Madhya Pradesh High Court (Indore Bench) and Couple 
ಸುದ್ದಿಗಳು

ಪರಪುರುಷರೊಡನೆ ಪತ್ನಿಯ ಅಶ್ಲೀಲ ಚಾಟ್‌ ಮಾನಸಿಕ ಕ್ರೌರ್ಯ ಎಂದ ಮಧ್ಯಪ್ರದೇಶ ಹೈಕೋರ್ಟ್‌, ವಿಚ್ಛೇದನಕ್ಕೆ ಅನುಮತಿ

ಆಕ್ಷೇಪಣೆಯ ಹೊರತಾಗಿಯೂ, ಪತಿ ಅಥವಾ ಪತ್ನಿ ಅಂತಹ ಚಟುವಟಿಕೆಯನ್ನು ಮುಂದುವರಿಸಿದರೆ, ಅದು ಖಂಡಿತವಾಗಿಯೂ ಅವರ ಸಂಗಾತಿಗೆ ಮಾನಸಿಕ ಕ್ರೌರ್ಯ ಉಂಟುಮಾಡುತ್ತದೆ ಎಂದ ನ್ಯಾಯಾಲಯ.

Bar & Bench

ಕ್ರೌರ್ಯದ ಆಧಾರದ ಮೇಲೆ ವಿಚ್ಛೇದನ ಕೋರಿದ್ದ ಪತಿಯ ಅರ್ಜಿಯನ್ನು ಕೌಟುಂಬಿಕ ನ್ಯಾಯಾಲಯವು ಅನುಮತಿಸಿದ್ದ ಆದೇಶದ ವಿರುದ್ಧ ಮಹಿಳೆಯೊಬ್ಬರು ಸಲ್ಲಿಸಿದ್ದ ಮೇಲ್ಮನವಿಯನ್ನು ಮಧ್ಯಪ್ರದೇಶ ಹೈಕೋರ್ಟ್ ಇತ್ತೀಚೆಗೆ ವಜಾಗೊಳಿಸಿದೆ.

ನ್ಯಾಯಮೂರ್ತಿಗಳಾದ ವಿವೇಕ್ ರುಸಿಯಾ ಮತ್ತು ಗಜೇಂದ್ರ ಸಿಂಗ್ ಅವರ ಪೀಠವು ಪತ್ನಿ ತನ್ನ ಪುರುಷ ಸ್ನೇಹಿತರೊಂದಿಗೆ ತನ್ನ ಲೈಂಗಿಕ ಜೀವನದ ಬಗ್ಗೆ ಚಾಟ್ ಮಾಡುತ್ತಿದ್ದಳು ಎಂಬ ಆರೋಪವನ್ನು ಗಂಭೀರಾಗಿ ಪರಿಗಣಿಸಿತು. ಮದುವೆಯ ನಂತರ ಪತ್ನಿ ಅಥವಾ ಪತಿ ತಮ್ಮ ಸ್ನೇಹಿತರೊಂದಿಗೆ ಅಗೌರವದ ಅಥವಾ ಅಶ್ಲೀಲ ಸಂಭಾಷಣೆಯಲ್ಲಿ ತೊಡಗಬಾರದು ಎಂದು ನ್ಯಾಯಾಲಯ ಹೇಳಿತು.

