A1
A1
ಸುದ್ದಿಗಳು

ನ್ಯಾಯ ಸಂಸ್ಥೆಯಿಂದ ʼಸಂವಿಧಾನ್ ಫೆಲೋಶಿಪ್‌ʼಗೆ ಚಾಲನೆ

Bar & Bench

ನಾಗರಿಕರಿಗೆ ಸಾಂವಿಧಾನಿಕ ಹಕ್ಕುಗಳ ಬಗ್ಗೆ ಅರಿವು ಮೂಡಿಸುವ ಮೂಲಕ ಅಂತಹ ಹಕ್ಕುಗಳನ್ನು ಜಾರಿಗೊಳಿಸಲು ಜನರ ನಡುವೆ ಸೇತುವೆಯಾಗುವ ಉದ್ದೇಶದಿಂದ 'ನ್ಯಾಯ' ಸಂಸ್ಥೆ ಆರಂಭಿಸಿರುವ ಸಂವಿಧಾನ್‌ ಫೆಲೋಶಿಪ್‌ಗೆ ರಾಷ್ಟ್ರೀಯ ಕಾನೂನು ಸೇವೆಗಳ ದಿನವಾದ ಬುಧವಾರದಿಂದ ಚಾಲನೆ ದೊರೆತಿದೆ.  

ಇದೇ ವರ್ಷದ ಆಗಸ್ಟ್‌ನಲ್ಲಿ ಫೆಲೋಶಿಪ್‌ಗೆ ಅರ್ಜಿ ಆಹ್ವಾನಿಸಿದ್ದ ಸಂಸ್ಥೆಯು ಈಗ ಏಳು ಮಂದಿ ಅರ್ಹ ನ್ಯಾಯವಾದಿಗಳನ್ನು ಫೆಲೋಶಿಪ್‌ಗಾಗಿ ಆಯ್ಕೆ ಮಾಡಿದೆ. ಅವರ ವಿವರ ಇಂತಿದೆ: ಅಮೃತಾ ಶಿವಪ್ರಸಾದ್‌, ಗೀತಾ ಸಜ್ಜನಶೆಟ್ಟಿ, ಗಂಗಾಧರ ಡಿ ಎಸ್‌, ಗೀತಾ ಎಸ್‌ ಪಿ, ಜೈರಾಮ್‌ ಸಿದ್ದಿ, ಮನೋರಂಜನಿ ಥಾಮಸ್‌, ಶಿರಿಶಾ ಬಿ ರೆಡ್ಡಿ. 2ರಿಂದ 27 ವರ್ಷಗಳವರೆಗೆ ವೃತ್ತಿ ಅನುಭವ ಹೊಂದಿರುವ ವಕೀಲರು ಇವರಾಗಿದ್ದಾರೆ. ಹಿಂದುಳಿದ ಸಮುದಾಯಗಳ ಹಕ್ಕುಗಳು, ಮಕ್ಕಳ ಹಕ್ಕುಗಳು, ಮಹಿಳಾ ಹಕ್ಕುಗಳು, ಆಸ್ತಿ ಹಕ್ಕು ಇತ್ಯಾದಿ ಕ್ಷೇತ್ರಗಳಲ್ಲಿ ಆಸಕ್ತಿ ಇರುವವರನ್ನು ಫೆಲೋಶಿಪ್‌ಗೆ ಆಯ್ಕೆ ಮಾಡಲಾಗಿದೆ.

ಇವರೆಲ್ಲರೂ ಜಿಲ್ಲಾ ಮಟ್ಟದ ವಕೀಲರಾಗಿದ್ದು ಫಲಾನುಭವಿಗಳಿಗೆ ಅಗತ್ಯವಾದ ಕಾನೂನು ಮಾಹಿತಿ ರೂಪಿಸಿ ಪ್ರಸಾರ ಮಾಡಲು ನ್ಯಾಯ ತಂಡ ಮತ್ತು ಅದರ ಸಮುದಾಯ ಆಧಾರಿತ ಸಂಸ್ಥೆಗಳೊಂದಿಗೆ ಕೆಲಸ ಮಾಡಲಿದ್ದಾರೆ. ಆ ಮೂಲಕ ವಿವಿಧ ಭಾರತೀಯ ಕಾನೂನು ಮತ್ತು ಸರ್ಕಾರದ ಯೋಜನೆಗಳಡಿ ಒದಗಿಸಲಾದ ಹಕ್ಕುಗಳ ಬಗ್ಗೆ ಫಲಾನುಭವಿಗಳಿಗೆ ಅರಿವು ಮೂಡಿಸಲಿದ್ದಾರೆ. ಫಲಾನುಭವಿಗಳು ಎದುರಿಸುವ ಪ್ರಶ್ನೆಗಳಿಗೆ ಇವರು ಉತ್ತರ ನೀಡಲಿದ್ದಾರೆ. ಜೊತೆಗೆ ತಮ್ಮ ಹಕ್ಕುಗಳನ್ನು ಫಲಾನುಭವಿಗಳು ಚಲಾಯಿಸಲು ಇರುವ ಕಾನೂನು ವ್ಯವಸ್ಥೆಯನ್ನು ಶೋಧಿಸಲು ಅವರಿಗೆ ಸಹಾಯ ಮಾಡಲಿದ್ದಾರೆ. ಈ ಫೆಲೋಗಳಿಗೆ ದೇಶದೆಲ್ಲೆಡೆ ಇರುವ ಐನೂರಕ್ಕೂ ಹೆಚ್ಚು ಪ್ರಾಕ್ಟೀಸ್‌ ಮಾಡುತ್ತಿರುವ ವಕೀಲರು ಹಾಗೂ ಕಾನೂನು ವಿದ್ಯಾರ್ಥಿಗಳ ಮಾರ್ಗದರ್ಶನ ಮತ್ತು ಸಂಶೋಧನಾ ಬೆಂಬಲ ದೊರೆಯಲಿದೆ.

