Karnataka High Court and doctor 
ಸುದ್ದಿಗಳು

ನರ್ಸ್‌ ಆತ್ಮಹತ್ಯೆ: ಅರಿವಳಿಕೆ ತಜ್ಞೆ ವಿರುದ್ಧದ ವಿಚಾರಣೆಗೆ ತಡೆ; ವೈದ್ಯನ ವಿರುದ್ಧದ ವಿಚಾರಣೆಗೆ ಹೈಕೋರ್ಟ್‌ ಅಸ್ತು

“ತನ್ನ ಹಾಗೂ ಅರ್ಜಿದಾರೆಯೊಂದಿಗೆ ವೈದ್ಯ ಅನೈತಿಕ ಸಂಬಂಧ ಹೊಂದಿರುವ ವಿಷಯವು ಶುಶ್ರೂಷಕಿಗೆ ತಿಳಿದಿತ್ತು. ಇದೇ ವಿಚಾರವಾಗಿ ಶುಶ್ರೂಷಕಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಘಟನೆಯಲ್ಲಿ ಅರಿವಳಿಕೆ ತಜ್ಞೆಯ ಪಾತ್ರ ಸೀಮಿತವಾಗಿದೆ” ಎಂದಿರುವ ನ್ಯಾಯಾಲಯ.

Bar & Bench

ಶುಶ್ರೂಷಕಿಯೊಬ್ಬರ ಆತ್ಮಹತ್ಯೆ ಪ್ರಕರಣದಲ್ಲಿ ಎರಡನೇ ಆರೋಪಿಯಾಗಿರುವ ಅರಿವಳಿಕೆ ತಜ್ಞೆಯ ವಿರುದ್ಧದ ಕ್ರಿಮಿನಲ್‌ ಪ್ರಕರಣಕ್ಕೆ ಸಂಬಂಧಿಸಿದ ವಿಚಾರಣಾಧೀನ ನ್ಯಾಯಾಲಯದ ವಿಚಾರಣೆಗೆ ಕರ್ನಾಟಕ ಹೈಕೋರ್ಟ್‌ ಈಚೆಗೆ ತಡೆ ನೀಡಿದೆ. ಮೊದಲನೇ ಆರೋಪಿಯಾಗಿರುವ ಮತ್ತು ಶುಶ್ರೂಷಕಿ ಹಾಗೂ ಅರಿವಳಿಕೆ ತಜ್ಞೆಯೊಂದಿಗೆ ಅನೈತಿಕ ಸಂಬಂಧ ಹೊಂದಿದ್ದ ವೈದ್ಯನ ವಿರುದ್ಧದ ವಿಚಾರಣೆಗೆ ಅನುಮತಿಸಿದೆ.

ಆತ್ಮಹತ್ಯೆಗೆ ಶರಣಾದ ಶುಶ್ರೂಷಕಿ ಬರೆದಿದ್ದ ಮರಣ ಪತ್ರ ಆಧರಿಸಿ ತಮ್ಮ ವಿರುದ್ಧ ಜೆ ಪಿ ನಗರ ಪ್ರದೇಶದ ಪುಟ್ಟೇನಹಳ್ಳಿ ಪೊಲೀಸ್‌ ಠಾಣೆಯಲ್ಲಿ ದಾಖಲಾಗಿರುವ ಎಫ್‌ಐಆರ್‌ ಮತ್ತು ಪ್ರಕರಣಕ್ಕೆ ಸಂಬಂಧಿಸಿದ ವಿಚಾರಣಾಧೀನ ನ್ಯಾಯಾಲಯದಲ್ಲಿನ ಪ್ರಕ್ರಿಯೆ ರದ್ದುಪಡಿಸುವಂತೆ ಕೋರಿ ಅಸ್ಸಾಂ ಮೂಲದ ಅರಿವಳಿಕೆ ತಜ್ಞೆ ಸಲ್ಲಿಸಿದ್ದ ಅರ್ಜಿ ವಿಚಾರಣೆಯನ್ನು ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ಪೀಠ ನಡೆಸಿತು.