"ಯಾವುದೇ ಪತಿ ತನ್ನ ಪತ್ನಿಯು ಮೊಬೈಲ್ ಮೂಲಕ ಈ ರೀತಿಯ ಅಶ್ಲೀಲ ಸಂದೇಶ ಸಂವಾದಗಳಲ್ಲಿ (ಚಾಟ್‌) ತೊಡಗುವುದನ್ನು ಸಹಿಸುವುದಿಲ್ಲ. ಮದುವೆಯ ನಂತರ ಪತಿ ಮತ್ತು ಪತ್ನಿ ಇಬ್ಬರೂ ಸ್ನೇಹಿತರೊಂದಿಗೆ ಮೊಬೈಲ್, ಚಾಟಿಂಗ್ ಮತ್ತು ಇತರ ವಿಧಾನಗಳ ಮೂಲಕ ಸಂಭಾಷಣೆ ನಡೆಸುವ ಸ್ವಾತಂತ್ರ್ಯವನ್ನು ಹೊಂದಿರುತ್ತಾರೆ. ಆದರೆ ಸಂಭಾಷಣೆಯು ಸಭ್ಯತೆ ಹಾಗೂ ಘನತೆಯಿಂದ ಕೂಡಿರಬೇಕು. ವಿಶೇಷವಾಗಿ ವಿರುದ್ಧ ಲಿಂಗೀಯ ಸ್ನೇಹಿತರೊಂದಿಗೆ ಮಾತನಾಡುವಾಗ ಅದು ಜೀವನ ಸಂಗಾತಿಗೆ ಆಕ್ಷೇಪಾರ್ಹವೆನಿಸದ ರೀತಿಯಲ್ಲಿ ಇರಬೇಕು" ಎಂದು ನ್ಯಾಯಾಲಯವು ಹೇಳಿದೆ.

ಆಕ್ಷೇಪಣೆಯ ಹೊರತಾಗಿಯೂ, ಪತಿ ಅಥವಾ ಪತ್ನಿ ಅಂತಹ ಚಟುವಟಿಕೆಯನ್ನು ಮುಂದುವರಿಸಿದರೆ, ಅದು ಖಂಡಿತವಾಗಿಯೂ ಅವರ ಸಂಗಾತಿಗೆ ಮಾನಸಿಕ ಕ್ರೌರ್ಯವನ್ನು ಉಂಟುಮಾಡುತ್ತದೆ ಎಂದು ನ್ಯಾಯಾಲಯವು ಹೇಳಿದೆ.

ಮದುವೆಯ ನಂತರ ಪತಿ ಮತ್ತು ಪತ್ನಿ ಇಬ್ಬರೂ ಸ್ನೇಹಿತರೊಂದಿಗೆ ಮೊಬೈಲ್, ಚಾಟಿಂಗ್ ಮತ್ತು ಇತರ ವಿಧಾನಗಳ ಮೂಲಕ ಸಂಭಾಷಣೆ ನಡೆಸುವ ಸ್ವಾತಂತ್ರ್ಯವನ್ನು ಹೊಂದಿರುತ್ತಾರೆ. ಆದರೆ ಸಂಭಾಷಣೆಯು ಸಭ್ಯತೆ ಹಾಗೂ ಘನತೆಯಿಂದ ಕೂಡಿರಬೇಕು. ವಿಶೇಷವಾಗಿ ವಿರುದ್ಧ ಲಿಂಗೀಯ ಸ್ನೇಹಿತರೊಂದಿಗೆ ಮಾತನಾಡುವಾಗ ಅದು ಜೀವನ ಸಂಗಾತಿಗೆ ಆಕ್ಷೇಪಾರ್ಹವೆನಿಸದ ರೀತಿಯಲ್ಲಿ ಇರಬೇಕು.
ಮಧ್ಯಪ್ರದೇಶ ಹೈಕೋರ್ಟ್‌

ಪ್ರಸಕ್ತ ಪ್ರಕರಣದಲ್ಲಿ ದಂಪತಿಗಳು 2018 ರಲ್ಲಿ ವಿವಾಹವಾಗಿದ್ದರು. ಪತಿ ಭಾಗಶಃ ಕಿವುಡನಾಗಿದ್ದು, ಮದುವೆಗೆ ಮುನ್ನವೇ ಪತ್ನಿಗೆ ಈ ಸಂಗತಿಯನ್ನು ಬಹಿರಂಗಪಡಿಸಲಾಗಿತ್ತು. ಆದಾಗ್ಯೂ, ಮದುವೆಯಾದ ಕೂಡಲೇ ಪತ್ನಿ ತನ್ನ ತಾಯಿಯೊಂದಿಗೆ ಕೆಟ್ಟದಾಗಿ ವರ್ತಿಸಲು ಪ್ರಾರಂಭಿಸಿದಳು ಮತ್ತು ಒಂದೂವರೆ ತಿಂಗಳ ನಂತರ ಆಕೆ ವೈವಾಹಿಕ ಮನೆಯಿಂದ (ಗಂಡನ ಮನೆ) ಹೊರನಡೆದಳು ಎನ್ನುವುದು ಪತಿಯ ಆರೋಪ.

