UPSC
UPSC 
ಸುದ್ದಿಗಳು

ಕಳೆದ ವರ್ಷ ಅಂತಿಮ ಯತ್ನವಾಗಿ ಯುಪಿಎಸ್‌ಸಿ ಪರೀಕ್ಷೆ ಬರೆದಿದ್ದವರಿಗೆ ಮತ್ತೆ ಅವಕಾಶವಿಲ್ಲ: ಸುಪ್ರೀಂಗೆ ಕೇಂದ್ರದ ಮಾಹಿತಿ

Bar & Bench

ಅಂತಿಮ ಅವಕಾಶವಾಗಿ 2020ರ ಅಕ್ಟೋಬರ್‌ನಲ್ಲಿ ಯುಪಿಎಸ್‌ಸಿ ಪರೀಕ್ಷೆಯನ್ನು ಬರೆದಿದ್ದ ಅಭ್ಯರ್ಥಿಗಳಿಗೆ ಮತ್ತೊಂದು ಅವಕಾಶವನ್ನು ನೀಡಲು ಸಾಧ್ಯವಿಲ್ಲ ಎಂದು ಕೇಂದ್ರ ಸರ್ಕಾರವು ಸುಪ್ರೀಂ ಕೋರ್ಟ್‌ಗೆ ತಿಳಿಸಿದೆ.

ಕೇಂದ್ರೀಯ ಲೋಕಸೇವಾ ಆಯೋಗವು ಅಭ್ಯರ್ಥಿಗಳಿಗೆ ನಾಗರಿಕ ಸೇವಾ ಪರೀಕ್ಷೆ ತೆಗೆದುಕೊಳ್ಳಲು ಇರುವ ಮಿತಿಯನ್ನು ನಿಗದಿಗೊಳಿಸುತ್ತದೆ. ಪ್ರಸ್ತುತ ಸಾಮಾನ್ಯ ವರ್ಗದ ಅಭ್ಯರ್ಥಿಗಳು 6 ಬಾರಿ ಪರೀಕ್ಷೆಯನ್ನು ತೆಗೆದುಕೊಳ್ಳಬಹುದಾಗಿದ್ದು, ಗರಿಷ್ಠ ವಯೋಮಾನ ಮಿತಿಯು 32 ವರ್ಷವಾಗಿರುತ್ತದೆ.

ಹಿಂದುಳಿದ ವರ್ಗಗಳ ಅಭ್ಯರ್ಥಿಗಳಿಗೆ ಗರಿಷ್ಠ ವಯೋಮಿತಿಯು 35 ವರ್ಷವಾಗಿದ್ದು, 9 ಬಾರಿ ಪರೀಕ್ಷೆ ತೆಗೆದುಕೊಳ್ಳುವ ಅವಕಾಶವನ್ನು ಆಯೋಗ ನೀಡಿದೆ. ಎಸ್‌ಸಿ/ಎಸ್‌ಟಿ ಅಭ್ಯರ್ಥಿಗಳಿಗೆ 37 ವರ್ಷ ಗರಿಷ್ಠ ವಯೋಮಿತಿಯನ್ನು ನಿಗದಿಪಡಿಸಲಾಗಿದೆ.

ಕೊನೆಯ ಅವಕಾಶವಾಗಿ 2020ರ ಅಕ್ಟೋಬರ್‌ನಲ್ಲಿ ಪರೀಕ್ಷೆ ಬರೆದಿರುವ ಅಭ್ಯರ್ಥಿಗಳಿಗೆ ಮತ್ತೊಂದು ಅವಕಾಶವನ್ನು ನೀಡದೆ ಇರುವ ಬಗ್ಗೆ ಗುರುವಾರ ಸಂಜೆ ತೀರ್ಮಾನ ಕೈಗೊಳ್ಳಲಾಗಿದೆ ಎಂದು ಎ ಎಂ ಖಾನ್ವಿಲ್ಕರ್, ಬಿ ಆರ್‌ ಗವಾಯಿ ಮತ್ತು ಕೃಷ್ಣ ಮುರಾರಿ ಅವರಿದ್ದ ಪೀಠಕ್ಕೆ ಹೆಚ್ಚುವರಿ ಸಾಲಿಸಿಟರ್‌ ಜನರಲ್‌ ಎಸ್‌ ವಿ ರಾಜು ತಿಳಿಸಿದರು. ಈ ಕುರಿತು ಅಫಿಡವಿಟ್‌ ಸಲ್ಲಿಸುವಂತೆ ಕೇಂದ್ರ ಸರ್ಕಾರಕ್ಕೆ ಪೀಠವು ಸೂಚಿಸಿತು.

