ಆಸ್ಪತ್ರೆಯ ಉದ್ಯೋಗ ತೊರೆದ ವೈದ್ಯರು ತನ್ನ ವಿರುದ್ಧ ಪೈಪೋಟಿಗಿಳಿಯದಂತೆ ಆಸ್ಪತ್ರೆ ಸ್ಪರ್ಧಾರಾಹಿತ್ಯ ಷರತ್ತು ವಿಧಿಸಿದ್ದು ಕಿರುಕುಳ ಎಂದು ಈಚೆಗೆ ಅಸಮಾಧಾನ ವ್ಯಕ್ತಪಡಿಸಿರುವ ಮದ್ರಾಸ್ ಹೈಕೋರ್ಟ್, ಭಾರತೀಯ ಒಪ್ಪಂದ ಕಾಯಿದೆ 1872ರ ಸೆಕ್ಷನ್‌ಗಳನ್ನು ಉಲ್ಲಂಘಿಸುವುದರಿಂd ಕಾನೂನುಬಾಹಿರ ಎಂದಿದೆ [ಎಂಐಒಟಿ ಆಸ್ಪತ್ರೆ ಸಮೂಹ ಮತ್ತು ಡಾ. ಬಲರಾಮ್ ಪಳನಿಯಪ್ಪನ್ ನಡುವಣ ಪ್ರಕರಣ].
ಎಂಐಒಟಿ ಆಸ್ಪತ್ರೆ ಸಮೂಹ ಮತ್ತು ಅಲ್ಲಿ ಕೆಲಸ ನಿರ್ವಹಿಸುತ್ತಿದ್ದ ಡಾ. ಬಲರಾಮ್ ಪಳನಿಯಪ್ಪನ್ ಅವರು ಬೇರೆ ಆಸ್ಪತ್ರೆಗೆ ಸೇವೆ ಸಲ್ಲಿಸಲು ಆರಂಭಿಸಿದಕ್ಕೆ ಸಂಬಂಧಿಸಿದ ವ್ಯಾಜ್ಯದಲ್ಲಿ ಮಧ್ಯಸ್ಥಿಕೆದಾರರನ್ನು ನೇಮಿಸುವಂತೆ ಕೋರಿ ಆಸ್ಪತ್ರೆ ಸಲ್ಲಿಸಿದ್ದ ಅರ್ಜಿ ವಜಾಗೊಳಿಸಿದ ನ್ಯಾಯಮೂರ್ತಿ ಎನ್ ಆನಂದ್ ವೆಂಕಟೇಶ್ ಈ ಅಭಿಪ್ರಾಯ ವ್ಯಕ್ತಪಡಿಸಿದರು.
ಡಾ. ಪಳನಿಯಪ್ಪನ್ ಬೇರೆ ಆಸ್ಪತ್ರೆ ಸೇರಿದ್ದು ಸ್ಪರ್ಧಾ ರಾಹಿತ್ಯತೆ ಷರತ್ತಿನ ಉಲ್ಲಂಘನೆ ಹೀಗಾಗಿ ಅವರು 42 ಲಕ್ಷ ಪರಿಹಾರ ನೀಡಬೇಕೆಂದು ಕೋರಿ ಆಸ್ಪತ್ರೆ ಮಧ್ಯಸ್ಥಿಕೆ ಅರ್ಜಿ ಸಲ್ಲಿಸಿತ್ತು. ಆದರೆ ಮೂರು ತಿಂಗಳ ನೋಟಿಸ್ ಅವಧಿಯಲ್ಲಿ ಸೇವೆ ಸಲ್ಲಿಸಿದ್ದು ಒಪ್ಪಂದದ ನಿಯಮ ಪಾಲಿಸಿರುವುದಾಗಿ ತಿಳಿಸಿದ್ದ ಡಾ. ಪಳನಿಯಪ್ಪನ್ ಆಸ್ಪತ್ರೆಯ ನಿರ್ಬಂಧಾತ್ಮಕ ಷರತ್ತುಗಳೇ ಅಮಾನ್ಯವಾದವು ಎಂದಿತ್ತು. ವಾದಗಳನ್ನು ಆಲಿಸಿದ ನ್ಯಾಯಾಲಯ ಆಸ್ಪತ್ರೆಗೆ ₹1 ಲಕ್ಷ ದಂಡ ವಿಧಿಸಿ ಅದು ಸಲ್ಲಿಸಿದ್ದ ಅರ್ಜಿ ವಜಾಗೊಳಿಸಿದೆ.