Nyaya Fellowship

ನ್ಯಾಯ ದೊರಕಿಸಿಕೊಡಬೇಕು ಎನ್ನುವುದು ಕಾನೂನು ಸೇವಾ ಸಂಸೈಗಳ ಧ್ಯೇಯವಾಕ್ಯವಾಗಿದೆ. ಕರ್ನಾಟಕ ರಾಜ್ಯ ಕಾನೂನು ಸೇವಾ ಪ್ರಾಧಿಕಾರ (ಕೆಎಸ್‌ಎಲ್‌ಎಸ್‌ಎ) ಮತ್ತು ʼನ್ಯಾಯʼ ಕಾನೂನು ಸಂಸ್ಥೆ ಕಾನೂನು ಅರಿವು ಮೂಡಿಸುವ ಸಲುವಾಗಿ ಅವಕಾಶ ವಂಚಿತ ಮತ್ತು ತಳವರ್ಗದವರಿಗೆ ಗುಣಮಟ್ಟದ ಕಾನೂನು ಸೇವೆ ಒದಗಿಸುವುದಕ್ಕಾಗಿ ಒಟ್ಟಿಗೆ ಸೇರಿ ಕೆಲಸ ಮಾಡಲು ಒಪ್ಪಂದ ಮಾಡಿಕೊಂಡಿರುವುದು ಶ್ಲಾಘನೀಯ ವಿಚಾರ ಎಂದು ಕೆಎಸ್‌ಎಲ್‌ಎಸ್‌ಎ ಸದಸ್ಯ ಕಾರ್ಯದರ್ಶಿ ಜೈಶಂಕರ್‌ ತಿಳಿಸಿದ್ದಾರೆ.

ನ್ಯಾಯ ಸಂಸ್ಥೆಯ ತಂಡ ಮುಖ್ಯಸ್ಥರಾದ ಅನೀಶಾ ಗೋಪಿ ಅವರು, “ಕಾನೂನು ಮಾಹಿತಿ ಸಂಕೀರ್ಣ ಪರಿಭಾಷೆಯಿಂದ ಕೂಡಿದ್ದು ಇಂಗ್ಲಿಷ್‌ನಲ್ಲಿದೆ. ದೇಶದ ಜನರಲ್ಲಿ ಒಟ್ಟು ಶೇ. ಹತ್ತು ಮಂದಿ ಮಾತ್ರ ಇದನ್ನು ಓದಬಹುದು ಹಾಗಾಗಿ ಕನ್ನಡದಲ್ಲಿ ಕಾನೂನು ವಿಷಯ ರೂಪಿಸಲು ಮತ್ತು ಕರ್ನಾಟಕದ ಅತಿ ದುರ್ಬಲ ಸಮುದಾಯಗಳಿಗೆ ಬೆಂಬಲ ಒದಗಿಸಲು ʼನ್ಯಾಯʼ ಸಂಸ್ಥೆಯೊಂದಿಗೆ ಕೆಲಸ ಮಾಡುವುದು ಬಹಳ ಒಳ್ಳೆಯ ವಿಚಾರ. ನಮ್ಮ ಫೆಲೋಗಳು ಸ್ಫೂರ್ತಿದಾಯಕವಾದ ವಕೀಲರ ವೈವಿಧ್ಯಮಯ ಗುಂಪಿಗೆ ಸೇರಿದವಾಗಿದ್ದಾರೆ. ಅವರು ತಮ್ಮ ಸಮುದಾಯಗಳಿಗೆ ನ್ಯಾಯ ವಿತರಣಾ ಕಾರ್ಯವಿಧಾನ ದೊರಕಿಸಿಕೊಡಲು ಸಹಾಯಕವಾಗುವಂತಹ ಬದಲಾವಣೆ ತರುತ್ತಾರೆ ಎಂದು ಭಾವಿಸುತ್ತೇವೆ” ಎಂಬುದಾಗಿ ತಿಳಿಸಿದ್ದಾರೆ.