Karnataka HC and Justice V Srishananda 
ಸುದ್ದಿಗಳು

ನೈಜ ಪ್ರೇಮಿಯು ಪ್ರೇಯಸಿಯೊಂದಿಗಿನ ಸಲ್ಲಾಪದ ದೃಶ್ಯ ಸೆರೆ ಹಿಡಿಯುವುದಿಲ್ಲ: ಹೈಕೋರ್ಟ್‌

“ಒಪ್ಪಿಗೆಯಿಂದ ನಡೆದ ಕೃತ್ಯ ಇದಾಗಿದೆ ಎಂದು ಭಾವಿಸಿದರೆ, ಯಾವುದೇ ನಿಜವಾದ ಪ್ರೇಮಿಯು ಖಾಸಗಿ ಕ್ಷಣಗಳ ದೃಶ್ಯಗಳನ್ನು ಫೋಟೊ ತೆಗೆಯುವುದಿಲ್ಲ. ಬಲವಂತದ ಲೈಂಗಿಕ ಸಂಭೋಗಕ್ಕಾಗಿ ಬ್ಲಾಕ್‌ಮೇಲ್ ಮಾಡಲ್ಲ” ಎಂದು ಪೀಠ ಕಟುವಾಗಿ ನುಡಿದಿದೆ.

Bar & Bench

ನೈಜ ಪ್ರೇಮಿಯು ತನ್ನ ಪ್ರೇಯಸಿಯೊಂದಿಗೆ ಕಳೆದ ಖಾಸಗಿ ಕ್ಷಣಗಳ ದೃಶ್ಯಗಳನ್ನು ಸೆರೆ ಹಿಡಿಯುವುದಿಲ್ಲ ಹಾಗೂ ಫೋಟೊಗಳನ್ನು ತೋರಿಸಿ ಲೈಂಗಿಕ ಕ್ರಿಯೆಗೆ ಬಲವಂತಪಡಿಸುವುದಿಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸಿರುವ ಕರ್ನಾಟಕ ಹೈಕೊರ್ಟ್‌ನ ಧಾರವಾಡ ಪೀಠವು, ಪ್ರೀತಿ ಸಂಬಂಧದ ನೆಪದಲ್ಲಿ ಮಹಿಳೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪ ಎದುರಿಸುತ್ತಿರುವ ವ್ಯಕ್ತಿಗೆ ನಿರೀಕ್ಷಣಾ ಜಾಮೀನು ನಿರಾಕರಿಸಿದೆ.

ಪ್ರಕರಣ ಸಂಬಂಧ ನಿರೀಕ್ಷಣಾ ಜಾಮೀನು ಕೋರಿ ವ್ಯಕ್ತಿಯೊಬ್ಬ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ವಿ ಶ್ರೀಶಾನಂದ ಅವರ ಏಕಸದಸ್ಯ ಪೀಠ ತಿರಸ್ಕರಿಸಿದೆ.

“ಪ್ರೇಮ ಸಂಬಂಧದ ಕಾರಣದಿಂದ ಈ ಘಟನೆ ನಡೆದಿದೆ. ಒಪ್ಪಿಗೆಯಿಂದ ನಡೆದ ಕೃತ್ಯ ಇದಾಗಿದೆ ಎಂದು ಭಾವಿಸಿದರೆ, ಯಾವುದೇ ನಿಜವಾದ ಪ್ರೇಮಿಯು ಖಾಸಗಿ ಕ್ಷಣಗಳ ದೃಶ್ಯಗಳನ್ನು ಫೋಟೋ ತೆಗೆಯುವುದಿಲ್ಲ. ಬಲವಂತದ ಲೈಂಗಿಕ ಸಂಭೋಗಕ್ಕಾಗಿ ಸಂತ್ರಸ್ತೆಯನ್ನು ಬ್ಲಾಕ್ ಮೇಲ್ ಮಾಡುವುದಿಲ್ಲ” ಎಂದು ಪೀಠ ಕಟುವಾಗಿ ನುಡಿದಿದೆ.

ಅರ್ಜಿದಾರ ಮತ್ತು ಸಂತ್ರಸ್ತೆಯ ನಡುವೆ ಪ್ರೇಮ ಸಂಬಂಧವಿತ್ತು. ಇಬ್ಬರ ನಡುವೆ ಸಮ್ಮತಿಯಿಂದ ಲೈಂಗಿಕ ಕ್ರಿಯೆ ನಡೆದಿದೆ. ಹೀಗಾಗಿ, ನಿರೀಕ್ಷಣಾ ಜಾಮೀನು ನೀಡಬೇಕು ಎಂಬ ಆರೋಪಿಯ ವಾದವನ್ನು ನ್ಯಾಯಾಲಯ ತಿರಸ್ಕರಿಸಿದೆ.

