Karnataka HC Chief Justice P B Varale and Justice Ashok S Kinagi 
ಸುದ್ದಿಗಳು

ಬಿಪಿಎಲ್‌, ಆರ್ಥಿಕವಾಗಿ ಹಿಂದುಳಿವರಿಗೆ ಪಡಿತರ ಸರಬರಾಜು ಮಾಡದಿರುವುದು ಗಂಭೀರ ಪೀಡನೆಯಾಗಿದೆ: ಹೈಕೋರ್ಟ್‌

ಕೆಲ ಪಡಿತರ ಚೀಟಿದಾರರಿಗೆ ಆಹಾರ ಧಾನ್ಯ ವಿತರಿಸದ ಹಾಗೂ ಹೆಚ್ಚಿನ ಬೆಲೆಗೆ ಪಡಿತರ ವಿತರಿಸಿದ ಆರೋಪದ ಮೇಲೆ ತಮಗೆ ಹಂಚಿಕೆ ಮಾಡಿದ್ದ ನ್ಯಾಯಬೆಲೆ ಅಂಗಡಿಯ ಪರವಾನಗಿ ರದ್ದುಪಡಿಸಿದ್ದ ಆಹಾರ ಇಲಾಖೆ ಕ್ರಮ ಪ್ರಶ್ನಿಸಿದ್ದ ಅರ್ಜಿದಾರರು.

Bar & Bench

ಬಡತನ ರೇಖೆಗಿಂತ ಕೆಳಗಿರುವ (ಬಿಪಿಎಲ್) ಮತ್ತು ಆರ್ಥಿಕವಾಗಿ ಹಿಂದುಳಿದವರಿಗೆ ಸಾರ್ವಜನಿಕ ವಿತರಣಾ ವ್ಯವಸ್ಥೆಯಡಿ (ಪಿಡಿಎಸ್) ಪಡಿತರ ಸರಬರಾಜು ಮಾಡದಿರುವುದು ಗಂಭೀರ ಸ್ವರೂಪದ ಪೀಡನೆಯಾಗಿದೆ ಎಂದು ಕರ್ನಾಟಕ ಹೈಕೋರ್ಟ್ ಈಚೆಗೆ ಹೇಳಿದೆ.

ಹೆಚ್ಚಿನ ಬೆಲೆಗೆ ಪಡಿತರ ವಿತರಿಸಿದ ಮತ್ತು ಕೆಲ ಪಡಿತರ ಚೀಟಿದಾರರಿಗೆ ಆಹಾರ ಧಾನ್ಯ ವಿತರಿಸದ ಆರೋಪದ ಮೇಲೆ ತಮಗೆ ಹಂಚಿಕೆ ಮಾಡಿದ್ದ ನ್ಯಾಯಬೆಲೆ ಅಂಗಡಿಯ ಪರವಾನಗಿ ರದ್ದುಪಡಿಸಿದ್ದ ರಾಮನಗರ ಆಹಾರ ಇಲಾಖೆ ಉಪ ಆಯುಕ್ತರ ಕ್ರಮ ಪುರಸ್ಕರಿಸಿದ್ದ ಏಕ ಸದಸ್ಯ ಪೀಠದ ಆದೇಶ ರದ್ದು ಕೋರಿ ವಾಜರಹಳ್ಳಿಯ ಜಯಮ್ಮ (ಮೂಲ ಪರವಾನಗಿದಾರ ವಿ ಎಂ ಸಂಜೀವಯ್ಯ ಪತ್ನಿ) ಮತ್ತವರ ಕಟುಂಬದ ಸದಸ್ಯರು ಸಲ್ಲಿಸಿದ್ದ ಮೇಲ್ಮನವಿಯ ವಿಚಾರಣೆಯನ್ನು ನಡೆಸಿದ ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಾಲಚಂದ್ರ ವರಾಳೆ ಮತ್ತು ನ್ಯಾಯಮೂರ್ತಿ ಅಶೋಕ್‌ ಎಸ್‌.ಕಿಣಗಿ ಅವರ ನೇತೃತ್ವದ ವಿಭಾಗೀಯ ಪೀಠವು.  ಏಕ ಸದಸ್ಯ ಪೀಠದ ಆದೇಶವನ್ನು ಎತ್ತಿಹಿಡಿಯಿತು.

“ಆರ್ಥಿಕವಾಗಿ ದುರ್ಬಲ ಮತ್ತು ಬಡತನದ ರೇಖೆಗಿಂತ ಕೆಳಗೆ ಇರುವವರಿಗೆ ಆಹಾರ ಧಾನ್ಯ ಮತ್ತು ಸೀಮೆ ಎಣ್ಣೆ ಸೇರಿದಂತೆ ಇನ್ನಿತರ ಅಗತ್ಯ ವಸ್ತುಗಳನ್ನು ನಿಗದಿತ ಬೆಲೆಗೆ ವಿತರಿಸುವುದೇ ಸಾರ್ವಜನಿಕ ವಿತರಣಾ ಯೋಜನೆಯ ಧ್ಯೇಯೋದ್ದೇಶವಾಗಿದೆ. ದುರ್ಬಲರಿಗೆ ಆಹಾರ ಧಾನ್ಯ ವಿತರಿಸದಿರುವುದು ಗಂಭೀರ ಸ್ವರೂಪದ ಪೀಡನೆಯಾಗಿದೆ. ಇಂತಹ ಕೃತ್ಯದಿಂದ ಪಡಿತರ ಚೀಟಿದಾರರು ಮೂಲಭೂತ ಸೌಲಭ್ಯದಿಂದ ವಂಚಿತರಾಗಲಿದ್ದಾರೆ” ಎಂದು ನ್ಯಾಯಾಲಯವು ಆದೇಶದಲ್ಲಿ ಹೇಳಿದೆ.

