Justices S Sunil Dutt Yadav & Ramachandra Huddar, Karnataka HC-Kalburgi Bench 
ಸುದ್ದಿಗಳು

ನ್ಯಾಯಾಲಯದ ವಶದಲ್ಲಿರುವ ಹಳೆಯ ನೋಟು ಬದಲಾವಣೆಗೆ ಹಣಕಾಸು ಇಲಾಖೆಯ ಅಧಿಸೂಚನೆ ಪಾಲನೆ ಕಡ್ಡಾಯ: ಹೈಕೋರ್ಟ್‌

ಕಲಬುರ್ಗಿಯ ಸಂಜು ಕುಮಾರ್‌ ಅಲಿಯಾಸ್‌ ಸಂಜೀವ್‌ ಕುಮಾರ್‌ ಅವರ ವಿರುದ್ಧದ ಪ್ರಕರಣದಲ್ಲಿ ರೂ.9.84 ಲಕ್ಷ ಹಣವನ್ನು ಹೊಸ ನೋಟಿಗೆ ಬದಲಿಸಿಕೊಂಡುವಂತೆ ಆದೇಶಿಸಿದ್ದ ಹೈಕೋರ್ಟ್‌.

Bar & Bench

ನೋಟು ಅಮಾನ್ಯಕ್ಕೂ ಮುನ್ನ ಅಪರಾಧ ಪ್ರಕರಣದ ಸಂಬಂಧ ತನಿಖಾ ಸಂಸ್ಥೆಗಳು/ಪೊಲೀಸರು ವಶಪಡಿಸಿಕೊಂಡಿರುವ ಹಳೆಯ ನೋಟುಗಳ ಕುರಿತಾದ ಕಾನೂನು ಪ್ರಕ್ರಿಯೆ ವಜಾಗೊಂಡು ಹಣವನ್ನು ನಿರ್ದಿಷ್ಟ ಪಕ್ಷಕಾರರಿಗೆ ಹಿಂದಿರುಗಿಸುವ ಕುರಿತು ಸಂಬಂಧಿತ ನ್ಯಾಯಾಲಯವು ಕಡ್ಡಾಯವಾಗಿ ಕೇಂದ್ರ ಹಣಕಾಸು ಇಲಾಖೆಯ 2017ರ ಮೇ 12ರ ಅಧಿಸೂಚನೆಯ ಅನ್ವಯ ಆದೇಶ ಮಾಡಬೇಕು ಎಂದು ಕರ್ನಾಟಕ ಹೈಕೋರ್ಟ್‌ನ ಕಲಬುರ್ಗಿ ಪೀಠವು ಈಚೆಗೆ ಆದೇಶಿಸಿದೆ.

ಕಲಬುರ್ಗಿಯ ಸಂಜು ಕುಮಾರ್‌ ಅಲಿಯಾಸ್‌ ಸಂಜೀವ್‌ ಕುಮಾರ್‌ ಅವರ ವಿರುದ್ಧದ ಪ್ರಕರಣದಲ್ಲಿ ರೂ. 9.84 ಲಕ್ಷ ಹಣವನ್ನು ಹೊಸ ನೋಟಿನಿಂದ ಬದಲಿಸಿಕೊಂಡುವಂತೆ ಆದೇಶಿಸಿದ್ದ ಏಕಸದಸ್ಯ ಪೀಠದ ಆದೇಶ ಪ್ರಶ್ನಿಸಿದ್ದ ಭಾರತೀಯ ರಿಸರ್ವ್‌ ಬ್ಯಾಂಕ್‌ ಮೇಲ್ಮನವಿಯನ್ನು ನ್ಯಾಯಮೂರ್ತಿಗಳಾದ ಎಸ್‌ ಸುನಿಲ್‌ ದತ್‌ ಯಾದವ್‌ ಮತ್ತು ರಾಮಚಂದ್ರ ಡಿ. ಹುದ್ದಾರ್‌ ಅವರ ವಿಭಾಗೀಯ ಪೀಠವು ಇತ್ಯರ್ಥಪಡಿಸಿದೆ.

