Karnataka High Court
Karnataka High Court 
ಸುದ್ದಿಗಳು

ಆಹಾರ ಪದಾರ್ಥಗಳ ಮೇಲೆ ಬ್ಯಾಚ್ ಸಂಖ್ಯೆ, ಸಸ್ಯಾಹಾರ, ಮಾಂಸಾಹಾರ ಚಿಹ್ನೆ ನಮೂದಿಸದೆ ಮಾರಾಟ ಅಪರಾಧ: ಹೈಕೋರ್ಟ್‌

Bar & Bench

ಆಹಾರ ಪದಾರ್ಥಗಳ ಮೇಲೆ ಬ್ಯಾಚ್ ಸಂಖ್ಯೆ, ಎಕ್ಸ್‌ಪೈರಿ ದಿನಾಂಕ ಅಥವಾ ಸಸ್ಯಾಹಾರ, ಮಾಂಸಾಹಾರ ಚಿಹ್ನೆ ನಮೂದಿಸದೆ ಮಾರಾಟ ಮಾಡುವುದು ಆಹಾರ ಕಲಬೆರಕೆ ತಡೆ ಕಾಯಿದೆ ಅಡಿ ಶಿಕ್ಷಾರ್ಹ ಅಪರಾಧ ಎಂದು ಕರ್ನಾಟಕ ಹೈಕೋರ್ಟ್‌ ಈಚೆಗೆ ಆದೇಶ ಮಾಡಿದೆ. ಅಲ್ಲದೇ, ಕಲಬೆರಕೆ ಕಾಫಿ ಪುಡಿ ಮಾರಾಟ ಮಾಡಿದ ಪ್ರಕರಣದಲ್ಲಿ ಆರೋಪಿಗೆ ವಿಚಾರಣಾಧೀನ ನ್ಯಾಯಾಲಯ ವಿಧಿಸಿದ್ದ ಶಿಕ್ಷೆ ಎತ್ತಿ ಹಿಡಿದಿದೆ.

ಪೊಟ್ಟಣದ ಮೇಲೆ ಬ್ಯಾಚ್ ಸಂಖ್ಯೆ ಹಾಗೂ ಎಕ್ಸ್‌ಪೈರಿ ದಿನಾಂಕ ನಮೂದಿಸದ ಕಾಫಿ ಪುಡಿ ಮಾರಾಟ ಮಾಡಿದ ಹಿನ್ನೆಲೆಯಲ್ಲಿ ವಿಚಾರಣಾಧೀನ ನ್ಯಾಯಾಲಯ ವಿಧಿಸಿದ್ದ ಶಿಕ್ಷೆ ರದ್ದತಿ ಕೋರಿ ಸಕಲೇಶಪುರದ ಸೆಲೆಕ್ಟ್ ಕಾಫಿ ವರ್ಕ್ಸ್‌ನ ಮಾಲೀಕ ಸಯ್ಯದ್ ಅಹ್ಮದ್ ಸಲ್ಲಿಸಿದ್ದ ಮರುಪರಿಶೀಲನಾ ಅರ್ಜಿಯನ್ನು ನ್ಯಾಯಮೂರ್ತಿ ಡಾ. ಎಚ್ ಬಿ ಪ್ರಭಾಕರ ಶಾಸ್ತ್ರಿ ಅವರ ನೇತೃತ್ವದ ಏಕಸದಸ್ಯ ಪೀಠವು ವಜಾ ಮಾಡಿದೆ.

ಅರ್ಜಿದಾರನಿಗೆ ಆರು ತಿಂಗಳು ಶಿಕ್ಷೆ ಹಾಗೂ ಒಂದು ಸಾವಿರ ರೂಪಾಯಿ ದಂಡ ವಿಧಿಸಿ ವಿಚಾರಣಾಧೀನ ನ್ಯಾಯಾಲಯ ನೀಡಿದ್ದ ಆದೇಶ ಎತ್ತಿಹಿಡಿದಿರುವ ಹೈಕೋರ್ಟ್, ಅರ್ಜಿದಾರರು 45 ದಿನಗಳಲ್ಲಿ ಸಕಲೇಶಪುರದ ಜೆಎಂಎಫ್‌ಸಿ ನ್ಯಾಯಾಲಯದ ಮುಂದೆ ಶರಣಾಗಿ, ಶಿಕ್ಷೆ ಅನುಭವಿಸಬೇಕು ಎಂದಿದೆ.

