Bombay High Court  
ಸುದ್ದಿಗಳು

ಮಹಿಳೆಯ ಘೋರ ದುರ್ನಡತೆಯನ್ನು ಕ್ಷಮಿಸಿದರೆ ಸ್ತ್ರೀ ಸಬಲೀಕರಣದ ಉದ್ದೇಶಕ್ಕೆ ಭಂಗ ಉಂಟಾಗುತ್ತದೆ: ಬಾಂಬೆ ಹೈಕೋರ್ಟ್

ನಿಯಮಗಳನ್ನು ಉಲ್ಲಂಘಿಸಿ ಗ್ರಾಮ ಸಮಿತಿಯ ಹಣ ಬಳಸಿಕೊಂಡು ದುರ್ವರ್ತನೆ ತೋರಿದ್ದ ಮಹಿಳಾ ಸರಪಂಚ್ ಒಬ್ಬರನ್ನು ಪದಚ್ಯುತಗೊಳಿಸುವ ಆದೇಶವನ್ನು ಹೈಕೋರ್ಟ್ ಎತ್ತಿ ಹಿಡಿದಿದೆ.

Bar & Bench

ಮಹಿಳಾ ಸರ್‌ಪಂಚ್‌ (ಗ್ರಾಮ ಪಂಚಾಯತ್‌ ಸದಸ್ಯರ) ಒಬ್ಬರ ಪದಚ್ಯುತಿಯನ್ನು ಇತ್ತೀಚೆಗೆ ಎತ್ತಿಹಿಡಿದಿರುವ ಬಾಂಬೆ ಹೈಕೋರ್ಟ್‌ ಆಕೆಯ ಲೋಪ ಅಥವಾ ದುರ್ವರ್ತನೆಯನ್ನು ಮನ್ನಿಸುವುದು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮಹಿಳಾ ಸಬಲೀಕರಣದ ಪರಿಕಲ್ಪನೆಯನ್ನು ಹತಾಶೆಗೊಳಿಸುತ್ತದೆ ಎಂದು ಹೇಳಿದೆ [ಸಂದೀಪ್‌ ರಮೇಶ್‌ ಖಿಡ್ಬಿಡೆ ಮತ್ತು ಪ್ರತಿಮಾ ಪ್ರಕಾಶ್ ಗಾಯಿಕರ್ ನಡುವಣ ಪ್ರಕರಣ].

ಮಹಿಳಾ ಸಬಲೀಕರಣದ ಪರಿಕಲ್ಪನೆಗೆ ವಿರುದ್ಧವಾಗಿದೆ ಎಂದು ತಿಳಿಸಿ ಆಕೆಯ ದುರ್ವರ್ತನೆಯನ್ನು ಕ್ಷಮಿಸಿದ್ದ  ಮಹಾರಾಷ್ಟ್ರದ ಗ್ರಾಮೀಣಾಭಿವೃದ್ಧಿ ಸಚಿವರ ಆದೇಶವನ್ನು ನ್ಯಾಯಮೂರ್ತಿ ಎನ್‌ ಜೆ ಜಮಾದಾರ್ ರದ್ದುಗೊಳಿಸಿದರು.

"ರಾಜಕೀಯ ಪ್ರಾತಿನಿಧ್ಯವನ್ನು ಒದಗಿಸುವ ಮೂಲಕ ಮಹಿಳೆಯ ಸಬಲೀಕರಣ ತಳಮಟ್ಟದಲ್ಲಿ ಪ್ರಜಾಪ್ರಭುತ್ವವನ್ನು ಬಲಪಡಿಸುವ ಪ್ರಮುಖ ಲಕ್ಷಣಗಳಲ್ಲಿ ಒಂದಾಗಿದೆ.  ಸ್ಥಳೀಯ ಸಂಸ್ಥೆಗಳಲ್ಲಿ ಮಹಿಳೆಯ ಭಾಗವಹಿಸುವಿಕೆಯು ಸಾರ್ವಜನಿಕ ಜೀವನದಲ್ಲಿ ಹೆಚ್ಚಿನ ಪ್ರಾತಿನಿಧ್ಯವನ್ನು  ಒದಗಿಸುವ ಮಾನದಂಡ ಎನ್ನಲಾಗಿದೆ. ಆದರೆ ಮಹಿಳಾ ಸಬಲೀಕರಣದ ನೆಪದಲ್ಲಿ ಮಹಿಳೆಯೊಬ್ಬರ ಘೋರ ದುರ್ನಡತೆ ಮನ್ನಿಸಿದರೆ ಅದರಿಂದ ಮಹಿಳಾ ಸಬಲೀಕರಣದ ಉದ್ದೇಶಕ್ಕೆ ಭಂಗ ಬರುತ್ತದೆ” ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.

ಪ್ರಜಾಸತ್ತಾತ್ಮಕವಾಗಿ ಆಯ್ಕೆಯಾದ ಮಹಿಳಾ ಸರಪಂಚರನ್ನು ಪದಚ್ಯುತಗೊಳಿಸುವುದು ಸ್ತ್ರೀ ಸಬಲೀಕರಣ ನೀತಿಗೆ ವಿರುದ್ಧವಾಗುತ್ತದೆ ಎಂದು ಗ್ರಾಮೀಣಾಭಿವೃದ್ಧಿ ಸಚಿವರು ನೀಡಿರುವ ಕಾರಣವನ್ನು ಒಪ್ಪಲು ಸಾಧ್ಯವಿಲ್ಲ ಎಂದು ನ್ಯಾಯಾಲಯ ಹೇಳಿದೆ.

ರಾಯಗಢ ಜಿಲ್ಲೆಯ ಅಂಬಿವಲಿ ಗ್ರಾಮದ ಸರಪಂಚ ಹುದ್ದೆಯಿಂದ ಪ್ರತಿಮಾ ಗಾಯಕರ್ ಅವರನ್ನು ವಜಾಗೊಳಿಸದಿರಲು 2022ರ ಮೇ 26ರಂದು ನಿರ್ಧರಿಸಿದ್ದ ಗ್ರಾಮೀಣಾಭಿವೃದ್ಧಿ ಸಚಿವರ ನಿರ್ಧಾರವನ್ನು ಪ್ರಶ್ನಿಸಿ ಅರ್ಜಿ ಸಲ್ಲಿಸಲಾಗಿತ್ತು.

ನಿಯಮಗಳನ್ನು ಉಲ್ಲಂಘಿಸಿ ಗ್ರಾಮ ಪಂಚಾಯತ್‌ ಹಣ ಬಳಸಿಕೊಂಡು ಗಾಯಕರ್ ದುರ್ವರ್ತನೆ ತೋರಿದ್ದ ಹಿನ್ನೆಲೆಯಲ್ಲಿ ಅವರನ್ನು ಹುದ್ದೆಯಿಂದ ವಜಾಗೊಳಿಸುವಂತೆ ನಿರ್ದೇಶಿಸಿ ವಿಭಾಗೀಯ ಆಯುಕ್ತರು 2022ರ ಏಪ್ರಿಲ್ 19 ರಂದು ಹೊರಡಿಸಿದ್ದ ಆದೇಶವನ್ನು ಸಚಿವರು ರದ್ದುಗೊಳಿಸಿದ್ದರು.