High Court of Karnataka  
ಸುದ್ದಿಗಳು

ನೂತನ ಬಿಬಿಎಂಪಿ ಜಾಹೀರಾತು ನಿಯಮ ಹಿಂಪಡೆದ ಬಗ್ಗೆ ಹೈಕೋರ್ಟ್‌ಗೆ ಮಾಹಿತಿ ನೀಡಿದ ರಾಜ್ಯ ಸರ್ಕಾರ

‘ಬಿಬಿಎಂಪಿ ಜಾಹೀರಾತು ನಿಯಮ-2021’ ಜಾರಿಗೆ ತರಲು ನಗರಾಭಿವೃದ್ಧಿ ಇಲಾಖೆ ಹೊರಡಿಸಿದ್ದ ಆದೇಶ ಹಿಂಪಡೆದು ಕಳೆದ ಸೆ. 14ರಂದು ಅಧಿಸೂಚನೆ ಹೊರಡಿಸಲಾಗಿದೆ ಎಂದು ತಿಳಿಸಿ, ಲಿಖಿತ ಹೇಳಿಕೆಯೊಂದಿಗೆ ಅಧಿಸೂಚನೆಯ ಪ್ರತಿಯನ್ನು ಪೀಠಕ್ಕೆ ಸಲ್ಲಿಸಲಾಯಿತು.

Bar & Bench

ಬೆಂಗಳೂರಿನಲ್ಲಿ ಜಾಹೀರಾತು ಪ್ರದರ್ಶನಕ್ಕೆ ಅವಕಾಶ ಕಲ್ಪಿಸುವ ಬಿಬಿಎಂಪಿ ಜಾಹೀರಾತು ನಿಯಮಗಳು-2021 ಜಾರಿಗೆ ತರಲು ಹೊರಡಿಸಲಾಗಿದ್ದ ಅಧಿಸೂಚನೆಯನ್ನು ಹಿಂಪಡೆಯಲಾಗಿದೆ ಎಂದು ರಾಜ್ಯ ಸರ್ಕಾರ ಕರ್ನಾಟಕ ಹೈಕೋರ್ಟ್‌ಗೆ ಶನಿವಾರ ಮಾಹಿತಿ ನೀಡಿದೆ.

ಕಳೆದ ಜುಲೈ 26ರಂದು ನಗರಾಭಿವೃದ್ಧಿ ಇಲಾಖೆ ಹೊರಡಿಸಿದ್ದ ಅಧಿಸೂಚನೆ ಪ್ರಶ್ನಿಸಿ ಸಾಮಾಜಿಕ ಕಾರ್ಯಕರ್ತ ಸಾಯಿದತ್ತ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ನ್ಯಾಯಮೂರ್ತಿಗಳಾದ ಅಲೋಕ್ ಅರಾಧೆ ಮತ್ತು ವಿಶ್ವಜಿತ್‌ ಶೆಟ್ಟಿ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿತು.

ಸರ್ಕಾರದ ಪರ ವಕೀಲರು “ನಗರದಲ್ಲಿ ಜಾಹೀರಾತು ಪ್ರದರ್ಶನಕ್ಕೆ ಅವಕಾಶ ಕಲ್ಪಿಸುವ ‘ಬಿಬಿಎಂಪಿ ಜಾಹೀರಾತು ನಿಯಮ-2021’ ಜಾರಿಗೆ ತಂದು ನಗರಾಭಿವೃದ್ಧಿ ಇಲಾಖೆ ಹೊರಡಿಸಿದ್ದ ಆದೇಶವನ್ನು ಹಿಂಪಡೆದು ಕಳೆದ ಸೆಪ್ಟೆಂಬರ್‌ 14ರಂದು ಅಧಿಸೂಚನೆ ಹೊರಡಿಸಲಾಗಿದೆ” ಎಂದು ತಿಳಿಸಿ, ಲಿಖಿತ ಹೇಳಿಕೆಯೊಂದಿಗೆ ಅಧಿಸೂಚನೆಯ ಪ್ರತಿಯನ್ನು ಪೀಠಕ್ಕೆ ಸಲ್ಲಿಸಿದರು.

ಇದನ್ನು ದಾಖಲಿಸಿಕೊಂಡ ಪೀಠವು ಜಾಹೀರಾತು ನಿಯಮಗಳನ್ನು ಜಾರಿಗೆ ತಂದು ಸರ್ಕಾರ ಹೊರಡಿಸಿದ್ದ ಅಧಿಸೂಚನೆ ರದ್ದುಪಡಿಸುವಂತೆ ಅರ್ಜಿದಾರರು ಮನವಿ ಮಾಡಿದ್ದಾರೆ. ಇದೀಗ ಆ ಅಧಿಸೂಚನೆಯನ್ನು ಸರ್ಕಾರ ಹಿಂಪಡೆದಿರುವುದರಿಂದ ಮನವಿಗೆ ಸಂಬಂಧಿಸಿದಂತೆ ಯಾವುದೇ ಆದೇಶ-ನಿರ್ದೇಶನ ನೀಡುವ ಅಗತ್ಯತೆ ಕಂಡುಬರುತ್ತಿಲ್ಲ ಎಂದು ತಿಳಿಸಿ ಅರ್ಜಿ ಇತ್ಯರ್ಥಪಡಿಸಿತು.

