ನೋಟಿಸ್ ಅಥವಾ ಪ್ರಥಮ ಮಾಹಿತಿ ವರದಿಯ (ಎಫ್‌ಐಆರ್) ಪ್ರತಿಯನ್ನು ವಿದ್ಯುನ್ಮಾನ ಅಥವಾ ವಾಟ್ಸಾಪ್ ಮೂಲಕ ನೀಡುವ ಅಧಿಕಾರ ಪೊಲೀಸರಿಗೆ ಇಲ್ಲ, ಅದನ್ನು ಭೌತಿಕವಾಗಿಯೇ ನೀಡಬೇಕು ಎಂದು ಕರ್ನಾಟಕ ಹೈಕೋರ್ಟ್ ಈಚೆಗೆ ಸ್ಪಷ್ಟಪಡಿಸಿದೆ.
ಹೂಡಿಕೆದಾರರಿಗೆ ಲಕ್ಷಾಂತರ ಹಣ ವಂಚಿಸಿದ ಪ್ರಕರಣದಲ್ಲಿ ತನಿಖೆಗೆ ಸಹಕರಿಸದೆ 40 ದಿನಗಳ ಕಾಲ ತಮಿಳುನಾಡಿನಲ್ಲಿ ತಲೆಮರೆಸಿಕೊಂಡಿದ್ದ ಕಡಲೂರು ನಿವಾಸಿಯಾದ ಯೋಗ ಶಿಕ್ಷಕ ಆರ್ ಯುಗದೇವ್ ಎಂಬಾತ, ಮ್ಯಾಜಿಸ್ಟ್ರೇಟ್ ನ್ಯಾಯಾಲವು ತನ್ನ ವಿರುದ್ಧ ಹೊರಡಿಸಿದ ಬಂಧನ ಆದೇಶವನ್ನು ರದ್ದುಪಡಿಸಬೇಕು ಎಂದು ಕೋರಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ಏಕಸದಸ್ಯ ಪೀಠ ವಜಾಗೊಳಿಸಿದೆ.
“ಏಳು ವರ್ಷಕ್ಕಿಂತ ಕಡಿಮೆ ಅವಧಿಯ ಶಿಕ್ಷೆ ವಿಧಿಸಬಹುದಾದ ಪ್ರಕರಣಗಳಲ್ಲಿ ಆರೋಪಿಯನ್ನು ಬಂಧಿಸುವ ಮುನ್ನ ನೋಟಿಸ್ ನೀಡುವುದು ಕಡ್ಡಾಯವಿದ್ದರೂ ಆರೋಪಿಯು ಉದ್ದೇಶಪೂರ್ವಕವಾಗಿ ಪೊಲೀಸ್ ನೋಟಿಸ್ ಸ್ವೀಕರಿಸದೆ ತಲೆಮರೆಸಿಕೊಂಡು ತನಿಖೆಗೆ ಅಸಹಕಾರ ತೋರಿದ ಸಂದರ್ಭದಲ್ಲಿ ನೇರವಾಗಿ ಬಂಧಿಸಬಹುದಾಗಿದೆ” ಎಂದು ನ್ಯಾಯಾಲಯ ಹೇಳಿದೆ.
“ಬಿಎನ್ಎಸ್ಎಸ್ ಸೆಕ್ಷನ್ 35(3) ರ ಅಡಿಯಲ್ಲಿ ನೋಟಿಸ್ ಅಥವಾ ಎಫ್ಐಆರ್ ಪ್ರತಿಯನ್ನು ವಾಟ್ಸಾಪ್ ಅಥವಾ ವಿದ್ಯುನ್ಮಾನ ವಿಧಾನದಲ್ಲಿ ತಲುಪಿಸಲು ಪೊಲೀಸರಿಗೆ ಅಧಿಕಾರವಿಲ್ಲ. ನೋಟಿಸ್ ಅನ್ನು ಭೌತಿಕವಾಗಿ ಆರೋಪಿಗೆ ತಲುಪಿಸುವುದು ಅನಿವಾರ್ಯ. ಈ ಕುರಿತು ಸುಪ್ರೀಂ ಕೋರ್ಟ್ ಆದೇಶಿಸಿದೆ” ಎಂದು ಅಭಿಪ್ರಾಯಪಟ್ಟಿದೆ.
