ಸುದ್ದಿಗಳು

ಶರಾವತಿ ಪಂಪ್ಡ್ ಸ್ಟೋರೇಜ್ ಜಲವಿದ್ಯುತ್ ಯೋಜನೆ ಕಾಮಗಾರಿಗೆ ತಡೆ ನೀಡಿದ ಹೈಕೋರ್ಟ್‌

“ಅರಣ್ಯ ಮತ್ತು ಶರಾವತಿ ನದಿ ಕಣಿವೆ ಹಾಗೂ ಪರಿಸರ ಸೂಕ್ಷ್ಮ ವಲಯದಲ್ಲಿ ಯೋಜನೆಗೆ ಸಂಬಂಧಿಸಿದಂತೆ ವಾಸ್ತವದಲ್ಲಿ ಯಾವುದೇ ಚಟುವಟಿಕೆಯನ್ನು ನ್ಯಾಯಾಲಯದ ಆದೇಶದ ಹೊರತಾಗಿ ನಡೆಸಕೂಡದು” ಎಂದು ಆದೇಶಿಸಿದ ಹೈಕೋರ್ಟ್‌.

Bar & Bench

ಶಿವಮೊಗ್ಗ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ಕೈಗೆತ್ತಿಕೊಳ್ಳಲಿರುವ ಉದ್ದೇಶಿತ ₹10 ಸಾವಿರ ಕೋಟಿ ವೆಚ್ಚದ ಶರಾವತಿ ಪಂಪ್ಡ್ ಸ್ಟೋರೇಜ್ ಜಲವಿದ್ಯುತ್ ಯೋಜನೆ ಕಾಮಗಾರಿಯನ್ನು ಅರಣ್ಯದಲ್ಲಿ ಕೈಗೊಳ್ಳುವುದಕ್ಕೆ ಗಂಭೀರ ಆತಂಖ ವ್ಯಕ್ತಪಡಿಸಿರುವ ಕರ್ನಾಟಕ ಹೈಕೋರ್ಟ್‌ ಮಂಗಳವಾರ ಮಧ್ಯಂತರ ತಡೆ ನೀಡಿದೆ.

ಸಾಗರದ ಅಖಿಲೇಶ್ ಚಿಪ್ಲಿ, ಉಡುಪಿಯ ಡಾ.ರವೀಂದ್ರನಾಥ ಶಾನಬಾಗ್‌ ಮತ್ತು ಶಿವಮೊಗ್ಗದ ಸಿ ಬಿ ಮನೋಹರ ಕುಮಾರ್ ಸಲ್ಲಿಸಿರುವ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ವಿಭು ಬಕ್ರು ಮತ್ತು ನ್ಯಾಯಮೂರ್ತಿ ಸಿ ಎಂ ಪೂಣಚ್ಚ ಅವರ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿತು.

ವಾದ-ಪ್ರತಿವಾದ ಆಲಿಸಿದ ನ್ಯಾಯಾಲಯವು “ಅರಣ್ಯ ಮತ್ತು ಶರಾವತಿ ನದಿ ಕಣಿವೆ ಹಾಗೂ ಪರಿಸರ ಸೂಕ್ಷ್ಮ ವಲಯದಲ್ಲಿ ಯೋಜನೆಗೆ ಸಂಬಂಧಿಸಿದಂತೆ ವಾಸ್ತವದಲ್ಲಿ ಯಾವುದೇ ಚಟುವಟಿಕೆಯನ್ನು ನ್ಯಾಯಾಲಯದ ಆದೇಶದ ಹೊರತಾಗಿ ನಡೆಸಕೂಡದು” ಎಂದು ಆದೇಶಿಸಿದೆ.

ಇದಕ್ಕೂ ಮುನ್ನ, ಕರ್ನಾಟಕ ಪವರ್‌ ಕಾರ್ಪೊರೇಶನ್‌ ಲಿಮಿಟೆಡ್‌ ಪ್ರತಿನಿಧಿಸಿದ್ದ ಹಿರಿಯ ವಕೀಲ ಧ್ಯಾನ್‌ ಚಿನ್ನಪ್ಪ ಅವರು “ವನ್ಯಜೀವಿ ತಾಣದಲ್ಲಿ ಅಲ್ಲಿನ ವನ್ಯಸಂಪತ್ತಿಗೆ ಯಾವುದೇ ಹಾನಿ ಮಾಡದ ಹೊರತು ಅರಣ್ಯೇತರ ಚಟುವಟಿಕೆ ನಡೆಸಲು ಯಾವುದೇ ಅಡ್ಡಿ ಇಲ್ಲ. ಒಂದು ಕಡೆಯಿಂದ ಅಂಡರ್‌ಗ್ರೌಂಡ್‌ನಲ್ಲಿ ಒಂದು ಕಡೆಯಿಂದ ಇನ್ನೊಂದು ಕಡೆ ನೀರನ್ನು ಪಂಪ್‌ ಮಾಡಲಾಗುತ್ತದೆ. ಸೋಲಾರ್‌ ಬಳಕೆ ಮಾಡಿ, ನೀರನ್ನು ಮತ್ತೆ ಪಂಪ್‌ ಮಾಡಲಾಗುತ್ತದೆ” ಎಂದರು.

