Election commission and Supreme court \ 
ಸುದ್ದಿಗಳು

ಮತಗಟ್ಟೆವಾರು ಮತಗಳ ಮಾಹಿತಿ ಕೋರಿಕೆ ಕಾನೂನಾತ್ಮಕ ಹಕ್ಕಲ್ಲ; ಇದರಿಂದ ಮತದಾರರಲ್ಲಿ ಗೊಂದಲ: ಸುಪ್ರೀಂನಲ್ಲಿ ಇಸಿಐ ಹೇಳಿಕೆ

ಫಾರ್ಮ್ 17 ಸಿ ಆಧಾರದ ಮೇಲೆ ಮತದಾರರ ಮತದಾನದ ಮಾಹಿತಿ ಬಹಿರಂಗಪಡಿಸುವುದು ಮತದಾರರಲ್ಲಿ ಗೊಂದಲ ಉಂಟುಮಾಡುತ್ತದೆ, ಏಕೆಂದರೆ ಇದು ಅಂಚೆ ಮತಪತ್ರ ಎಣಿಕೆಗಳನ್ನು ಒಳಗೊಂಡಿರುತ್ತದೆ ಎಂದಿದೆ ಅಫಿಡವಿಟ್.

Bar & Bench

ಎಲ್ಲಾ ಮತಗಟ್ಟೆಗಳಲ್ಲಿ ಮತದಾರರ ಮತದಾನದ ಅಂತಿಮ ದೃಢೀಕೃತ ಮಾಹಿತಿ ಪ್ರಕಟಿಸುವಂತೆ ಕೋರುವ ಯಾವುದೇ ಕಾನೂನಾತ್ಮಕ ಹಕ್ಕು ಇಲ್ಲ ಎಂದು ಭಾರತೀಯ ಚುನಾವಣಾ ಆಯೋಗ (ಇಸಿಐ) ಬುಧವಾರ ಸುಪ್ರೀಂ ಕೋರ್ಟ್‌ಗೆ ತಿಳಿಸಿದೆ.

ಫಾರ್ಮ್ 17 ಸಿ  (ಪ್ರತಿ ಮತಗಟ್ಟೆಯಲ್ಲಿ ಚಲಾವಣೆಯಾದ ಮತಗಳ ಅಂತಿಮ ಮಾಹಿತಿಯುಳ್ಳ ಅರ್ಜಿ ನಮೂನೆ) ಆಧಾರದ ಮೇಲೆ ಮತದಾರರ ಮತದಾನದ ಮಾಹಿತಿಯನ್ನು ಬಹಿರಂಗಪಡಿಸುವುದು ಮತದಾರರಲ್ಲಿ ಗೊಂದಲ ಉಂಟುಮಾಡುತ್ತದೆ. ಏಕೆಂದರೆ ಅಂತಿಮ ಮತದಾನದ ಸಂಖ್ಯೆಯು ಅಂಚೆ ಮತಪತ್ರ ಎಣಿಕೆಗಳನ್ನು ಒಳಗೊಂಡಿರುತ್ತದೆ ಎಂದು ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿದ ಅಫಿಡವಿಟ್‌ನಲ್ಲಿ ಇಸಿಐ ತಿಳಿಸಿದೆ.