ಕೋವಿಡ್‌ ಸಾಂಕ್ರಾಮಿಕತೆಯ ಕಾರಣದಿಂದಾಗಿ ಸಾಕಷ್ಟು ಸಂಖ್ಯೆಯ ಅಭ್ಯರ್ಥಿಗಳಿಗೆ ನಾಗರಿಕ ಸೇವೆಯ ಪ್ರಿಲಿಮ್ಸ್ ಪರೀಕ್ಷೆಗಳಿಗೆ ಹಾಜರಾಗಲು ಸಾಧ್ಯವಾಗಿಲ್ಲ. ಈ ಕಾರಣದಿಂದಾಗಿ ಈ ಬಾರಿ ಕೊನೆಯ ಅವಕಾಶ ಹೊಂದಿದ್ದ ಎಲ್ಲ ಅಭ್ಯರ್ಥಿಗಳಿಗೂ ಮತ್ತೊಂದು ಬಾರಿ ಪರೀಕ್ಷೆ ಬರೆಯಲು ಅವಕಾಶ ನೀಡಬೇಕು ಎಂದು ಅರ್ಜಿದಾರರು ಕೇಳಿದ್ದರು. ಅರ್ಜಿದಾರರನ್ನು ಮುಕುಲ್‌ ರೋಹಟ್ಗಿ ನ್ಯಾಯಾಲಯದಲ್ಲಿ ಪ್ರತಿನಿಧಿಸಿದ್ದರು.

ಈ ಹಿಂದೆ ನ್ಯಾಯಾಲಯವು ಕೇಂದ್ರ ಮತ್ತು ಯುಪಿಎಸ್ಸಿಗೆ ಕೊನೆಯ ಬಾರಿಯ ಅವಕಾಶವಾಗಿ ಪರೀಕ್ಷೆ ಬರೆದಿದ್ದ ಅಭ್ಯರ್ಥಿಗಳಿಗೆ ಮತ್ತೊಂದು ಅವಕಾಶವನ್ನು ನೀಡುವ ಕುರಿತು ಪರಿಗಣಿಸುವಂತೆ ಹಾಗೂ ಅದಕ್ಕೆ ಸರಿಯಾಗಿ ವಯೋಮಿತಿಯನ್ನು ವಿಸ್ತರಿಸುವಂತೆ ಸೂಚಿಸಿತ್ತು. ಮತ್ತೊಂದು ಅವಕಾಶ ನೀಡುವ ಕುರಿತು “ಕ್ರಿಯಾತ್ಮಕವಾಗಿ ಪರಿಗಣಿಸುತ್ತಿರುವ” ಬಗ್ಗೆ ಹಿಂದಿನ ವಿಚಾರಣೆ ವೇಳೆ ಕೇಂದ್ರವು ನ್ಯಾಯಾಲಯಕ್ಕೆ ತಿಳಿಸಿತ್ತು. ಈ ಹಿನ್ನೆಲೆಯಲ್ಲಿ ಮತ್ತೊಂದು ಅವಕಾಶ ಲಭ್ಯವಾಗಬಹುದು ಎನ್ನುವ ಭರವಸೆಯಲ್ಲಿ ಸಾವಿರಾರು ಅಭ್ಯರ್ಥಿಗಳಿದ್ದರು.