ಪುಣೆಯಲ್ಲಿ ಟಿಪ್ಪು ಸುಲ್ತಾನ್ ಜಯಂತಿಯಂದು ಆಲ್ ಇಂಡಿಯಾ ಮಜ್ಲಿಸ್-ಎ-ಇತ್ತೆಹಾದ್-ಉಲ್-ಮುಸ್ಲಿಮೀನ್ (ಎಐಎಂಐಎಂ) ಮೆರವಣಿಗೆ ತಡೆಯುವುದಕ್ಕೆ ಯಾವುದೇ ಕಾರಣ ಇಲ್ಲ ಎಂದು ಬಾಂಬೆ ಹೈಕೋರ್ಟ್ ಗುರುವಾರ ಹೇಳಿದೆ [ಫೈಯಾಜ್ ಇಲಾಹಿ ಶೇಖ್ ಮತ್ತು ಮಹಾರಾಷ್ಟ್ರ ಸರ್ಕಾರ ಇನ್ನಿತರರ ನಡುವಣ ಪ್ರಕರಣ].
ಮೆರವಣಿಗೆಯನ್ನು ನಿರಾಕರಿಸಲು ಯಾವುದೇ ಕಾರಣವಿಲ್ಲ ಎಂದ ನ್ಯಾಯಮೂರ್ತಿಗಳಾದ ರೇವತಿ ಮೋಹಿತೆ ಡೆರೆ ಮತ್ತು ಎಸ್‌ಜಿ ಡಿಗೆ ಅವರಿದ್ದ ಪೀಠ ಕಾನೂನು ಸುವ್ಯವಸ್ಥೆ ಕಾಪಾಡಲು ಪೊಲೀಸರು ಅಗತ್ಯ ನಿರ್ಬಂಧ ಹೇರಬಹುದು ಮತ್ತು ಅಪರಾಧ ನಡೆದರೆ ಪ್ರಕರಣ ದಾಖಲಿಸಿಕೊಳ್ಳಬಹುದು ಎಂದಿದೆ.
ಮೆರವಣಿಗೆ ನಡೆಸಲು ಅವರಿಗೆ ಅನುಮತಿಸಲಾಗದು ಎಂಬುದಕ್ಕೆ ಯಾವುದೇ ಕಾರಣ ಇಲ್ಲ. ನೀವು (ಪೊಲೀಸರು) ನಿರ್ಬಂಧಗಳನ್ನು ವಿಧಿಸಬಹುದು. ಅಹಿತಕರ ಘಟನೆಗಳು ನಡೆದರೆ ನೀವು ಮೊಕದ್ದಮೆ ದಾಖಲಿಸಿಕೊಳ್ಳಬಹುದು. ಕಾನೂನು ಸುವ್ಯವಸ್ಥೆ ಕಾಪಾಡಿಕೊಳ್ಳುವುದು ನಿಮ್ಮ ಹಕ್ಕು ಎಂದು ಅದು ನುಡಿಯಿತು,
ನವೆಂಬರ್ 26ರಂದು ನಡೆಸಬೇಕಿದ್ದ ಮೆರವಣಿಗೆಗೆ ಅನುಮತಿ ನೀಡಲು ಪುಣೆ ಪೊಲೀಸರು ನಿರಾಕರಿಸಿದ್ದನ್ನು ಪ್ರಶ್ನಿಸಿ ಎಐಎಂಐಎಂನ ಪುಣೆ ಜಿಲ್ಲಾ ಘಟಕದ ಅಧ್ಯಕ್ಷರು ಸಲ್ಲಿಸಿದ್ದ ಮನವಿಯ ವಿಚಾರಣೆ ವೇಳೆ ಪೀಠ ಈ ವಿಚಾರ ತಿಳಿಸಿತು.
