Kiren Rijiju and Parliament
Kiren Rijiju and Parliament 
ಸುದ್ದಿಗಳು

ಎನ್‌ಜೆಎಸಿ ಮರು ಮಂಡನೆ ಪ್ರಸ್ತಾವ ಇಲ್ಲ: ಸಂಸತ್‌ನಲ್ಲಿ ಕಾನೂನು ಸಚಿವ ಕಿರೆನ್‌ ರಿಜಿಜು ಹೇಳಿಕೆ

Bar & Bench

ಸುಪ್ರೀಂ ಕೋರ್ಟ್‌ ಮತ್ತು ಹೈಕೋರ್ಟ್‌ಗಳಿಗೆ ನ್ಯಾಯಮೂರ್ತಿಗಳನ್ನು ನೇಮಿಸಲು ರಾಷ್ಟ್ರೀಯ ನ್ಯಾಯಾಂಗ ನೇಮಕಾತಿ ಆಯೋಗವನ್ನು (ಎನ್‌ಜೆಎಸಿ) ಮರು ಮಂಡಿಸುವ ಪ್ರಸ್ತಾವವನ್ನು ಕೇಂದ್ರ ಸರ್ಕಾರ ಹೊಂದಿಲ್ಲ ಎಂದು ಕಾನೂನು ಸಚಿವ ಕಿರೆನ್‌ ರಿಜಿಜು ಗುರುವಾರ ರಾಜ್ಯಸಭೆಗೆ ತಿಳಿಸಿದರು.

ಎನ್‌ಜೆಎಸಿಯನ್ನು ಸೂಕ್ತ ಬದಲಾವಣೆಗಳೊಂದಿಗೆ ಸಂಸತ್ತಿನಲ್ಲಿ ಮರು ಮಂಡಿಸಲು ಕೇಂದ್ರ ಸರ್ಕಾರ ಉದ್ದೇಶಿಸಿದೆಯೇ ಎಂದು ಕಾಂಗ್ರೆಸ್‌ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು ಸಿಪಿಐ ನಾಯಕ ಜಾನ್‌ ಬ್ರಿಟಾಸ್‌ ಅವರು ಕೇಳಿದ ಪ್ರಶ್ನೆಗೆ ಕಾನೂನು ಸಚಿವರು ಉತ್ತರಿಸಿದರು.

“ಸದ್ಯಕ್ಕೆ ಅಂಥ ಯಾವುದೇ ಪ್ರಸ್ತಾವನೆ ಇಲ್ಲ” ಎಂದು ಅವರು ಪ್ರತಿಕ್ರಿಯಿಸಿದ್ದಾರೆ. “ಸಾಂವಿಧಾನಿಕ ನ್ಯಾಯಾಲಯಗಳಿಗೆ ನೇಮಕಾತಿಯು ನ್ಯಾಯಾಂಗ ಮತ್ತು ಕಾರ್ಯಾಂಗದ ನಡುವೆ ನಡೆಯುವ ನಿರಂತರವೂ, ಸಮಗ್ರವೂ ಹಾಗೂ ಸಹಕಾರಯುಕ್ತವಾದಂತಹ ಪ್ರಕ್ರಿಯೆ ಆಗಿದೆ. ರಾಜ್ಯ ಮತ್ತು ಕೇಂದ್ರ ಎರಡೂ ಮಟ್ಟದಲ್ಲಿ ಹಲವು ಸಾಂವಿಧಾನಿಕ ಪ್ರಾಧಿಕಾರಗಳ ಜೊತೆ ಸಮಾಲೋಚನೆ ನಡೆಸಿ, ಒಪ್ಪಿಗೆ ಪಡೆದು ಮಾಡುವ ಕೆಲಸವಾಗಿದೆ. ಸುಪ್ರೀಂ ಕೋರ್ಟ್‌ ಕೊಲಿಜಿಯಂ ಶಿಫಾರಸ್ಸು ಮಾಡುವ ವ್ಯಕ್ತಿಗಳನ್ನಷ್ಟೇ ಹೈಕೋರ್ಟ್‌ ನ್ಯಾಯಮೂರ್ತಿಗಳನ್ನಾಗಿ ನೇಮಕ ಮಾಡಲಾಗುತ್ತದೆ” ಎಂದು ಅವರು ತಿಳಿಸಿದರು.