“ಪೊಲೀಸ್ ತನಿಖಾಧಿಕಾರಿಗಳು ನೋಟಿಸ್ ನೀಡಲು ಪ್ರಯತ್ನಿಸಿದಾಗ ಅರ್ಜಿದಾರ ಆರೋಪಿ, 40 ದಿನಗಳ ಕಾಲ ತಮಿಳುನಾಡಿನ ಕಡಲೂರು ಸೇರಿದಂತೆ ವಿವಿಧೆಡೆ ಸಂಚರಿಸುವ ಮೂಲಕ ಸ್ಥಳ ಬದಲಿಸಿದ್ದರು. ಪೊಲೀಸರಿಗೆ ಸಿಗದಂತೆ ಓಡಾಡಿದ್ದರು. ಕರೆ ವಿವರಗಳಿಂದ ಈ ವಿಚಾರ ಸಾಬೀತಾಗಿದೆ. ಇದು ತನಿಖೆಗೆ ಅಸಹಕಾರ ನೀಡುವುದು ಹಾಗೂ ತನಿಖೆಯಿಂದ ತಪ್ಪಿಸಿಕೊಳ್ಳುವ ಪ್ರಯತ್ನ ಎಂಬುದಾಗಿ ಪರಿಗಣಿಸಲ್ಪಡುತ್ತದೆ. ಇಂತಹ ಸಂದರ್ಭದಲ್ಲಿ ನೋಟಿಸ್ ನೀಡುವ ಪ್ರಕ್ರಿಯೆ ಪೂರ್ಣಗೊಳ್ಳದಿದ್ದರೂ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆಯಲು ಕಾನೂನಿನಲ್ಲಿ ಅವಕಾಶವಿದೆ” ಎಂದು ಪೀಠ ಆದೇಶಿಸಿದೆ.
“ಆರೋಪಿಯು ನೋಟಿಸ್ ಸ್ವೀಕರಿಸಲು ನಿರಾಕರಿಸಿದಾಗ ಅಥವಾ ತನಿಖೆಗೆ ಸಹಕರಿಸದಿದ್ದಾಗ, ಪೊಲೀಸರು ಅವರನ್ನು ಬಂಧಿಸುವ ಅಧಿಕಾರ ಹೊಂದಿರುತ್ತಾರೆ. ಈ ಪ್ರಕರಣದಲ್ಲಿ ಅರ್ಜಿದಾರರು 40 ದಿನಗಳ ಕಾಲ ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸಿದ್ದಾರೆ. ಇದು ಬಂಧನಕ್ಕೆ ಪೂರಕವಾದ ಸನ್ನಿವೇಶವಾಗಿದೆ. ಆದ್ದರಿಂದ, ಅರ್ಜಿದಾರರನ್ನು ಬಂಧಿಸಿರುವಲ್ಲಿ ಯಾವುದೇ ಕಾನೂನು ಲೋಪಗಳು ಕಾಣುತ್ತಿಲ್ಲ” ಎಂದು ಪೀಠ ಆದೇಶದಲ್ಲಿ ತಿಳಿಸಿದೆ.
ಭಾರತೀಯ ನಾಗರೀಕ ಸುರಕ್ಷಾ ಸಂಹಿತೆ (ಬಿಎನ್‌ಎಸ್) ಸೆಕ್ಷನ್ 35(3)ರ ಪ್ರಕಾರ ಪೊಲೀಸರು ತನಗೆ ವಿದ್ಯುನ್ಮಾನ ಅಥವಾ ಭೌತಿಕವಾಗಿ ನೋಟಿಸ್ ನೀಡಿಲ್ಲ. ಬಂಧನಕ್ಕೆ ಸೂಕ್ತ ಕಾರಣ ನೀಡಿಲ್ಲ. ಆರೋಪಿ ಸಹಕರಿಸದ ಸಂದರ್ಭದಲ್ಲಿ, ಆತ ನೋಟಿಸ್ ಸ್ವೀಕರಿಸಲು ನಿರಾಕರಿಸಿದ್ದಾರೆ ಎಂದು ಪೊಲೀಸರು ಮಹಜರ್ ಬರೆಯಬೇಕು. ಆ ವಿಚಾರವನ್ನು ಉನ್ನತ ಅಧಿಕಾರಿಗಳಿಗೆ ತಿಳಿಸಿ ನಂತರ ಆರೋಪಿಯನ್ನು ವಶಕ್ಕೆ ತೆಗೆದುಕೊಳ್ಳಬೇಕು. ಪೊಲೀಸರು ಈ ನಿಯಮಗಳನ್ನು ಪಾಲಿಸದ ಕಾರಣಕ್ಕೆ ತನ್ನನ್ನ ಬಂಧನವನ್ನು ಕಾನೂನುಬಾಹಿರ ಎಂದು ಘೋಷಿಸಬೇಕು ಎಂದು ಆರೋಪಿ ವಾದಿಸಿದ್ದನು.
