ತಮಿಳುನಾಡಿನ ಎಲ್ಲಾ ಹಿಂದೂ ದೇವಾಲಯಗಳಲ್ಲಿ ನಿವೃತ್ತ ನ್ಯಾಯಾಧೀಶರ ನೇತೃತ್ವದ ಅರಂಗವಳರ್ (ಟ್ರಸ್ಟಿ) ಸಮಿತಿ ನೇಮಿಸುವಂತೆ ಕೋರಿ ಹಿಂದೂ ಧರ್ಮ ಪರಿಷತ್ತು ಸಲ್ಲಿಸಿದ್ದ ವಿಶೇಷ ಅನುಮತಿ ಅರ್ಜಿಗೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ ರಾಜ್ಯ ಸರ್ಕಾರಕ್ಕೆ ನೋಟಿಸ್ ನೀಡಿದೆ.
ಮದ್ರಾಸ್ ಹೈಕೋರ್ಟ್ ಆದೇಶ ಪ್ರಶ್ನಿಸಿ ಸಲ್ಲಿಸಿದ್ದ ಮೇಲ್ಮನವಿ ಸಂಬಂಧ ನ್ಯಾಯಮೂರ್ತಿಗಳಾದ ಇಂದಿರಾ ಬ್ಯಾನರ್ಜಿ ಮತ್ತು ಜೆ ಕೆ ಮಹೇಶ್ವರಿ ಅವರನ್ನೊಳಗೊಂಡ ಪೀಠ ನೋಟಿಸ್ ಜಾರಿ ಮಾಡಿದೆ.
ತಮಿಳುನಾಡಿನಲ್ಲಿ ಹಿಂದೂ ದೇವಾಲಯಗಳನ್ನು ಸರಿಯಾಗಿ ನಿರ್ವಹಿಸುತ್ತಿಲ್ಲ. ಅವುಗಳನ್ನು ದುರುಪಯೋಗಪಡಿಸಿಕೊಂಡು ನಾಶ ಮಾಡಲಾಗುತ್ತಿದೆ ಎಂದು ಅರ್ಜಿದಾರರು ಈ ಹಿಂದೆ ಮದ್ರಾಸ್ ಹೈಕೋರ್ಟ್‌ನಲ್ಲಿ ವಾದಿಸಿದ್ದರು. ಹೀಗಾಗಿ ದೇಗುಲ ನಿರ್ವಹಣೆಗೆ ನಿವೃತ್ತ ನ್ಯಾಯಾಧೀಶರನ್ನು ಒಳಗೊಂಡಂತೆ ಓರ್ವ ಸಾಮಾಜಿಕ ಕಾರ್ಯಕರ್ತ, ಓರ್ವ ಭಕ್ತ, ಪರಿಶಿಷ್ಟ ಜಾತಿಯ ಒಬ್ಬ ವ್ಯಕ್ತಿ ಹಾಗೂ ಮಹಿಳೆಯೊಬ್ಬರನ್ನು ಒಳಗೊಂಡ ಅರಂಗವಳರ್ ಸಮಿತಿಯನ್ನು (ಟ್ರಸ್ಟಿ ಕಮಿಟಿ) ರಚಿಸಬೇಕು ಎಂದು ಕೋರಲಾಗಿತ್ತು.
ದೇವಸ್ಥಾನಗಳ ನಿರ್ವಹಣೆ ವಿಚಾರವು ತಮಿಳುನಾಡು ಹಿಂದೂ ಧಾರ್ಮಿಕ ಮತ್ತು ದತ್ತಿ ಕಾಯಿದೆ, 1959 ರ ಸೆಕ್ಷನ್ 47(1) (c)ರ ವ್ಯಾಪ್ತಿಗೆ ಒಳಪಡುತ್ತದೆ ಎಂದು ಅಡ್ವೊಕೇಟ್ ಜನರಲ್ ಆರ್ ಷಣ್ಮುಗಸುಂದರಂ ತಿಳಿಸಿದ ಬಳಿಕ ಮದ್ರಾಸ್ ಹೈಕೋರ್ಟ್ ಅರ್ಜಿದಾರರ ವಾದವನ್ನು ತಿರಸ್ಕರಿಸಿತ್ತು. "ಈಗಾಗಲೇ ಶಾಸನಬದ್ಧ ನಿಯಮ ಇರುವುದರಿಂದ, ಅರ್ಜಿದಾರರು ಕೋರಿರುವಂತೆ, ಈ ರಿಟ್ ಅರ್ಜಿಯಲ್ಲಿ ತೀರ್ಪು ಮತ್ತು ಸೂಕ್ತ ನಿರ್ದೇಶನಗಳನ್ನು ನೀಡಲು ಏನೂ ಉಳಿದಿಲ್ಲ" ಎಂದು ಹೈಕೋರ್ಟ್ ಹೇಳಿತ್ತು.
ಇದನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿರುವ ಅರ್ಜಿದಾರ ಸಂಘಟನೆ ʼತಮಿಳುನಾಡಿನ ಎಲ್ಲಾ ದೇಗುಲಗಳಿಗೆ ನಿವೃತ್ತ ನ್ಯಾಯಾಧೀಶರ ನೇತೃತ್ವದಲ್ಲಿ ಅರಂಗವಳರ್ ಸಮಿತಿ ರಚಿಸಬೇಕು. ಸಮಿತಿಯಲ್ಲಿ ನಿವೃತ್ತನ್ಯಾಯಾಧೀಶರು, ಸಾಮಾಜಿಕಕಾರ್ಯಕರ್ತ, ಭಕ್ತರು, ಪರಿಶಿಷ್ಟಜಾತಿಯ ವ್ಯಕ್ತಿ ಹಾಗೂ ಮಹಿಳೆ ಸದಸ್ಯರಾಗಿರಬೇಕು ಎಂದು ಕೋರಿದೆ.