Arvind Kejriwal and Rouse Avenue Court  Image source: Facebook
ಸುದ್ದಿಗಳು

ಮಧ್ಯಂತರ ಜಾಮೀನು ಅರ್ಜಿ: ಅರವಿಂದ್‌ ಕೇಜ್ರಿವಾಲ್‌ಗೆ ತುರ್ತು ಪರಿಹಾರ ನೀಡದ ದೆಹಲಿ ನ್ಯಾಯಾಲಯ

Bar & Bench

ದೆಹಲಿ ಅಬಕಾರಿ ನೀತಿ ಪ್ರಕರಣಕ್ಕೆ ಸಂಬಂಧಿಸಿದಂತೆ ವೈದ್ಯಕೀಯ ಕಾರಣಗಳಿಗಾಗಿ ಮಧ್ಯಂತರ ಜಾಮೀನು ಕೋರಿ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಸಲ್ಲಿಸಿದ ಮನವಿ ಕುರಿತ ಆದೇಶವನ್ನು ದೆಹಲಿ ನ್ಯಾಯಾಲಯ ಶನಿವಾರ ಕಾಯ್ದಿರಿಸಿದೆ.

ಜೂನ್ 5ರಂದು ತೀರ್ಪು ಪ್ರಕಟಿಸಲಾಗುವುದು ಎಂದು ರೌಸ್‌ ಅವೆನ್ಯೂ ನ್ಯಾಯಾಲಯದ ನ್ಯಾಯಾಧೀಶೆ ಕಾವೇರಿ ಬವೇಜಾ ತಿಳಿಸಿದ್ದಾರೆ.

ವಿಶೇಷವೆಂದರೆ, ಲೋಕಸಭೆ ಚುನಾವಣೆಯ ಪ್ರಚಾರಕ್ಕಾಗಿ ಕೇಜ್ರಿವಾಲ್ ಅವರಿಗೆ ಸುಪ್ರೀಂ ಕೋರ್ಟ್ ನೀಡಿದ್ದ ಮಧ್ಯಂತರ ಜಾಮೀನು ಇಂದು ಕೊನೆಗೊಳ್ಳುವ ಕಾರಣ ನಾಳೆ ಜೈಲಿಗೆ ಮರಳಲಿದ್ದಾರೆ.

ಅವರು ನಾಳೆ ಜೈಲಿಗೆ ತೆರಳಬೇಕಿರುವುದರಿಂದ ಇಂದೇ ತುರ್ತು ವಿಚಾರಣೆ ನಡೆಸುವಂತೆ ಕೇಜ್ರಿವಾಲ್ ಅವರನ್ನು ಪ್ರತಿನಿಧಿಸಿದ್ದ ಹಿರಿಯ ವಕೀಲ ಎನ್ ಹರಿಹರನ್ ಕೋರಿದರು.

ತುರ್ತು ವಿಚಾರಣೆ ನಿರಾಕರಿಸುವುದು ನಿರುಪಯುಕ್ತವಾಗುತ್ತದೆ. ನಾಳೆಯೊಳಗೆ ತುರ್ತು ವಿಚಾರಣೆ ನಡೆಯಬೇಕು. ಇಲ್ಲದಿದ್ದರೆ ಕೇಜ್ರಿವಾಲ್‌ ಶರಣಾಗಬೇಕಾಗುತ್ತದೆ ಎಂದು ಹರಿಹರನ್‌ ಹೇಳಿದರು.

ಮಧ್ಯಂತರ ಜಾಮೀನು ವಿಸ್ತರಣೆ ಬಯಸುವುದಿಲ್ಲ ಎಂದು ನೀವು ಹೇಳುತ್ತೀರಿ. ಆದೇಶವನ್ನು ಜೂನ್ 5ರಂದೇ ಪ್ರಕಟಿಸಲಾಗುವುದು ಎಂದು ನ್ಯಾಯಾಧೀಶರು ಹೇಳಿದರು.

ಕೇಜ್ರಿವಾಲ್ ಅವರು ವಿಚಾರಣಾ ನ್ಯಾಯಾಲಯಕ್ಕೆ ಎರಡು ಪ್ರತ್ಯೇಕ ಅರ್ಜಿಗಳನ್ನು ಸಲ್ಲಿಸಿದ್ದರು. ಒಂದು ಅರ್ಜಿಯಲ್ಲಿ ಸಾಮಾನ್ಯ ಜಾಮೀನು ಕೋರಿದ್ದರೆ, ಎರಡನೆಯದರಲ್ಲಿ ವೈದ್ಯಕೀಯ ಕಾರಣಗಳಿಗಾಗಿ ಏಳು ದಿನಗಳ ಮಧ್ಯಂತರ ಜಾಮೀನು ಕೋರಲಾಗಿತ್ತು. .

ಅವರ ಸಾಮಾನ್ಯ ಜಾಮೀನು ಅರ್ಜಿಯ ವಿಚಾರಣೆ ಜೂನ್ 7ರಂದು ನಡೆಯಲಿದೆ.   

ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಪ್ರಚಾರಕ್ಕೆ ಅನುವಾಗುವಂತೆ ಜೂನ್ 1ರವರೆಗೆ ಮಧ್ಯಂತರ ಜಾಮೀನು ನೀಡಿ ಮೇ 10ರಂದು ಸುಪ್ರೀಂ ಕೋರ್ಟ್‌ ಆದೇಶ ಪ್ರಕಟಿಸಿತ್ತು.

ಮಧ್ಯಂತರ ಜಾಮೀನು ವಿಸ್ತರಣೆಗಾಗಿ ಅವರು ಸಲ್ಲಿಸಿರುವ ಮನವಿಯನ್ನು ವಿಚಾರಣೆಗಾಗಿ ಪಟ್ಟಿ ಮಾಡಲು ಸುಪ್ರೀಂ ಕೋರ್ಟ್ ರಿಜಿಸ್ಟ್ರಿ ಇತ್ತೀಚೆಗೆ ನಿರಾಕರಿಸಿತ್ತು. ಇದಾದ ಬಳಿಕ ಕೇಜ್ರಿವಾಲ್ ಪರಿಹಾರಕ್ಕಾಗಿ ವಿಚಾರಣಾ ನ್ಯಾಯಾಲಯದ ಮೊರೆ ಹೋಗಿದ್ದರು.