ಉನ್ನಾವ್ ಅತ್ಯಾಚಾರ ಸಂತ್ರಸ್ತೆ ಅಪಘಾತ ಪ್ರಕರಣದಲ್ಲಿ ಯಾವುದೇ ತೆರನಾದ ದುಷ್ಕೃತ್ಯ ನಡೆದಿಲ್ಲ ಎಂದು ಹೇಳಿರುವ ಕೇಂದ್ರೀಯ ತನಿಖಾ ಸಂಸ್ಥೆ (ಸಿಬಿಐ) ತನಿಖೆಯನ್ನು ಶನಿವಾರ ದೆಹಲಿ ನ್ಯಾಯಾಲಯ ಎತ್ತಿ ಹಿಡಿದಿದೆ. ಸದರಿ ಪ್ರಕರಣದಲ್ಲಿ ಅಮಾನತುಗೊಂಡಿರುವ ಶಾಸಕ ಕುಲದೀಪ್ ಸಿಂಗ್ ಸೆಂಗರ್ ಭಾಗಿಯಾಗಿದ್ದು, ಅಪ್ರಾಪ್ತೆ ಮೇಲೆ ಅತ್ಯಾಚಾರ ಎಸಗಿದ ಆರೋಪಕ್ಕೆ ಸಂಬಂಧಿಸಿದಂತೆ ಈಗಾಗಲೇ ಅವರಿಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ.
ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರಾದ ಧರ್ಮೇಶ್ ಶರ್ಮಾ ಅವರು ಆರೋಪ ನಿಗದಿ ಸಂದರ್ಭದಲ್ಲಿ ವಾದ ಆಲಿಸುವಾಗ “ಐಪಿಸಿ ಸೆಕ್ಷನ್‌ಗಳಾದ 302 (ಕೊಲೆ), 307 (ಕೊಲೆ ಯತ್ನ), 120ಬಿ (ಕ್ರಿಮಿನಲ್ ಪಿತೂರಿ) ಅಡಿ ಕ್ರಮಕೈಗೊಳ್ಳಲು ಆರೋಪಿಗಳ ವಿರುದ್ಧದ ಅಪರಾಧಗಳನ್ನು ಪರಿಗಣಿಸಿ, ಮುಂದುವರಿಯಲು ಯಾವುದೇ ದೂರುಗಳಿಲ್ಲ ಎಂಬ ಸಿಬಿಐ ಶೋಧನೆಯ ಅಂತಿಮ ವರದಿಯನ್ನು ಎತ್ತಿ ಹಿಡಿಯಲು ನನಗೆ ಯಾವುದೇ ಅಳುಕಿಲ್ಲ” ಎಂದು ಹೇಳಿದ್ದಾರೆ.
ಹೀಗಾಗಿ, ನ್ಯಾಯಾಲಯವು ಅತ್ಯಾಚಾರ ಸಂತ್ರಸ್ತೆಯ ಚಿಕ್ಕಪ್ಪನವರ ಆರೋಪಗಳನ್ನು ವಜಾ ಮಾಡಿದ್ದು, ನಿರ್ಲಕ್ಷ್ಯದಿಂದ ಸಾವಿಗೆ ಕಾರಣವಾದ ಟ್ರಕ್ ಚಾಲಕ ಮತ್ತು ಕ್ರಿಮಿನಲ್ ಬೆದರಿಕೆ ಆರೋಪವನ್ನು ಸೆಂಗರ್ ಮತ್ತು ಅವರ ಸಹಚರರ ವಿರುದ್ಧ ನಿಗದಿಗೊಳಿಸಿದೆ.
