High Court of Karnataka
High Court of Karnataka 
ಸುದ್ದಿಗಳು

ಸ್ಮಶಾನಕ್ಕೆ ತೆರಳಲು ದಾರಿ ಸಮಸ್ಯೆ: ಮೂರು ತಿಂಗಳಲ್ಲಿ ಕ್ರಮಕೈಗೊಳ್ಳಲು ರಾಮನಗರ ಡಿಸಿಗೆ ಹೈಕೋರ್ಟ್ ಆದೇಶ

Bar & Bench

ರಾಮನಗರ ಜಿಲ್ಲೆಯ ಬಿಡದಿ ಹೋಬಳಿಯ ತೊರೆದೊಡ್ಡಿ, ಇಟ್ಟುಮಡು ಗ್ರಾಮಗಳಿಗೆ ಮಂಜೂರಾಗಿರುವ ಸ್ಮಶಾನದ ಜಾಗಕ್ಕೆ ತೆರಳಲು ದಾರಿ ಇಲ್ಲದಿರುವುದರಿಂದ ಮೃತರ ಅಂತ್ಯಕ್ರಿಯೆಗೆ ಆಗಿರುವ ಸಮಸ್ಯೆ ನಿವಾರಣೆಗೆ ಮೂರು ತಿಂಗಳಲ್ಲಿ ಕ್ರಮ ಕೈಗೊಳ್ಳುವಂತೆ ರಾಮನಗರ ಜಿಲ್ಲಾಧಿಕಾರಿಗೆ ಶುಕ್ರವಾರ ಕರ್ನಾಟಕ ಹೈಕೋರ್ಟ್‌ ಆದೇಶಿಸಿದ್ದು, ಮನವಿ ಇತ್ಯರ್ಥಪಡಿಸಿದೆ.

ಇಟ್ಟಮಡು ಮತ್ತು ತೊರೆದೊಡ್ಡಿ ಗ್ರಾಮಸ್ಥರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಮನವಿಯ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ರಿತುರಾಜ್ ಅವಸ್ಥಿ ಮತ್ತು ನ್ಯಾಯಮೂರ್ತಿ ಎಸ್‌ ಆರ್‌ ಕೃಷ್ಣ ಕುಮಾರ್‌ ನೇತೃತ್ವದ ವಿಭಾಗೀಯ ಪೀಠ ನಡೆಸಿತು.

ಅರ್ಜಿದಾರರ ಪರ ವಕೀಲರು “ತೊರೆದೊಡ್ಡಿ, ಇಟ್ಟಮಡು ಸೇರಿ ಮೂರು ಗ್ರಾಮಗಳ ಸ್ಮಶಾನಕ್ಕಾಗಿ ಸರ್ವೆ ನಂಬರ್ 257 ಮತ್ತು ಸರ್ವೆ ನಂಬರ್ 18ರಲ್ಲಿ ಭೂಮಿ ಮಂಜೂರು ಮಾಡಲಾಗಿದೆ. ಆದರೆ ಸರ್ವೆ ನಂಬರ್ 18ರಲ್ಲಿನ ಜಾಗಕ್ಕೆ ದಾರಿಯೇ ಇಲ್ಲ, ಇದರಿಂದ ಸ್ಮಶಾನದ ಜಾಗವಿದ್ದರೂ ಅದನ್ನು ಮೂರು ಗ್ರಾಮದವರು ಬಳಕೆ ಮಾಡಿಕೊಳ್ಳಲಾಗುತ್ತಿಲ್ಲ. ಇದರಿಂದ ತೊಂದರೆಯಾಗುತ್ತಿದೆ” ಎಂದು ಪೀಠದ ಗಮನಸೆಳೆದರು.

“ಈ ಬಗ್ಗೆ ಜಿಲ್ಲಾಡಳಿತಕ್ಕೆ ಮನವಿ ನೀಡಿದರೂ ಏನೂ ಪ್ರಯೋಜನವಾಗಿಲ್ಲ. ಕಳೆದ ವಿಚಾರಣೆ ವೇಳೆ ರಾಜ್ಯ ಸರ್ಕಾರವು ಸರ್ವೆ ನಂಬರ್ 18ರಲ್ಲಿನ ಜಾಗಕ್ಕೆ ದಾರಿ ಕಲ್ಪಿಸಿಕೊಡಲಾಗುತ್ತಿಲ್ಲ, ಆದರೆ, ಸರ್ವೆ ನಂಬರ್ 257ರಲ್ಲಿಯೇ ಹೆಚ್ಚುವರಿ ಜಾಗ ನೀಡಲಾಗುವುದು ಎಂದು ಹೇಳಿತ್ತು. ಆದರೆ ಅದನ್ನೂ ಕೂಡ ಮಾಡಿಲ್ಲ” ಎಂದರು.

ರಾಜ್ಯ ಸರ್ಕಾರವನ್ನು ಪ್ರತಿನಿಧಿಸಿದ್ದ ವಕೀಲರು “ಸರ್ವೆ ನಂಬರ್ 257ರಲ್ಲಿ ಸ್ಮಶಾನಕ್ಕೆ ಹೆಚ್ಚುವರಿ ಜಾಗ ನೀಡುವುದಾಗಿ ಸರ್ಕಾರ ಭರವಸೆ ನೀಡಿತ್ತು. ಆದರೆ, ಆ ಸರ್ವೆ ನಂಬರ್‌ನಲ್ಲಿ ಭೂಮಿ ಲಭ್ಯವಿಲ್ಲ. ಜಿಲ್ಲಾಡಳಿತ ಪರ್ಯಾಯ ಕ್ರಮದ ಬಗ್ಗೆ ಚಿಂತನೆ ನಡೆಸಿದೆ” ಎಂದರು.

ಆಗ ಪೀಠವು “ಸ್ಮಶಾನಕ್ಕೆ ತೆರಳಲು ದಾರಿಯೇ ಇಲ್ಲವಾದರೆ ಹೇಗೆ, ಮೃತರ ಅಂತ್ಯಕ್ರಿಯೆಯನ್ನು ಮಾಡಲು ಅಲ್ಲಿಗೆ ಹೋಗುವುದಾದರೂ ಹೇಗೆ, ಸ್ಮಶಾನಕ್ಕೆ ದಾರಿ ಕಲ್ಪಿಸಿಕೊಡುವುದು ಜಿಲ್ಲಾಡಳಿತದ ಹೊಣೆಗಾರಿಕೆ. ಅರ್ಜಿದಾರರ ಮನವಿಯನ್ನು ಪರಿಗಣಿಸಿ, ಮೂರು ತಿಂಗಳಲ್ಲಿ ಅಗತ್ಯ ಕ್ರಮ ಕೈಗೊಳ್ಳಬೇಕು” ಎಂದು ಆದೇಶಿಸಿತು.