AG KK Venugopal

 
ಸುದ್ದಿಗಳು

ಹಸಿವಿನಿಂದ ಸಾವನ್ನಪ್ಪಿದವರ ಬಗ್ಗೆ ಒಂದೇ ಒಂದು ರಾಜ್ಯವೂ ಮಾಹಿತಿ ನೀಡಿಲ್ಲ: ಸುಪ್ರೀಂ ಕೋರ್ಟ್‌ಗೆ ಕೇಂದ್ರದ ಮಾಹಿತಿ

ನಾವು ಹಸಿವಿನ ಬಗ್ಗೆಯಾಗಲಿ, ಹಸಿವಿನಿಂದ ಜನರು ಸಾಯುತ್ತಿರುವ ಕುರಿತಾಗಲಿ ಇಲ್ಲಿ ಮಾತನಾಡುತ್ತಿಲ್ಲ. ನಮ್ಮ ಗಮನ ಇರುವುದು ಜನ ಹಸಿವಿನಿಂದ ಬಳಲಬಾರದು ಎಂಬುದರತ್ತ.

Bar & Bench

ದೇಶದೆಲ್ಲೆಡೆ ಹಸಿವಿನಿಂದ ಉಂಟಾಗುತ್ತಿರುವ, ಹಸಿವು ಹಾಗೂ ಅಪೌಷ್ಟಿಕತೆಯ ಬಗ್ಗೆ ಅಂಕಿಅಂಶಗಳನ್ನು ಒದಗಿಸಲು ರಾಜ್ಯಗಳ ಜೊತೆ ಕೆಲಸ ಮಾಡುವಂತೆ ಸುಪ್ರೀಂ ಕೋರ್ಟ್ ಇಂದು ಕೇಂದ್ರ ಸರ್ಕಾರಕ್ಕೆ ಕಿವಿಮಾತು ಹೇಳಿತು.

ಹಸಿವು ಮತ್ತು ಅಪೌಷ್ಟಿಕತೆ ನಿವಾರಣೆಗಾಗಿ ಸಮುದಾಯ ಅಡುಗೆ ಮನೆ ಯೋಜನೆ ರೂಪಿಸಲು ಕೇಂದ್ರ, ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ನಿರ್ದೇಶನ ನೀಡುವಂತೆ ಕೋರಿ ಸಲ್ಲಿಸಲಾಗಿರುವ ಪಿಐಎಲ್‌ ವಿಚಾರಣೆ ವೇಳೆ ಸುಪ್ರೀಂಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಎನ್‌ ವಿ ರಮಣ, ನ್ಯಾಯಮೂರ್ತಿಗಳಾದ ಸೂರ್ಯ ಕಾಂತ್ ಹಾಗೂ ಹಿಮಾ ಕೊಹ್ಲಿ ಅವರಿದ್ದ ಪೀಠ ಈ ಅಭಿಪ್ರಾಯ ವ್ಯಕ್ತಪಡಿಸಿತು.

ಇದೇ ವೇಳೆ ಕೇಂದ್ರದ ಪರ ವಾದ ಮಂಡಿಸಿದ ಅಟಾರ್ನಿ ಜನರಲ್‌ ಕೆ ಕೆ ವೇಣುಗೋಪಾಲ್‌ ಹಸಿವಿನಿಂದ ಸಾವನ್ನಪ್ಪಿದವರ ಬಗ್ಗೆ ಒಂದೇ ಒಂದು ರಾಜ್ಯವೂ ಮಾಹಿತಿ ನೀಡಿಲ್ಲ ಎಂದರು. ಹಾಗಾದರೆ ದೇಶದಲ್ಲಿ ಹಸಿವಿನಿಂದ ಸಾಯುತ್ತಿರುವವರು ಯಾರೂ ಇಲ್ಲವೇ ಎಂದು ಸಿಜೆಐ ರಮಣ ಪ್ರಶ್ನಿಸಿದಾಗ ತಮಿಳುನಾಡಿನಲ್ಲಿ ಮಗುವೊಂದು ಹಸಿವಿನಿಂದ ಸಾವನ್ನಪ್ಪಿದ ಘಟನೆಯನ್ನು ಎಜಿ ಉದಾಹರಣೆಯಾಗಿ ನೀಡಿದರು. ಅದಕ್ಕೆ ಪ್ರತಿಯಾಗಿ ಸಿಜೆಐ “ಕೇಂದ್ರ ಸರ್ಕಾರ ಸುಪ್ರೀಂಕೋರ್ಟ್‌ಗೆ ಏಕೆ ಕೆಲವು ವರದಿಗಳನ್ನು ನೀಡಬಾರದು. ಹಸಿವಿನಿಂದ ಸಾವನ್ನಪ್ಪಿದವರ ಬಗ್ಗೆ ಯಾವುದಾದರೂ ವರದಿ ಇದೆಯೇ?" ಎಂದು ಪ್ರಶ್ನಿಸಿದರು.

ಅಂತಿಮವಾಗಿ ನ್ಯಾಯಾಲಯ ರಾಜ್ಯಗಳು ಕೇಂದ್ರಕ್ಕೆ ನೀಡಿರುವ ದತ್ತಾಂಶವನ್ನು ಒಳಗೊಂಡಿರುವ ಸಂಯೋಜಿತ ಅಫಿಡವಿಟ್ ಸಲ್ಲಿಸುವಂತೆ ಸೂಚಿಸಿತು. ಈ ಹಂತದಲ್ಲಿ ಸಿಜೆಐ “ನಾವು ಹಸಿವಿನ ಬಗ್ಗೆಯಾಗಲಿ, ಹಸಿವಿನಿಂದ ಜನರು ಸಾಯುತ್ತಿರುವ ಕುರಿತಾಗಲಿ ಇಲ್ಲಿ ಮಾತನಾಡುತ್ತಿಲ್ಲ. ನಮ್ಮ ಗಮನ ಇರುವುದು ಜನ ಹಸಿವಿನಿಂದ ಬಳಲಬಾರದು ಎಂಬುದರತ್ತ. ನೋಡಲ್ ಯೋಜನೆಯನ್ನು ರೂಪಿಸಲು ನೀವು ನಿಮ್ಮ ಅಧಿಕಾರಿಗಳೊಂದಿಗೆ ಚರ್ಚಿಸಬೇಕು” ಎಂದು ಹೇಳಿದರು.

ಎರಡು ವಾರಗಳ ಬಳಿಕ ಸರ್ವೋಚ್ಚ ನ್ಯಾಯಾಲಯ ಪ್ರಕರಣವನ್ನು ಮತ್ತೆ ಕೈಗೆತ್ತಿಕೊಳ್ಳಲಿದ್ದು ಆ ವೇಳೆಗೆ ಹಸಿವು ಅಪೌಷ್ಟಿಕತೆಯಂತಹ ಸಮಸ್ಯೆಗಳ ಮಾಹಿತಿ ಇರುವ ಪೂರಕ ಅಫಿಡವಿಟ್‌ ಅನ್ನು ರಾಜ್ಯಗಳು ಸಲ್ಲಿಸಬೇಕಿದೆ.