“ಟ್ರಕ್ ಚಾಲಕನ ವಿರುದ್ಧದ ಐಪಿಸಿ ಸೆಕ್ಷನ್‌ಗಳಾದ 304-ಎ (ನಿರ್ಲಕ್ಷ್ಯದಿಂದ ಸಾವು), 338 (ಇತರರ ಬದುಕಿಗೆ ಎರವಾಗುವ ರೀತಿಯಲ್ಲಿ ಗಂಭೀರ ಗಾಯಗೊಳಿಸುವುದು), 279ರ (ಸಾರ್ವಜನಿಕ ರಸ್ತೆಯಲ್ಲಿ ಅವಸರದ ಚಾಲನೆ) ಅಡಿ ಅಪರಾಧಗಳನ್ನು ಪರಿಗಣಿಸಲಾಗಿದ್ದು, ಐಪಿಸಿ ಸೆಕ್ಷನ್‌ಗಳಾದ 120ಬಿ (ಕ್ರಿಮಿನಲ್ ಪಿತೂರಿ), 506 (ಸಾಯಿಸಲು ಅಥವಾ ಗಂಭೀರವಾಗಿ ಗಾಯಗೊಳಿಸುವ ಬೆದರಿಕೆ) ರ ಅಡಿ ಆರೋಪಿಗಳಾದ ಕುಲದೀಪ್ ಸೆಂಗರ್, ಅವರ ಸಹಚರರಾದ ವಿನೋದ್ ಮಿಶ್ರಾ, ಹರಿಪಾಲ್ ಸಿಂಗ್, ನವೀನ್ ಸಿಂಗ್, ಕೋಮಲ್ ಸಿಂಗ್, ಅರುಣ್ ಸಿಂಗ್, ಜ್ಞಾನೇಂದ್ರ ಸಿಂಗ್, ರಿಂಕು ಸಿಂಗ್, ಪ್ರಖರ್ ಸಿಂಗ್, ಅವಧೇಶ್ ಸಿಂಗ್ ವಿರುದ್ಧ ಸಮನ್ಸ್ ಜಾರಿಗೊಳಿಸಲು ಆದೇಶಿಸಲಾಗಿದೆ” ಎಂದು ಪೀಠ ಹೇಳಿದೆ.
2019ರ ಜುಲೈ 28ರಂದು ಉನ್ನಾವ್ ಅತ್ಯಾಚಾರ ಸಂತ್ರಸ್ತೆ, ಆಕೆಯ ವಕೀಲ ಮತ್ತು ಆಕೆಯ ಇಬ್ಬರು ಚಿಕ್ಕಮ್ಮಂದಿರು ರಾಯ್‌ಬರೇಲಿಗೆ ವಾಹನದಲ್ಲಿ ತೆರಳುತ್ತಿದ್ದಾಗ ಟ್ರಕ್ ಅದರ ಮೇಲೆ ಎರಗಿತ್ತು. ಘಟನೆಯಲ್ಲಿ ಸಂತ್ರಸ್ತೆ ಮತ್ತು ಆಕೆಯ ವಕೀಲ ಗಂಭೀರವಾಗಿ ಗಾಯಗೊಂಡಿದ್ದು, ಆಕೆಯ ಚಿಕ್ಕಮ್ಮಂದಿರು ಸ್ಥಳದಲ್ಲೇ ಮೃತಪಟ್ಟಿದ್ದರು. ಈ ಸಂಬಂಧ ಉತ್ತರ ಪ್ರದೇಶದ ಪೊಲೀಸರು ಸೆಂಗರ್ ಮತ್ತು ಇತರೆ ಒಂಭತ್ತು ಮಂದಿಯ ವಿರುದ್ಧ ಕೊಲೆ ಪ್ರಕರಣ ದಾಖಲಿಸಿದ್ದರು.
