Airport 
ಸುದ್ದಿಗಳು

[ಮದ್ಯಸೇವನೆ] ವೈಮಾನಿಕ ಸಂಸ್ಥೆಗಳು ಸಿಬ್ಬಂದಿ ರಕ್ತ ಪರೀಕ್ಷೆ ನಡೆಸುವುದು ವಾಸ್ತವಿಕವಾಗಿ ಸಾಧ್ಯವಲ್ಲ: ದೆಹಲಿ ಹೈಕೋರ್ಟ್

ರಕ್ತ ಮತ್ತು ಮೂತ್ರ ಪರೀಕ್ಷೆಗೆ ಅಗತ್ಯವಾದ ಸೌಲಭ್ಯವನ್ನು ಸೃಷ್ಟಿಸುವುದರಿಂದ ವಿಮಾನಯಾನ ಸಂಸ್ಥೆಗಳ ಕಾರ್ಯಾಚರಣೆಯ ವೆಚ್ಚದಲ್ಲಿ ಏರಿಕೆಯಾಗಿ ಅನಗತ್ಯ ಹೊರೆಯಾಗುತ್ತದೆ ಎಂದ ನ್ಯಾಯಾಲಯ.

Bar & Bench

ವಿಮಾನಯಾನ ಸಂಸ್ಥೆಗಳು ತಮ್ಮ ಸಿಬ್ಬಂದಿಯ ರಕ್ತ ಮತ್ತು ಮೂತ್ರ ಪರೀಕ್ಷೆಯನ್ನು ನಡೆಸುವುದು ವಾಸ್ತವಿಕವಾಗಿ ಕಾರ್ಯಸಾಧ್ಯವಲ್ಲ ಎಂದು ದೆಹಲಿ ಹೈಕೋರ್ಟ್ ಇತ್ತೀಚೆಗೆ ಹೇಳಿದೆ. ಅಲ್ಲದೆ ಒಂದೊಮ್ಮೆ ಉಸಿರಾಟದ ವಿಶ್ಲೇಷಣೆಯಲ್ಲಿ ಮದ್ಯ ಸೇವನೆಗೆ ಸಂಬಂಧಿಸಿದಂತೆ ತಪ್ಪು ದೃಢೀಕರಣವಾದರೆ ಅದರ ವಿರುದ್ಧ ಸಿಬ್ಬಂದಿಯು ರಕ್ಷಣೆ ಪಡೆಯಲು ನಾಗರಿಕ ವಿಮಾನಯಾನ ಅಗತ್ಯತೆಗಳ (ಸಿಎಆರ್) ಅಡಿಯಲ್ಲಿ ಸಾಕಷ್ಟು ಮುನ್ನೆಚ್ಚರಿಕೆ ಕ್ರಮಗಳಿವೆ ಎಂದು ಅದು ವಿವರಿಸಿದೆ.

ಮದ್ಯ ಸೇವನೆಯ ಸುಳ್ಳು ದೃಢೀಕರಣ ಸಾಧ್ಯತೆಗಳನ್ನು (ಮದ್ಯಸೇವಿಸಿದ್ದಾರೆ ಎಂದು ತಪ್ಪಾಗಿ ಉಸಿರಾಟದ ವಿಶ್ಲೇಷಣೆ ಮೂಲಕ ಹೇಳುವುದು) ತಳ್ಳಿಹಾಕಲು ರಕ್ತ ಮತ್ತು ಮೂತ್ರ ಪರೀಕ್ಷೆಗೆ ಮೂಲಸೌಕರ್ಯ ಸೃಷ್ಟಿಸಲು ಸಿಎಆರ್‌ ಅಡಿಯಲ್ಲಿ ರೂಪಿಸಲಾದ ಕಾರ್ಯವಿಧಾನವು ವಿಮಾನಯಾನ ಸಂಸ್ಥೆಗಳ ಕಾರ್ಯಾಚರಣೆಯ ವೆಚ್ಚವನ್ನು ಹೆಚ್ಚಿಸಿ ಅನಗತ್ಯ ಹೊರೆಗೆ ಕಾರಣವಾಗುತ್ತದೆ ಎಂದು ನ್ಯಾಯಮೂರ್ತಿ ಗೌರಂಗ್ ಕಾಂತ್ ಹೇಳಿದರು.