ನ್ಯಾಯಾಲಯದ ಪ್ರಮುಖ ಅವಲೋಕನಗಳು
ತಾನು ರಾಜೀನಾಮೆ ನೀಡಿದ ಕಂಪೆನಿಗೆ ಸ್ಪರ್ಧೆಯನ್ನೇ ಒಡ್ಡಬಾರದು ಎಂಬ ಸ್ಪರ್ಧಾ ರಾಹಿತ್ಯ ಷರತ್ತು ಮತ್ತು ಸ್ಪರ್ಧಿಸಿದರೂ ಹಳೆಯ ಕಂಪನಿಯ ಗ್ರಾಹಕರು ಇಲ್ಲವೇ ಸಿಬ್ಬಂದಿಯನ್ನು ಸೆಳೆಯಬಾರದು ಎಂಬ ಮನವೊಲಿಕೆ ರಾಹಿತ್ಯ (ನಾನ್ ಸಾಲಿಸಿಟೇಷನ್) ಷರತ್ತುಗಳನ್ನು ಆಸ್ಪತ್ರೆ- ವೈದ್ಯರ ಒಪ್ಪಂದದಲ್ಲಿ ಸೇರಿಸುವುದು ಸಾರ್ವಜನಿಕ ನೀತಿಗೆ ವಿರುದ್ಧ.
ಇಂತಹ ಷರತ್ತುಗಳು ಭಾರತೀಯ ಒಪ್ಪಂದ ಕಾಯಿದೆ 1872ರ ಸೆಕ್ಷನ್ 23 ಮತ್ತು 27ರಡಿ ಅಮಾನ್ಯ. ಮೂಲದಿಂದಲೇ ಅವುಗಳನ್ನು ಜಾರಿಗೊಳಿಸುವಂತಿಲ್ಲ.
ವೈದ್ಯರು ಸ್ವತಂತ್ರ ವೃತ್ತಿಪರರು; ಅವರನ್ನು ಸಾಮಾನ್ಯ ಉದ್ಯೋಗಿಗಳಂತೆ ಪರಿಗಣಿಸಲು ಸಾಧ್ಯವಿಲ್ಲ.
ಆಸ್ಪತ್ರೆಗಳು ರೋಗಿಗಳ ಸೇವೆಗೆ ಇರುವ ಸಂಸ್ಥೆಗಳು; ಅವುಗಳನ್ನು ಶುದ್ಧ ವಾಣಿಜ್ಯ ಸಂಸ್ಥೆಗಳಂತೆ ನೋಡಲು ಸಾಧ್ಯವಿಲ್ಲ.
ಆಸ್ಪತ್ರೆಗಳ ನಡುವೆ ‘ವ್ಯಾಪಾರ ಸ್ಪರ್ಧೆ’ ಎಂಬ ಪದಪ್ರಯೋಗ ಆರೋಗ್ಯ ಸೇವಾ ಕ್ಷೇತ್ರಕ್ಕೆ ಅನ್ವಯಿಸುವುದಿಲ್ಲ.
ರೋಗಿಗಳನ್ನು ಆಸ್ಪತ್ರೆಯ ವಾಣಿಜ್ಯ ಆಸ್ತಿ ಎಂದು ಪರಿಗಣಿಸಲಾಗದು.
ವಕೀಲರು ಒಂದು ಕಚೇರಿಯನ್ನು ಬಿಟ್ಟು ಇನ್ನೊಂದರಲ್ಲಿ ಪ್ರಾಕ್ಟೀಸ್ ಮಾಡುವಂತೆ, ವೈದ್ಯರೂ ಎಲ್ಲೆಡೆ ಸೇವೆ ಸಲ್ಲಿಸುವ ಹಕ್ಕು ಹೊಂದಿದ್ದಾರೆ.
ವೈದ್ಯರ ವೃತ್ತಿಪರ ಸ್ವಾತಂತ್ರ್ಯವನ್ನು ಒಪ್ಪಂದದ ಮೂಲಕ ನಿರ್ಬಂಧಿಸಲು ಸಾಧ್ಯವಿಲ್ಲ.
ಮೂಲ ಒಪ್ಪಂದವೇ ಕಾನೂನುಬಾಹಿರವಾಗಿರುವಾಗ, ಅದರಲ್ಲಿನ ಮಧ್ಯಸ್ಥಿಕೆ ಷರತ್ತು ಕೂಡ ಉಳಿಯುವುದಿಲ್ಲ.
ಆಸ್ಪತ್ರೆ ಸಲ್ಲಿಸಿರುವ ಅರ್ಜಿ ವೈದ್ಯರಿಗೆ ಕಿರುಕುಳ ನೀಡುವಂತಿದೆ.
ವಾಜ್ಯ ಮಧ್ಯಸ್ಥಿಕೆಗೆ ಯೋಗ್ಯವಾಗಿಲ್ಲ; ಹೀಗಾಗಿ ಅರ್ಜಿ ತಿರಸ್ಕೃತವಾಗಿದೆ.