ಶೆಂಗರ್, ಟ್ರಕ್ ಚಾಲಕ, ಕ್ಲೀನರ್ ಅಥವಾ ಟ್ರಕ್ ಮಾಲೀಕ ಸೇರಿದಂತೆ ಎಫ್‌ಐಆರ್‌ನಲ್ಲಿ ಉಲ್ಲೇಖಿಸಿರುವವರು ಕ್ರಿಮಿನಲ್ ಪಿತೂರಿ ನಡೆಸಿದ್ದಾರೆ ಎಂಬುದಕ್ಕೆ ಯಾವುದೇ ಸಾಕ್ಷಿಗಳಿಲ್ಲ ಎಂದು ಸಿಬಿಐ ತನಿಖಾ ವರದಿಯಲ್ಲಿ ವಿವರಿಸಿದೆ.
ಆಕ್ಷೇಪಾರ್ಹವಾದ ಘಟನೆಗೂ ಮುನ್ನ ಹಿಂಬದಿಯಲ್ಲಿ ಕುಟಿಲ ಬೆಳವಣಿಗಳು ನಡೆದಿರಬಹುದು ಎಂದಿರುವ ಪೀಠವು ಆರೋಪಿಗಳು ನಡೆಸಿರುವ ಆರೋಪಿತ ದುಷ್ಕೃತ್ಯಗಳನ್ನು ಪರಿಗಣಿಸುವ ಸಂದರ್ಭದಲ್ಲಿ ಸಾರ್ವಜನಿಕರ ಭಾವನೆ, ಮಾಧ್ಯಮ ವರದಿಗಳು ಅಥವಾ ಆರೋಪಿ ಕುಲದೀಪ್ ಸಿಂಗ್ ಸೆಂಗರ್ ಅಪರಾಧಗಳನ್ನು ಬದಿಗೆ ಇಡಬಹುದು ಎಂದಿದೆ.
2019ರ ಡಿಸೆಂಬರ್ 16 ಮತ್ತು 2020ರ ಮಾರ್ಚ್ 13ರಂದು ಅತ್ಯಾಚಾರ ಮತ್ತು ಸಂತ್ರಸ್ತೆ ತಂದೆಯ ಕೊಲೆಗೆ ಸಂಬಂಧಿಸಿದಂತೆ ಹಿಂದೆ ತಾನು ಹೊರಡಿಸಿರುವ ತೀರ್ಪುಗಳನ್ನು ನ್ಯಾಯಾಧೀಶರು ಉಲ್ಲೇಖಿಸಿದ್ದಾರೆ.
ಸಿಬಿಐನ ಪ್ರಾಮಾಣಿಕತೆ, ಸತ್ಯಾಸತ್ಯತೆ ಮತ್ತು ವಿಶ್ವಾಸಾರ್ಹತೆಯನ್ನು ಅನುಮಾನಿಸಲು ಯಾವುದೇ ಆಧಾರಗಳಿಲ್ಲ.ನ್ಯಾಯಾಲಯ
ಸಿಬಿಐನ ಪ್ರಾಮಾಣಿಕತೆ, ಸತ್ಯಾಸತ್ಯತೆ ಮತ್ತು ವಿಶ್ವಾಸಾರ್ಹತೆಯನ್ನು ಅನುಮಾನಿಸಲು ಯಾವುದೇ ಆಧಾರಗಳಿಲ್ಲ ಎಂದು ನ್ಯಾಯಾಲಯ ಹೇಳಿದ್ದು, ದೂರುದಾರರ ಆಕ್ಷೇಪಣೆಯು ಆಸಕ್ತಿಕರ ರೋಮಾಂಚಕ ಕಥನದ ರೀತಿಯಲ್ಲಿ ಓದಿಸಿಕೊಂಡು ಹೋಗಲಿದ್ದು, ಅದು ಅನುಮಾನ ಮತ್ತು ಕಲ್ಪನೆಗಳಿಂದ ತುಂಬಿದೆ” ಎಂದು ಹೇಳಿದೆ.