“ಹಾಲಿ ಪ್ರಕರಣದಲ್ಲಿ ನಗದು ವಶಪಡಿಸಿಕೊಂಡಿರುವ ಪ್ರಕರಣದ ಪ್ರಕ್ರಿಯೆ ರದ್ದುಗೊಂಡಿರುವುದರಿಂದ ಜಪ್ತಿ ಮಾಡಿರುವ ನಗದನ್ನು ಹಿಂದಿರುಗಿಸುವಂತೆ ವಿಚಾರಣಾಧೀನ ನ್ಯಾಯಾಲಯಕ್ಕೆ ನಿರ್ದೇಶಿಸಲಾಗಿದೆ. ವಿಚಾರಣಾಧೀನ ನ್ಯಾಯಾಲಯವು ಅಮಾನ್ಯಗೊಂಡಿರುವ ನೋಟುಗಳನ್ನು ಬಿಡುಗಡೆ ಮಾಡುವಂತೆ ಆದೇಶಿಸಿದೆ. ಆದರೆ, ವಿಚಾರಣಾಧೀನ ನ್ಯಾಯಾಲಯದ ಆದೇಶವು ಕೇಂದ್ರ ಹಣಕಾಸು ಇಲಾಖೆಯ 2017ರ ಮೇ 12ರ ಅಧಿಸೂಚನೆಗೆ ಅನುಗುಣವಾಗಿಲ್ಲ” ಎಂದು ನ್ಯಾಯಾಲಯ ಹೇಳಿದೆ.

“ಹಣಕಾಸು ಇಲಾಖೆಯ ಅಧಿಸೂಚನೆಯ ಹಿನ್ನೆಲೆಯಲ್ಲಿ ಭಾರತ ಸರ್ಕಾರಕ್ಕೆ ನಿರ್ದೇಶನ ನೀಡಿದರೂ ಅರ್ಜಿದಾರರಿಗೆ ಅಲ್ಲಿ ಪರಿಹಾರ ದೊರಕುವುದಿಲ್ಲ. ಏಕೆಂದರೆ ಅರ್ಜಿದಾರರ ಮನವಿಯನ್ನು ಪರಿಗಣಿಸಬೇಕಿರುವುದು ಭಾರತೀಯ ರಿಸರ್ವ್‌ ಬ್ಯಾಂಕ್.‌ ಈ ನ್ಯಾಯಾಲಯದ ಏಕಸದಸ್ಯ ಪೀಠದ ಆದೇಶ ಪರಿಣಾಮಕಾರಿಯಾಗಿದ್ದು, ಹಣಕಾಸು ಇಲಾಖೆಯ 2017ರ ಮೇ 12ರ ಅಧಿಸೂಚನೆ ಅಗತ್ಯ ಪರಿಗಣಿಸಿ, ನೋಟು ಮರಳಿಸಲು ವಿಚಾರಣಾಧೀನ ನ್ಯಾಯಾಲಯದಿಂದ ಹೊಸದಾದ ಸೂಕ್ತ ಆದೇಶ ಪಡೆಯಲು ಅರ್ಜಿದಾರರಿಗೆ ಸ್ವಾತಂತ್ರ್ಯ ನೀಡುವುದು ಸೂಕ್ತವಾಗಿದೆ” ಎಂದು ಹೇಳಿದೆ.

“ವಿಚಾರಣಾಧೀನ ನ್ಯಾಯಾಲಯದಿಂದ ಅರ್ಜಿದಾರರು ಸೂಕ್ತ ಆದೇಶ ಪಡೆದ ಬಳಿಕ ಅವರು ಹೊಸ ಮನವಿಯೊಂದಿಗೆ ಭಾರತ ಸರ್ಕಾರ ಕೋರಿಕೆ ಸಲ್ಲಿಸಬಹುದು. ಇದನ್ನು ಪರಿಗಣಿಸಿ ಭಾರತ ಸರ್ಕಾರವು ಸೂಕ್ತ ನಿರ್ದೇಶನ ನೀಡಿ, ಕ್ರಮಕೈಗೊಳ್ಳಬೇಕು” ಎಂದು ಆದೇಶಿಸಿದೆ.

