Kiren Rijiju, Union Law Minister  
ಸುದ್ದಿಗಳು

ಯಾರೂ ಮತ್ತೊಬ್ಬರಿಗೆ ಎಚ್ಚರಿಕೆ ನೀಡಲಾಗದು: ಸುಪ್ರೀಂ ಕೋರ್ಟ್ ಎಚ್ಚರಿಕೆಗೆ ಕೇಂದ್ರ ಕಾನೂನು ಸಚಿವ ರಿಜಿಜು ಪ್ರತಿಕ್ರಿಯೆ

ನ್ಯಾಯಮೂರ್ತಿಗಳ ನೇಮಕಾತಿಗೆ ಸಂಬಂಧಿಸಿದಂತೆ ಕೊಲಿಜಿಯಂ ಮಾಡಿದ್ದ ಶಿಫಾರಸುಗಳನ್ನು ಅಂಗೀಕರಿಸಲು ಕೇಂದ್ರ ವಿಳಂಬ ಮಾಡುತ್ತಿದೆ. ಇದರಿಂದಾಗಿ ನ್ಯಾಯಾಲಯವು ಕೈಗೊಳ್ಳುವ ಕ್ರಮ ಸರ್ಕಾರಕ್ಕೆ ಹಿತಕರವಾಗದೆ ಹೋಗಬಹುದು ಎಂದಿತ್ತು.

Bar & Bench

"ಸುಪ್ರೀಂ ಕೋರ್ಟ್ ಕೇಂದ್ರ ಸರ್ಕಾರಕ್ಕೆ ಎಚ್ಚರಿಕೆ ನೀಡಿದೆ ಎಂದು ಮಾಧ್ಯಮ ವರದಿಗಳು ಹೇಳುತ್ತಿವೆ; ಆದರೆ, ಈ ದೇಶದಲ್ಲಿ ಯಾರೂ ಯಾರಿಗೂ ಎಚ್ಚರಿಕೆ ನೀಡಲು ಸಾಧ್ಯವಿಲ್ಲ" ಎಂದು ಕೇಂದ್ರ ಕಾನೂನು ಸಚಿವ ಕಿರೆನ್‌ ರಿಜಿಜು ಹೇಳಿದ್ದಾರೆ. ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ಅಲಾಹಾಬಾದ್ ಹೈಕೋರ್ಟ್ ವಕೀಲರ ಸಂಘದ 150ನೇ ವಾರ್ಷಿಕೋತ್ಸವದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ನ್ಯಾಯಮೂರ್ತಿಗಳ ನೇಮಕಾತಿಗೆ ಕೊಲಿಜಿಯಂ ಶಿಫಾರಸು ಮಾಡಿದ ಹೆಸರುಗಳನ್ನು ಅಂತಿಮಗೊಳಿಸುವ ಪ್ರಕ್ರಿಯೆಯಲ್ಲಿ ಕೇಂದ್ರ ಸರ್ಕಾರವು ವಿಳಂಬ ಮಾಡುವುದನ್ನು ಮುಂದುವರೆಸಿದರೆ ಪ್ರತಿಕೂಲ ಪರಿಣಾಮಗಳನ್ನು ಎದುರಿಸಬೇಕಾಗಬಹುದು ಎಂದು ಸುಪ್ರೀಂ ಕೋರ್ಟ್‌ ಇತ್ತೀಚೆಗೆ ನೀಡಿದ್ದ ಎಚ್ಚರಿಕೆಯ ಹಿನ್ನೆಲೆಯಲ್ಲಿ ಕೇಂದ್ರ ಕಾನೂನು ಸಚಿವ ಕಿರೆನ್‌ ರಿಜಿಜು ಅವರು ಶನಿವಾರ ನೀಡಿರುವ ಹೇಳಿಕೆ ಮಹತ್ವ ಪಡೆದಿದೆ.

