Darshan and Karnataka HC 
ಸುದ್ದಿಗಳು

ರೇಣುಕಾಸ್ವಾಮಿ ಕೊಲೆಯ ಹಿಂದಿನ ಉದ್ದೇಶ, ಪಿತೂರಿಗೆ ಯಾವುದೇ ಸಾಕ್ಷಿ ಇಲ್ಲ: ಹಿರಿಯ ವಕೀಲ ಸಂದೇಶ್‌ ಚೌಟ

ರಿಮ್ಯಾಂಡ್‌ ಅರ್ಜಿ ಮತ್ತು ಆರ್ಡರ್‌ ಶೀಟ್‌ಗಳಲ್ಲಿ ಆರೋಪಿಗಳನ್ನು ಏಕೆ ಬಂಧಿಸಲಾಗುತ್ತಿದೆ ಎಂಬುದಕ್ಕೆ ಸೂಕ್ತ ಕಾರಣಗಳನ್ನು ತನಿಖಾಧಿಕಾರಿಗಳು ನೀಡಿಲ್ಲ ಎಂದು ಸುದೀರ್ಘವಾಗಿ ವಾದ ಮಂಡನೆ.

Siddesh M S

ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆಯ ಉದ್ದೇಶ ಮತ್ತು ಪಿತೂರಿಗೆ ಯಾವುದೇ ಸ್ಪಷ್ಟ ಸಾಕ್ಷಿ ಇಲ್ಲ ಎಂಬುದು ಸೇರಿ 11 ವ್ಯತ್ಯಯಗಳನ್ನು ಕರ್ನಾಟಕ ಹೈಕೋರ್ಟ್‌ ಮುಂದೆ ಶುಕ್ರವಾರ ಹಿರಿಯ ವಕೀಲ ಸಂದೇಶ್‌ ಚೌಟ ಸವಿಸ್ತಾರವಾಗಿ ಪಟ್ಟಿ ಮಾಡಿದರು.

ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪಿಗಳಾದ ನಟ ದರ್ಶನ್‌, ಪವಿತ್ರಾಗೌಡ, ಆರ್‌ ನಾಗರಾಜು, ಎಂ ಲಕ್ಷ್ಮಣ್, ಅನು ಕುಮಾರ್‌ ಅಲಿಯಾಸ್‌ ಅನು, ಜಗದೀಶ್‌ ಅಲಿಯಾಸ್‌ ಜಗ್ಗ ಸಲ್ಲಿಸಿರುವ ಜಾಮೀನು ಅರ್ಜಿಗಳ ವಿಚಾರಣೆಯನ್ನು ನ್ಯಾಯಮೂರ್ತಿ ಎಸ್‌ ವಿಶ್ವಜಿತ್‌ ಶೆಟ್ಟಿ ಅವರ ಏಕಸದಸ್ಯ ಪೀಠವು ಇಂದೂ ಮುಂದುವರಿಸಿತು.