ಈ ಹಿಂದೆ, ಅರ್ಜಿದಾರರ ಪರ ವಾದ ಮಂಡಿಸಿದ್ದ ವಕೀಲ ಜಿ ಆರ್ ಮೋಹನ್ ಅವರು “ನಗರದಲ್ಲಿ ಅನಧಿಕೃತ ಜಾಹೀರಾತು ಫಲಕಗಳ ತೆರವಿಗೆ ಕೋರಿರುವ ಅರ್ಜಿ ಹೈಕೋರ್ಟ್‌ನಲ್ಲಿ ವಿಚಾರಣಾ ಹಂತದಲ್ಲಿದೆ. ಪ್ರಕರಣದ ಮೇಲ್ವಿಚಾರಣೆ ನಡೆಸುತ್ತಿರುವ ನ್ಯಾಯಾಲಯ, ಸರ್ಕಾರ ಹಾಗೂ ಬಿಬಿಎಂಪಿಗೆ ಅನೇಕ ನಿರ್ದೇಶನಗಳನ್ನು ನೀಡಿದೆ. ಆದರೆ, ನ್ಯಾಯಾಲಯದ ಆದೇಶ ಪಾಲನೆ ಮಾಡುವ ಬದಲು ಸರ್ಕಾರ ಜಾಹೀರಾತು ಅಳವಡಿಕೆಗೆ ಅನುಮತಿ ನೀಡುವ ಸಲುವಾಗಿ 2019ರ ನಿಯಮಗಳನ್ನು ಈಗ ಜಾರಿಗೆ ತಂದಿದೆ” ಎಂದು ಪೀಠದ ಗಮನಸೆಳೆದಿದ್ದರು.

ಬಿಬಿಎಂಪಿ ಜಾಹೀರಾತು ನಿಯಮಗಳು ಸುಪ್ರೀಂಕೋರ್ಟ್ ಹಾಗೂ ಹೈಕೋರ್ಟ್‌ನ ಆದೇಶಗಳಿಗೆ ಮತ್ತು ಕರ್ನಾಟಕ ಮುಕ್ತ ಪ್ರದೇಶ (ವಿರೂಪ ತಡೆ ಮತ್ತು ಸಂರಕ್ಷಣಾ) ಕಾಯಿದೆ-1981ಕ್ಕೆ ವಿರುದ್ಧವಾಗಿದೆ. ಜೊತೆಗೆ 2018ರ ಬಿಬಿಎಂಪಿ ಜಾಹೀರಾತು ಬೈಲಾ 2020ರ ಜನವರಿ ತಿಂಗಳಿನಲ್ಲೇ ಡೀಮ್ಡ್ ಆಗಿ ಜಾರಿಯಾಗಿದೆ. 2021ರ ಜನವರಿ 11ರಿಂದ ನೂತನ ಬಿಬಿಎಂಪಿ ಕಾಯಿದೆ-2020 ಸಹ ಜಾರಿಗೆ ಬಂದಿದೆ. ಹೀಗಿರುವಾಗ ಸರ್ಕಾರ 2019ರ ಜಾಹೀರಾತು ನಿಯಮಗಳನ್ನು 2021ರ ಜುಲೈ 26ರಂದು ಜಾರಿಗೆ ತಂದು ಅಧಿಸೂಚನೆ ಹೊರಡಿಸಿದೆ. ಅದೂ ಸಹ ಹಿಂದಿನ ಸಿಎಂ ಯಡಿಯೂರಪ್ಪ ರಾಜೀನಾಮೆ ನೀಡಿದ ದಿನವೇ ಅಧಿಸೂಚನೆ ಹೊರಡಿಸಲಾಗಿದೆ ಎಂದು ಆಕ್ಷೇಪಿಸಿರುವ ಅರ್ಜಿದಾರರು, ಬಿಬಿಎಂಪಿ ಜಾಹೀರಾತು ನಿಯಮ-2021 ಜಾರಿಗೆ ತಂದು ನಗರಾಭಿವೃದ್ಧಿ ಇಲಾಖೆ ಹೊರಡಿಸಿರುವ ಅಧಿಸೂಚನೆ ರದ್ದುಪಡಿಸಬೇಕು ಎಂದು ಕೋರಿದ್ದರು.