ಪ್ರಕರಣದಲ್ಲಿ ಆರೋಪಿ ಮತ್ತು ಸಂತ್ರಸ್ತೆಯ ನಡುವೆ ಅನ್ಯೋನ್ಯತೆ ಬೆಳೆದಿತ್ತು ಎಂಬುದು ಸ್ಪಷ್ಟ. ಆದರೆ, ಪ್ರೇಮ ಸಂಬಂಧದ ಸೋಗಿನಲ್ಲಿ ದೈಹಿಕ ಸಂಬಂಧ ಹೊಂದಲು ಆರೋಪಿ ಸಂತ್ರಸ್ತೆಗೆ ಆಮಿಷವೊಡ್ಡಿದ್ದ. ಸಂಭೋಗದ ದೃಶ್ಯಗಳನ್ನು ಆರೋಪಿ ಸೆರೆಹಿಡಿದುಕೊಂಡಿದ್ದಾನೆ. ನಂತರ ಆ ದೃಶ್ಯಗಳನ್ನು ಸಂತ್ರಸ್ತೆಗೆ ತೋರಿಸಿ ಸಾರ್ವಜನಿಕಗೊಳಿಸುವುದಾಗಿ ಬೆದರಿಸಿ ಬ್ಲಾಕ್‌ಮೇಲ್ ಮಾಡಿದ್ದಾನೆ. ಈ ಬ್ಲಾಕ್‌ಮೇಲ್‌ ಕಿರುಕುಳ ಸಹಿಸಿಕೊಳ್ಳಲು ಸಾಧ್ಯವಾಗದಿದ್ದಾಗ ಸಂತ್ರಸ್ತೆಯು ಪೊಲೀಸರಿಗೆ ದೂರು ನೀಡಿದ್ದಾರೆ ಎಂದು ಪೀಠ ಆದೇಶದಲ್ಲಿ ಅಭಿಪ್ರಾಯಪಟ್ಟಿದೆ.

ಪ್ರೇಮ ಸಂಬಂಧದಿಂದ ನಡೆದ ಯಾವುದೇ ಸಮ್ಮತಿ ಕ್ರಿಯೆ, ಪ್ರೇಮಿಯು ತನ್ನ ಪ್ರೇಯಸಿಯೊಂದಿಗಿನ ಖಾಸಗಿ ಕ್ಷಣಗಳನ್ನು ಫೋಟೊ ತೆಗೆದು ಪ್ರಕಟಿಸಲು ಅಥವಾ ಬೆದರಿಕೆ ಹಾಕಿ ಪ್ರೇಯಸಿಯನ್ನು ದೈಹಿಕ ಸಂಬಂಧಕ್ಕೆ ಒತ್ತಾಯಿಸಲು ಪ್ರೇರೇಪಣೆ ಮಾಡುವುದಿಲ್ಲ. ಪ್ರಕರಣವನ್ನು ಪೊಲೀಸರು ತನಿಖೆ ನಡೆಸಿ, ಆರೋಪಿ ವಿರುದ್ಧ ಆರೋಪ ಪಟ್ಟಿ ಸಲ್ಲಿಸಿದ್ದಾರೆ. ಆರೋಪಿಯು ತಲೆಮರಿಸಿಕೊಂಡಿದ್ದಾನೆ. ತಾನು ಕಾನೂನು ಪಾಲಕನಾಗಿದ್ದು, ನಿರೀಕ್ಷಣಾ ಜಾಮೀನು ನೀಡಬೇಕು ಎಂದು ಕೋರಿದ್ದಾನೆ. ಆದರೆ, ತಲೆಮರೆಸಿಕೊಂಡಿರುವ ಆರೋಪಿಯನ್ನು ಕಾನೂನು ಪಾಲಕ ಎಂದು ಪರಿಗಣಿಸಲಾಗದು. ತನಿಖೆ ವೇಳೆ ಪೊಲೀಸರು ಸಂಗ್ರಹಿಸಿರುವ ಮಾಹಿತಿ ಪರಿಶೀಲಿಸಿದರೆ ಆರೋಪಿಯ ನೀರೀಕ್ಷಣಾ ಜಾಮೀನು ಅರ್ಜಿ ಪುರಸ್ಕರಿಸುವ ಅಗತ್ಯತೆ ಕಾಣುವುದಿಲ್ಲ ಎಂದು ಪೀಠ ತಿಳಿಸಿದೆ.

ಪ್ರಕರಣದಲ್ಲಿ ಅರ್ಜಿದಾರ ಆರೋಪಿ, ಬ್ಲಾಕ್‌ಮೇಲ್‌ ಮಾಡಿ ತನ್ನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ ಎಂದು ಆರೋಪಿಸಿ ಸಂತ್ರಸ್ತೆಯು 2025ರ ಮಾರ್ಚ್‌ 11ರಂದು ಪೊಲೀಸರಿಗೆ ದೂರು ನೀಡಿದ್ದರು. ಪ್ರಕರಣ ಸಂಬಂಧ ನಿರೀಕ್ಷಣಾ ಜಾಮೀನು ಕೋರಿ ಆರೋಪಿ ಸಲ್ಲಿಸಿದ್ದ ಅರ್ಜಿಯನ್ನು ವಿಚಾರಣಾ ನ್ಯಾಯಾಲಯ ತಿರಸ್ಕರಿಸಿತ್ತು. ಇದರಿಂದ ಆರೋಪಿ ಹೈಕೋರ್ಟ್‌ ಮೆಟ್ಟಿಲೇರಿದ್ದನು.