ಪ್ರಕರಣದ ಹಿನ್ನೆಲೆ: ಯುಗದೇವ್ ಮತ್ತವರ ಪತ್ನಿ ಇಬ್ಬರೂ ಸೇರಿ ಜೈ ಭೈರವಿ ದೇವಿ ಫೈನಾನ್ಶಿಯಲ್ ಸಲ್ಯೂಷನ್ಸ್ ಎಂಬ ಸಂಸ್ಥೆ ಪ್ರಾರಂಭಿಸಿ, ಜನ ಆನ್‌ಲೈನ್ ಮೂಲಕ ಹೂಡಿಕೆ ಮಾಡಲು ಅವಕಾಶ ಕಲ್ಪಿಸಿದ್ದರು. ಅರ್ಜಿದಾರರು ಮತ್ತವರ ಪತ್ನಿಯ ಖಾತೆಗೆ ಸುಮಾರು 98 ಲಕ್ಷ ರೂಪಾಯಿ ಪಾವತಿಸಲಾಗಿತ್ತು. ಪ್ರಕರಣ ಸಂಬಂಧ ದೂರು ದಾಖಲಿಸಿರುವ ಮೂವರಿಂದ 39 ಲಕ್ಷ ರೂಪಾಯಿ ಬಂಡವಾಳ ಹೂಡಿಕೆಯಾಗಿತ್ತು. ಆ ಹಣ ಹಿಂದಿರುಗಿಸದಕ್ಕೆ ಯುಗದೇವ್ ವಿರುದ್ಧ ದೂರು ನೀಡಿದ್ದರು.
ಎಫ್‌ಐಆರ್ ದಾಖಲಿಸಿದ್ದ ಆಡುಗೋಡಿ ಠಾಣಾ ಪೊಲೀಸರು, ಅರ್ಜಿದಾರರಿಗೆ ನೋಟಿಸ್ ಜಾರಿಗೊಳಿಸಲು ಮುಂದಾಗಿದ್ದರು. ಆದರೆ, ಅರ್ಜಿದಾರ ಆರೋಪಿ 40 ದಿನಗಳ ಕಾಲ ನೋಟಿಸ್ ಪಡೆಯದೆ ಪೊಲೀಸರ ಕೈಗೆ ಸಿಗದೆ ತಪ್ಪಿಸಿಕೊಳ್ಳುತ್ತಿದ್ದರು. 40 ದಿನಗಳ ಬಳಿಕ ತಮಿಳುನಾಡಿನ ಕಡಲೂರಿನಲ್ಲಿರುವುದು ಗೊತ್ತಾಗಿ ಆರೋಪಿಗೆ ಪೊಲೀಸರು ನೋಟಿಸ್ ಜಾರಿಗೊಳಿಸಲು ಮುಂದಾಗಿದ್ದರು. ಈ ಸಂದರ್ಭದಲ್ಲಿ ಪೊಲೀಸರಿಗೆ ಸಹಕರಿಸದ್ದಕ್ಕೆ ವಶಕ್ಕೆ ಪಡೆದು ಮ್ಯಾಜಿಸ್ಟ್ರೇಟ್ ಮುಂದೆ ಹಾಜರುಪಡಿಸಿದ್ದರು. ಬಳಿಕ, ಮ್ಯಾಜಿಸ್ಟ್ರೇಟ್ ಬಂಧನ ಆದೇಶ ಹೊರಡಿಸಿದ್ದರು. ಅದನ್ನು ಪ್ರಶ್ನಿಸಿ ಅರ್ಜಿದಾರ ಹೈಕೋರ್ಟ್ ಮೆಟ್ಟಿಲೇರಿದ್ದರು.