ಮತ್ತೊಂದು ಸಮುದಾಯದ ಸದಸ್ಯರ ಆಕ್ಷೇಪಣೆ ಹಿನ್ನೆಲೆಯಲ್ಲಿ ಪುಣೆ ಪೊಲೀಸರು ಟಿಪ್ಪು ಸುಲ್ತಾನ್ ಅವರ ಜನ್ಮ ದಿನಾಚರಣೆ, ಸಂವಿಧಾನ ದಿನ ಮತ್ತು ಮೌಲಾನಾ ಅಬುಲ್ ಕಲಾಂ ಆಜಾದ್ ಅವರ ಸ್ಮರಣಾರ್ಥ ಆಯೋಜಿಸಿದ್ದ ಮೆರವಣಿಗೆಗೆ ಅನುಮತಿ ನಿರಾಕರಿಸಿದ್ದರು. ಈ ಹಿನ್ನೆಲೆಯಲ್ಲಿ ಎಐಎಂಐಎಂ ಡಿಸೆಂಬರ್ 24ರಂದು ಮೆರವಣಿಗೆ ನಡೆಸಲು ಅನುಮತಿ ಕೋರಿತ್ತು.
ಇಂದು ನಡೆದ ವಿಚಾರಣೆ ವೇಳೆ ಪೀಠ ಟಿಪ್ಪು ಸುಲ್ತಾನ್ ಜಯಂತಿ ಆಚರಣೆಗೆ ಯಾವುದೇ ಔಪಚಾರಿಕ ನಿಷೇಧವಿದೆಯೇ ಎಂದು ಪ್ರಶ್ನಿಸಿತು. ವಿಡಿಯೋ ಕಾನ್ಫರೆನ್ಸ್ ಮೂಲಕ ಹಾಜರಿದ್ದ ಪುಣೆ ಗ್ರಾಮಾಂತರ ಎಸ್ಪಿ ಪಂಕಜ್ ದೇಶಮುಖ್, ಟಿಪ್ಪು ಸುಲ್ತಾನ್ ಜಯಂತಿ ಮೆರವಣಿಗೆಗೆ ಸಂಬಂಧಿಸಿದಂತೆ ಈ ಹಿಂದೆ ಅಹಿತಕರ ಘಟನೆಗಳು ನಡೆದು ಪ್ರಕರಣ ದಾಖಲಿಸಲಾಗಿತ್ತು. ಆದರೆ ಸಂವಿಧಾನ ದಿನ ಮತ್ತು ಮೌಲಾನಾ ಅಬ್ದುಲ್ ಕಲಾಂ ಆಜಾದ್ ಸ್ಮರಣಾರ್ಥ ನವೆಂಬರ್ 26 ರಂದು ಮೆರವಣಿಗೆ ನಡೆಸಲು ಅವಕಾಶ ನೀಡಿದ್ದೇವೆ ಎಂದರು.
ಇದಕ್ಕೆ ಪ್ರತಿಕ್ರಿಯಿಸಿದ ಪೀಠ, ಮೆರವಣಿಗೆ ವೇಳೆ ಯಾವುದೇ ಅಪರಾಧ ಎಸಗಿದರೆ ಪೊಲೀಸರು ದೂರು ದಾಖಲಿಸಿಕೊಂಡು ಅಗತ್ಯ ಕ್ರಮ ಕೈಗೊಳ್ಳಬಹುದು ಎಂದು ಒತ್ತಿ ಹೇಳಿದರು.
ಯಾವುದೇ ಅಹಿತಕರ ಘಟನೆಗಳಿಲ್ಲದೆ ಮತ್ತು ಪೊಲೀಸರು ನಿಗದಿಪಡಿಸಿದ ಷರತ್ತುಗಳಿಗೆ ಬದ್ಧವಾಗಿ ಮೆರವಣಿಗೆ ನಡೆಸಲಾಗುತ್ತದೆ ಎಂದು ಮುಚ್ಚಳಿಕೆ ಬರೆದುಕೊಡುವಂತೆ ಅರ್ಜಿದಾರರಿಗೆ ನ್ಯಾಯಾಲಯ ಸೂಚಿಸಿತು. ಡಿಸೆಂಬರ್ 17 ರಂದು ಪ್ರಕರಣದ ಮುಂದಿನ ವಿಚಾರಣೆ ನಡೆಯಲಿದೆ.