"ಚುನಾವಣಾ ಸ್ಪರ್ಧೆಯಲ್ಲಿ ಕೆಲವೊಮ್ಮೆ ಗೆಲುವಿನ ಅಂತರವು ತುಂಬಾ ಕಡಿಮೆ ಇರಬಹುದು. ಅಂತಹ ಸಂದರ್ಭಗಳಲ್ಲಿ, ಸಾರ್ವಜನಿಕ ವಲಯದಲ್ಲಿ ನಮೂನೆ 17ಸಿಯನ್ನು ಬಹಿರಂಗಪಡಿಸುವುದು ಮತದಾರರ ಮನಸ್ಸಿನಲ್ಲಿ ಒಟ್ಟು ಚಲಾವಣೆಯಾದ ಮತಗಳಿಗೆ ಸಂಬಂಧಿಸಿದಂತೆ ಗೊಂದಲ ಉಂಟುಮಾಡಬಹುದು ಏಕೆಂದರೆ ಅಂತಿಮ ಮತನಾನದ ಮಾಹಿತಿಯು ನಮೂನೆ 17Cರ ಪ್ರಕಾರ ಪಡೆದ ಮತಗಳು ಮತ್ತು ಅಂಚೆ ಮತಪತ್ರಗಳ ಮೂಲಕ ಪಡೆದ ಮತಗಳ ಒಟ್ಟು ಸಂಖ್ಯೆಯನ್ನು ಒಳಗೊಂಡಿರುತ್ತದೆ. ಆದರೆ ಆ ವ್ಯತ್ಯಾಸ ಮತದಾರರಿಗೆ ಸುಲಭವಾಗಿ ಅರ್ಥವಾಗದಿರಬಹುದು ಮತ್ತು ಮತ್ತು ಇಡೀ ಚುನಾವಣಾ ಪ್ರಕ್ರಿಯೆಯ ಮೇಲೆ ಮಹತ್ವಾಕಾಂಕ್ಷೆಯನ್ನು ವ್ಯಕ್ತಪಡಿಸಲು ಪ್ರೇರಿತ ಹಿತಾಸಕ್ತಿ ಹೊಂದಿರುವ ವ್ಯಕ್ತಿಗಳು ಅದನ್ನು ಬಳಸಿಕೊಳ್ಳಬಹುದು… ಇದು ಈಗಾಗಲೇ ಚಾಲ್ತಿಯಲ್ಲಿರುವ ಚುನಾವಣಾ ವ್ಯವಸ್ಥೆಯೊಳಗೆ ಅರಾಜಕತೆ ಉಂಟುಮಾಡಬಹುದು ಎಂದು ಆಯೋಗದ ಪ್ರಮಾಣಪತ್ರ ವಿವರಿಸಿದೆ.

ಪ್ರಸಕ್ತ ಸಾಲಿನ ಲೋಕಸಭಾ ಚುನಾವಣೆಯಲ್ಲಿ ಚಲಾವಣೆಯಾದ ಮತಗಳ ಸಂಖ್ಯೆ ಸೇರಿದಂತೆ ಎಲ್ಲಾ ಮತಗಟ್ಟೆಗಳಲ್ಲಿನ ಮತದಾರರ ಮತದಾನದ ಅಂತಿಮ ದೃಢೀಕೃತ ಮಾಹಿತಿಯನ್ನು ಮತದಾನವಾದ 48 ಗಂಟೆಗಳ ಒಳಗೆ ಬಹಿರಂಗಪಡಿಸುವಂತೆ ಕೋರಿ ಸರ್ಕಾರೇತರ ಸಂಸ್ಥೆ ಅಸೋಸಿಯೇಷನ್ ​​ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ (ಎಡಿಆರ್) ಸಲ್ಲಿಸಿದ್ದ ಅರ್ಜಿಗೆ ಆಕ್ಷೇಪ ವ್ಯಕ್ತಪಡಿಸಿ ಈ ಅಫಿಡವಿಟ್ ಸಲ್ಲಿಸಲಾಗಿದೆ.

ಕೆಲವು ಪಟ್ಟಭದ್ರ ಹಿತಾಸಕ್ತಿಗಳು ತನ್ನ ಕಾರ್ಯಗಳಿಗೆ ಮಸಿ ಬಳಿಯುವುದಕ್ಕಾಗಿ ತನ್ನ ಮೇಲೆ ಸುಳ್ಳು ಆರೋಪ ಮಾಡುತ್ತಲೇ ಇರುತ್ತವೆ. ಸತ್ಯ ಹೊರಬರುವುದರೊಳಗೆ ತನಗೆ ಸಾಕಷ್ಟು ಹಾನಿಯಾಗಿರುತ್ತದೆ ಎಂದು ಇಸಿಐ ಪರೋಕ್ಷವಾಗಿ ಎಡಿಆರ್‌ ಮೇಲೆ ವಾಕ್‌ಪ್ರಹಾರ ನಡೆಸಿದೆ. ಚುನಾವಣೆ ನಡೆಯುತ್ತಿರುವ ಸಂದರ್ಭದಲ್ಲೂ ಅಸ್ತಿತ್ವವೇ ಇಲ್ಲದಿರುವ ಎಡೆಗಳಲ್ಲಿ ಎಡಿಆರ್‌ ಕಾನೂನುಬದ್ಧ ಅರ್ಹತೆಯನ್ನು ಪ್ರತಿಪಾದಿಸುತ್ತದೆ ಎಂದು ಅದು ಹರಿಹಾಯ್ದಿದೆ.

