“ಸಾಂಪ್ರದಾಯಿಕವಾಗಿ ನಡೆದುಕೊಂಡು ಬಂದಿದೆ ಎಂದ ಮಾತ್ರಕ್ಕೆ ತಾನು ಮಾಡಲಿಚ್ಛಿಸದ ಕೆಲಸವನ್ನು ಮುಂದುವರಿಸುವಂತೆ ಒಂದು ಸಮುದಾಯವನ್ನು ಇನ್ನೊಂದು ಸಮುದಾಯವು ಒತ್ತಾಯಿಸಲಾಗದು” ಎಂದು ಸ್ಪಷ್ಟವಾಗಿ ನುಡಿದಿರುವ ಕರ್ನಾಟಕ ಹೈಕೋರ್ಟ್‌ನ ಕಲಬುರ್ಗಿ ಪೀಠವು ಮಾದಿಗ ಸಮುದಾಯದವರನ್ನು ತಮಟೆ (ಹಲಿಗೆ) ಬಾರಿಸುವಂತೆ ಒತ್ತಾಯಿಸಕೂಡದು ಎಂದಿದೆ.
ಯಾದಗಿರಿ ಜಿಲ್ಲೆಯ ವಡಗೇರಾ ತಾಲ್ಲೂಕಿನ ತುಮಕೂರು ಗ್ರಾಮದಲ್ಲಿ ಅಸ್ಪೃಶ್ಯರು ಎಂಬ ಕಾರಣಕ್ಕೆ ತಮಟೆ ಬಾರಿಸುತ್ತಿದ್ದು, ಆ ಕಾಯಕವನ್ನು ನಿಲ್ಲಿಸಿ, ಕಾಶಿಮಲ್ಲಿ ದೇವತೆಯ ಹಬ್ಬದಲ್ಲಿ ಭಾಗವಹಿಸಿದ್ದರಿಂದ ಮೇಲ್ಜಾತಿಯ ಹಿಂದೂಗಳು ಮತ್ತು ಮಾದಿಗ ಸಮುದಾಯದವರ ನಡುವೆ ಸಂಘರ್ಷ ಉಂಟಾಗಿತ್ತು. ಹೀಗಾಗಿ, ಮೋಹರಂ ವೇಳೆ ಜನಪದ ನೃತ್ಯವಾದ ʼಅಲೈ ಬೋಸಾಯಿ ಕುಣಿತಾʼ ಸೇರಿದಂತೆ ಸಾರ್ವಜನಿಕ ಆಚರಣೆಗಳನ್ನು ನಿಷೇಧಿಸುವಂತೆ ಕೋರಿ ಮಾದಿಗ ದಂಡೋರ ಸಂಘಟನೆ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಎಂ ಐ ಅರುಣ್ ಅವರ ಏಕಸದಸ್ಯ ಪೀಠ ಇತ್ಯರ್ಥಪಡಿಸಿದೆ.
“ಜಿಲ್ಲಾಡಳಿತವು ಹಬ್ಬದ ಸಂದರ್ಭದಲ್ಲಿ ಸಂಬಂಧಪಟ್ಟ ಎಲ್ಲರನ್ನು ಆಲಿಸಿ, ಮಾದಿಗ ದಂಡೋರ ಸಮಿತಿ ಸಲ್ಲಿಸಿರುವ ಮನವಿಯನ್ನು ಪರಿಗಣಿಸಿ, ಕಾನೂನಿನ ಪ್ರಕಾರ ಸರ್ಕಾರವು ಸೂಕ್ತ ನಿರ್ಧಾರ ಕೈಗೊಳ್ಳಬೇಕು. ಒಂದೊಮ್ಮೆ ಹಬ್ಬ ನಡೆಸುವುದಾದರೆ ಮಾದಿಗ ಸಮುದಾಯವನ್ನು ತಮಟೆ ಬಾರಿಸುವಂತೆ ಒತ್ತಾಯಿಸ ಕೂಡದು ಎಂಬುದನ್ನು ಒತ್ತಿ ಹೇಳಬೇಕಿಲ್ಲ. ಹಬ್ಬದಲ್ಲಿ ಭಾಗವಹಿಸುವವರಿಗೆ ಸೂಕ್ತ ರಕ್ಷಣೆ ನೀಡುವುದು ಸರ್ಕಾರದ ಕರ್ತವ್ಯವಾಗಿದೆ” ಎಂದು ಹೇಳಿ, ಅರ್ಜಿ ಇತ್ಯರ್ಥಪಡಿಸಿದೆ.