ದರ್ಶನ್‌ ಅವರ ವ್ಯವಸ್ಥಾಪಕರಾಗಿದ್ದ ಆರ್‌ ನಾಗರಾಜು ಪ್ರತಿನಿಧಿಸಿರುವ ಹಿರಿಯ ವಕೀಲ ಸಂದೇಶ್‌ ಚೌಟ ಅವರು “ರೇಣುಕಾಸ್ವಾಮಿ ಕೊಲೆ ಸಂಬಂಧ ಎಫ್‌ಐಆರ್‌ ದಾಖಲಿಸುವುದು ತಡವಾಗಿದೆ. ಕೊಲೆಗೆ ಬಳಸಿರುವ ವಸ್ತುಗಳ ಪತ್ತೆಯಲ್ಲಿ ವ್ಯತ್ಯಾಸವಿದೆ. ಕೊಲೆಯಾಗಿದೆ ಎನ್ನಲಾದ ಪಟ್ಟಣಗೆರೆಯ ಷೆಡ್‌ನಲ್ಲಿನ ಪ್ರಕ್ರಿಯೆ (ಮಹಜರ್‌ ಮತ್ತಿತರರ ಚಟುವಟಿಕೆ) ನಡೆಸುವುದು ತಡವಾಗಿದೆ. ರೇಣುಕಾಸ್ವಾಮಿ ಮೃತದೇಹದ ಮರಣೋತ್ತರ ಪರೀಕ್ಷೆ ನಡೆಸುವುದು ವಿಳಂಬವಾಗಿದೆ. ದೇಹ ಹೆಪ್ಪುಗಟ್ಟಿದ್ದರಿಂದ (ಫ್ರೋಜನ್)‌ ಎಷ್ಟೊತ್ತಿಗೆ ಸಾವು ಸಂಭವಿಸಿದೆ ಎಂದು ಹೇಳಲಾಗುತ್ತಿಲ್ಲ ಎಂದು ವೈದ್ಯರು ಹೇಳಿದ್ದಾರೆ. ಫೋಟೊಗಳನ್ನು ನೋಡಿ ಸಾವು ಎಷ್ಟೊತ್ತಿಗೆ ಸಂಭವಿಸಿರಬಹುದು ಎಂದು ಅಭಿಪ್ರಾಯ ನೀಡಲಾಗಿದೆ. ಪ್ರಮುಖ ಸಾಕ್ಷಿಗಳ ಸಿಆರ್‌ಪಿಸಿ ಸೆಕ್ಷನ್‌ 164 ಹೇಳಿಕೆ ದಾಖಲಿಸಿರುವುದು ತಡವಾಗಿದೆ. ರಿಮ್ಯಾಂಡ್‌ ಅರ್ಜಿಯಲ್ಲಿ ಪ್ರತ್ಯಕ್ಷ ಮತ್ತು ಭಾಗಶಃ ಪ್ರತ್ಯಕ್ಷ ಸಾಕ್ಷಿಗಳನ್ನು ಉಲ್ಲೇಖಿಸಿಲ್ಲ. ತನಿಖಾ ಸಂಸ್ಥೆಗೇ ವಾಸ್ತವಿಕ ವಿಚಾರಗಳು ಗೊತ್ತಿರುವಾಗ (ಆರೋಪಿಗಳ) ಸ್ವಯಂಪ್ರೇರಿತ ಹೇಳಿಕೆಗಳನ್ನು ಆಧರಿಸಿ ಆರೋಪಿತ ವಾಸ್ತವಿಕ ವಿಚಾರಗಳ ಪತ್ತೆ ಮಾಡಲಾಗಿದೆ ಎಂದು ಹೇಳಲಾಗಿದೆ. ಜಪ್ತಿ ಮಾಡಿರುವುದಕ್ಕೆ ವಿರುದ್ಧವಾಗಿ ವಿಧಿ ವಿಜ್ಞಾನ ಪ್ರಯೋಗಾಲಯದ ವರದಿ ಬಂದಿದೆ. ಕೊಲೆಯ ಉದ್ದೇಶ ಮತ್ತು ಪಿತೂರಿಗೆ ಯಾವುದೇ ಸಾಕ್ಷಿ ಇಲ್ಲ. ಹೀಗಾಗಿ, ಆರೋಪಿಗಳಿಗೆ ಜಾಮೀನು ಮಂಜೂರು ಮಾಡಬೇಕು” ಎಂದು ವಾದಿಸಿದರು.

ಅಲ್ಲದೇ, “ರೇಣುಕಾಸ್ವಾಮಿ ಕೊಲೆಗೆ ಸಂಬಂಧಿಸಿದ ಪ್ರಕರಣದ ಇಡೀ ಮಾಹಿತಿಯು 132ನೇ ಸಾಕ್ಷಿಯಾಗಿರುವ ಪೊಲೀಸ್‌ ಇನ್‌ಸ್ಪೆಕ್ಟರ್‌ ವಿನಯ್‌ ಅವರಿಗೆ ತಿಳಿದಿತ್ತು. ಆದರೆ, ಅವರು ಮಾಹಿತಿ ನೀಡಿ ಎಫ್‌ಐಆರ್‌ ದಾಖಲಿಸಿಲ್ಲ. ಅಪಾರ್ಟ್‌ಮೆಂಟ್‌ನ ಭದ್ರತಾ ಸಿಬ್ಬಂದಿ ನರೇಂದರ್‌ ಸಿಂಗ್‌ ನೀಡುವ ದೂರಿನ ಮೇಲೆ ಕಾಮಾಕ್ಷಿ ಪಾಳ್ಯ ಠಾಣೆಯಲ್ಲಿ ತಡವಾಗಿ ಎಫ್‌ಐಆರ್‌ ದಾಖಲಿಸಲಾಗಿದೆ. ರಿಮ್ಯಾಂಡ್‌ ಅರ್ಜಿ ಮತ್ತು ಆರ್ಡರ್‌ ಶೀಟ್‌ಗಳಲ್ಲಿ ಆರೋಪಿಗಳನ್ನು ಏಕೆ ಬಂಧಿಸಲಾಗುತ್ತಿದೆ ಎಂಬುದಕ್ಕೆ ಸೂಕ್ತ ಕಾರಣಗಳನ್ನು ನೀಡಿಲ್ಲ. ಸುಪ್ರೀಂ ಕೋರ್ಟ್‌ ತೀರ್ಪಿನ ಪ್ರಕಾರ ಬಂಧನಕ್ಕೆ ತನಿಖಾಧಿಕಾರಿಗಳು ಆಧಾರ ಒದಗಿಸಬೇಕು” ಎಂದು ವಿಸ್ತೃತವಾಗಿ ವಿಚಾರ ಮಂಡಿಸಿ, ವಾದ ಪೂರ್ಣಗೊಳಿಸಿದರು.

ಒಂದು ತಾಸು ವಾದ ಆಲಿಸಿದ ನ್ಯಾಯಾಲಯವು ವಿಚಾರಣೆಯನ್ನು ಡಿಸೆಂಬರ್‌ 3ಕ್ಕೆ ಮುಂದೂಡಿತು.