ಡಿಸೆಂಬರ್‌ 5ರವರೆಗಿನಂತೆ ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿಯನ್ನಾಗಿ ನೇಮಕ ಮಾಡಲು ಒಂದು ಹೆಸರಿನ ಶಿಪಾರಸ್ಸು ಮತ್ತು ಹೈಕೋರ್ಟ್‌ ನ್ಯಾಯಮೂರ್ತಿಗಳ ಸ್ಥಾನಕ್ಕೆ ನೇಮಿಸಲು 8 ಹೆಸರುಗಳ ಶಿಫಾರಸ್ಸುಗಳನ್ನು ಕೊಲಿಜಿಯಂ ಮಾಡಿದ್ದು, ಈ ಪ್ರಸ್ತಾವನೆಯು ಸರ್ಕಾರದ ಬಳಿ ಬಾಕಿ ಇದೆ ಎಂದು ವಿವರಿಸಿದ್ದಾರೆ. 11 ಹೈಕೋರ್ಟ್‌ ನ್ಯಾಯಮೂರ್ತಿಗಳ ವರ್ಗಾವಣೆ, ಮುಖ್ಯ ನ್ಯಾಯಮೂರ್ತಿಯೊಬ್ಬರ ವರ್ಗಾವಣೆ ಮಾಡುವಂತೆ ಹಾಗೂ ಹೈಕೋರ್ಟ್‌ ಒಂದಕ್ಕೆ ಮುಖ್ಯ ನ್ಯಾಯಮೂರ್ತಿ ನೇಮಕಾತಿ ಮಾಡುವಂತೆ ಕೊಲಿಜಿಯಂ ಮಾಡಿರುವ ಶಿಫಾರಸ್ಸು ಸರ್ಕಾರದ ಪರಿಗಣನೆಯಲ್ಲಿದೆ ಎಂದು ತಿಳಿಸಿದ್ದಾರೆ.

“ಕೊಲಿಜಿಯಂ ಶಿಫಾರಸ್ಸು ಮಾಡಿರುವ ಹೆಸರುಗಳ ಅಧಿಸೂಚನೆ ಮಾಡಲು ತಡ ಮಾಡಲಾಗುತ್ತಿದೆ ಎಂದು ಪ್ರಕರಣದ ವಿಚಾರಣೆಯೊಂದರ ಸಂದರ್ಭದಲ್ಲಿ ಸುಪ್ರೀಂ ಕೋರ್ಟ್‌ ಅಭಿಪ್ರಾಯ ವ್ಯಕ್ತಪಡಿಸಿದೆ” ಎಂದೂ ಪ್ರತಿಕ್ರಿಯೆಯಲ್ಲಿ ಉಲ್ಲೇಖಿಸಲಾಗಿದೆ.

ಕಳೆದ ಐದು ವರ್ಷಗಳಲ್ಲಿ ಸುಪ್ರೀಂ ಕೋರ್ಟ್‌ ಕೊಲಿಜಿಯಂ ಶಿಫಾರಸ್ಸಿನಂತೆ 256 ಪ್ರಸ್ತಾವನೆಗಳನ್ನು ಹೈಕೋರ್ಟ್‌ಗೆ ಸರ್ಕಾರ ರವಾನಿಸಿದೆ ಎಂದು ಹೇಳಲಾಗಿದೆ.

ಸುಪ್ರೀಂ ಕೋರ್ಟ್‌ ಮತ್ತು ಹೈಕೋರ್ಟ್‌ನಲ್ಲಿ ಬಾಕಿ ಇರುವ ಹುದ್ದೆಗಳ ಬಗ್ಗೆ ಪ್ರತಿಕ್ರಿಯಿಸಿರುವ ಸಚಿವ ರಿಜಿಜು ಅವರು “ಡಿಸೆಂಬರ್‌ 5ರವರೆಗೆ ಸುಪ್ರೀಂ ಕೋರ್ಟ್‌ನಲ್ಲಿ ಒಟ್ಟು 34 ನ್ಯಾಯಮೂರ್ತಿಗಳ ಹುದ್ದೆ ಇದ್ದು, 27 ನ್ಯಾಯಮೂರ್ತಿಗಳು ಕರ್ತವ್ಯ ನಿರ್ವಹಿಸುತ್ತಿದ್ದು, ಏಳು ಹುದ್ದೆಗಳು ಖಾಲಿ ಇವೆ. ಹೈಕೋರ್ಟ್‌ಗಳಲ್ಲಿ 1,108 ನ್ಯಾಯಮೂರ್ತಿಗಳ ಹುದ್ದೆಗಳಿದ್ದು, 778 ನ್ಯಾಯಮೂರ್ತಿಗಳು ಕರ್ತವ್ಯ ನಿರ್ವಹಿಸುತ್ತಿದ್ದು, 330 ಹುದ್ದೆಗಳು ಖಾಲಿ ಇವೆ” ಎಂದು ತಿಳಿಸಿದ್ದಾರೆ.