Justice Asha Menon 
ಸುದ್ದಿಗಳು

ನ್ಯಾಯಾಧೀಶರು ಪ್ರಕರಣದಿಂದ ಹಿಂದೆ ಸರಿಯುವುದನ್ನು ಪ್ರಶ್ನಿಸುವ ಹಕ್ಕು ದಾವೆದಾರನಿಗೆ ಇಲ್ಲ: ದೆಹಲಿ ಹೈಕೋರ್ಟ್

ಪ್ರಕರಣದಿಂದ ಹಿಂದೆ ಸರಿಯುವುದು ಸಂಪೂರ್ಣವಾಗಿ ನ್ಯಾಯಾಧೀಶರ ವಿವೇಚನೆಗೆ ಬಿಟ್ಟದ್ದು. ಇದಕ್ಕೆ ಕಾರಣವೇನೆಂದು ತನಿಖೆ ಮಾಡುವುದು ನ್ಯಾಯ ಪ್ರಕ್ರಿಯೆಯಲ್ಲಿ ಹಸ್ತಕ್ಷೇಪ ಉಂಟುಮಾಡುತ್ತದೆ ಎಂದು ನ್ಯಾಯಮೂರ್ತಿಗಳು ಹೇಳಿದರು.

Bar & Bench

ಪ್ರಕರಣದಿಂದ ಹಿಂದೆ ಸರಿಯುವುದು ಸಂಪೂರ್ಣವಾಗಿ ನ್ಯಾಯಾಧೀಶರ ವಿವೇಚನೆಗೆ ಸೇರಿರುವುದರಿಂದ ಅವರು ಹಾಗೆ ಮಾಡಿದಾಗ, ಯಾವುದೇ ದಾವೆದಾರ ಅಥವಾ ಮೂರನೇ ವ್ಯಕ್ತಿಗೆ ಮಧ್ಯಪ್ರವೇಶಿಸುವ, ಹೇಳಿಕೆ ನೀಡುವ ಅಥವಾ ವಿಚಾರಣೆ ನಡೆಸುವ ಹಕ್ಕು ಇಲ್ಲ ಎಂದು ದೆಹಲಿ ಹೈಕೋರ್ಟ್‌ ಬುಧವಾರ ಹೇಳಿದೆ [ ಶೆರ್ರಿ ಜಾರ್ಜ್ ವಿರುದ್ಧ ಸರ್ಕಾರ ದೆಹಲಿ ಸರ್ಕಾರ ನಡುವಣ ಪ್ರಕರಣ].

“ಇದಕ್ಕೆ ಕಾರಣವೇನೆಂದು ತನಿಖೆ ಮಾಡುವುದು ನ್ಯಾಯ ಪ್ರಕ್ರಿಯೆಯಲ್ಲಿ ಹಸ್ತಕ್ಷೇಪ ಉಂಟುಮಾಡುತ್ತದೆ. ಆದ್ದರಿಂದ ವಿವರವಾದ ಕಾರಣ ನೀಡದಿದ್ದಾಗಲೂ ನಿರಾಕರಣೆಯನ್ನು ಗೌರವಿಸಬೇಕಾಗುತ್ತದೆ. ಅಲ್ಲದೆ ಹೀಗೆ ಕಾರಣ ನೀಡಬೇಕೆಂದು ಯಾರೂ ಒತ್ತಾಯಿಸಲು ಸಾಧ್ಯವಿಲ್ಲ. ಹಿಂಸರಿಯುವಿಕೆಗೆ ಕಾರಣವನ್ನು ಬಹಿರಂಗಪಡಿಸುವುದು ನ್ಯಾಯಾಧೀಶರ ವಿವೇಚನೆಗೆ ಸಂಪೂರ್ಣ ಬಿಟ್ಟ ವಿಚಾರ” ಎಂದು ನ್ಯಾ.ಆಶಾ ಮೆನನ್‌ ಹೇಳಿದರು.