“ಬೇರೆ ಸಮುದಾಯಕ್ಕೆ ಪ್ರಚೋದನೆ ನೀಡದೆ ಹಬ್ಬ ಆಚರಿಸಲು ಯಾವುದೇ ಸಮುದಾಯಕ್ಕೆ ಹಕ್ಕಿದೆ. ಅದಾಗ್ಯೂ, ತಾನು ಮಾಡಲು ಒಲ್ಲದ ಕೆಲಸವನ್ನು ಸಾಂಪ್ರದಾಯಿಕವಾಗಿ ನಡೆದುಕೊಂಡು ಬಂದಿದೆ ಎಂಬ ಕಾರಣಕ್ಕೆ ಮತ್ತೊಂದು ಸಮುದಾಯವು ಆ ಕೆಲಸ ಮಾಡಬೇಕು ಒತ್ತಾಯಿಸುವಂತಿಲ್ಲ” ಎಂದೂ ನ್ಯಾಯಾಲಯ ಹೇಳಿದೆ.
ವ್ಯಕ್ತಿಗಳನ್ನು ಮಾನವರು, ಭಾರತೀಯರು ಎಂದು ಗುರುತಿಸುವುದರಲ್ಲಿ ದೇಶದ ಸಾರ್ಥಕತೆ ಅಡಗಿದೆ. ಹಿಂದೂ-ಮುಸ್ಲಿಮರು ಒಟ್ಟುಗೂಡಿ ಆಚರಿಸುತ್ತಿದ್ದ ಮೊಹರಂ ಹಬ್ಬವು ಮೇಲ್ಜಾತಿಯ ಹಿಂದೂಗಳು ಮತ್ತು ದಲಿತರ ನಡುವಿನ ಸಂಘರ್ಷಕ್ಕೆ ಕಾರಣವಾಗಿರುವುದು ದುರದೃಷ್ಟಕರ. ಸದ್ಯದ ಸಂದರ್ಭದಲ್ಲಿ ಕೋಮು ಸಂಘರ್ಷ ಅಥವಾ ಘರ್ಷಣೆಗೆ ಅವಕಾಶ ಮಾಡಿಕೊಡದೇ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡಲು ಸಾಧ್ಯವೇ ಎಂಬ ಪ್ರಶ್ನೆ ಎದುರಾಗಿದೆ. ಶಾಂತಿ ಮತ್ತು ಕೋಮು ಸೌಹಾರ್ದತೆ ಪಸರಿಸುವ ಹಬ್ಬಗಳನ್ನು ಆಚರಿಸಲು ಸರ್ಕಾರ ಆದ್ಯತೆ ನೀಡಬೇಕು. ಆದರೆ, ಅದು ಸಾಧ್ಯವಾಗದಿದ್ದಾಗ ಹಬ್ಬ ಆಚರಿಸಲು ಅನುವು ಮಾಡಿಕೊಡಬೇಕೆ ಅಥವಾ ಬೇಡವೇ ಎಂಬ ನಿರ್ಧಾರ ಸರ್ಕಾರಕ್ಕೆ ಬಿಟ್ಟಿದ್ದಾಗಿದೆ ಎಂದು ನ್ಯಾಯಾಲಯ ಹೇಳಿದೆ.
