ಚಾಲನೆ ಮಾಡುವಾಗ ಮತ್ತು ಓವರ್‌ಟೇಕ್ ಮಾಡುವಾಗ ಸೂಕ್ತ ಕಾಳಜಿ ವಹಿಸಲು ವಿಫಲವಾದರೆ ಅದು ಸಹ ದುಡುಕಿನ ಮತ್ತು ನಿರ್ಲಕ್ಷ್ಯದ ಚಾಲನೆಯಾಗುತ್ತದೆ (ರ‍್ಯಾಷ್ ಡ್ರೈವಿಂಗ್) ಎಂದು ದೆಹಲಿ ಹೈಕೋರ್ಟ್ ಬುಧವಾರ ಅಭಿಪ್ರಾಯಪಟ್ಟಿದೆ [ಸುಶೀಲಾ ದೇವಿ ಮತ್ತು ಸಂದೀಪ್ ಕುಮಾರ್ ನಡುವಣ ಪ್ರಕರಣ].
ಮೋಟಾರು ಅಪಘಾತ ಪರಿಹಾರ ಪ್ರಕರಣದಲ್ಲಿ ಪರಿಹಾರವನ್ನು ಹೆಚ್ಚಳ ಮಾಡಿದ ನ್ಯಾ. ಗೌರಂಗ್ ಕಾಂತ್ ಅವರಿದ್ದ ಪೀಠ ಅತಿಯಾದ ವೇಗದ ಚಾಲನೆ ಮಾತ್ರವೇ ದುಡುಕಿನ ಮತ್ತು ನಿರ್ಲಕ್ಷ್ಯದ ಚಾಲನೆ (ರ‍್ಯಾಷ್ ಡ್ರೈವಿಂಗ್) ಎಂದಲ್ಲ ಎಂದು ವಿವರಿಸಿತು.
“ವಾಹನ ಚಾಲನೆ ಮಾಡುವಾಗ ಅದರಲ್ಲಿಯೂ ನಿಂತಿರುವ ಅಥವಾ ಚಲಿಸುತ್ತಿರುವ ವಾಹನವೊಂದನ್ನು ಓವರ್‌ಟೇಕ್ ಮಾಡುವಾಗ ಸೂಕ್ತ ಕಾಳಜಿ ವಹಿಸದಿರುವುದು ಸಹ ದುಡುಕಿನ ಮತ್ತು ನಿರ್ಲಕ್ಷ್ಯದ ಚಾಲನೆಯಾಗುತ್ತದೆ (ರ‍್ಯಾಷ್ ಡ್ರೈವಿಂಗ್), ಆದ್ದರಿಂದ ನ್ಯಾಯಮಂಡಳಿ ನೀಡಿದ ತೀರ್ಪಿನ ಬಗ್ಗೆ ತನಗೆ ಸಂಪೂರ್ಣ ಒಪ್ಪಿಗೆ ಇದ್ದು ಮೃತರಿಗೆ ಶೇ 20ರಷ್ಟು ಹೆಚ್ಚು ಪರಿಹಾರ ನೀಡಬೇಕು” ಎಂದು ತಿಳಿಸಿತು.
ಅಪಘಾತ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ನ್ಯಾಯಮಂಡಳಿಯು ವಾರ್ಷಿಕ ಶೇ 7.5ರ ಬಡ್ಡಿ ಸಹಿತ ₹17.5 ಲಕ್ಷ ಪರಿಹಾರ ಘೋಷಿಸಿತ್ತು. ಇದೇ ವೇಳೆ ಎರಡೂ ಕಡೆಯಿಂದ ನಿರ್ಲಕ್ಷ್ಯವಾಗಿರುವುದರಿಂದ ಪರಿಹಾರ ಮೊತ್ತದಲ್ಲಿ ಶೇ 20ರಷ್ಟು ಕಡಿತಗೊಳಿಸುವಂತೆ ಸೂಚಿಸಿತ್ತು. ಆದರೆ ಪರಿಹಾರ ಮೊತ್ತವನ್ನು ಹೆಚ್ಚಿಸುವಂತೆ ಮೃತರ ಕಡೆಯವರು ಮೇಲ್ಮನವಿ ಸಲ್ಲಿಸಿದ್ದರು.
ಸಿಗ್ನಲ್ ಅಥವಾ ಇಂಡಿಕೇಟರ್ ಇಲ್ಲದೆ ರಸ್ತೆ ಮಧ್ಯದಲ್ಲಿ ನಿಲ್ಲಿಸಿದ್ದ ವಾಹನಕ್ಕೆ ಬೈಕ್ ಚಲಾಯಿಸಿಕೊಂಡು ಬಂದ ವ್ಯಕ್ತಿ ಢಿಕ್ಕಿ ಹೊಡೆದಿದ್ದರು. ಢಿಕ್ಕಿಯ ರಭಸಕ್ಕೆ ಮಾರಣಾಂತಿಕ ಗಾಯಗಳಾಗಿ ಅವರು ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದರು. ಸರ್ಕಾರಿ ಗುತ್ತಿಗೆದಾರರಾಗಿದ್ದ 54 ವರ್ಷ ವಯಸ್ಸಿನ ಮೃತರ ಕುಟುಂಬಕ್ಕೆ ₹50 ಲಕ್ಷ ಪರಿಹಾರ ನೀಡುವಂತೆ ಕೋರಲಾಗಿತ್ತು. ಆದರೆ ಮೃತರ ನಿರ್ಲಕ್ಷ್ಯದ ಚಾಲನೆಯೇ ಅವರ ಸಾವಿಗೆ ಕಾರಣ ಎಂಬುದು ಪ್ರತಿವಾದಿಗಳ ವಾದವಾಗಿತ್ತು.
ಅಂತಿಮವಾಗಿ ನ್ಯಾಯಾಲಯವು ಮೃತರ ಭವಿಷ್ಯದ ದುಡಿಮೆಯ ಸಾಧ್ಯತೆ ಹಾಗೂ ಅವಲಂಬಿತರಿಗೆ ಉಂಟಾಗಿರುವ ನಷ್ಟವನ್ನು ಗಮನದಲ್ಲಿರಿಸಿಕೊಂಡು ಪರಿಹಾರದ ಮೊತ್ತವನ್ನು ಹೆಚ್ಚಿಸಿತು, ಇದೇ ವೇಳೆ, ಮೃತರು ವಾಹನ ಚಾಲನೆಯಲ್ಲಿ ತೋರಿದ ನಿರ್ಲಕ್ಷ್ಯ ಮತ್ತು ದುಡುಕಿನ ಕಾರಣಕ್ಕಾಗಿ ಶೇ.20 ಪರಿಹಾರವನ್ನು ಕಡಿತ ಮಾಡಿತು. ಅಂತಿಮವಾಗಿ ₹33 ಲಕ್ಷ ಪರಿಹಾರ ಘೋಷಿಸಿತು.
[ ಆದೇಶದ ಪ್ರತಿಯನ್ನು ಇಲ್ಲಿ ಓದಿ]