ದೆಹಲಿ ಅಬಕಾರಿ ಹಗರಣದಲ್ಲಿ ಆರೋಪಿಯಾಗಿರುವ ಆಮ್ ಆದ್ಮಿ ಪಕ್ಷದ ನಾಯಕ ಮನೀಶ್ ಸಿಸೋಡಿಯಾ ಅವರಿಗೆ ಶುಕ್ರವಾರ ಸುಪ್ರೀಂ ಕೋರ್ಟ್ ಮಧ್ಯಂತರ ವೈದ್ಯಕೀಯ ಜಾಮೀನು ನಿರಾಕರಿಸಿದೆ.
ಸಿಸೋಡಿಯಾ ಅವರ ವೈದ್ಯಕೀಯ ಜಾಮೀನು ಅರ್ಜಿಯನ್ನು ಸಾಮಾನ್ಯ ಜಾಮೀನು ಅರ್ಜಿಯೊಂದಿಗೆ ಸೆಪ್ಟೆಂಬರ್‌ನಲ್ಲಿ ವಿಚಾರಣೆ ನಡೆಸಲಾಗುವುದು ಎಂದು ನ್ಯಾಯಮೂರ್ತಿಗಳಾದ ಸಂಜೀವ್ ಖನ್ನಾ ಮತ್ತು ಎಸ್ ವಿ ಎನ್ ಭಟ್ಟಿ ಅವರ ನೇತೃತ್ವದ ವಿಭಾಗೀಯ ಪೀಠ ಹೇಳಿದೆ.
ಸಿಸೋಡಿಯಾ ಅವರ ಪತ್ನಿಯ ವೈದ್ಯಕೀಯ ಪರಿಸ್ಥಿತಿಯನ್ನು ಪರಿಗಣಿಸಿ, ಮಧ್ಯಂತರ ಜಾಮೀನು ಅರ್ಜಿ ಸಲ್ಲಿಸಲು ಸಿಸೋಡಿಯಾ ಅವರಿಗೆ ನ್ಯಾ. ಖನ್ನಾ ಆದೇಶಿಸಿದ್ದರು. ಅಲ್ಲದೇ, ಕಳೆದ ತಿಂಗಳು ಸಿಸೋಡಿಯಾ ಜಾಮೀನು ಅರ್ಜಿಗೆ ಸಂಬಂಧಿಸಿದಂತೆ ಸಿಬಿಐ ಮತ್ತು ಜಾರಿ ನಿರ್ದೇಶನಾಲಯಗಳಿಗೆ ಆಕ್ಷೇಪಣೆ ಸಲ್ಲಿಸಲು ಸುಪ್ರೀಂ ಕೋರ್ಟ್ ನೋಟಿಸ್ ಜಾರಿ ಮಾಡಿತ್ತು.
ಸಿಬಿಐ ಪ್ರತಿನಿಧಿಸಿದ್ದ ಹೆಚ್ಚುವರಿ ಸಾಲಿಸಿಟರ್ ಜನರಲ್ ಎಸ್ ವಿ ರಾಜು ಅವರು ಇಂದು ಸಿಸೋಡಿಯಾ ಅವರ ಪತ್ನಿ ಕಳೆದ 26 ವರ್ಷಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದಾರೆ ಎಂದರು.
ಸಿಸೋಡಿಯಾ ಪರ ಹಿರಿಯ ವಕೀಲ ಅಭಿಷೇಕ್ ಮನು ಸಿಂಘ್ವಿ ಅವರು ಸಿಸೋಡಿಯಾ ಪತ್ನಿಯ ಗಂಭೀರ ಪರಿಸ್ಥಿತಿ ಉಲ್ಲೇಖಿಸಿ, ಆಕೆಯ ಕುಟುಂಬ ಸದಸ್ಯರು ಅಮೆರಿಕದಲ್ಲಿದ್ದು, ಆಕೆ ವಯಸ್ಸಾದ ತಾಯಿಯ ಜೊತೆ ನೆಲೆಸಿದ್ದಾರೆ ಎಂದರು.
ಅಂತಿಮವಾಗಿ ಪೀಠವು ಸೆಪ್ಟೆಂಬರ್‌ನಲ್ಲಿ ವೈದ್ಯಕೀಯ ಜಾಮೀನು ಹಾಗೂ ಸಾಮಾನ್ಯ ಜಾಮೀನು ಅರ್ಜಿ ವಿಚಾರಣೆ ನಡೆಸಲಾಗುವುದು ಎಂದಿತು.