Gujarat High Court 
ಸುದ್ದಿಗಳು

ಶಾಲೆ, ಆಸ್ಪತ್ರೆ ನಿರ್ಮಿಸುವಂತೆ ರಾಜ್ಯ ಸರ್ಕಾರಕ್ಕೆ ಹೇಳುವುದು ನಮ್ಮ ಕರ್ತವ್ಯವಲ್ಲ: ಗುಜರಾತ್‌ ಹೈಕೋರ್ಟ್‌

2016ರಲ್ಲಿ ಜಿಲ್ಲಾಧಿಕಾರಿ ಆದೇಶ ಮಾಡಿದ್ದರೂ ಸಂಬಂಧ ಪಟ್ಟ ಇಲಾಖೆಯು ಆನಂದ್‌ ಜಿಲ್ಲೆಯಲ್ಲಿ ಸಾರ್ವಜನಿಕ ಆಸ್ಪತ್ರೆ ನಿರ್ಮಿಸಿಲ್ಲ ಎಂದು ಆಕ್ಷೇಪಿಸಿ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆಯನ್ನು ನ್ಯಾಯಾಲಯ ನಡೆಸಿತು.

Bar & Bench

ಆಸ್ಪತ್ರೆ, ಶಾಲೆ, ಕ್ರೀಡಾ ಸಂಕೀರ್ಣಗಳನ್ನು ನಿರ್ಮಿಸುವಂತೆ ರಾಜ್ಯ ಸರ್ಕಾರಕ್ಕೆ ಹೇಳುವುದು ನಮ್ಮ ಕರ್ತವ್ಯವಲ್ಲ ಎಂದು ಗುರುವಾರ ಗುಜರಾತ್‌ ಹೈಕೋರ್ಟ್‌ ಹೇಳಿದೆ.

2016ರಲ್ಲಿ ಜಿಲ್ಲಾಧಿಕಾರಿ ಆದೇಶ ಮಾಡಿದ್ದರೂ ಸಂಬಂಧ ಪಟ್ಟ ಇಲಾಖೆಯು ಆನಂದ್‌ ಜಿಲ್ಲೆಯಲ್ಲಿ ಸಾರ್ವಜನಿಕ ಆಸ್ಪತ್ರೆ ನಿರ್ಮಿಸಿಲ್ಲ ಎಂದು ಆಕ್ಷೇಪಿಸಿ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ಅರವಿಂದ್‌ ಕುಮಾರ್‌ ಮತ್ತು ನ್ಯಾಯಮೂರ್ತಿ ಅಶುತೋಷ್‌ ಶಾಸ್ತ್ರಿ ಅವರ ನೇತೃತ್ವದ ವಿಭಾಗೀಯ ಪೀಠವು ವಿಚಾರಣೆ ನಡೆಸಿತು.

“ಈ ವಿಚಾರದಲ್ಲಿ ರಾಜ್ಯ ಸರ್ಕಾರಕ್ಕೆ ಏನನ್ನಾದರು ಹೇಳುವುದು ನಮ್ಮ ಕರ್ತವ್ಯವಲ್ಲ. ಶಾಲೆ, ಆಸ್ಪತ್ರೆ, ಈಜುಕೊಳ ಅಥವಾ ಕ್ರೀಡಾ ಸಂಕೀರ್ಣಗಳನ್ನು ನಿರ್ಮಿಸುವಂತೆ ರಾಜ್ಯ ಸರ್ಕಾರದ ಇಲಾಖೆಗಳಿಗೆ ನಾವು ಹೇಳಲಾಗದು. ಹಾಲಿ ಇರುವ ಸಂಪನ್ಮೂಲ ಆಧರಿಸಿ ಅದನ್ನು ಅವರು ನಿರ್ಧರಿಸಬೇಕು” ಎಂದು ಸಿಜೆ ಕುಮಾರ್‌ ಹೇಳಿದರು.

“ಕೇವಲ ತೀರ್ಮಾನ ಸಾಕಾಗುವುದಿಲ್ಲ… ಅವರಿಗೆ ಏನನ್ನಾದರೂ ನಿರ್ಮಿಸಲು ಹಣ ಬೇಕು. ಸಂಪನ್ಮೂಲದ ಕೊರತೆಯಿಂದ ಕೆಲವು ತಹಸೀಲ್ದಾರ್‌ಗಳು, ಸಹಾಯಕ ಜಿಲ್ಲಾಧಿಕಾರಿಗಳ ಕಚೇರಿಗಳು ಬಾಡಿಗೆ ಕಟ್ಟಡದಲ್ಲಿ ನಡೆಯುತ್ತಿವೆ. ಅವರ ಬಳಿ ಸಂಪನ್ಮೂಲ ಇಲ್ಲದಿರುವುದರಿಂದ ಸರ್ಕಾರದ ಕೆಲವು ಕಚೇರಿಗಳನ್ನು ಬಾಡಿಗೆ ಕಟ್ಟಡದಲ್ಲಿ ನಡೆಸಲಾಗುತ್ತಿದೆ. ಅವರ ಬಳಿ ಭೂಮಿ ಇರಬಹುದು. ಆದರೆ, ಕಟ್ಟಡಗಳಿಲ್ಲ” ಎಂದರು.

25 ವರ್ಷಗಳ ಹಿಂದೆ ಆನಂದ್‌ ಜಿಲ್ಲೆಯಾಗಿದ್ದರೂ ಅಲ್ಲಿ ಸಾರ್ವಜನಿಕ ಆಸ್ಪತ್ರೆಯಿಲ್ಲ. ಜಿಲ್ಲಾಧಿಕಾರಿ ಆದೇಶ ಮಾಡಿದ್ದರೂ ಆಸ್ಪತ್ರೆ ಕಟ್ಟಡ ನಿರ್ಮಿಸಬೇಕಾದ ಸ್ಥಳ ಖಾಲಿ ಬಿದ್ದಿದೆ ಎಂದು ಅರ್ಜಿದಾರರು ಪೀಠದ ಗಮನಕ್ಕೆ ತಂದರು. ಇದಕ್ಕೆ ಪೀಠವು “ಬಜೆಟ್‌ನಲ್ಲಿ ಅನುದಾನ ಹಂಚಿಕೆ ಮಾಡಲಾಗಿದೆಯೇ ಅಥವಾ ಬಜೆಟ್‌ಗೆ ರಾಜ್ಯ ಸರ್ಕಾರ ಒಪ್ಪಿಗೆ ನೀಡಿದೆಯೇ” ಎಂದು ಪ್ರಶ್ನಿಸಿತು. ಆಗ ಸಂಬಂಧಿತ ವಿಚಾರ ತಿಳಿದುಕೊಂಡು ವಿಚಾರಣೆಗೆ ಹಾಜರಾಗುವುದಾಗಿ ಪೀಠಕ್ಕೆ ತಿಳಿಸಿದರು. ಹೀಗಾಗಿ, ನ್ಯಾಯಾಲಯವು ವಿಚಾರಣೆ ಮುಂದೂಡಿತು.