ಸುದ್ದಿಗಳು

ಪಬ್ಲಿಕ್ ಪ್ರಾಸಿಕ್ಯೂಟರ್‌ಗಳು ಸಾಕಷ್ಟು ಸಂಖ್ಯೆಯಲ್ಲಿ ಇಲ್ಲದಿರುವುದೂ ಪ್ರಕರಣಗಳ ಬಾಕಿಗೆ ಕಾರಣ: ಕರ್ನಾಟಕ ಹೈಕೋರ್ಟ್

ಈ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಖಾಲಿ ಇರುವ ಎಲ್ಲಾ ಪಬ್ಲಿಕ್ ಪ್ರಾಸಿಕ್ಯೂಟರ್ ಹುದ್ದೆಗಳನ್ನು ಭರ್ತಿ ಮಾಡಲು ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ನ್ಯಾಯಾಲಯ ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಿತು.

Bar & Bench

ಪಬ್ಲಿಕ್‌ ಪ್ರಾಸಿಕ್ಯೂಟರ್‌ ಅಲಭ್ಯತೆಗೂ ಕ್ರಿಮಿನಲ್ ನ್ಯಾಯದಾನ ಕಾರ್ಯನಿರ್ವಹಣೆಗೂ ಸಂಬಂಧವಿದೆ ಎಂದು ಕರ್ನಾಟಕ ಹೈಕೋರ್ಟ್‌ ಶುಕ್ರವಾರ ತಿಳಿಸಿದ್ದು ರಾಜ್ಯದಲ್ಲಿ ಖಾಲಿ ಇರುವ ಎಲ್ಲಾ ಪ್ರಾಸಿಕ್ಯೂಟರ್ ಹುದ್ದೆಗಳನ್ನು ಭರ್ತಿ ಮಾಡಲು ತಕ್ಷಣದ ಕ್ರಮ ಕೈಗೊಳ್ಳುವಂತೆ ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಿದೆ.

ಪಬ್ಲಿಕ್‌ ಪ್ರಾಸಿಕ್ಯೂಟರ್‌ಗಳ (ಸಾರ್ವಜನಿಕ ಅಭಿಯೋಜಕರು) ಕೊರತೆಯಿಂದಾಗಿ ಪ್ರಕರಣಗಳು ಬಾಕಿ ಉಳಿಯುವುದು ಹೆಚ್ಚಿದೆ. ಹಲವು ಆದೇಶಗಳ ಹೊರತಾಗಿಯೂ ಪಬ್ಲಿಕ್‌ ಪ್ರಾಸಿಕ್ಯೂಟರ್‌ ಹುದ್ದೆಗಳು ಇನ್ನೂ ಖಾಲಿ ಇವೆ ಎಂದು ಮುಖ್ಯ ನ್ಯಾಯಮೂರ್ತಿ ಅಭಯ್ ಶ್ರೀನಿವಾಸ್ ಓಕಾ ಮತ್ತು ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರಿದ್ದ ಪೀಠ ತಿಳಿಸಿತು.

"ರಾಜ್ಯದಲ್ಲಿ ಹೆಚ್ಚಿನ ಸಂಖ್ಯೆಯ ಪಬ್ಲಿಕ್‌ ಪ್ರಾಸಿಕ್ಯೂಟರ್‌ ಹುದ್ದೆಗಳು ಖಾಲಿ ಇವೆ ಎಂದು ತಿಳಿದುಬಂದಾಗ 2019ರ ಸೆಪ್ಟೆಂಬರ್‌ನಲ್ಲಿ ಈ ಸ್ವಯಂಪ್ರೇರಿತ ಪ್ರಕರಣದ ವಿಚಾರಣೆ ಆರಂಭಿಸಲಾಯಿತು. ಕಳೆದ 21 ತಿಂಗಳುಗಳಲ್ಲಿ ಹಲವಾರು ಆದೇಶಗಳು ಜಾರಿಯಾಗಿದ್ದರೂ, ಇನ್ನೂ ಹೆಚ್ಚಿನ ಸಂಖ್ಯೆಯ ಹುದ್ದೆಗಳು ಖಾಲಿ ಇವೆ” ಎಂದು ನ್ಯಾಯಾಲಯ ಬೇಸರ ವ್ಯಕ್ತಪಡಿಸಿತು.

