Franklin Templeton - Karnataka HC
Franklin Templeton - Karnataka HC 
ಸುದ್ದಿಗಳು

ಫ್ರಾಂಕ್ಲಿನ್‌ ಟೆಂಪಲ್ಟನ್‌ ಸಾಲ ಯೋಜನೆ ರದ್ದತಿ: ಯೂನಿಟ್‌ ಹೋಲ್ಡರ್‌ಗಳ‌ ಒಪ್ಪಿಗೆ ಪಡೆಯಬೇಕೆಂದ ಕರ್ನಾಟಕ ಹೈಕೋರ್ಟ್‌

Bar & Bench

ಆರು ಸಾಲ ಯೋಜನೆಗಳನ್ನು ರದ್ದುಪಡಿಸಿರುವ ಫ್ರಾಂಕ್ಲಿನ್ ಟೆಂಪಲ್ಟನ್ ನಿರ್ಧಾರದಲ್ಲಿ ಯಾವುದೇ ಹಸ್ತಕ್ಷೇಪ ಮಾಡಲು ಸಾಧ್ಯ ಇಲ್ಲ ಎಂದು ಕರ್ನಾಟಕ ಹೈಕೋರ್ಟ್ ಶನಿವಾರ ಹೇಳಿದೆ. ಆದರೆ, ಯೋಜನೆಯನ್ನು ಅಂತ್ಯಗೊಳಿಸುವುದಕ್ಕೂ ಮುನ್ನ ನಿಯಮಾವಳಿಗಳ ಪ್ರಕಾರ ಯೂನಿಟ್‌ ಹೋಲ್ಡರ್‌ಗಳ ಒಪ್ಪಿಗೆ ಪಡೆಯಬೇಕು ಎಂದು ಮುಖ್ಯ ನ್ಯಾಯಮೂರ್ತಿ ಅಭಯ್ ಎಸ್ ಓಕಾ ಮತ್ತು ನ್ಯಾಯಮೂರ್ತಿ ಅಶೋಕ್ ಎಸ್ ಕಿಣಗಿ ಅವರಿದ್ದ ವಿಭಾಗೀಯ ಪೀಠ ಸ್ಪಷ್ಟಪಡಿಸಿದೆ.

ಭಾರತದ ಒಂಬತ್ತನೇ ಅತಿದೊಡ್ಡ ಹೂಡಿಕೆ ಸಂಸ್ಥೆಯಾದ ಫ್ರಾಂಕ್ಲಿನ್ ಟೆಂಪಲ್ಟನ್ ಕಳೆದ ಏಪ್ರಿಲ್‌ ತಿಂಗಳಲ್ಲಿ ಸುಮಾರು ರೂ 28,000 ಕೋಟಿ ಮೊತ್ತದ ಫ್ರಾಂಕ್ಲಿನ್‌ ಇಂಡಿಯಾದ ಆರು ಹೂಡಿಕೆ ಯೋಜನೆಗಳಾದ ಅಲ್ಪಾವಧಿ ನಿಧಿ, ಡೈನಾಮಿಕ್‌ ಸಂಚಯ ನಿಧಿ, ಕ್ರೆಡಿಟ್‌ ರಿಸ್ಕ್‌ ಫಂಡ್‌, ಅಲ್ಪಾವಧಿ ಆದಾಯ ಯೋಜನೆ, ಅತಿಚಿಕ್ಕ ಬಾಂಡ್‌ ನಿಧಿಯನ್ನು ರದ್ದುಪಡಿಸುತ್ತಿರುವುದಾಗಿ ತಿಳಿಸಿತ್ತು. ಸಂಸ್ಥೆಯ ಈ ನಿರ್ಧಾರ ಸುಮಾರು ೩ ಲಕ್ಷ ಹೂಡಿಕೆದಾರರ ಮೇಲೆ ಪ್ರತಿಕೂಲ ಪರಿಣಾಮ ಬೀರಿತ್ತು. ಕೋವಿಡ್‌ -19 ಹಿನ್ನೆಲೆಯಲ್ಲಿ ನಗದು ಕೊರತೆ ಉಂಟಾಗಿರುವ ಕಾರಣ ಯೋಜನೆಗಳನ್ನು ಹಿಂತೆಗೆದುಕೊಳ್ಳುತ್ತಿರುವುದಾಗಿ ಸಂಸ್ಥೆ ತಿಳಿಸಿತ್ತು.

ದೆಹಲಿ, ಗುಜರಾತ್‌ ಹಾಗೂ ಮದ್ರಾಸ್‌ ಹೈಕೋರ್ಟ್‌ಗಳಲ್ಲಿ ಸಲ್ಲಿಸಲಾಗಿದ್ದ ವಿವಿಧ ಅರ್ಜಿಗಳನ್ನು‌ ಸುಪ್ರೀಂಕೋರ್ಟ್‌ ಕಳೆದ ಜೂನ್‌ನಲ್ಲಿ ಕರ್ನಾಟಕ ಹೈಕೋರ್ಟಿಗೆ ವರ್ಗಾಯಿಸಿತ್ತು. ಸುಪ್ರೀಂಕೋರ್ಟ್‌ ಮೂರು ತಿಂಗಳೊಳಗೆ ಪ್ರಕರಣ ಇತ್ಯರ್ಥಗೊಳಿಸುವಂತೆ ಸೂಚಿಸಿದ್ದರಿಂದ ಪೀಠ ಶನಿವಾರ ಮತ್ತು ರಜಾದಿನಗಳಲ್ಲಿ ಕೂಡ ವಿಚಾರಣೆ ನಡೆಸಿತ್ತು. ಆಗಸ್ಟ್ 12 ರಿಂದ ಆರಂಭವಾದ ವಿಚಾರಣಾ ಪ್ರಕ್ರಿಯೆ ಸೆ 24 ರಂದು ಅಂತ್ಯಗೊಂಡಿತ್ತು.

ತೀರ್ಪಿನ ಅನುಷ್ಠಾನವನ್ನು ಆರು ವಾರಗಳ ಅವಧಿಯವರೆಗೆ ತಡೆಹಿಡಿಯುವುದು ಸೂಕ್ತವೆಂದು ಕೋರ್ಟ್ ಪರಿಗಣಿಸಿದ್ದು ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ಫ್ರಾಂಕ್ಲಿನ್ ಟೆಂಪಲ್ಟನ್ ನೀಡಿದ ನೋಟಿಸ್‌ಗಳ ಆಧಾರದ ಮೇಲೆ ಯಾವುದೇ ಕ್ರಮ ತೆಗೆದುಕೊಳ್ಳದಂತೆ ಪ್ರತಿವಾದಿಗಳಿಗೆ ನಿರ್ದೇಶನ ನೀಡಿತು. ಯೋಜನೆ ರದ್ದುಗೊಳಿಸಿದ್ದನ್ನು ಪ್ರಶ್ನಿಸಿ ಸಲ್ಲಿಸಲಾದ ಕೆಲವು ಅರ್ಜಿಗಳನ್ನು ವಿಚಾರಣೆ ನಡೆಸಿದ ಹೈಕೋರ್ಟ್‌ ಈ ನಿರ್ಧಾರ ಕೈಗೊಂಡಿದೆ.