High Court of Karnataka 
ಸುದ್ದಿಗಳು

ಚುನಾವಣಾ ವೆಚ್ಚ ಮಾಹಿತಿ ಸಲ್ಲಿಕೆ ವಿಫಲ: ಪುರಸಭೆ ಸದಸ್ಯರ ಅನರ್ಹತೆ ಎತ್ತಿ ಹಿಡಿದ ಹೈಕೋರ್ಟ್‌

ಚುನಾವಣಾ ಆಯೋಗದ ಆದೇಶ ಪುರಸ್ಕರಿಸಿದ್ದ ಹೈಕೋರ್ಟ್ ಏಕ ಸದಸ್ಯ ಪೀಠದ ತೀರ್ಪು ಪ್ರಶ್ನಿಸಿ ಸದಸ್ಯ ಸ್ಥಾನದಿಂದ ಅನರ್ಹಗೊಂಡಿದ್ದ ಕೆ ಶ್ರೀನಿವಾಸ್, ಎಸ್ ಲಲಿತಾ & ಸಿ ಕೆ ಹೇಮಲತಾ ಸಲ್ಲಿಸಿದ್ದ ಮೇಲ್ಮನವಿ ವಿಚಾರಣೆಯನ್ನು ವಿಭಾಗೀಯ ಪೀಠ ನಡೆಸಿತ್ತು.

Bar & Bench

ನಿಗದಿತ ಅವಧಿಯಲ್ಲಿ ಚುನಾವಣಾ ಖರ್ಚು ವೆಚ್ಚದ ವಿವರ ಸಲ್ಲಿಸದ ಆರೋಪದಡಿ ಅನೇಕಲ್ ಪುರಸಭೆಯ ಮೂವರು ಸದಸ್ಯರನ್ನು ಅನರ್ಹಗೊಳಿಸಿದ್ದ ರಾಜ್ಯ ಚುನಾವಣಾ ಆಯೋಗದ ಆದೇಶವನ್ನು ಕರ್ನಾಟಕ ಹೈಕೋರ್ಟ್‌ ಈಚೆಗೆ ಎತ್ತಿ ಹಿಡಿದಿದೆ.

ಚುನಾವಣಾ ಆಯೋಗದ ಆದೇಶವನ್ನು ಪುರಸ್ಕರಿಸಿದ್ದ ಹೈಕೋರ್ಟ್ ಏಕ ಸದಸ್ಯ ಪೀಠದ ತೀರ್ಪು ಪ್ರಶ್ನಿಸಿ ಸದಸ್ಯ ಸ್ಥಾನದಿಂದ ಅನರ್ಹಗೊಂಡಿದ್ದ ಕೆ ಶ್ರೀನಿವಾಸ್, ಎಸ್ ಲಲಿತಾ ಮತ್ತು ಸಿ ಕೆ ಹೇಮಲತಾ ಅವರು ಸಲ್ಲಿಸಿದ್ದ ಮೇಲ್ಮನವಿಯ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ರಿತುರಾಜ್ ಅವಸ್ಥಿ ಮತ್ತು ನ್ಯಾಯಮೂರ್ತಿ ಅಶೋಕ್ ಎಸ್ .ಕಿಣಗಿ ಅವರಿದ್ದ ವಿಭಾಗೀಯ ಪೀಠ ನಡೆಸಿತು.

ನಿಯಮದಂತೆ ಚುನಾವಣೆಯಲ್ಲಿ ಆಯ್ಕೆಯಾದ ಮೇಲೆ 30 ದಿನಗಳಲ್ಲಿ ಚುನಾವಣಾ ಖರ್ಚು ವೆಚ್ಚದ ವಿವರವನ್ನು ಮೇಲ್ಮನವಿದಾರರು ಸಲ್ಲಿಸಿಲ್ಲ. ಜೊತೆಗೆ, ವಿವರ ಸಲ್ಲಿಸದಿರುವುದಕ್ಕೆ ಸಮಂಜಸವಾದ ಕಾರಣ ನೀಡುವಲ್ಲಿಯೂ ವಿಫಲರಾಗಿದ್ದಾರೆ. ಹಾಗಾಗಿ, ಅವರನ್ನು ಅನರ್ಹಗೊಳಿಸಿದ ಚುನಾವಣಾ ಆಯೋಗದ ಆದೇಶವನ್ನು ಎತ್ತಿಹಿಡಿದ ಏಕಸದಸ್ಯ ಪೀಠದ ತೀರ್ಪು ಸೂಕ್ತವಾಗಿದೆ. ಅದರಲ್ಲಿ ಹಸ್ತಕ್ಷೇಪ ಮಾಡುವ ಅಗತ್ಯವಿಲ್ಲ ಎಂದು ವಿಭಾಗೀಯ ನ್ಯಾಯಪೀಠ ತನ್ನ ಆದೇಶದಲ್ಲಿ ಹೇಳಿದೆ.

ಪ್ರಕರಣದ ವಿವರ: ಬೆಂಗಳೂರು ನಗರ ಜಿಲ್ಲೆಯ ಆನೇಕಲ್ ಪುರಸಭೆಯ ಸದಸ್ಯರಾಗಿದ್ದ ಕೆ ಶ್ರೀನಿವಾಸ್, ಎಸ್ ಲಲಿತಾ ಮತ್ತು ಸಿ ಕೆ ಹೇಮಲತಾ ಕರ್ನಾಟಕ ನಗರ ಸ್ಥಳೀಯ ಸಂಸ್ಥೆ ಕಾಯಿದೆ-1989ರ ಸೆಕ್ಷನ್ 16 ಸಿ ಪ್ರಕಾರ ಚುನಾವಣಾ ಫಲಿತಾಂಶ ಘೋಷಣೆಯಾದ ದಿನದಿಂದ 30 ದಿನಗಳಲ್ಲಿ ಖರ್ಚು ವೆಚ್ಚದ ವಿವರ ಸಲ್ಲಿಸಿರಲಿಲ್ಲ. ಹಾಗಾಗಿ, ರಾಜ್ಯ ಚುನಾವಣಾ ಆಯೋಗ ಅವರನ್ನು 2021ರ ನವೆಂಬರ್‌ 15ರಂದು ಸದಸ್ಯತ್ವದಿಂದ ಅನರ್ಹಗೊಳಿಸಿತ್ತು. ಅದನ್ನು ಪ್ರಶ್ನಿಸಿ ಅವರು ಏಕಸದಸ್ಯಪೀಠದ ಮುಂದೆ ಅರ್ಜಿ ಸಲ್ಲಿಸಿದ್ದರು. ಏಕ ಸದಸ್ಯಪೀಠ ಅರ್ಜಿ ವಜಾಗೊಳಿಸುವ ಮೂಲಕ ರಾಜ್ಯ ಚುನಾವಣಾ ಆಯೋಗದ ಆದೇಶವನ್ನು ಪುರಸ್ಕರಿಸಿ 2021ರ ನವೆಂಬರ್‌ 15ರಂದು ತೀರ್ಪು ನೀಡಿತ್ತು.