ಅಲ್ಲದೆ ಮದುವೆಯ ನಂತರ ಪತ್ನಿಯು ತನ್ನ "ತನ್ನ ಹಳೆಯ ಪ್ರೇಮಿಗಳೊಂದಿಗೆ ಮೊಬೈಲ್‌ನಲ್ಲಿ" ಮಾತನಾಡುತ್ತಿದ್ದಳು ಎಂದು ಕೂಡ ಆರೋಪಿಸಲಾಗಿದೆ. ವಾಟ್ಸಾಪ್ ಸಂಭಾಷಣೆಗಳು ಅಶ್ಲೀಲ ಸ್ವರೂಪದ್ದಾಗಿದ್ದವು ಎಂದು ಪತಿ ಹೇಳಿದ್ದಾರೆ.

ಇದಕ್ಕೆ ವ್ಯತಿರಿಕ್ತವಾಗಿ, ಪತ್ನಿಯು ತನಗೆ ಆ ಪುರುಷರೊಂದಿಗೆ ಯಾವುದೇ ಆಕ್ಷೇಪಾರ್ಹ ಸಂಬಂಧವಿಲ್ಲ ಎಂದು ಹೇಳಿದ್ದರು. ಪತಿ ತನ್ನ ಮೊಬೈಲ್ ಫೋನ್ ಅನ್ನು ಹ್ಯಾಕ್ ಮಾಡಿ ತನ್ನ ವಿರುದ್ಧ ಪುರಾವೆಗಳನ್ನು ಸೃಷ್ಟಿಸಲು ಆ ಸಂದೇಶಗಳನ್ನು ಇಬ್ಬರು ಪುರುಷರಿಗೆ ಕಳುಹಿಸಿದ್ದಾರೆ ಎಂದು ಪ್ರತ್ಯಾರೋಪ ಮಾಡಿದ್ದರು. ತನ್ನ ಫೋನ್‌ನಿಂದ ಚಾಟ್‌ಗಳನ್ನು ಪಡೆದು ತನ್ನ ಖಾಸಗಿತನದ ಹಕ್ಕನ್ನು ಉಲ್ಲಂಘಿಸಿದ್ದಾರೆ ಎಂದು ವಾದಿಸಿದ್ದರು. ತನ್ನ ಪತಿ ತನ್ನನ್ನು ಹೊಡೆದು ₹25 ಲಕ್ಷ ವರದಕ್ಷಿಣೆಗಾಗಿ ಬೇಡಿಕೆ ಇಟ್ಟಿದ್ದಾರೆ ಎಂದೂ ಆರೋಪಿಸಿದ್ದರು.

ಆದರೆ, ಮಹಿಳೆಯ ತಂದೆಯೇ ತನ್ನ ಮಗಳು ಪುರುಷ ಸ್ನೇಹಿತರೊಂದಿಗೆ ಮಾತನಾಡುವ ಅಭ್ಯಾಸ ಹೊಂದಿದ್ದಾಳೆ ಎಂದು ಒಪ್ಪಿಕೊಂಡಿರುವುದನ್ನು ನ್ಯಾಯಾಲಯ ಗಮನಿಸಿತು. ಅಲ್ಲದೆ, ಮಹಿಳೆಯ ತಂದೆಯು ಸುದೀರ್ಘ ಕಾಲ ವಕೀಲಿಕೆ ನಡೆಸಿರುವ ವಕೀಲರಾಗಿದ್ದೂ ಸಹ ಸಾಕ್ಷ್ಯ ನುಡಿಯಲು ಮುಂದಾಗದೆ ಇದ್ದುದನ್ನೂ ಸಹ ಎಂದು ಹೈಕೋರ್ಟ್ ಗಮನಿಸಿತು. ಅಂತಿಮವಾಗಿ ನ್ಯಾಯಾಲಯವು ಕೌಟುಂಬಿಕ ನ್ಯಾಯಾಲಯದ ಆದೇಶವನ್ನು ಎತ್ತಿ ಹಿಡಿಯಿತು.