Justice Anil K Narendran, Justice PG Ajithkumar and Kerala HC 
ಸುದ್ದಿಗಳು

ದೇವಸ್ಥಾನಗಳಲ್ಲಿ ರಾಜಕಾರಣಕ್ಕೆ ಜಾಗವಿಲ್ಲ; ಕೇಸರಿ ಅಥವಾ ರಾಜಕೀಯ ತಟಸ್ಥ ಬಣ್ಣ ಬಳಕೆಗೆ ಸೂಚಿಸಲಾಗದು: ಕೇರಳ ಹೈಕೋರ್ಟ್‌

ಹಬ್ಬಕ್ಕೆ ಅಡ್ಡಿಯಾಗಬಹುದಾದ ಪರಿಸ್ಥಿತಿ ಕಂಡುಬಂದರೆ ಕಾನೂನು ಮತ್ತು ಸುವ್ಯವಸ್ಥೆ ಪರಿಸ್ಥಿತಿ ಎದುರಾದರೆ ತಿರುವಾಂಕೂರು ದೇವಸ್ವಂ ಮಂಡಳಿಯು ಪೊಲೀಸರನ್ನು ಸಂಪರ್ಕಿಸಲು ಸ್ವತಂತ್ರವಾಗಿದೆ ಎಂದು ನ್ಯಾಯಾಲಯ ಹೇಳಿದೆ.

Bar & Bench

ದೇವಸ್ಥಾನದಲ್ಲಿ ಅಲಂಕಾರಕ್ಕೆ ಕೇಸರಿ ಅಥವಾ ರಾಜಕೀಯವಾಗಿ ತಟಸ್ಥವಾದ ಬಣ್ಣ ಬಳಕೆ ಮಾಡಬೇಕು ಎಂದು ಹೇಳಲು ಭಕ್ತರು ಅಥವಾ ಪೊಲೀಸರಿಗೆ ಯಾವುದೇ ತೆರನಾದ ಕಾನೂನಾತ್ಮಕ ಹಕ್ಕಿಲ್ಲ ಎಂದು ಈಚೆಗೆ ಕೇರಳ ಹೈಕೋರ್ಟ್‌ ಹೇಳಿದೆ [ಶ್ರೀರಾಜ್‌ ಕೃಷ್ಣ ಪೊಟ್ಟಿ ಎಂ ಎಸ್‌ ವರ್ಸಸ್‌ ತಿರುವಾಂಕೂರು ದೇವಸ್ವಂ ಮಂಡಳಿ ಮತ್ತು ಇತರರು].

ತಿರುವಾಂಕೂರು ದೇವಸ್ವಂ ಮಂಡಳಿ ಆಡಳಿತಕ್ಕೆ ಒಳಪಟ್ಟಿರುವ ಮೇಜರ್‌ ವೆಲ್ಲಾಯಾನಿ ಭದ್ರಕಾಳಿ ದೇವಿ ದೇವಸ್ಥಾನದಲ್ಲಿ ಈಚೆಗೆ ಕಲಿಯೂಟ್ಟು ಹಬ್ಬಕ್ಕೆ ಸಂಬಂಧಿಸಿದಂತೆ ಈಚೆಗೆ ಎದ್ದಿರುವ ಅಲಂಕಾರಕ್ಕೆ ಬಣ್ಣ ಬಳಕೆ ವಿವಾದ ಕುರಿತು ಸಲ್ಲಿಸಲಾದ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿಗಳಾದ ಅನಿಲ್‌ ಕೆ ನರೇಂದ್ರನ್‌ ಮತ್ತು ಪಿ ಜಿ ಅಜಿತ್‌ಕುಮಾರ್‌ ಅವರ ನೇತೃತ್ವದ ವಿಭಾಗೀಯ ಪೀಠವು ನಡೆಸಿತು.

