Sedition, Supreme Court 
ಸುದ್ದಿಗಳು

ದೇಶದ್ರೋಹ ಕಾಯಿದೆ ರದ್ದುಗೊಳಿಸುವ ಪ್ರಸ್ತಾವ ಪರಿಶೀಲನೆಯಲ್ಲಿಲ್ಲ: ಸಂಸತ್‌ಗೆ ಕೇಂದ್ರದ ವಿವರಣೆ

ಐಪಿಸಿ ಸೆಕ್ಷನ್‌ 124ಎಗೆ ಸಂಬಂಧಿಸಿದ ಕಾನೂನಿನ ಪ್ರಶ್ನೆಯು ಸುಪ್ರೀಂ ಕೋರ್ಟ್‌ ಮುಂದೆ ಇದೆ ಎಂದು ಕೇಂದ್ರ ಕಾನೂನು ಸಚಿವ ಕಿರೆನ್‌ ರಿಜಿಜು ಹೇಳಿದ್ದಾರೆ.

Bar & Bench

ದೇಶದ್ರೋಹಕ್ಕೆ ಸಂಬಂಧಿಸಿದ ಭಾರತೀಯ ದಂಡ ಸಂಹಿತೆಯ (ಐಪಿಸಿ) ಸೆಕ್ಷನ್‌ 124ಎ ಹಿಂಪಡೆಯುವ ಪ್ರಸ್ತಾವವು ಕೇಂದ್ರ ಸರ್ಕಾರದ ಮುಂದೆ ಇಲ್ಲ ಎಂದು ಶುಕ್ರವಾರ ಕಾನೂನು ಸಚಿವರ ಕಿರೆನ್‌ ರಿಜಿಜು ಲಿಖಿತವಾಗಿ ಸಂಸತ್‌ಗೆ ಉತ್ತರಿಸಿದ್ದಾರೆ.

ಅಸ್ಸಾಂ ಲೋಕಸಭಾ ಸದಸ್ಯ ಬದ್ರುದ್ದೀನ್‌ ಅಜ್ಮಲ್‌ ಅವರು ದೇಶದ್ರೋಹ ಆರೋಪಕ್ಕೆ ಸಂಬಂಧಿಸಿದ ಸೆಕ್ಷನ್‌ 124ಎ ಅನ್ನು ಸುಪ್ರೀಂ ಕೋರ್ಟ್‌ ವಸಾಹತುಶಾಹಿ ಕಾನೂನು ಎಂದಿದ್ದು, ಅದರ ದುರ್ಬಳಕೆಯ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸಿದೆ. ಹೀಗಾಗಿ ಸೆಕ್ಷನ್‌ 124ಎ ಅನ್ನು ರದ್ದುಪಡಿಸುವ ಅಥವಾ ತಿದ್ದುಪಡಿ ಮಾಡುವ ಕುರಿತು ಸರ್ಕಾರದ ನಿಲುವಿನ ಕುರಿತು ಮಾಹಿತಿ ನೀಡುವಂತೆ ಕೋರಿದ್ದರು. ಇದಕ್ಕೆ ರಿಜಿಜು ಮೇಲಿನಂತೆ ಉತ್ತರಿಸಿದ್ದಾರೆ.

