Sushil Kumar and Delhi Police
Sushil Kumar and Delhi Police 
ಸುದ್ದಿಗಳು

ಸುಶೀಲ್‌ ಕುಮಾರ್‌ಗೆ ಜೈಲಿನಲ್ಲಿ ವಿಶೇಷ ಆಹಾರ, ಆರೋಗ್ಯ ಪೂರಣಗಳಿಲ್ಲ, ಎಲ್ಲರಿಗೂ ಕಾನೂನು ಒಂದೇ: ದೆಹಲಿ ನ್ಯಾಯಾಲಯ

Bar & Bench

ಕೊಲೆ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಬಂಧಿಯಾಗಿರುವ ಒಲಿಂಪಿಕ್‌ ಪದಕ ವಿಜೇತ ಕುಸ್ತಿಪಟು ಸುಶೀಲ್‌ ಕುಮಾರ್‌ ತಮಗೆ ಜೈಲಿನಲ್ಲಿ ವಿಶೇಷ ಆಹಾರ ಹಾಗೂ ಪ್ರೊಟೀನ್‌ ಆರೋಗ್ಯ ಪೂರಣ, ಓಮೆಗಾ-3 ಮಾತ್ರೆಗಳು, ಜಾಯಿಂಟ್‌ಮೆಂಟ್‌ ಇತ್ಯಾದಿ ನೀಡುವಂತೆ ಕೋರಿ ಸಲ್ಲಿಸಿದ್ದ ಮನವಿಯನ್ನು ಬುಧವಾರ ದೆಹಲಿ ನ್ಯಾಯಾಲಯ ವಜಾಗೊಳಿಸಿದೆ.

ದೆಹಲಿ ಕಾರಾಗೃಹ ನಿಯಮಗಳ ಅನ್ವಯ ಸುಶೀಲ್‌ ಕುಮಾರ್‌ ಅವರಿಗೆ ಅಗತ್ಯ ಅವಶ್ಯಕತೆಗಳನ್ನು ಪೂರೈಸುವುದರ ಬಗ್ಗೆ ಎಚ್ಚರವಹಿಸಲಾಗುವುದು. ಆದರೆ, ಯಾವುದೇ ವಿಶೇಷ ಸವಲತ್ತು ಕಲ್ಪಿಸಲಾಗದು ಎಂದು ರೋಹಿಣಿ ನ್ಯಾಯಾಲಯಗಳ ಮುಖ್ಯ ಮೆಟ್ರೋಪಾಲಿಟನ್‌ ಮ್ಯಾಜಿಸ್ಟ್ರೇಟ್‌ ಸತ್ವೀರ್‌ ಸಿಂಗ್‌ ಲಾಂಬಾ ಹೇಳಿದ್ದಾರೆ.

“ಸಮಾನತೆಯ ಹಕ್ಕು ಭಾರತೀಯ ಸಂವಿಧಾನದ ಮೂಲ ಲಕ್ಷಣವಾಗಿದೆ. ಇದು ಕಾನೂನು ಪರಿಪಾಲನೆಯನ್ನು ಸೂಚಿಸುತ್ತದೆ. ಯಾವುದೇ ವ್ಯಕ್ತಿ ತನ್ನ ಶ್ರೇಣಿ, ಸ್ಥಾನಮಾನ, ಶ್ರೀಮಂತಿಕೆ ಅಥವಾ ಬಡತನದಿಂದಾಗಿ ಯಾವುದೇ ವಿಶೇಷ ಸವಲತ್ತು ಪಡೆಯದಿರಲು ಅದರಲ್ಲಿ ಉಲ್ಲೇಖಿಸಲಾಗಿದೆ. ಕಾನೂನು ಎಲ್ಲರನ್ನೂ ಸಮಾನವಾಗಿ ಕಾಣಲಿದ್ದು, ಸಮಾನವಾಗಿ ಅನ್ವಯವಾಗುತ್ತದೆ…

… ಆರೋಪಿ ಮನವಿ ಮೂಲಕ ಕೋರಿರುವ ವಿಶೇಷ ಆಹಾರ ಮತ್ತು ಆರೋಗ್ಯ ಪೂರಣ ಮಾತ್ರೆಗಳು ಅವರ ಆಶಯಗಳಷ್ಟೆ. ಅವುಗಳು ಯಾವುದೇ ರೀತಿಯಲ್ಲಿಯೂ ಆರೋಪಿಗೆ ಅತ್ಯಗತ್ಯ ಅವಶ್ಯತೆಗಳಲ್ಲ. ಹೀಗಾಗಿ, ಅರ್ಜಿದಾರರ ಮನವಿಯು ನಿರ್ವಹಣೆಗೆ ಅರ್ಹವಾಗಿಲ್ಲ” ಎಂದು ನ್ಯಾಯಾಲಯ ಹೇಳಿದೆ.

ಛತ್ರಸಾಲ್‌ ಕ್ರೀಡಾಂಗಣದ ಬಳಿ ನಡೆದಿರುವ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಶೀಲ್‌ ಕುಮಾರ್‌ ಅವರು ನ್ಯಾಯಾಂಗ ಬಂಧನದಲ್ಲಿದ್ದಾರೆ. ಕೊಲೆಯಾದ ಕುಸ್ತಿಪಟು ಸೋನು ಅವರನ್ನು ಛತ್ರಸಾಲ್‌ ಕ್ರೀಡಾಂಗಣಕ್ಕೆ ಕರೆದೊಯ್ದಿದ್ದ ಸುಶೀಲ್‌ ಕುಮಾರ್‌ ಮತ್ತು ಇತರೆ ಆರೋಪಿಗಳು ನಿರ್ದಯವಾಗಿ ಹಲ್ಲೆಗೈದು ಕೊಲೆ ಮಾಡಿದ್ದರು ಎಂದು ಸರ್ಕಾರಿ ಅಭಿಯೋಜಕರು ವಾದಿಸಿದ್ದರು.