CJI NV Ramana
CJI NV Ramana 
ಸುದ್ದಿಗಳು

ಸಂಸತ್ತಿನಲ್ಲಿ ಕ್ಷೀಣಿಸುತ್ತಿರುವ ವಕೀಲರ ಸಂಖ್ಯೆ; ಆರಂಭಿಕ ವರ್ಷಗಳಲ್ಲಿ ಜಾರಿಗೆ ತಂದ ಕಾನೂನುಗಳು ದೋಷರಹಿತ: ಸಿಜೆಐ ರಮಣ

Bar & Bench

ಸಂಸತ್ತಿನಲ್ಲಿ ವಕೀಲರ ಸಂಖ್ಯೆ ಕ್ಷೀಣಿಸುತ್ತಿರುವ ಬಗ್ಗೆ ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಎನ್‌ ವಿ ರಮಣ ಇತ್ತೀಚೆಗೆ ವಿಷಾದ ವ್ಯಕ್ತಪಡಿಸಿದರು.

ಹಿರಿಯ ನ್ಯಾಯವಾದಿ ಹಾಗೂ ಉಪರಾಷ್ಟ್ರಪತಿ ಜಗದೀಪ್ ಧನಕರ್ ಅವರ ಗೌರವಾರ್ಥ ಸುಪ್ರೀಂ ಕೋರ್ಟ್ ವಕೀಲರ ಸಂಘ ಸೋಮವಾರ ಆಯೋಜಿಸಿದ್ದ ಸಮಾರಂಭದಲ್ಲಿ ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಮಾತನಾಡಿದರು.

ಸ್ವಾತಂತ್ರ್ಯ ಸಂಗ್ರಾಮ, ಸಂವಿಧಾನ ರಚನಾ ಸಭೆಯಲ್ಲಿ ಹಾಗೂ ತನ್ನಆರಂಭಿಕ ದಿನಗಳಲ್ಲಿ ಸಂಸತ್ತು ಗಣನೀಯ ಸಂಖ್ಯೆಯಲ್ಲಿ ವಕೀಲರನ್ನು ಹೊಂದಿತ್ತು. ಪರಿಣಾಮ ಸಂವಿಧಾನ ಮತ್ತು ಕಾನೂನುಗಳು ದೋಷರಹಿತವಾಗಿದ್ದವು ಎಂದು ಸಿಜೆಐ ಒತ್ತಿ ಹೇಳಿದರು.

ತಮ್ಮ ಭಾಷಣದಲ್ಲಿ ಉಪರಾಷ್ಟ್ರಪತಿಯವರ ಬದುಕಿನ ಆರಂಭಿಕ ದಿನಗಳನ್ನು ಸಿಜೆಐ ನೆನೆದರು. ʼತಮ್ಮ ಹಳ್ಳಿಯಿಂದ ಆರು ಕಿಲೋಮೀಟರ್ ದೂರ ನಡೆದು ಶಾಲೆಗೆ ಹೋಗುತ್ತಿದ್ದರು. ತಮ್ಮ ಬೇರುಗಳೊಂದಿಗೆ ನೇರ ಸಂಪರ್ಕ ಹೊಂದಿದ್ದರು. ಗ್ರಾಮೀಣ ಜೀವನಕ್ಕೆ ಸಮಾನಾರ್ಥಕದಂತಿರುವ ಸರಳತೆ ಮತ್ತು ಕಠಿಣ ಪರಿಶ್ರಮ ಅವರ ನಿರಂತರ ಒಡನಾಡಿಗಳಾಗಿವೆ. ಗ್ರಾಮೀಣ ಹಿನ್ನೆಲೆಯ ಹೊರತಾಗಿಯೂ ಗಾಡ್‌ಫಾದರ್‌ ಇಲ್ಲದೆಯೂ ದೇಶದ ಎರಡನೇ ಅತ್ಯುನ್ನತ ಹುದ್ದೆಯನ್ನು ಅವರು ಏರುವಂತಾದದ್ದು ನಮ್ಮ ಪ್ರಜಾಪ್ರಭುತ್ವದ ಶಕ್ತಿ. ಅವರ ಉನ್ನತಿ ನಮ್ಮ ಆರೋಗ್ಯಕರ ಪ್ರಜಾಪ್ರಭುತ್ವದ ಪರಂಪರೆ ಮತ್ತು ಶ್ರೀಮಂತ ಸಾಂವಿಧಾನಿಕ ಮೌಲ್ಯಗಳಿಗೆ ಸಂದ ಗೌರವವಾಗಿದೆʼ ಎಂದು ಅವರು ಹೇಳಿದರು.

ಉಪರಾಷ್ಟ್ರಪತಿ ಧನಕರ್‌ ಅವರ ಅಧ್ಯಕ್ಷತೆಯಲ್ಲಿ ರಾಜ್ಯಸಭೆಯಲ್ಲಿ ಗುಣಮಟ್ಟದ ಚರ್ಚೆಗಳನ್ನು ನಾನು ಎದುರು ನೋಡುವೆ ಎಂದು ಅವರು ತಿಳಿಸಿದರು. ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರು ಉಪರಾಷ್ಟ್ರಪತಿಯವರ ಶೈಕ್ಷಣಿಕ ಪ್ರತಿಭೆ, ಹಾಸ್ಯ ಮತ್ತು ನಮ್ರತೆಯ ಬಗ್ಗೆ ಮಾತನಾಡಿದರು. ನೂತನ ಉಪರಾಷ್ಟ್ರಪತಿ ಸಂಸತ್ತಿಗೆ ಮತ್ತು ದೇಶಕ್ಕೆ ಆಸ್ತಿಯಾಗಲಿದ್ದಾರೆ ಎಂದು ಕೇಂದ್ರ ಕಾನೂನು ಸಚಿವ ಕಿರೆನ್‌ ರಿಜಿಜು ತಿಳಿಸಿದರು.