“ತನ್ನ ಹಾಗೂ ಅರ್ಜಿದಾರೆಯೊಂದಿಗೆ ವೈದ್ಯ ಅನೈತಿಕ ಸಂಬಂಧ ಹೊಂದಿರುವ ವಿಷಯವು ಶುಶ್ರೂಷಕಿಗೆ ತಿಳಿದಿತ್ತು. ಇದೇ ವಿಚಾರವಾಗಿ ಶುಶ್ರೂಷಕಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಘಟನೆಯಲ್ಲಿ ಅರ್ಜಿದಾರೆಯಾದ ಅರಿವಳಿಕೆ ತಜ್ಞೆಯ ಪಾತ್ರ ಸೀಮಿತವಾಗಿದೆ. ವೈದ್ಯನೊಂದಿಗೆ ಅನೈತಿಕ ಸಂಬಂಧ ಹೊಂದಿರುವುದು ಬಿಟ್ಟರೆ ಅರ್ಜಿದಾರೆಯದು ಬೇರೆ ಯಾವುದೇ ಪಾತ್ರವಿಲ್ಲ. ಆದ್ದರಿಂದ, ಅರ್ಜಿದಾರೆಯ ವಿರುದ್ಧದ ವಿಚಾರಣೆಗೆ ತಡೆ ನೀಡಲಾಗುತ್ತಿದೆ” ಎಂದು ಪೀಠ ತಿಳಿಸಿದೆ.

ಆದರೆ, ಮೃತ ಶುಶ್ರೂಷಕಿ ಜೊತೆಗೆ ಅನೈತಿಕ ಸಂಬಂಧ ಹೊಂದಿದ್ದ ವೈದ್ಯ ಸೇರಿದಂತೆ ಪ್ರಕರಣದ ಇತರೆ ಆರೋಪಿಗಳ ವಿರುದ್ಧ ವಿಚಾರಣೆ ಮುಂದುವರಿಯಲಿದೆ ಎಂದು ಪೀಠ ಆದೇಶದಲ್ಲಿ ಸ್ಪಷ್ಟಪಡಿಸಿದೆ. ಅರ್ಜಿಯಲ್ಲಿ ಪ್ರತಿವಾದಿಗಳಾಗಿರುವ ಪುಟ್ಟೇನಹಳ್ಳಿ ಠಾಣಾ ಪೊಲೀಸರು ಹಾಗೂ ದೂರುದಾರರಾದ ಮೃತ ಶುಶ್ರೂಷಕಿ ತಾಯಿಗೆ ನೋಟಿಸ್‌ ಜಾರಿಗೊಳಿಸಿದ ಪೀಠ, ವಿಚಾರಣೆ ಮುಂದೂಡಿದೆ.

ಪ್ರಕರಣದ ಹಿನ್ನೆಲೆ: ಖಾಸಗಿ ಆಸ್ಪತ್ರೆಯ ವೈದ್ಯ ಪೃಥ್ವಿ, ಅದೇ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದ ಶುಶ್ರೂಷಕಿ ಹಾಗೂ ಅರವಳಿಕೆ ತಜ್ಞೆ (ಅರ್ಜಿದಾರೆ) ಜೊತೆಗೆ ಅನೈತಿಕ ಸಂಪರ್ಕ ಹೊಂದಿದ್ದರು. ಅರಿವಳಿಕೆ ತಜ್ಞೆಯೊಂದಿಗೆ ಸಂಬಂಧ ಹೊಂದಿರುವ ವಿಷಯ ತಿಳಿದ ಶುಶ್ರೂಷಕಿ, ಆ ಕುರಿತು ವೈದ್ಯನನ್ನು ಪ್ರಶ್ನಿಸಿದ್ದಾರೆ. ಆಗ ಇಬ್ಬರ ನಡುವೆ ಗಲಾಟೆಯಾಗಿದೆ. ಈ ವೇಳೆ ಶುಶ್ರೂಷಕಿ ಮೇಲೆ ವೈದ್ಯ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ. ಇದಾದ ಬಳಿಕ ಮನೆಯಲ್ಲಿ ಶುಶ್ರೂಷಕಿ ವೈದ್ಯನ ಹೆಸರು ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದರು.

ಇದರಿಂದ ತನ್ನ ಮಗಳ ಸಾವಿಗೆ ಕಾರಣವಾದ ವೈದ್ಯ ಹಾಗೂ ಅರವಳಿಕೆ ತಜ್ಞೆ ವಿರುದ್ಧ ಕಾನೂನು ಕ್ರಮ ಜರುಗಿಸುವಂತೆ ಶುಶ್ರೂಷಕಿ ತಾಯಿ ಪೊಲೀಸರಿಗೆ ದೂರು ನೀಡಿದ್ದರು. ಹೀಗಾಗಿ, ಒಂದನೇ ಆರೋಪಿಯಾಗಿ ವೈದ್ಯ, ಎರಡನೇ ಆರೋಪಿಯಾಗಿ ಅರಿವಳಿಕೆ ತಜ್ಞೆಯ ವಿರುದ್ಧ ಪ್ರಕರಣ ದಾಖಲಿಸಿದ್ದ ಪೊಲೀಸರು ತನಿಖೆ ಕೈಗೊಂಡಿದ್ದರು.