ಪ್ರಕರಣದ ಸಾಕ್ಷಿಗಳು ಹಾಗೂ ವೈಜ್ಞಾನಿಕ ಅಧ್ಯಯನ ವರದಿಯನ್ನು ಪರಿಶೀಲಿಸಿದರೆ, ಕಾಫಿ ಪುಡಿಯಲ್ಲಿ ಕೆಫೀನ್‌ನ ಪ್ರಮಾಣ ಶೇ. 0.6ಕ್ಕಿಂತ ಕಡಿಮೆ ಇರಬಾರದು. ಆದರೆ, ಈ ಪ್ರಕರಣದಲ್ಲಿ ತಪಾಸಣೆಗೊಳಪಡಿಸಿರುವ ಮಾದರಿಯಲ್ಲಿ ಕೇವಲ ಶೇ.0.4 ಪ್ರಮಾಣದ ಕೆಫೀನ್ ಇದೆ. ಜಲೀಯ ಸಾರದ ಪ್ರಮಾಣ ಶೇ.50ಕ್ಕಿಂತ ಹೆಚ್ಚಿರಬಾರದು. ಆದರೆ, ತಪಾಸಣೆಗೊಳಪಡಿಸಿದ ಕಾಫಿ ಪುಡಿಯಲ್ಲಿ ಶೇ.55 ಇದೆ. ಮೇಲಾಗಿ, ಲೇಬಲ್ ಮೇಲೆ ಕಾಫಿ ಪುಡಿ ತಯಾರಾದ ಸಂಸ್ಥೆಯ ಹೆಸರು ಹೊರತುಪಡಿಸಿ, ಬ್ಯಾಚ್ ಸಂಖ್ಯೆ, ಎಕ್ಸ್‌ಪೈರಿ ದಿನಾಂಕ ಮತ್ತಿತರ ಮಾಹಿತಿ ನಮೂದಿಸಿಲ್ಲ. ಅರ್ಜಿದಾರರು ಮಾರಾಟ ಮಾಡಿರುವ ವಸ್ತುವಿನ ಮೇಲೆ ಆಹಾರ ಕಲಬೆರಕೆ ತಡೆ ಕಾಯಿದೆಯಲ್ಲಿ ಹೇಳಿರುವಂತೆ ಬ್ಯಾಚ್ ಸಂಖ್ಯೆ, ಎಷ್ಟು ದಿನಗಳ ವರೆಗೆ ಬಳಕೆಗೆ ಉತ್ತಮವಾಗಿರಲಿದೆ ಹಾಗೂ ಸಸ್ಯಾಹಾರ ಅಥವಾ ಮಾಂಸಾಹಾರದ ಚಿಹ್ನೆ ನಮೂದಿಸಿಲ್ಲ. ಇದು ಕಾಯಿದೆಯ ಸೆಕ್ಷನ್ 7(ಜಿ) ಮತ್ತು 7(ಜಿಜಿ) ಅಡಿಯಲ್ಲಿ ಅಪರಾಧವಾಗಲಿದ್ದು, ಸೆಕ್ಷನ್ 16(1)(ಎ) ಅಡಿಯಲ್ಲಿ ಶಿಕ್ಷೆ ವಿಧಿಸಬಹುದಾಗಿದೆ ಎಂದು ನ್ಯಾಯಾಲಯ ಹೇಳಿದೆ.

ಪ್ರಕರಣದ ಹಿನ್ನೆಲೆ: ಸಕಲೇಶಪುರದ ಆಹಾರ ನಿರೀಕ್ಷಕರು 2008ರ ಜೂನ್‌ 20ರಂದು ಸಯ್ಯದ್ ಅಹ್ಮದ್ ಮಾಲೀಕತ್ವದ ಸೆಲೆಕ್ಟ್ ಕಾಫಿ ವರ್ಕ್ಸ್‌ಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರಲ್ಲದೆ, 600 ಗ್ರಾಂ ಕಾಫಿ ಪುಡಿ ಖರೀದಿಸಿ ವೈಜ್ಞಾನಿಕ ಪರೀಕ್ಷೆಗೆ ರವಾನಿಸಿದ್ದರು. ತಪಾಸಣೆಯಲ್ಲಿ ಕಾಫಿ ಪುಡಿ ಕಲಬೆರಕೆಯಾಗಿರುವುದು, ಪುಡಿಯಲ್ಲಿ ಶೇ 0.4 ಕೆಫೀನ್ ಮತ್ತು ಶೇ.55 ಜಲೀಯ ಸಾರದ ಅಂಶ ಇರುವುದು ಖಚಿತವಾಗಿತ್ತು.

ಜತೆಗೆ, ಮಾರಾಟದ ಸಂದರ್ಭದಲ್ಲಿ ಯಾವುದೇ ಬ್ಯಾಚ್ ಸಂಖ್ಯೆ, ಎಕ್ಸ್‌ಪೈರಿ ದಿನಾಂಕಗಳನ್ನು ಮುದ್ರಿಸಿರಲಿಲ್ಲ. ಈ ಹಿನ್ನೆಲೆಯಲ್ಲಿ ಅರ್ಜಿದಾರರ ವಿರುದ್ಧ ಪ್ರಕರಣ ದಾಖಲಿಸಿದ್ದರು. ತನಿಖೆ ನಡೆಸಿ ಸಕಲೇಶಪುರದ ಜೆಎಂಎಫ್‌ಸಿ ನ್ಯಾಯಾಲಯಕ್ಕೆ ಆರೋಪ ಪಟ್ಟಿ ಸಲ್ಲಿಸಲಾಗಿತ್ತು. ವಿಚಾರಣೆ ನಡೆಸಿದ್ದ ನ್ಯಾಯಾಲಯ, ಕಲಬೆರಕೆ ಆಹಾರ ಪದಾರ್ಥ ಮಾರಾಟ ಮಾಡಿದ ಆರೋಪದಲ್ಲಿ ಸಯ್ಯದ್ ಅಹ್ಮದ್‌ಗೆ ಶಿಕ್ಷೆ ವಿಧಿಸಿತ್ತು. ಇದನ್ನು ಪ್ರಶ್ನಿಸಿ ಸಲ್ಲಿಸಿದ್ದ ಮೇಲ್ಮನವಿಯನ್ನು ಸತ್ರ ನ್ಯಾಯಾಲಯ ವಜಾಗೊಳಿಸಿತ್ತು. ಇದರಿಂದ, ಸಯ್ಯದ್ ಹೈಕೋರ್ಟ್‌ಗೆ ಮರುಪರಿಶೀಲನಾ ಅರ್ಜಿ ಸಲ್ಲಿಸಿದ್ದರು.