ಪ್ರಕರಣದ ಹಿನ್ನೆಲೆ: ವಾಜರಹಳ್ಳಿಯ ಸಂಜೀವಯ್ಯ ನ್ಯಾಯಬೆಲೆ ಅಂಗಡಿ ಪರವಾನಗಿ ಪಡೆದುಕೊಂಡಿದ್ದರು. 435ಕ್ಕೂ ಹೆಚ್ಚು ಪಡಿತರ ಚೀಟಿದಾರರಿಗೆ ಅವರು ಆಹಾರ ಧಾನ್ಯ ವಿತರಿಸಿದ್ದು, 13 ವರ್ಷಕ್ಕೂ ಹೆಚ್ಚು ಕಾಲದಿಂದ ನ್ಯಾಯಬೆಲೆ ಅಂಗಡಿ ನಡೆಸುತ್ತಿದ್ದರು. ಅಷ್ಟು ವರ್ಷಗಳಲ್ಲಿ ಅವರ ವಿರುದ್ಧ ಯಾವೊಂದು ದೂರು ದಾಖಲಾಗಿರಲಿಲ್ಲ. ಆದರೆ, 2008ರ ಜುಲೈ 22ರಂದು ರಾಮನಗರ ಜಿಲ್ಲೆಯ ಆಹಾರ ವಿಭಾಗದ ಉಪ ಆಯುಕ್ತರು, ಸಂಜೀವಯ್ಯಗೆ ಷೋಕಾಸ್ ನೋಟಿಸ್ ಜಾರಿಗೊಳಿಸಿ, ಹೆಚ್ಚಿನ ಬೆಲೆಗೆ ಆಹಾರ ಧಾನ್ಯ ವಿತರಿಸಲಾಗುತ್ತಿದೆ. ಕೆಲವರಿಗೆ ಪಡಿತರ ಲಭ್ಯವಾಗುತ್ತಿಲ್ಲ. ಪಡಿತರ ವಿತರಿಸಿದ ನಂತರ ಕಾರ್ಡುದಾರರಿಗೆ ರಸೀದಿ ನೀಡುತ್ತಿಲ್ಲ. ಜತೆಗೆ, ಅಧಿಕಾರಿಗಳು ಭೇಟಿ ನೀಡಿದ ಸಂದರ್ಭದಲ್ಲಿ ಅಂಗಡಿ ಮುಚ್ಚಲಾಗಿತ್ತು ಎಂಬ ಆರೋಪ ಕೇಳಿಬಂದಿದೆ. ಆ ಕುರಿತು ವಿವರಣೆ ನೀಡಬೇಕು ಎಂದು ಸೂಚಿಸಿದ್ದರು.

ಇದಕ್ಕೆ ಅರ್ಜಿದಾರರು ಉತ್ತರ ನೀಡಿದ್ದರು, ಅದರಿಂದ ತೃಪ್ತರಾಗದ ಉಪ ಆಯುಕ್ತರು, ಖುದ್ದಾಗಿ ವಿಚಾರಣೆ ನಡೆಸಿದ್ದರು. ಆ ವೇಳೆ ಅರ್ಜಿದಾರರು ತಮ್ಮ ಮೇಲಿನ ಆರೋಪಗಳನ್ನು ಒಪ್ಪಿಕೊಂಡಿದ್ದರು. ಹೀಗಾಗಿ, ಅವರ ಪರವಾನಗಿ ರದ್ದುಪಡಿಸಲಾಗಿತ್ತು. ಆ ಆದೇಶವನ್ನು ಮೆಲ್ಮನವಿ ಪ್ರಾಧಿಕಾರ ಮತ್ತು ಹೈಕೋರ್ಟ್‌ನ ಏಕ ಸದಸ್ಯ ಪೀಠ ಪುರಸ್ಕರಿಸಿತ್ತು. ಆ ಆದೇಶಗಳನ್ನು ರದ್ದುಪಡಿಸಲು ಕೋರಿ ಜಯಮ್ಮ (ಸಂಜೀವಯ್ಯ ಮೃತಪಟ್ಟ ಹಿನ್ನೆಲೆಯಲ್ಲಿ) ವಿಭಾಗೀಯ ಪೀಠಕ್ಕೆ ಮೇಲ್ಮನವಿ ಸಲ್ಲಿಸಿದ್ದರು. ಪ್ರಕರಣದಲ್ಲಿ ಮಾಡಲಾಗಿರುವ ಆರೋಪಗಳು ಗಂಭೀರ ಸ್ವರೂಪದ್ದಲ್ಲ ಎಂದು ವಾದಿಸಿದ್ದರು. ಇದನ್ನುಒಪ್ಪದ ವಿಭಾಗೀಯ ಪೀಠವು ಮೇಲ್ಮನವಿಯನ್ನು ವಜಾಗೊಳಿಸಿತು.