“ಕಲ್ಯಾಣ ಕರ್ನಾಟಕ ಭಾಗದಲ್ಲಿ ಬರುವ ಶರಣಬಸವೇಶ್ವರ ದೇವಾಲಯ, ಖಾಜಾ ಬಂದೇನವಾಜ್ ದರ್ಗಾಗಳು ಕೋಮು ಸಾಮರಸ್ಯಕ್ಕೆ ಹೆಸರಾಗಿದ್ದು, ಇದನ್ನು ಇಡೀ ದೇಶವೇ ಪಾಲಿಸಬಹುದಾಗಿದೆ. ಇದರ ಜೊತೆಗೆ ಮೊಹರಂ ಹಬ್ಬವನ್ನು ಮುಸ್ಲಿಮರ ಜೊತೆ ಹಿಂದೂಗಳು ಆಚರಿಸುತ್ತಿದ್ದು, ಹಬ್ಬದ ವೇಳೆ ಕೆಲವು ಹಿಂದೂ ದೇವರುಗಳನ್ನು ಮುಸ್ಲಿಮರೂ ಪೂಜಿಸುತ್ತಾರೆ” ಎಂದು ನ್ಯಾಯಾಲಯ ಹೇಳಿದೆ.
ಪ್ರಕರಣದ ಹಿನ್ನೆಲೆ: ಮೊಹರಂ ಹಬ್ಬದ ಭಾಗವಾಗಿ ಹಿಂದೂ-ಮುಸ್ಲಿಂ ಸಮುದಾಯಗಳು ಸಮಾನವಾಗಿ ಪೂಜಿಸುವ ಕಾಶಿಮಲ್ಲಿ ದೇವತೆಯ ಹಬ್ಬದಲ್ಲಿ ದೇವಸ್ಥಾನದ ಮುಂದೆ ಅಲೈ ಬೊಸಾಯಿ ಕುಣಿತ ನಡೆಯುತ್ತದೆ. ಇದರಲ್ಲಿ ದಲಿತ ಸಮುದಾಯದವರು ಹಲಗೆ ಬಾರಿಸುತ್ತಿದ್ದರು. ತಾವು ದಲಿತರಾದ ಕಾರಣ ಹಲಗೆ ಬಾರಿಸುವಂತೆ ಮಾಡಲಾಗಿದ್ದು, ಆ ಕಾರಣಕ್ಕಾಗಿ ತಾವು ಹಲಗೆ ಬಾರಿಸುವುದಿಲ್ಲ ಎಂಬ ನಿರ್ಧಾರ ಮಾಡಿದ್ದ ಮಾದಿಗ ಸಮುದಾಯವರು ಹಬ್ಬದಲ್ಲಿ ಭಾಗವಹಿಸಿದರಾದರೂ ಹಲಗೆ ಬಾರಿಸುವುದರಿಂದ ಹಿಂಸರಿದರು. ಇದು ಮೇಲ್ಜಾತಿಯವರು ಮತ್ತು ಮಾದಿಗ ಸಮುದಾಯ ನಡುವೆ ಸಂಘರ್ಷಕ್ಕೆ ನಾಂದಿ ಹಾಡಿತ್ತು. ಹೀಗಾಗಿ, ಅಲೈ ಬೊಸಾಯಿ ಕುಣಿತ ಸೇರಿದಂತೆ ಸಾರ್ವಜನಿಕ ಆಚರಣೆಗಳಿಗೆ ನಿಷೇಧ ಹೇರುವಂತೆ ಮಾದಿಗ ದಂಡೋರ ಸಮಿತಿಯು ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿತ್ತು. ಈ ಸಂಬಂಧ ಯಾವುದೇ ಕ್ರಮವಾಗದಿದ್ದರಿಂದ ಮಾದಿಗ ದಂಡೋರ ಸಮಿತಿಯು ಹೈಕೋರ್ಟ್ ಮೆಟ್ಟಿಲೇರಿತ್ತು.