ಅಪಘಾತ ಘಟನೆಗೆ ತೀವ್ರ ಸಾರ್ವಜನಿಕ ವಿರೋಧ ವ್ಯಕ್ತವಾಗಿದ್ದು, ಇದರಿಂದ ಸುಪ್ರೀಂ ಕೋರ್ಟ್ ಮಧ್ಯಪ್ರವೇಶಿಸುವಂತಾಗಿತ್ತು. “ಈ ಆದೇಶದ ಆರಂಭದಲ್ಲಿ ಈ ನ್ಯಾಯಾಲಯವು ಪ್ರತಿಬಿಂಬಿಸಿದಂತೆ, ಸದರಿ ಅಪಘಾತವು ಸಾರ್ವಜನಿಕರ ಆಕ್ರೋಶಕ್ಕೆ ಮತ್ತು ಸುಪ್ರೀಂ ಕೋರ್ಟ್‌ನ ಮಧ್ಯಪ್ರವೇಶಕ್ಕೆ ಕಾರಣವಾಯಿತು. ಇದರ ಪರಿಣಾಮವಾಗಿ ಧ್ವನಿ ಇಲ್ಲದ ದೂರುದಾರಿಗೆ ನ್ಯಾಯದ ಅನ್ವೇಷಣೆಯಲ್ಲಿ ಧ್ವನಿ ಒದಗಿಸಲಾಗಿತ್ತು” ಎಂದು ನ್ಯಾಯಾಧೀಶರು ಹೇಳಿದ್ದಾರೆ.
ಘಟನೆಯನ್ನು ರಸ್ತೆ ಅಪಘಾತ ಎಂದು ಬಿಂಬಿಸಲು ಆ ಮೂಲಕ ತಮ್ಮ ಮೇಲಧಿಕಾರಿಗಳು ಹಾಗೂ ರಾಜಕೀಯ ನಾಯಕರನ್ನು ಮೆಚ್ಚಿಸಲು ಉತ್ತರ ಪ್ರದೇಶ ಪೊಲೀಸರು ಆರಂಭದಲ್ಲಿ ತನಿಖೆಯನ್ನು ದೋಷಪೂರಿತ ಮತ್ತು ಸಮಭಾವ ಇಲ್ಲದ ರೀತಿಯಲ್ಲಿ ನಡೆಸಿದ್ದಾರೆ ಎಂಬ ರೀತಿಯಲ್ಲಿ ತೋರುಗೊಡುತ್ತಿತ್ತು. ಸ್ಥಳೀಯ ಪೊಲೀಸರ ಈ ನಡೆಯು ಪ್ರಾಸಿಕ್ಯೂಷನ್ ತಳಹದಿಗೆ ಸರಿಪಡಿಸಲಾಗದ ನಷ್ಟ ಉಂಟು ಮಾಡಿದೆ ಎಂದು ನ್ಯಾಯಾಲಯ ಹೇಳಿದೆ.