“ಐಪಿಸಿ 1860ರ ಸೆಕ್ಷನ್‌ 124ಎ ಅನ್ನು ಹಿಂಪಡೆಯುವ ಪ್ರಸ್ತಾವವು ಕೇಂದ್ರ ಸರ್ಕಾರದ ಮುಂದೆ ಇಲ್ಲ ಎಂದು ಗೃಹ ಇಲಾಖೆಯು ತಿಳಿಸಿದೆ. ಸೆಕ್ಷನ್‌ 124ಎಗೆ ಸಂಬಂಧಿಸಿದ ಕಾನೂನಿನ ಪ್ರಶ್ನೆಯು ಸುಪ್ರೀಂ ಕೋರ್ಟ್‌ ಮುಂದೆ ಇದೆ” ಎಂದು ಪ್ರತಿಕ್ರಿಯೆಯಲ್ಲಿ ತಿಳಿಸಲಾಗಿದೆ. ಐಪಿಸಿ 1860ರ ಸೆಕ್ಷನ್ 124ಎ, 153ಎ ಮತ್ತು 505ರ ನಿಬಂಧನೆಗಳ ವ್ಯಾಪ್ತಿ ಮತ್ತು ಪರಿಮಾಣಗಳನ್ನು ವ್ಯಾಖ್ಯಾನಿಸುವುದು ಅಗತ್ಯವಿದೆ. ಅದರಲ್ಲಿಯೂ ವಿಶೇಷವಾಗಿ ಸುದ್ದಿ, ಮಾಹಿತಿ ಹಾಗೂ ಮೂಲಭೂತ ಹಕ್ಕುಗಳನ್ನು, ಅದು ದೇಶದ ಯಾವುದೇ ಭಾಗದ ಆಡಳಿತದ ವಿರುದ್ಧವೇ ಅಗಿದ್ದರೂ ಸಹ ವಿದ್ಯುನ್ಮಾನ ಮತ್ತು ಮುದ್ರಣ ಮಾಧ್ಯಮಗಳು ಅವುಗಳನ್ನು ಪ್ರಸಾರ ಮಾಡಲು ಹೊಂದಿರುವ ಹಕ್ಕಿನ ಹಿನ್ನೆಲೆಯಲ್ಲಿ ವ್ಯಾಖ್ಯಾನಿಸುವ ಅಗತ್ಯವಿದೆ” ಎಂದು ಸುಪ್ರೀಂ ಕೋರ್ಟ್‌ ಮೇ 31ರ ಆದೇಶದಲ್ಲಿ ತಿಳಿಸಿದೆ ಎಂಬುದನ್ನೂ ಉಲ್ಲೇಖಿಸಲಾಗಿದೆ.

ಸುಪ್ರೀಂ ಕೋರ್ಟ್‌ನಲ್ಲಿ ಸಾಂವಿಧಾನಿಕ ಸವಾಲುಗಳ ಬಗ್ಗೆ ಉಲ್ಲೇಖಿಸಲಾಗಿರುವ ಬಾಕಿ ಇರುವ ಕಿಶೋರ್‌ಚಂದ್ರ ವಾಂಘ್‌ಕೇಮ್ಚಾ ಮತ್ತು ಇತರರು ವರ್ಸಸ್‌ ಭಾರತ ಸರ್ಕಾರ ಹಾಗೂ ಎಸ್‌ ಎಸ್‌ ವೋಂಬಟ್ಕೆರೆ ವರ್ಸಸ್‌ ಭಾರತ ಸರ್ಕಾರ ಪ್ರಕರಣಗಳನ್ನೂ ಉಲ್ಲೇಖಿಸಲಾಗಿದೆ.

ಕಳೆದ ಜುಲೈನಲ್ಲಿ ಸುಪ್ರೀಂ ಕೋರ್ಟ್‌ ಕೇಂದ್ರ ಸರ್ಕಾರವನ್ನು 75 ವರ್ಷಗಳ ಬಳಿಕವೂ ರಾಷ್ಟ್ರದ್ರೋಹದ ಕಾನೂನು ಅಗತ್ಯವಿದೆಯೇ ಎಂದು ಪ್ರಶ್ನಿಸಿತ್ತು. ಸುಪ್ರೀಂ ಕೋರ್ಟ್‌ ನಿವೃತ್ತ ನ್ಯಾಯಮೂರ್ತಿ ರೋಹಿಂಟನ್‌ ನಾರಿಮನ್‌ ಅವರು ಅಕ್ಟೋಬರ್‌ನಲ್ಲಿ ರಾಷ್ಟ್ರದ್ರೋಹ ಕಾಯಿದೆಯನ್ನು ನಿರಪರಾಧೀಕರಣಗೊಳಿಸುವಂತೆ ಸುಪ್ರೀಂ ಕೋರ್ಟ್‌ಗೆ ಕೋರಿದ್ದರು.