189 ಖಾಯಂ ಹುದ್ದೆಗಳಲ್ಲಿ 168 ಭರ್ತಿಯಾಗಿದ್ದು 21 ಹುದ್ದೆಗಳು ಖಾಲಿ ಇವೆ. ಇದಲ್ಲದೆ, ಪಬ್ಲಿಕ್ ಪ್ರಾಸಿಕ್ಯೂಟರ್‌ಗಳ 28 ಹುದ್ದೆಗಳಲ್ಲಿ ನಿಯೋಜನೆ ಮೂಲಕ 25 ಹುದ್ದೆಗಳನ್ನು ಭರ್ತಿ ಮಾಡಲಾಗಿದೆ. ಹಿರಿಯ ಸಹಾಯಕ ಪಬ್ಲಿಕ್‌ ಪ್ರಾಸಿಕ್ಯೂಟರ್‌ಹುದ್ದೆಗಳಿಗೆ ಸಂಬಂಧಿಸಿದಂತೆ ಪರಿಸ್ಥಿತಿ ಹೆಚ್ಚು ಕಠೋರವಾಗಿದ್ದು 123 ಹುದ್ದೆಗಳಲ್ಲಿ 65ನ್ನು ಮಾತ್ರ ಭರ್ತಿ ಮಾಡಲಾಗಿದೆ. ಹಿರಿಯ ಸಹಾಯಕ ಪಬ್ಲಿಕ್‌ ಪ್ರಾಸಿಕ್ಯೂಟರ್‌ ವಿಭಾಗದ 28 ನಿಯೋಜಿತ ಹುದ್ದೆಗಳಲ್ಲಿ ಕೇವಲ 5ಕ್ಕೆ ಮಾತ್ರ ನೇಮಕಾತಿ ಮಾಡಲಾಗಿದೆ. 401 ಸಹಾಯಕ ಪಬ್ಲಿಕ್ ಪ್ರಾಸಿಕ್ಯೂಟರ್ ಹುದ್ದೆಗಳಿಗೆ ಸಂಬಂಧಿಸಿದಂತೆ, ಕೇವಲ 151 ಹುದ್ದೆಗಳಿಗೆ ಖಾಯಂ ನೇಮಕಾತಿ ಇದ್ದರೆ, 242 ಹುದ್ದೆಗಳನ್ನು ಗುತ್ತಿಗೆ ಆಧಾರದ ಮೇಲೆ ಭರ್ತಿ ಮಾಡಲಾಗಿದೆ” ಎಂದು ಸರ್ಕಾರ ತಿಳಿಸಿತು.

ಆಗ ನ್ಯಾಯಾಲಯ, “2019ರ ಸೆಪ್ಟೆಂಬರ್ 27 ರಿಂದ ಜಾರಿಗೊಳಿಸಿದ ಆದೇಶಗಳ ಹೊರತಾಗಿಯೂ ಇಲ್ಲಿಯವರೆಗೆ ವಿವಿಧ ವರ್ಗಕ್ಕೆ ಸೇರಿದ ಸಾಕಷ್ಟು ಪಬ್ಲಿಕ್‌ ಪ್ರಾಸಿಕ್ಯೂಟರ್‌ ಹುದ್ದೆಗಳು ಖಾಲಿ ಉಳಿದಿವೆ. ಪಬ್ಲಿಕ್‌ ಪ್ರಾಸಿಕ್ಯೂಟರ್‌ಗಳ ಅಲಭ್ಯತೆಯು ತ್ವರಿತ ವಿಚಾರಣೆಗಾಗಿ ಸಂವಿಧಾನದ 21 ನೇ ವಿಧಿಯಡಿ ಆರೋಪಿಗಳಿಗೆ ನೀಡಲಾದ ಹಕ್ಕಗಳ ಉಲ್ಲಂಘನೆಗೆ ಎಡೆ ಮಾಡಿಕೊಡುತ್ತದೆ ಎಂದು ಹೇಳಿತು. ಇನ್ನು 12 ತಿಂಗಳೊಳಗೆ ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಬೇಕು ಎಂದು ಕೂಡ ಸೂಚಿಸಿತು.

