರ್ಟ್‌ ಆದೇಶಿಸಿದೆ.

ಎರಡೂ ಬಣಗಳು ಯಥಾಸ್ಥಿತಿ ಕಾಯ್ದುಕೊಳ್ಳಬೇಕು ಎಂದು ಸಿವಿಲ್‌ ನ್ಯಾಯಾಲಯ ನೀಡಿದ್ದ ಆದೇಶ ಪ್ರಶ್ನಿಸಿ ಕೆ ವಿ ರೇಣುಕಾಪ್ರಸಾದ್‌ ಮತ್ತಿತರರು ಸಲ್ಲಿಸಿದ್ದ ಹಲವು ಅರ್ಜಿಗಳನ್ನು ನ್ಯಾಯಮೂರ್ತಿ ಆರ್‌ ದೇವದಾಸ್‌ ಅವರ ಏಕಸದಸ್ಯ ಪೀಠವು ಭಾಗಶಃ ಮಾನ್ಯ ಮಾಡಿದೆ.

ಅರ್ಜಿದಾರರು ಅಥವಾ ಕಾರ್ಯಕಾರಿ ಸಮಿತಿಯ ಸದಸ್ಯರು ಹಾಲಿ ಪದಾಧಿಕಾರಿಗಳ ವಿರುದ್ಧ ಅವಿಶ್ವಾಸ ನಿರ್ಣಯವನ್ನು ಮಂಡಿಸಲು ಸ್ವತಂತ್ರರು. ಆದರೆ, ಅವರು ಹಾಗೆ ಮಂಡಿಸುವ ಮುನ್ನ ಮೊದಲು ಸಂಘದ ಕಾರ್ಯದರ್ಶಿಗೆ ನೋಟಿಸ್‌ ನೀಡಬೇಕು. ಆ ಅವಿಶ್ವಾಸ ನಿರ್ಣಯದ ಪ್ರಸ್ತಾವವನ್ನು ಸರ್ವ ಸದಸ್ಯರ ಸಭೆಯ ಮುಂದಿಟ್ಟು ಸೂಕ್ತ ನಿರ್ಣಯ ಕೈಗೊಳ್ಳಬೇಕು. ಸಭೆಯಲ್ಲಿ ಚರ್ಚೆ ಹಾಗೂ ಮತದಾನದ ಹಕ್ಕು ಸಂಘದ ಸದಸ್ಯರಿಗೆ ಮಾತ್ರ ಲಭ್ಯವಿರುತ್ತದೆ ಎಂದು ಪೀಠ ಆದೇಶಿಸಿದೆ.

ಈ ರೀತಿ ಪದೇ ಪದೇ ಪದಾಧಿಕಾರಿಗಳ ವಿರುದ್ಧ ಹಕ್ಕುಚ್ಯುತಿ ಮಂಡನೆಯಾಗುವುದನ್ನು ತಪ್ಪಿಸಲು ಕಾರ್ಯಕಾರಿ ಸಮಿತಿ ಸದಸ್ಯರ ಆಯ್ಕೆ ನಂತರ ಒಂದು ವರ್ಷ ಅವಿಶ್ವಾಸ ನಿರ್ಣಯ ಮಂಡನೆ ಮಾಡದಂತೆ ಸಂಘದ ನಿಯಮಗಳಿಗೆ ತಿದ್ದುಪಡಿ ತರುವುದು ಸೂಕ್ತ ಎಂದೂ ನ್ಯಾಯಾಲಯ ಹೇಳಿದೆ.

ಅರ್ಜಿದಾರರ ಪರವಾಗಿ ಹಿರಿಯ ವಕೀಲ ಡಿ ಆರ್‌ ರವಿಶಂಕರ್‌ ಮತ್ತು ವಕೀಲ ಎಚ್‌ ಎಸ್‌ ಶಂಕರ್‌ ಮತ್ತು ಪ್ರತಿವಾದಿಗಳ ಪರವಾಗಿ ಹಿರಿಯ ವಕೀಲ ಎಂ ಆರ್‌ ರಾಜಗೋಪಾಲ್‌ ಮತ್ತು ವಕೀಲ ಎಚ್‌ ಎನ್‌ ಬಸವರಾಜು ವಾದಿಸಿದ್ದರು.

ಪ್ರಕರಣದ ಹಿನ್ನೆಲೆ: 2024ರ ಜುಲೈ 4ರಂದು ಬಾಲಕೃಷ್ಣ ನೇತೃತ್ವದ ತಂಡ ಒಕ್ಕಲಿಗರ ಸಂಘ ನೂತನ ಅಧ್ಯಕ್ಷರು ಹಾಗೂ ಪದಾಧಿಕಾರಿಗಳಾಗಿ ಆಯ್ಕೆಯಾಗಿದ್ದರು. ಆದರೆ ಕೆಲವು ಸದಸ್ಯರು ಕೇವಲ 10 ದಿನಕ್ಕೆ ಅಂದರೆ 2024ರ ಜುಲೈ 18ಕ್ಕೆ ಅವಿಶ್ವಾಸ ನಿರ್ಣಯ ಮಂಡಿಸಲು ನೋಟಿಸ್‌ ನೀಡಿದ್ದರು. ಆದರೆ ಕಾರ್ಯಕಾರಿ ಸಮಿತಿ ಆ ನೋಟಿಸ್‌ ಅನ್ನು ತಿರಸ್ಕರಿಸಿತ್ತು. ಆನಂತರ ಜುಲೈ 30ಕ್ಕೆ ಸಭೆ ನಡೆಸಿದ ಕೆಲವು ಸದಸ್ಯರು ಆಗಸ್ಟ್‌ 9ಕ್ಕೆ ತಾವೇ ಅವಿಶ್ವಾಸ ನಿರ್ಣಯದ ಕುರಿತು ಚರ್ಚೆಗೆ ನೋಟಿಸ್‌ ನೀಡಿದ್ದರು. ಆಗ ಸಂಘದ ಹಾಲಿ ಪದಾಧಿಕಾರಿಗಳು ಸಿವಿಲ್‌ ನ್ಯಾಯಾಲಯದ ಮೊರೆ ಹೋಗಿದ್ದರು. ಸಿವಿಲ್‌ ನ್ಯಾಯಾಲಯ, ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ಉಭಯ ಬಣಗಳಿಗೆ ನಿರ್ದೇಶನ ನೀಡಿತ್ತು. ಆ ಆದೇಶ ಪ್ರಶ್ನಿಸಿ ಅರ್ಜಿದಾರರು ಹೈಕೋರ್ಟ್‌ ಮೊರೆ ಹೋಗಿದ್ದರು.

Dr. Renuka Prasad K V Vs Rajya Vokkaligara Sangha.pdf
Preview