ಸುಪ್ರೀಂ ಕೋರ್ಟ್‌ ನೀಡಿದ ಇವಿಎಂ ತೀರ್ಪಿನಲ್ಲಿ ಎಡಿಆರ್‌ ವಿರುದ್ಧ ಜಾರಿಗೊಳಿಸಿದ ಕಟ್ಟುನಿಟ್ಟಿನ ಕ್ರಮಗಳನ್ನು ಪ್ರಸ್ತಾಪಿಸಿರುವ ಇಸಿಐ, ಅರ್ಜಿದಾರ ಸಂಸ್ಥೆ ಪ್ರಾಮಾಣಿಕವಾಗಿ ನ್ಯಾಯಾಲಯವನ್ನು ಸಂಪರ್ಕಿಸುತ್ತಿಲ್ಲ. ಸಂಚಿನ ಸಿದ್ಧಾಂತದ ಆಧಾರದಲ್ಲಿ ಮತದಾರರ ಮನಸ್ಸಿನಲ್ಲಿ ನಿರಂತರ ಅನುಮಾನಗಳನ್ನು ಬಿತ್ತುವ ಕಾರ್ಯಸೂಚಿಯೊಂದಿಗೆ ಅದು ನ್ಯಾಯಾಲಯವನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ. ಮತದಾರರ ಪಟ್ಟಿ ಕುರಿತಂತಾಗಲಿ, ಇವಿಎಂಗಳ ಪರಿಶುದ್ಧತೆ ಕುರಿತಂತಾಗಲಿ ಅರ್ಜಿದಾರ ಸಂಸ್ಥೆ ತನ್ನ ವಾದ ಸಮರ್ಥಿಸಿಕೊಳ್ಳಲು ಸಾಧ್ಯವಾಗಿಲ್ಲ ಎಂದು ಹೇಳುವುದು ಈ ಸಂದರ್ಭದಲ್ಲಿ ಸೂಕ್ತ ಎಂಬುದಾಗಿ ಇಸಿಐ ತಿಳಿಸಿದೆ.

ಎಡಿಆರ್‌ ಮನವಿಗೆ ಪ್ರತಿಕ್ರಿಯೆ ನೀಡುವಂತೆ ಸುಪ್ರೀಂ ಕೋರ್ಟ್ ಚುನಾವಣಾ ಆಯೋಗಕ್ಕೆ ಸೂಚಿಸಿದ್ದ ಹಿನ್ನೆಲೆಯಲ್ಲಿ ಈ ಅಫಿಡವಿಟ್‌ ಸಲ್ಲಿಸಲಾಗಿದೆ.

ಮತದಾನದ ದಿನ ಘೋಷಿಸಲಾದ ಆರಂಭಿಕ ಅಂದಾಜಿಗೆ ಹೋಲಿಸಿದರೆ ಪ್ರಸ್ತುತ ಲೋಕಸಭಾ ಚುನಾವಣೆಯ ಮೊದಲ ಎರಡು ಹಂತಗಳಿಗೆ ಇಸಿಐ ಘೋಷಿಸಿದ ಅಂತಿಮ ಮತದಾರರ ಸಂಖ್ಯೆಯಲ್ಲಿ ಗಣನೀಯ ಹೆಚ್ಚಳ ಉಂಟಾದ ವಿವಾದದ ಕುರಿತು ಎಡಿಆರ್‌ ಅರ್ಜಿ ಸಲ್ಲಿಸಿತ್ತು.