ಸಿಬಿಐ ತನಿಖೆಯು ಕಾಟಾಚಾರ, ಕೆಟ್ಟ ಪ್ರೇರಣೆ ಅಥವಾ ಸಮರ್ಥನೆಗೆ ನಿಲುಕುತ್ತಿಲ್ಲ ಎಂದು ಹೇಳಲು ಯಾವುದೇ ಆಧಾರಗಳಿಲ್ಲ. ಆದರೆ, ಈ ಅಭಿಪ್ರಾಯಗಳನ್ನು ತಪ್ಪಾಗಿ ಬಿಂಬಿಸಬಾರದು ಎಂದು ನ್ಯಾಯಾಲಯ ಹೇಳಿದೆ. “ಸಿಬಿಐ ತನಿಖೆ ನಡೆಸಿರುವುದಕ್ಕೆ ಸಂಬಂಧಿಸಿದಂತೆ ಈ ನ್ಯಾಯಾಲಯ ಯಾವುದೇ ಸರ್ಟಿಫಿಕೇಟ್ ನೀಡುತ್ತಿಲ್ಲ. ಅಥವಾ ಸರ್ಟಿಫಿಕೇಟ್ ಅನ್ನು ಸಿಬಿಐ ಬಯಸಿಲ್ಲ. ತನಿಖೆಯ ಹಲವು ಅಂಶಗಳನ್ನು ವಿಚಾರಣೆಯ ಸಂದರ್ಭದಲ್ಲಿ ಪರೀಕ್ಷಿಸಬೇಕಿದೆ. ಅಂತಿಮವಾಗಿ ಹೆಚ್ಚಿನ ತನಿಖೆ ನಡೆಸದಂತೆ ಸಿಬಿಐ ಕೈಗಳನ್ನು ಈ ನ್ಯಾಯಾಲಯ ಕಟ್ಟುತ್ತಿಲ್ಲ. ಒಂದೊಮ್ಮೆ ದೂರುದಾರ ಪಕ್ಷಕಾರರ ಕೊಲೆ, ಅಥವಾ ಕೊಲೆ ಯತ್ನಕ್ಕೆ ಸಂಬಂಧಿಸಿದಂತೆ ಕ್ರಿಮಿನಲ್ ಪಿತೂರಿಯ ಕುರಿತು ಯಾವುದೇ ವಿಚಾರ ತಿಳಿದುಬಂದರೆ ಸಿಬಿಐ ತನಿಖೆ ಮುಂದುವರಿಸಬಹುದಾಗಿದೆ” ಎಂದು ನ್ಯಾಯಾಲಯ ಆದೇಶಿಸಿದೆ.
ಇದೆಲ್ಲದರ ಜೊತೆಗೆ ನ್ಯಾಯಾಧೀಶರು ಭಾರತ ಸರ್ಕಾರದ ಹೆದ್ದಾರಿ ಮತ್ತು ಸಾರಿಗೆ ಇಲಾಖೆಯ ವೆಬ್‌ಸೈಟ್‌ನಲ್ಲಿ ಅಪಘಾತ ಪ್ರಕರಣಗಳಿಗೆ ಸಂಬಂಧಿಸಿದಂತೆ ಪ್ರಕಟಿಸಲಾಗಿರುವ ಅಂಕಿ ಅಂಶಗಳನ್ನೂ ಉಲ್ಲೇಖಿಸಿದ್ದು, ರಸ್ತೆ ಸುರಕ್ಷತೆ, ಟ್ರಾಫಿಕ್ ನಿಯಮಗಳು ಮತ್ತು ಮಾರ್ಗಸೂಚಿಗಳ ಬಗ್ಗೆ ಜನರಿಗೆ ತಿಳಿದಿಲ್ಲ. ನಿರ್ಲಕ್ಷ್ಯದಿಂದ ಸಾಕಷ್ಟು ಮಂದಿಗೆ ಅಪಘಾತಕ್ಕೆ ತುತ್ತಾಗುತ್ತಿದ್ದಾರೆ ಎಂದು ಹೇಳಿದ್ದಾರೆ.
ನ್ಯಾಯಾಲಯ ಪರಿಗಣಿಸಿರುವ ಅಪರಾಧಗಳನ್ನು ವಿಶೇಷವಾಗಿ ಮ್ಯಾಜಿಸ್ಟ್ರೇಟ್ ನ್ಯಾಯಾಲಯವು ವಿಚಾರಣೆಗೆ ಒಳಪಡಿಸಬೇಕಿದೆ. ಈ ಕಾರಣಕ್ಕಾಗಿ ಪ್ರಕರಣವನ್ನು ರೋಸ್ ಅವೆನ್ಯೂನಲ್ಲಿರುವ ಮುಖ್ಯ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್‌ನ ಸಿಬಿಐ ವಿಶೇಷ ನ್ಯಾಯಾಧೀಶರಿಗೆ ವರ್ಗಾಯಿಸಲಾಗುತ್ತಿದೆ ಎಂದಿದೆ.