ಸುಪ್ರೀಂ ಕೋರ್ಟ್ ಕೊಲಿಜಿಯಂ 2022ರ ಡಿಸೆಂಬರ್ 13ರಂದು ಐವರು ಹೈಕೋರ್ಟ್ ನ್ಯಾಯಮೂರ್ತಿಗಳಿಗೆ ಪದೋನ್ನತಿ ನೀಡಲು ಶಿಫಾರಸು ಮಾಡಿತ್ತು. ಆದರೆ ನೇಮಕಾತಿ ಆದೇಶವನ್ನು ಹೊರಡಿಸುವಲ್ಲಿ ಕೇಂದ್ರ ಸರ್ಕಾರವು ವಿಳಂಬ ಮಾಡಿತ್ತು. ಈ ವಿಳಂಬಕ್ಕಾಗಿ ಸುಪ್ರೀಂ ಕೋರ್ಟ್ ಕೇಂದ್ರ ಸರ್ಕಾರವನ್ನು ಕಳೆದ ಶುಕ್ರವಾರ (ಫೆ. 3) ತರಾಟೆಗೆ ತೆಗೆದುಕೊಂಡಿತ್ತು. ವಿಳಂಬ ಮುಂದುವರಿದರೆ ನ್ಯಾಯಾಲಯವು ನ್ಯಾಯಿಕ ಮತ್ತು ಅಡಳಿತಾತ್ಮಕ ಕ್ರಮ ಕೈಗೊಳ್ಳಬೇಕಾಗಬಹುದು. "ಇದು (ಕೇಂದ್ರ ಸರ್ಕಾರಕ್ಕೆ) ಹಿತಕರವಾಗದೆ ಹೋಗಬಹುದು" ಎಂದು ಎಚ್ಚರಿಸಿತ್ತು. ಮರುದಿನವೇ ಅಂದರೆ ಫೆಬ್ರವರಿ 4ರಂದು ಕೇಂದ್ರ ಸರ್ಕಾರ ಐವರು ನ್ಯಾಯಮೂರ್ತಿಗಳನ್ನು ನೇಮಕ ಮಾಡಿ ಅಧಿಸೂಚನೆ ಹೊರಡಿಸಿತ್ತು. ಈ ಬೆಳವಣಿಗೆಗಳ ಬೆನ್ನಿಗೇ ರಿಜಿಜು ಅವರು ಈ ಹೇಳಿಕೆ ನೀಡಿದ್ದಾರೆ.

“ದೇಶದ ಮಾಲೀಕರು ಅದರ ಜನರಾಗಿದ್ದಾರೆ. ನಾವು ನಮ್ಮನ್ನು ಈ ಮಹಾನ್‌ ರಾಷ್ಟ್ರದ ಸೇವಕರು ಎಂದು ಭಾವಿಸುತ್ತೇವೆ” ಎಂಬುದಾಗಿ ಅವರು ಹೇಳಿದ್ದಾರೆ. ಜೊತೆಗೆ “ ಸಂವಿಧಾನವನ್ನು ರಕ್ಷಿಸುವ ಹೊಣೆ ಎಲ್ಲ ನಾಗರಿಕರ ಮೇಲಿದೆ. ಸಂವಿಧಾನದ ಪ್ರಕಾರ, ಈ ದೇಶವು ಜನರ ವಿವೇಚನೆಯಿಂದ ಮುನ್ನಡೆಯುತ್ತದೆ” ಎಂದು ವಿವರಿಸಿದ್ದಾರೆ.

ಹೈಕೋರ್ಟ್ ಮತ್ತು ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳ ನೇಮಕ ಮಾಡಲು ಕೊಲಿಜಿಯಂ ಪ್ರಸ್ತಾಪಿಸಿದ ಹೆಸರುಗಳನ್ನು ಅನುಮೋದಿಸಲು ವಿಳಂಬ ಮಾಡಿರುವುದರ ಸಂಬಂಧ ಸಲ್ಲಿಸಲಾದ ಅರ್ಜಿಯನ್ನು ಸುಪ್ರೀಂ ಕೋರ್ಟ್‌ ವಿಚಾರಣೆ ನಡೆಸುತ್ತಿದ್ದು ಆಗ ನೀಡಿದ್ದ ಮೌಖಿಕ ಹೇಳಿಕೆಯ ಹಿನ್ನೆಲೆಯಲ್ಲಿ ರಿಜಿಜು ಪ್ರತಿಕ್ರಿಯೆ ನೀಡಿದ್ದಾರೆ.