ಮಾದಕವಸ್ತು ಪ್ರಕರಣದಲ್ಲಿ ಬಾಲಿವುಡ್ ನಟಿ ರಿಯಾ ಚಕ್ರವರ್ತಿಗೆ ಜಾಮೀನು ನೀಡಿದ ಬಾಂಬೆ ಹೈಕೋರ್ಟ್ ಬುಧವಾರ ತನ್ನ ತೀರ್ಪಿನಲ್ಲಿ ನ್ಯಾಯಾಲಯ ಕಾನೂನಿನ ಎದುರು ಖ್ಯಾತನಾಮರು (ಸೆಲೆಬ್ರಿಟಿ), ರೂಪದರ್ಶಿಗಳಿಗೆ ವಿಶೇಷ ರಿಯಾಯ್ತಿ, ಸವಲತ್ತು ಇರದು ಎಂದು ತಿಳಿಸಿದೆ.
ಯುವಜನರಿಗೊಂದು ದೃಷ್ಟಾಂತವಾಗುವ ನಿಟ್ಟಿನಲ್ಲಿ ಮತ್ತು ಅವರು ಇಂತಹ ಅಪರಾಧಗಳನ್ನು ಮಾಡದಂತೆ ತಡೆಯಲು ಸೆಲೆಬ್ರಿಟಿಗಳು ಮತ್ತು ರೂಪದರ್ಶಿಗಳನ್ನು ಕಠಿಣವಾಗಿ ಪರಿಗಣಿಸಬೇಕು ಎಂದು ಹೆಚ್ಚುವರಿ ಸಾಲಿಸಿಟರ್ ಜನರಲ್ ಅನಿಲ್ ಸಿಂಗ್ ವಾದ ಮಂಡಿಸಿದರು. ಇದಕ್ಕೆ ಪ್ರತಿಕ್ರಿಯೆಯಾಗಿ ನ್ಯಾಯಮೂರ್ತಿ ಸಾರಂಗ್ ವಿ ಕೊತ್ವಾಲ್ ಅವರು ಈ ಅಭಿಪ್ರಾಯ ವ್ಯಕ್ತಪಡಿಸಿದರು.
ತೀರ್ಪಿನ ಸಾರ:
"ಕಾನೂನಿನ ಮುಂದೆ ಎಲ್ಲರೂ ಸಮಾನರು. ಯಾವುದೇ ಖ್ಯಾತನಾಮರು ಅಥವಾ ಮಾದರಿ ವ್ಯಕ್ತಿಗಳು ನ್ಯಾಯಾಲಯದ ಎದುರು ಯಾವುದೇ ವಿಶೇಷ ಸವಲತ್ತು ಪಡೆಯುವುದಿಲ್ಲ. ಅದೇ ರೀತಿ, ಅಂತಹ ವ್ಯಕ್ತಿಗೆ ನ್ಯಾಯಾಲಯಗಳಲ್ಲಿ ಕಾನೂನು ಎದುರಿಸುವಾಗ ಯಾವುದೇ ವಿಶೇಷ ರಿಯಾಯ್ತಿ ಇರುವುದಿಲ್ಲ. ಆರೋಪಿಗಳ ಸ್ಥಾನಮಾನ ಲೆಕ್ಕಿಸದೆ ಪ್ರತಿಯೊಂದು ಪ್ರಕರಣವನ್ನೂ ಅದರದೇ ಆದ ಮಹತ್ವದ ಮೇಲೆ ತೀರ್ಮಾನಿಸಬೇಕಾಗುತ್ತದೆ."ಬಾಂಬೆ ಹೈಕೋರ್ಟ್
'ಎನ್ ಸಿ ಬಿಗೆ ತನಿಖೆ ನಡೆಸುವ ಅಧಿಕಾರವಿಲ್ಲ ಎಂಬ ವಕೀಲರಾದ ಮಾನೆಶಿಂಧೆ ಅವರ ವಾದವನ್ನು ಬೆಂಬಲಿಸಲಾಗದು. ಸುಶಾಂತ್ ಸಿಂಗ್ ಸಾವಿಗೆ ಸಂಬಂಧಪಡದ ಅನೇಕ ಮಾದಕವಸ್ತು ಜಾಲದಲ್ಲಿರುವವರನ್ನು ಎನ್ ಸಿ ಬಿ ಬಂಧಿಸಿದೆ. ಇದು ಸಂಪೂರ್ಣ ಭಿನ್ನ ವಿಷಯ' ಎಂದು ಕೋರ್ಟ್ ಇದೇ ಸಂದರ್ಭದಲ್ಲಿ ಅಭಿಪ್ರಾಯಪಟ್ಟಿದೆ.
