Justice R Devadas 
ಸುದ್ದಿಗಳು

ವಿಶ್ವವಿದ್ಯಾಲಯದ ನಿಯಮಕ್ಕೆ ವಿರುದ್ಧವಾಗಿ ಯಾವುದೇ ನ್ಯಾಯಾಲಯ ಆದೇಶ ಮಾಡಲಾಗದು: ಹೈಕೋರ್ಟ್‌

ವಿಶ್ವವಿದ್ಯಾಲಯ ಮತ್ತು ರಾಷ್ಟ್ರೀಯ ವೈದ್ಯಕೀಯ ಪರಿಷತ್‌ ಆಯೋಗದ ನಿಯಮದ ಪ್ರಕಾರ ವಿದ್ಯಾರ್ಥಿಗೆ ಒಂದು ವಿಷಯದಲ್ಲಿ ನಾಲ್ಕು ಬಾರಿ ಮಾತ್ರ ಪರೀಕ್ಷೆ ಬರೆಯಲು ಅವಕಾಶವಿದೆ. ಈ ವಿಚಾರದಲ್ಲಿ ಕಾನೂನು ಬಹಳ ಸ್ಪಷ್ಟವಾಗಿದೆ ಎಂದಿರುವ ಹೈಕೋರ್ಟ್.‌

Bar & Bench

ವೈದ್ಯಕೀಯ ಪದವಿಯ ವಿಷಯವೊಂದರಲ್ಲಿ ನಾಲ್ಕು ಬಾರಿ ಅನುತ್ತೀರ್ಣಗೊಂಡಿರುವ ವಿದ್ಯಾರ್ಥಿನಿಗೆ ಐದನೇ ಬಾರಿಗೆ ಪರೀಕ್ಷೆ ಬರೆಯಲು ಕರ್ನಾಟಕ ಹೈಕೋರ್ಟ್‌ ಈಚೆಗೆ ನಿರಾಕರಿಸಿದೆ. ವಿಶ್ವವಿದ್ಯಾಲಯದ ನಿಯಮಕ್ಕೆ ವಿರುದ್ಧವಾಗಿ ಯಾವುದೇ  ನ್ಯಾಯಾಲಯ ಆದೇಶ ಮಾಡಲಾಗದು ಎಂದು ಪೀಠ ತಿಳಿಸಿದೆ.

ಜೀವರಸಾಯನ ಶಾಸ್ತ್ರ (ಬಯೋ ಕೆಮಿಸ್ಟ್ರಿ) ವಿಷಯದಲ್ಲಿ ನಾಲ್ಕು ಬಾರಿ ಅನುತ್ತೀರ್ಣಗೊಂಡಿರುವ ಡಾ.ಬಿ ಆರ್‌ ಅಂಬೇಡ್ಕರ್‌ ವೈದ್ಯಕೀಯ ಕಾಲೇಜಿನ ಎಂಬಿಬಿಎಸ್‌ ವಿದ್ಯಾರ್ಥಿನಿಯೊಬ್ಬರು ಐದನೇ ಬಾರಿ ಪರೀಕ್ಷೆ ಬರೆಯಲು ಅವಕಾಶ ನೀಡುವಂತೆ ವಿಶ್ವವಿದ್ಯಾಲಯಕ್ಕೆ ನಿರ್ದೇಶಿಸುವಂತೆ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಆರ್‌ ದೇವದಾಸ್‌ ಅವರ ಏಕಸದಸ್ಯ ಪೀಠ ತಿರಸ್ಕರಿಸಿದೆ.

“ಅರ್ಜಿದಾರೆಯು ಜೀವರಸಾಯನ ಶಾಸ್ತ್ರ ವಿಷಯ ಮಾತ್ರ ಬಾಕಿ ಉಳಿಸಿಕೊಂಡಿದ್ದಾರೆ. ವಿಶ್ವವಿದ್ಯಾಲಯ ಮತ್ತು ರಾಷ್ಟ್ರೀಯ ವೈದ್ಯಕೀಯ ಪರಿಷತ್‌ ಆಯೋಗದ ನಿಯಮದ ಪ್ರಕಾರ ವಿದ್ಯಾರ್ಥಿಗೆ ಒಂದು ವಿಷಯದಲ್ಲಿ ನಾಲ್ಕು ಬಾರಿ ಮಾತ್ರ ಪರೀಕ್ಷೆ ಬರೆಯಲು ಅವಕಾಶವಿದೆ. ಈ ವಿಚಾರದಲ್ಲಿ ಕಾನೂನು ಬಹಳ ಸ್ಪಷ್ಟವಾಗಿದೆ. ವಿಶ್ವವಿದ್ಯಾಲಯದ ನಿಯಮಕ್ಕೆ ವಿರುದ್ಧವಾಗಿ ಯಾವುದೇ ನ್ಯಾಯಾಲಯ ಆದೇಶ ಹೊರಡಿಸಲಾಗದು” ಎಂದು ತಿಳಿಸಿ ನ್ಯಾಯಾಲಯ ಅರ್ಜಿ ವಜಾಗೊಳಿಸಿದೆ.

ಅರ್ಜಿದಾರೆಯ ಪರವಾಗಿ ವಕೀಲ ಚಂದ್ರಕಾಂತ್‌ ಗೌಳೆ ಅವರು “ಅರ್ಜಿದಾರೆ ಎಂಬಿಬಿಎಸ್‌ ಪದವಿಯ ಮೊದಲನೇ ವರ್ಷದ ಜೀವರಸಾಯನ ಶಾಸ್ತ್ರ ವಿಷಯದ ಪರೀಕ್ಷೆಯಲ್ಲಿ ನಾಲ್ಕು ಬಾರಿ ಅನುತ್ತೀರ್ಣರಾಗಿದ್ದಾರೆ. ಉಳಿದೆಲ್ಲ ವಿಷಯದಲ್ಲಿ ಉತ್ತೀರ್ಣವಾಗಿದ್ದು, ಅನುಕಂಪದ ಆಧಾರದ ಮೇಲೆ ಸದ್ಯದಲ್ಲೇ ನಡೆಯಲಿರುವ ಜೀವರಸಾಯನ ಶಾಸ್ತ್ರ ವಿಷಯದ ಪರೀಕ್ಷೆ ಬರೆಯಲು (ಐದನೇ ಬಾರಿಗೆ) ಅವಕಾಶ ಮಾಡಿಕೊಡುವಂತೆ ವಿಶ್ವವಿದ್ಯಾಲಯಕ್ಕೆ ನಿರ್ದೇಶಿಸಬೇಕು” ಎಂದು ಕೋರಿದ್ದರು.

Nishat Kolyal Vs UoI.pdf
Preview