ಭಾರತ ರಿಸರ್ವ್‌ ಬ್ಯಾಂಕ್‌ ಪ್ರತಿನಿಧಿಸಿದ್ದ ಹಿರಿಯ ವಕೀಲ ಬಿ ಸಿ ತಿರುವೆಂಗಡಮ್‌ ಅವರು “ಕಾನೂನು ಪರಿಹಾರದ ಭಾಗವಾಗಿ ಆರ್‌ಬಿಐಗೆ ನಿರ್ದೇಶನ ನೀಡುವ ಬದಲಿಗೆ ಭಾರತ ಸರ್ಕಾರಕ್ಕೆ ನಿರ್ದೇಶನ ನೀಡಬೇಕು” ಎಂದು ವಾದಿಸಿದ್ದರು.

ಭಾರತ ಸರ್ಕಾರವನ್ನು ಪ್ರತಿನಿಧಿಸಿದ್ದ ಡೆಪ್ಯುಟಿ ಸಾಲಿಸಿಟರ್‌ ಜನರಲ್‌ ಸುಧೀರ್‌ ಸಿಂಗ್‌ ಆರ್‌ ಅವರು “ತಮಗೆ ಯಾವುದೇ ಸೂಚನೆ ಇಲ್ಲ. ಆದರೆ, ಸುಪ್ರೀಂ ಕೋರ್ಟ್‌ ಆದೇಶಕ್ಕೆ ಅನುಗುಣವಾಗಿ ನಿರ್ದೇಶನ ನೀಡುವುದು ನ್ಯಾಯಾಲಯಕ್ಕೆ ಬಿಟ್ಟ ವಿಚಾರವಾಗಿದೆ" ಎಂದರು.

ಹಣಕಾಸು ಇಲಾಖೆಯ ಅಧಿಸೂಚನೆ ಏನು ಹೇಳುತ್ತದೆ?

i) ಹಣ ಜಪ್ತಿ ಮಾಡಿ ನ್ಯಾಯಾಲಯದ ಮುಂದೆ ಹಾಜರುಪಡಿಸುವಾಗ ಪೊಲೀಸರು/ತನಿಖಾ ಸಂಸ್ಥೆಯು ಜಪ್ತಿ ಮಾಡಿದ ನಿರ್ದಿಷ್ಟ ಬ್ಯಾಂಕ್‌ ನೋಟುಗಳ ಸೀರಿಯಲ್‌ ನಂಬರ್‌ ಉಲ್ಲೇಖಿಸಬೇಕು.

ii) ನ್ಯಾಯಾಲಯದ ಆದೇಶದಲ್ಲಿ ಹಣಕಾಸು ಇಲಾಖೆಯ ಅಧಿಸೂಚನೆ ಉಲ್ಲೇಖಿಸಿ ತನಿಖಾ ಸಂಸ್ಥೆಗಳು ಜಪ್ತಿ ಮಾಡಿದ ಹಣದ ಸೀರಿಯಲ್‌ ನಂಬರ್‌ ಉಲ್ಲೇಖಿಸಿ ನಿರ್ದೇಶಿಸುವ ಮೂಲಕ ಪ್ರಕರಣದಲ್ಲಿ ಪಕ್ಷಕಾರನಾಗಿರುವ ವ್ಯಕ್ತಿ ಹಣ ಬದಲಿಸಿಕೊಳ್ಳಲು ಅನುಮತಿ ಆದೇಶಿಸಬೇಕು.

RBI Vs SnajeevKumar.pdf
Preview