ಆಗ ಕೇಂದ್ರ ಸರ್ಕಾರದ ಪರ ಹಾಜರಾಗಿದ್ದ ಹೆಚ್ಚುವರಿ ಸಾಲಿಸಿಟರ್‌ ಜನರಲ್‌ ಕೆ ಅರವಿಂದ ಕಾಮತ್‌ “ಯೋಜನೆಗೆ ಕೇಂದ್ರ ವನ್ಯಜೀವಿ ಮಂಡಳಿಯಿಂದ ಅನುಮೋದನೆ ಇನ್ನೂ ಸಿಕ್ಕಿಲ್ಲ. ಯೋಜನೆ ಬಗೆಗಿನ ಆತಂಕಗಳ ಪರಿಶೀಲನೆ ಮಾಡಲಾಗುತ್ತಿದೆ” ಎಂದರು.

ರಾಜ್ಯ ಸರ್ಕಾರ ಪ್ರತಿನಿಧಿಸಿದ್ದ ಅಡ್ವೊಕೇಟ್‌ ಜನರಲ್‌ ಕೆ ಶಶಿಕಿರಣ್‌ ಶೆಟ್ಟಿ ಅವರು “ಆತುರದಲ್ಲಿ ಅರ್ಜಿ ಸಲ್ಲಿಕೆ ಮಾಡಲಾಗಿದೆ. ರಾಷ್ಟ್ರೀಯ ವನ್ಯಜೀವಿ ಮಂಡಳಿ, ಅರಣ್ಯ ಮತ್ತು ಪರಿಸರ ಇಲಾಖೆಗಳು ಯೋಜನೆಗೆ ಒಪ್ಪಿಗೆ ನೀಡಿಲ್ಲ. ಅಲ್ಲಿಂದ ಬಂದ ಒಪ್ಪಿಗೆಯನ್ನು ನ್ಯಾಯಾಲಯದ ಮುಂದೆ ಇಡಲಾಗುವುದು” ಎಂದರು. ಅರ್ಜಿದಾರರ ಪರವಾಗಿ ವಕೀಲೆ ಬಿ ವಿ ವಿದ್ಯುಲ್ಲತಾ ವಕಾಲತ್ತು ವಹಿಸಿದ್ದಾರೆ.

ವನ್ಯಜೀವಿಗಳ ಪ್ರಯೋಜನಕ್ಕಾಗಿ ಮತ್ತು ಬೇಡದ ಉದ್ದೇಶಗಳಿಗಾಗಿ ವನ್ಯಜೀವಿ ಅಭಯಾರಣ್ಯ ಪ್ರದೇಶ ಬಳಕೆಗೆ ಅನುಮೋದನೆ ನೀಡುವ ಅಧಿಕಾರ ರಾಷ್ಟ್ರೀಯ ವನ್ಯಜೀವಿ ಮಂಡಳಿಯ ಸ್ಥಾಯಿ ಸಮಿತಿಗೆ ಇಲ್ಲ. ಈ ನಿಟ್ಟಿನಲ್ಲಿ, ವನ್ಯಜೀವಿ ರಕ್ಷಣಾ ಕಾಯಿದೆ–1972ರ ಸೆಕ್ಷನ್‌ 29ರ ಅಡಿಯಲ್ಲಿ ವಿಧಿಸಲಾದ ನಿರ್ಬಂಧವನ್ನು ಗಮನದಲ್ಲಿ ಇರಿಸಿಕೊಂಡು ಶರಾವತಿ ಕಣಿವೆಯ ಅಭಯಾರಣ್ಯ ಮತ್ತು ಅದರ ಪರಿಸರ ಸೂಕ್ಷ್ಮ ವಲಯದಲ್ಲಿ ಕೈಗೆತ್ತಿಕೊಳ್ಳಲಿರುವ ಉದ್ದೇಶಿತ ಯೋಜನೆಗೆ ಯಾವುದೇ ಅನುಮೋದನೆ ನೀಡಬಾರದು ಎಂದು ಅರ್ಜಿಯಲ್ಲಿ ಕೋರಲಾಗಿದೆ.