“ತಿರುವಾಂಕೂರು ದೇವಸ್ವಂ ಮಂಡಳಿ ಆಡಳಿತಕ್ಕೆ ಒಳಪಟ್ಟಿರುವ ಮೇಜರ್‌ ವೆಲ್ಲಾಯಾನಿ ಭದ್ರಕಾಳಿ ದೇವಿ ದೇವಸ್ಥಾನದಲ್ಲಿ ಕಲಿಯೂಟ್ಟು ಹಬ್ಬವನ್ನು ದೇವಸ್ಥಾನದಲ್ಲಿನ ಸಂಪ್ರದಾಯ, ಆಚರಣೆಯ ಅನುಸಾರ ನಡೆಸಬೇಕು. ದೇವಸ್ಥಾನದಲ್ಲಿ ದೈನಂದಿನ ಪೂಜಾ ಕೈಂಕರ್ಯಗಳ ವಿಚಾರದಲ್ಲಿ ರಾಜಕೀಯಕ್ಕೆ ಆಸ್ಪದವಿಲ್ಲ. ದೇವಸ್ಥಾನದಲ್ಲಿ ಹಬ್ಬಕ್ಕೆ ಕೇಸರಿ/ಕಿತ್ತಳೆ ಬಣ್ಣದ ಆಲಂಕಾರಿಕ ವಸ್ತುಗಳನ್ನೇ ಬಳಕೆ ಮಾಡಬೇಕು ಎಂದು ಹೇಳಲು ಭಕ್ತರಿಗೆ ಕಾನೂನಾತ್ಮಕ ಹಕ್ಕಿಲ್ಲ. ಅಂತೆಯೇ, ಜಿಲ್ಲಾಡಳಿತ ಅಥವಾ ಪೊಲೀಸರು ರಾಜಕೀಯವಾಗಿ ತಟಸ್ಥವಾದ ಬಣ್ಣದ ಆಲಂಕಾರಿಕ ವಸ್ತುಗಳನ್ನು ದೇವಸ್ಥಾನದಲ್ಲಿ ಹಬ್ಬದಂದು ಬಳಸಬೇಕು ಎಂದು ಸೂಚಿಸಲಾಗದು” ಎಂದು ಪೀಠವು ಆದೇಶದಲ್ಲಿ ಹೇಳಿದೆ.

ಹಬ್ಬವನ್ನು ಸರಾಗವಾಗಿ ನಡೆಸಲು ಕಾನೂನು ಮತ್ತು ಸುವ್ಯವಸ್ಥೆಯ ಸಮಸ್ಯೆ ಎದುರಾದರೆ ಮಂಡಳಿಯು ಪೊಲೀಸರನ್ನು ಸಂಪರ್ಕಿಸಲು ಸ್ವತಂತ್ರವಾಗಿದೆ ಎಂದು ಪೀಠವು ಸ್ಪಷ್ಟಪಡಿಸಿದೆ. ಒಂದೊಮ್ಮೆ ಆ ರೀತಿಯೇನಾದರೂ ಆದರೆ ಪೊಲೀಸರು ಮತ್ತು ಜಿಲ್ಲಾ ಮ್ಯಾಜಿಸ್ಟ್ರೇಟ್‌ ಅವರು ಸೂಕ್ತ ಕ್ರಮಕೈಗೊಳ್ಳಲು ಸ್ವತಂತ್ರರಾಗಿದ್ದಾರೆ ಎಂದು ನ್ಯಾಯಾಲಯ ಹೇಳಿದೆ.

ದೇವಸ್ಥಾನದ ಹಬ್ಬದಲ್ಲಿ ರಾಜಕೀಯವಾಗಿ ತಟಸ್ಥವಾಗಿರುವ ಬಣ್ಣದ ಅಲಂಕಾರ ಮಾತ್ರ ಮಾಡಬೇಕು ಎಂದು ಜಿಲ್ಲಾ ದಂಡಾಧಿಕಾರಿ ಮತ್ತು ಪೊಲೀಸರು ಆದೇಶಿಸಿದ್ದನ್ನು ಪ್ರಶ್ನಿಸಿ ದೇವಸ್ಥಾನದ ಸಲಹಾ ಸಮಿತಿ ಮತ್ತು ಮೇಜರ್‌ ವೆಲ್ಲಾಯನಿ ಭದ್ರಕಾಳಿ ದೇವಿ ದೇವಸ್ಥಾನದ ಭಕ್ತರೊಬ್ಬರು ಪ್ರತ್ಯೇಕವಾಗಿ ಮನವಿ ಸಲ್ಲಿಸಿದ್ದರು. ಅಲ್ಲದೇ, ಹಬ್ಬದ ಸಂದರ್ಭದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವಂತೆ ಸಂಬಂಧಿತ ಪ್ರಾಧಿಕಾರಕ್ಕೆ ನಿರ್ದೇಶಿಸುವಂತೆ ಕೋರಲಾಗಿತ್ತು.