ಕರ್ನಾಟಕ ಆಡಳಿತ ನ್ಯಾಯಮಂಡಳಿ ಜಾರಿಗೊಳಿಸಿರುವ ಮಧ್ಯಂತರ ಆದೇಶದ ಹಿನ್ನೆಲೆಯಲ್ಲಿ ಹಿರಿಯ ಸಹಾಯಕ ಪಬ್ಲಿಕ್‌ ಪ್ರಾಸಿಕ್ಯೂಟರ್‌ ಹುದ್ದೆಗಳನ್ನು ಗುತ್ತಿಗೆ ಆಧಾರದ ಮೇಲೆ ಭರ್ತಿ ಮಾಡಲಾಗದು ಎಂದು ಸರ್ಕಾರ ನ್ಯಾಯಾಲಯಕ್ಕೆ ತಿಳಿಸಿದೆ.

ಈ ಹಂತದಲ್ಲಿ ನ್ಯಾಯಾಲಯ ಹಿರಿಯ ಸಹಾಯಕ ಪಬ್ಲಿಕ್‌ ಪ್ರಾಸಿಕ್ಯೂಟರ್‌ಗಳನ್ನು ಗುತ್ತಿಗೆ ಆಧಾರದ ಮೇಲೆ ನೇಮಕ ಮಾಡಲು ಯಾವುದೇ ಅಡ್ಡಿ ಇಲ್ಲ. ಆದರೂ, ಯಾವುದಾದರೂ ನಿರ್ಬಂಧಕ ಆಜ್ಞೆ ಕಾರ್ಯ ನಿರ್ವಹಿಸುತ್ತಿದ್ದರೆ ಅದರ ಬಗ್ಗೆ ದಾಖಲೆಗಳನ್ನು ಸರ್ಕಾರ ಪರಿಶೀಲಿಸಬೇಕು. ಅಂತಹ ನಿಷೇಧಾತ್ಮಕ ಆದೇಶ ಜಾರಿಯಲ್ಲಿಲ್ಲದಿದ್ದರೆ ಸರ್ಕಾರ ಹಿರಿಯ ಸಹಾಯಕ ಸಾರ್ವಜನಿಕ ಅಭಿಯೋಜಕರನ್ನು ಗುತ್ತಿಗೆ ಆಧಾರದ ಮೇಲೆ ನೇಮಿಸಬಹುದು. ಎಲ್ಲಾ 254 ಸಹಾಯಕ ಸಾರ್ವಜನಿಕ ಅಭಿಯೋಜಕ ಹುದ್ದೆಗಳನ್ನು ಭರ್ತಿ ಮಾಡಬೇಕು. 205 ಹುದ್ದೆಗಳಿಗೆ ಮಾತ್ರ ನೇಮಕಾತಿ ಪ್ರಕ್ರಿಯೆ ಆರಂಭವಾಗಿದೆ. ಈ ಹಿನ್ನೆಲೆಯಲ್ಲಿ ಉಳಿದ ಖಾಲಿ ಹುದ್ದೆಗಳಿಗೂ ನೇಮಕಾತಿ ಮಾಡಿಕೊಳ್ಳಬೇಕು ಎಂದು ಸ್ಪಷ್ಟಪಡಿಸಿತು.

ಈ ಸಂಬಂಧ ಆಗಸ್ಟ್ 24 ರೊಳಗೆ ಅನುಪಾಲನಾ ವರದಿ ಸಲ್ಲಿಸುವಂತೆ ಸರ್ಕಾರಕ್ಕೆ ಪೀಠ ನಿರ್ದೇಶಿಸಿದ್ದು ಆಗಸ್ಟ್ 27ಕ್ಕೆ ಪ್ರಕರಣದ ಮುಂದಿನ ವಿಚಾರಣೆ ನಿಗದಿಯಾಗಿದೆ.