“ಹೀಗಾಗಿ,  ನ್ಯಾಯಾಲಯದ ದೃಷ್ಟಿಯಿಂದ, ನಿರ್ವಾಹಕರು ವಿಮಾನ ನಿಲ್ದಾಣದಲ್ಲಿ ರಕ್ತ ಮತ್ತು ಮೂತ್ರ ಪರೀಕ್ಷೆಗಳನ್ನು ನಡೆಸುವ ಅಸಮರ್ಥತೆ ಮತ್ತು ಅಪ್ರಾಯೋಗಿಕತೆಯನ್ನು ಪರಿಗಣಿಸಿ, ರಕ್ತ ಮತ್ತು ಮೂತ್ರ ಪರೀಕ್ಷೆಯನ್ನು ನಡೆಸಲು ಸಿಎಆರ್ ಎಲ್ಲಿಯೂ ಆಪರೇಟರ್‌ಗೆ ಹೊಣೆಗಾರಿಕೆ ನೀಡುವುದಿಲ್ಲ. ಅದಕ್ಕಾಗಿಯೇ ಅದು ಉಸಿರಾಟದ ಪರೀಕ್ಷೆಗಳ ಬಗ್ಗೆ ಮಾತ್ರ ಮಾತನಾಡುತ್ತದೆ. ವಾಸ್ತವವಾಗಿ, ಅಪಘಾತ ನಡೆದಾಗ ರಕ್ತ ಮತ್ತು ಮೂತ್ರ ಪರೀಕ್ಷೆಗಳನ್ನು ನಡೆಸುವ ಕರ್ತವ್ಯ ನಿರ್ವಾಹಕರದ್ದಲ್ಲ, ಆದರೆ ಈ ಪರೀಕ್ಷೆಗಳನ್ನು ನಡೆಸುವುದು ವಿಮಾನ ನಿಲ್ದಾಣದ ಉಸ್ತುವಾರಿ ಅಧಿಕಾರಿಯ ಕರ್ತವ್ಯ ಎನ್ನಲಾಗುತ್ತದೆ. ಸುಳ್ಳು ದೃಢೀಕರಣ ಅಂಶಕ್ಕೆ ಸಂಬಂಧಿಸಿದಂತೆ, ಸಿಎಆರ್‌ ಈಗಾಗಲೇ ಸುಳ್ಳು ದೃಢೀಕರಣ ಸಾಧ್ಯತೆಯನ್ನು ತೊಡೆದುಹಾಕಲು ಕಾರ್ಯವಿಧಾನ ರೂಪಿಸಿದೆ ”ಎಂದು ನ್ಯಾಯಾಲಯ ಹೇಳಿದೆ.

ಉಸಿರಾಟ ಪರೀಕ್ಷೆ ವೇಳೆ ತಪ್ಪಿತಸ್ಥರೆಂದು ಮೂರು ತಿಂಗಳ ಕಾಲ ತಮ್ಮನ್ನು ಅಮಾನತುಗೊಳಿಸಿ ನಾಗರಿಕ ವಿಮಾನಯಾನ ಮಹಾ ನಿರ್ದೇಶನಾಲಯ (ಡಿಜಿಸಿಎ) ಹೊರಡಿಸಿದ್ದ ಆದೇಶ ಪ್ರಶ್ನಿಸಿ ವಿಸ್ತಾರಾ ಏರ್‌ಲೈನ್ಸ್‌ನ ಪೈಲಟ್ ಒಬ್ಬರು ಸಲ್ಲಿಸಿದ್ದ ಮನವಿಯ ವಿಚಾರಣೆ ವೇಳೆ ನ್ಯಾಯಮೂರ್ತಿ ಕಾಂತ್ ಈ ಆದೇಶ ನೀಡಿದ್ದಾರೆ. ಉಸಿರಾಟದ ಪರೀಕ್ಷೆ ವೇಳೆ ಅವರ ರಕ್ತದಲ್ಲಿ 0.004% ಆಲ್ಕೋಹಾಲ್ ಇದ್ದುದು ಕಂಡುಬಂದಿತ್ತು.