ಭ್ರಷ್ಟಾಚಾರ ಪ್ರಕರಣವೊಂದಕ್ಕೆ ಸಂಬಂಧಿಸಿದ ಮೇಲ್ಮನವಿಯ ವಿಚಾರಣೆ ನ್ಯಾಯಾಲಯದಲ್ಲಿ ನಡೆಯುತ್ತಿತ್ತು. ಮೆಟ್ರೊಪಾಲಿಟನ್‌ ಮ್ಯಾಜಿಸ್ಟ್ರೇಟ್‌ ನ್ಯಾಯಾಲಯದ ಮೇಲೆ ಪ್ರಭಾವ ಬೀರಲು ಪ್ರತಿವಾದಿ ಯತ್ನಿಸುತ್ತಿದ್ದಾರೆ ಎಂದು ಅರ್ಜಿದಾರರು ಈ ಹಿಂದೆ ದೂರಿದ್ದರು. ಜೊತೆಗೆ ಸ್ಥಳೀಯ ಪೊಲೀಸರಿಗೂ ದೂರು ನೀಡಿ ನ್ಯಾಯಾಲಯವನ್ನು ಪ್ರಭಾವಿಸಲು ಯಾರಾದರೂ ಯತ್ನಿಸುತ್ತಿದ್ದಾರೆಯೇ, ನ್ಯಾಯಾಧೀಶರು ಪ್ರಕರಣದ ವಿಚಾರಣೆಯಿಂದ ಹಿಂದೆ ಸರಿಯಲು ಕಾರಣವೇನು ಎಂದು ತನಿಖೆ ನಡೆಸುವಂತೆ ಕೋರಿದ್ದರು. ಆದರೆ ಪೊಲೀಸರು ಎಫ್‌ಐಆರ್‌ ದಾಖಲಿಸಿರಲಿಲ್ಲ. ಹೀಗಾಗಿ ಆರೋಪಗಳ ಬಗ್ಗೆ ತನಿಖೆ ನಡೆಸುವಂತೆ ಭ್ರಷ್ಟಾಚಾರ ಕಾಯಿದೆಯಡಿ ರೂಪುಗೊಂಡ ವಿಶೇಷ ನ್ಯಾಯಾಲಯದ ಮೊರೆಹೋಗಲಾಗಿತ್ತು.

ಆದರೆ ಅರ್ಜಿದಾರರ ಈ ಮನವಿಯನ್ನು ನ್ಯಾಯಾಧೀಶರು ವಜಾಗೊಳಿಸಿದ್ದರು. ಆರೋಪಿತರು ಯಾರೆಂಬುದು ಅರ್ಜಿದಾರರಿಗೆ ಗೊತ್ತಿದ್ದ ಹಿನ್ನೆಲೆಯಲ್ಲಿ ಪೊಲೀಸರ ತನಿಖೆಯ ಸಹಾಯದ ಅಗತ್ಯವಿಲ್ಲ ಎಂದು ಕಾರಣ ನೀಡಿದ್ದರು. ವಿಶೇಷ ನ್ಯಾಯಾಲಯದ ಈ ಆದೇಶದ ವಿರುದ್ಧ ಹೈಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಕೆಯಾಗಿತ್ತು.

ಪ್ರಕರಣದ ಆಲಿಸಿದ ಪೀಠವು, ನ್ಯಾಯಾಂಗ ನಿಂದನೆ ಅಥವಾ ಯಾವುದೇ ಕ್ರಿಮಿನಲ್‌ ವಿಚಾರಣೆಯನ್ನು ಆರಂಭಿಸಬೇಕೆ ಎಂದು ನಿರ್ಧರಿಸಿರುವುದು ಮ್ಯಾಜಿಸ್ಟ್ರೇಟ್‌ ಅವರಿಗೆ ಬಿಟ್ಟ ವಿಚಾರವಾಗಿದೆ. ಅಂತಹ ಅಗತ್ಯತೆ ಇಲ್ಲ ಎಂದು ಮ್ಯಾಜಿಸ್ಟ್ರೇಟ್‌ ಅವರಿಗೆ ಅನಿಸಿರುವುದರಿಂದ ಅರ್ಜಿದಾರರಿಗೆ ಅದನ್ನು ಪ್ರಶ್ನಿಸುವ ಔಚಿತ್ಯತೆ ಇಲ್ಲ ಎಂದು ಅಭಿಪ್ರಾಯಪಟ್ಟಿತು.