ಶಿವಮೊಗ್ಗ ಜಿಲ್ಲೆಯ ಸಾಗರ ತಾಲ್ಲೂಕಿನ ಆನಂದಪುರದಲ್ಲಿ ಸಹಾಯಕ ಎಂಜಿನಿಯರ್ ಆಗಿರುವ ಶಾಂತಕುಮಾರ ಸ್ವಾಮಿ ಎಂ ಜಿ ಅವರಿಗೆ ಹೊಸದಾಗಿ ಅರ್ಜಿ ಸಲ್ಲಿಸಲು ಕರ್ನಾಟಕ ಹೈಕೋರ್ಟ್ ಬುಧವಾರ ಸೂಚಿಸಿದೆ. ವಿಚಾರಣೆಯ ವೇಳೆ ಡಿವೈಎಸ್‌ಪಿ ಹಾಜರಾಗಿದ್ದರು.
ನ್ಯಾಯಾಲಯದ ನಿರ್ದೇಶನದಂತೆ ವಾಸ್ತವಿಕ ವರದಿಯ ಮಾಹಿತಿಯನ್ನು ಹೆಚ್ಚುವರಿ ವಿಶೇಷ ಸರ್ಕಾರಿ ಅಭಿಯೋಜಕ ಬಿ ಎನ್ ಜಗದೀಶ್ ಅವರು ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ಏಕಸದಸ್ಯ ಪೀಠಕ್ಕೆ ಒದಗಿಸಿದರು.
“ಶಾಂತಕುಮಾರ ಸ್ವಾಮಿ ಅವರು ಅಬಕಾರಿ ಇಲಾಖೆಯ ಪೊಲೀಸ್ ಅಧಿಕಾರಿ ಜೊತೆಗೂಡಿ ತಾನು ವಿವಾಹವಾಗಬೇಕಿದ್ದ ಯುವತಿಗೆ ಸಾಕಷ್ಟು ಕಿರುಕುಳ ನೀಡಿದ್ದಾರೆ. ಈ ಸಂಬಂಧ ಅಬಕಾರಿ ಇಲಾಖೆಯ ಅಧಿಕಾರಿ ಮತ್ತು ಶಾಂತಕುಮಾರ ಸ್ವಾಮಿ ನಡುವಿನ ಮಾತುಕತೆಯ ಏಳೆಂಟು ಆಡಿಯೊಗಳು ಲಭ್ಯವಾಗಿವೆ. ಹೀಗಾಗಿ, ಒಪ್ಪಂದ ಮುರಿದು ಬಿದ್ದಿತ್ತು” ಎಂದರು.
“ಶಾಂತಕುಮಾರ ಸ್ವಾಮಿಗೆ ಯಾವುದೇ ರೀತಿಯಲ್ಲೂ ಪೊಲೀಸರು ಸೇರಿದಂತೆ ಯಾರೂ ಕಿರುಕುಳ ನೀಡಿಲ್ಲ. ಆತನನ್ನು ಬಂಧಿಸಿ ವೈದ್ಯಕೀಯ ಪರೀಕ್ಷೆಗೆ ಆಸ್ಪತ್ರೆಗೆ ಕರೆದೊಯ್ದಾಗ ಹಾಸಿಗೆಯಿಂದ ಕೆಳಗೆ ಉದ್ದೇಶಪೂರ್ವಕವಾಗಿ ಬಿದ್ದು ರಾದ್ಧಾಂತ ಸೃಷ್ಟಿಸಿದ್ದಾರೆ. ಇದೆಲ್ಲವನ್ನೂ ವಿಡಿಯೋ ಮಾಡಲಾಗಿದೆ” ಎಂದು ಪೀಠಕ್ಕೆ ವಿವರಿಸಿದರು.
ಇದನ್ನು ಆಲಿಸಿದ ಪೀಠವು ಶಾಂತಕುಮಾರ ಸ್ವಾಮಿಗೆ ಹೊಸದಾಗಿ ಅರ್ಜಿ ಸಲ್ಲಿಸಲು ನಿಮಗೆ ಸ್ವಾತಂತ್ರ್ಯ ಕಲ್ಪಿಸಲಾಗಿದೆ. ನೀವು ಅರ್ಜಿ ಸಲ್ಲಿಸಿದರೆ ಸೂಕ್ತ ಆದೇಶ ಮಾಡಬಹುದು. ಮೌಖಿಕವಾಗಿ ಏನೇ ಹೇಳಿದರೂ ಅದಕ್ಕೆ ಮಾನ್ಯತೆ ಇರುವುದಿಲ್ಲ ಎಂದರು.
ನಿನ್ನೆ ಏಕಾಏಕಿ ನ್ಯಾಯಾಲಯದ ಮುಂದೆ ಹಾಜರಾಗಿದ್ದ ಶಾಂತಕುಮಾರ ಸ್ವಾಮಿ ಅವರು ಶಿವಮೊಗ್ಗ ಜಿಲ್ಲೆಯ ಸಾಗರದ ಉಪ ಪೊಲೀಸ್ ವರಿಷ್ಠಾಧಿಕಾರಿ ಸೇರಿ ಪೊಲೀಸರು ಕಿರುಕುಳ ನೀಡುತ್ತಿದ್ದು, ನಾನು ನ್ಯಾಯಾಲಯ ಬಿಟ್ಟು ಹೋಗುವುದಿಲ್ಲ. ನನ್ನನ್ನು ಕಾಪಾಡಿ ಎಂದು ಪೀಠಕ್ಕೆ ಮೊರೆ ಇಟ್ಟಿದ್ದರು. ಘಟನೆಯ ಮಾಹಿತಿ ಪಡೆದಿದ್ದ ನ್ಯಾಯಾಲಯವು ವಾಸ್ತವಿಕ ವರದಿ ಸಲ್ಲಿಸುವಂತೆ ಹೆಚ್ಚುವರಿ ವಿಶೇಷ ಸರ್ಕಾರಿ ಅಭಿಯೋಜಕ ಜಗದೀಶ್ ಅವರಿಗೆ ಸೂಚಿಸಿತ್ತು.
ಶಾಂತಕುಮಾರ ಸ್ವಾಮಿ ಅವರು ಹೇಳಿರುವುದು ಸತ್ಯವಾಗಿದ್ದರೆ ಡಿವೈಎಸ್‌ಪಿ ವಿರುದ್ಧ ಕಠಿಣ ಕ್ರಮಕೈಗೊಳ್ಳಲಾಗುವುದು ಎಂದು ನ್ಯಾಯಾಲಯ ಹೇಳಿತ್ತು. ಶಾಂತಕುಮಾರ ಸ್ವಾಮಿ ಹೇಳಿರುವುದು ಸುಳ್ಳಾದರೆ ಆತ ಕ್ರಮ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿತ್ತು.