ಅಲ್ಲದೆ ರಿಯಾ ಜಾಮೀನು ಪಡೆಯಲು ಅರ್ಹರೇ ಎಂಬ ಕುರಿತಂತೆ ಕೋರ್ಟ್ ಹೀಗೆ ಹೇಳಿದೆ:
"ಅಲ್ಪ ಪ್ರಮಾಣದ ಸೇವನೆ ಸಂದರ್ಭದಲ್ಲಿ ಆರೋಪಿಗಳು ಜಾಮೀನು ಪಡೆದರೆ ಜಾಲದ ಮೂಲ ಮತ್ತು ವಹಿವಾಟನ್ನು ಪತ್ತೆಹಚ್ಚಲು ಯಾವುದೇ ತನಿಖೆ ನಡೆಯುವುದಿಲ್ಲ. ಇದು ಕಾಯಿದೆಯ ಉದ್ದೇಶವನ್ನು ಮಣಿಸುತ್ತದೆ. ಈ ಎಲ್ಲಾ ಚರ್ಚೆಯನ್ನು ಪರಿಗಣಿಸಿ, ಬಲದೇವ್ ಸಿಂಗ್ (ಸುಪ್ರಾ) ಪ್ರಕರಣದಲ್ಲಿ ಮಾನ್ಯ ಸುಪ್ರೀಂ ಕೋರ್ಟ್ ಮಾಡಿರುವ ಅವಲೋಕನಗಳನ್ನು ಗಣನೆಗೆ ತೆಗೆದುಕೊಂಡು ಎನ್‌ಡಿಪಿಎಸ್ ಕಾಯ್ದೆಯಡಿಯ ಎಲ್ಲಾ ಅಪರಾಧಗಳು ಜಾಮೀನು ರಹಿತವಾಗಿವೆ ಎಂದು ನಾನು ದೃಢಪಡಿಸುತ್ತಿದ್ದೇನೆ.”ನ್ಯಾ. ಎಸ್ ವಿ ಕೊತ್ವಾಲ್
ಮೃತ ಸುಶಾತ್ ಸಿಂಗ್ ರಜಪೂತ್ ಗೆ ಮಾದಕವಸ್ತು ಖರೀದಿಸಲು ಹಣ ವಿನಿಮಯ ಮಾಡಿದ ಮಾತ್ರಕ್ಕೆ ಆಕೆ ಅಕ್ರಮ ಮಾದಕ ವಸ್ತು ದಂಧೆಗೆ ಹಣಕಾಸು ಒದಗಿಸುತ್ತಿದ್ದರು ಎಂದು ಅರ್ಥವಲ್ಲ ಎಂಬುದಾಗಿ ಕೋರ್ಟ್ ಅಭಿಪ್ರಾಯಟ್ಟಿದೆ.
ಸುಶಾಂತ್ ತಮ್ಮ ಸ್ವಂತ ಮನೆಯಲ್ಲಿ ವಾಸವಿದ್ದು ಊಟ ಮತ್ತಿತರ ಅಗತ್ಯ ವಸ್ತುಗಳಿಗೆ ಖರ್ಚು ಮಾಡುತ್ತಿದ್ದರು. ಅವರ ವಿರುದ್ಧ ಯಾವುದೇ ಅಪರಾಧ ಪ್ರಕರಣಗಳಿರಲಿಲ್ಲ, ಬಂಧನದ ಭೀತಿಯೂ ಇರಲಿಲ್ಲ ಹೀಗಾಗಿ ಸುಶಾಂತ್ ಅವರಿಗೆ ಆಶ್ರಯ ನೀಡಲಾಗಿತ್ತು ಎಂದು ಆರೋಪಿಸಲು ಕಾಯಿದೆಯನ್ನು ಬಳಸಿಕೊಳ್ಳಲಾಗದು ಎಂಬುದಾಗಿ ಕೋರ್ಟ್ ಹೇಳಿದೆ. ಆ ಮೂಲಕ ರಿಯಾ ಸುಶಾಂತ್ ಗೆ ಡ್ರಗ್ಸ್ ವಿಚಾರದಲ್ಲಿ ಆಶ್ರಯ ನೀಡಿದ್ದರು ಎನ್ನುವ ವಾದವನ್ನು ಬಲಪಡಿಸಲು ಕಾಯಿದೆಯನ್ನು ಬಳಸಲಾಗದು ಎನ್ನಲಾಗಿದೆ.
"ಆಕೆಯ ವಿರುದ್ಧ ಬೇರೆ ಯಾವುದೇ ಕ್ರಿಮಿನಲ್ ಹಿನ್ನೆಲೆ ಇಲ್ಲ. ಆಕೆ ಮಾದಕವಸ್ತು ವ್ಯಾಪಾರಿಗಳ ಜಾಲದ ಭಾಗವಲ್ಲ. ಹಣಗಳಿಕೆಗಾಗಿ ಮತ್ತಿತರ ಅನುಕೂಲಗಳಿಗಾಗಿ ತನ್ನಲ್ಲಿದ್ದ ಮಾದಕವಸ್ತುಗಳನ್ನು ಬೇರೆಯವರಿಗೆ ಸರಬರಾಜು ಮಾಡಿಲ್ಲ. ಆಕೆಗೆ ಯಾವುದೇ ಕ್ರಿಮಿನಲ್ ಪೂರ್ವಾಪರ ಇಲ್ಲದ ಕಾರಣ, ಜಾಮೀನಿನಲ್ಲಿರುವ ಸಮಯದಲ್ಲಿ ಆಕೆ ಯಾವುದೇ ಅಪರಾಧ ಮಾಡುವ ಸಾಧ್ಯತೆ ಇಲ್ಲ ಎಂದು ನಂಬಲು ಸಮಂಜಸ ಆಧಾರಗಳಿವೆ. "ಬಾಂಬೆ ಹೈಕೋರ್ಟ್
ಹೀಗೆ ಅಭಿಪ್ರಾಯಪಟ್ಟ ಕೋರ್ಟ್ ಪ್ರಕರಣಕ್ಕೆ ಸಂಬಂಧಿಸಿದಂತೆ ರಿಯಾ ಅವರಿಗೆ ಷರತ್ತುಬದ್ಧ ಜಾಮೀನು ನೀಡಿದೆ.
[ತೀರ್ಪನ್ನು ಇಲ್ಲಿ ಓದಿ]