Justice M Nagaprasanna and Karnataka HC 
ಸುದ್ದಿಗಳು

ಟೆಂಡರ್‌ ಪ್ರಕ್ರಿಯೆಯ ಎಲ್ಲಾ ಹಂತದಲ್ಲೂ ಮಧ್ಯಪ್ರವೇಶ ಮಾಡಲಾಗದು: ಹೈಕೋರ್ಟ್‌

ರಾಸಾಯನಿಕ ಮತ್ತು ಸುಗಂಧ ದ್ರವ್ಯ ಪೂರೈಕೆಗೆ ಸಂಬಂಧಿಸಿದಂತೆ ಕರ್ನಾಟಕ ಸಾಬೂನು ಮತ್ತು ಮಾರ್ಜಕ ನಿಯಮಿತ ಕರೆದಿದ್ದ ಟೆಂಡರ್‌ ಪ್ರಶ್ನಿಸಿ ಬೆಂಗಳೂರಿನ ಎಸ್‌ಪಿ ಎಂಟರ್ ಪ್ರೈಸಸ್ ಸಲ್ಲಿಸಿದ್ದ ಅರ್ಜಿ ವಜಾಗೊಳಿಸಿದೆ.

Bar & Bench

ಟೆಂಡರ್ ಪ್ರಕ್ರಿಯೆಯ ಎಲ್ಲಾ ಹಂತದಲ್ಲೂ ಮಧ್ಯ ಪ್ರವೇಶ ಮಾಡಲಾಗದು ಎಂದು ಕರ್ನಾಟಕ ಹೈಕೋರ್ಟ್ ಹೇಳಿದೆ.

ರಾಸಾಯನಿಕ ಮತ್ತು ಸುಗಂಧ ದ್ರವ್ಯ ಪೂರೈಕೆಗೆ ಸಂಬಂಧಿಸಿದಂತೆ ಕರ್ನಾಟಕ ಸಾಬೂನು ಮತ್ತು ಮಾರ್ಜಕ ನಿಯಮಿತ (ಕೆಎಸ್‌ಡಿಎಲ್) ಕರೆದಿದ್ದ ಟೆಂಡರ್‌ ಪ್ರಶ್ನಿಸಿ ಬೆಂಗಳೂರಿನ ಎಸ್‌ಪಿ ಎಂಟರ್ ಪ್ರೈಸಸ್ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ನೇತೃತ್ವದ ಏಕಸದಸ್ಯ ಪೀಠ ವಜಾಗೊಳಿಸಿದೆ.

ಟೆಂಡರ್ ಪ್ರಕ್ರಿಯೆಯಲ್ಲಿ ಭಾಗವಹಿಸಿದ್ದ ಅರ್ಜಿದಾರರನ್ನು ತಾಂತ್ರಿಕ ಬಿಡ್ ಹಂತದಲ್ಲೇ ತಿರಸ್ಕರಿಸಲಾಗಿದೆ. ತದನಂತರ ಯಶಸ್ವಿ ಬಿಡ್ಡರ್‌ಗೆ ಕಾರ್ಯಾದೇಶ ನೀಡಲಾಗಿದೆ. ಹೀಗಾಗಿ, ಈ ಹಂತದಲ್ಲಿ ಟೆಂಡರ್ ಪ್ರಕ್ರಿಯೆಯಲ್ಲಿ ಮಧ್ಯಪ್ರವೇಶ ಮಾಡಲು ಆಗದು. ಬೇಕಿದ್ದರೆ ಮೇಲ್ಮನವಿ ಪ್ರಾಧಿಕಾರದ ಮುಂದೆ ನಿಮ್ಮ ಅಹವಾಲು ಸಲ್ಲಿಸಿ ಎಂದು ಅರ್ಜಿದಾರರಿಗೆ ಸೂಚಿಸಿದೆ.

ನ್ಯಾಯಾಲಯ, ಟೆಂಡರ್ ಪ್ರಕ್ರಿಯೆಯ ಮೇಲೆ ನಿಗಾ ವಹಿಸಬೇಕು ಎಂಬುದು ಅರ್ಜಿದಾರರ ಮನವಿಯಾಗಿದೆ. ಆದರೆ, ನ್ಯಾಯಾಲಯ ಟೆಂಡರ್ ಪರಿಶೀಲನಾ ಸಮಿತಿಯ ಸ್ಥಾನದಲ್ಲಿ ಕುಳಿತು ಪ್ರತಿಯೊಂದು ಹಂತದಲ್ಲೂ ಮೇಲ್ವಿಚಾರಣೆ ಮಾಡಲು ಸಾಧ್ಯವಿಲ್ಲ ಎಂದು ಹೇಳಿರುವ ಪೀಠವು ಅರ್ಜಿದಾರರ ಆಕ್ಷೇಪಣೆಗಳನ್ನು ಪುರಸ್ಕರಿಸಲು ನಿರಾಕರಿಸಿದೆ.