Karnataka High Court 
ಸುದ್ದಿಗಳು

ಬೀದಿ ನಾಯಿಗಳಿಗೆ ಮೈಕ್ರೊಚಿಪ್‌ ಅಳವಡಿಕೆಗೆ ಆಕ್ಷೇಪ: ಕೇಂದ್ರ, ರಾಜ್ಯ ಸರ್ಕಾರ, ಬಿಬಿಎಂಪಿಗೆ ನೋಟಿಸ್‌

ಭಾರತೀಯ ಪ್ರಾಣಿಗಳ ಕಲ್ಯಾಣ ಮಂಡಳಿ, ಕೇಂದ್ರೀಯ ಪ್ರಾಣಿಗಳ ಜನನ ನಿಯಂತ್ರಣ ನಿಗಾ ಸಮಿತಿಯನ್ನು ಬಿಬಿಎಂಪಿ ಸಂಪರ್ಕಿಸಿಲ್ಲ. ಬಿಬಿಎಂಪಿ ಕಾಯಿದೆಗೆ ವಿರುದ್ಧವಾಗಿ ಬಿಡ್‌ ಆಹ್ವಾನಿಸಲಾಗಿದೆ ಎಂದು ಆಕ್ಷೇಪಿಸಿದ ಅರ್ಜಿದಾರರು.

Bar & Bench

ಬೀದಿ ನಾಯಿಗಳಿಗೆ ಅಳವಡಿಸುವ ಮೈಕ್ರೊಚಿಪ್‌ ಪೂರೈಸಿಲು ಬಿಡ್‌ ಆಹ್ವಾನಿಸಿರುವ ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆಯ ಆದೇಶ ಪ್ರಶ್ನಿಸಿರುವ ಅರ್ಜಿಗೆ ಸಂಬಂಧಿಸಿದಂತೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಹಾಗೂ ಬಿಬಿಎಂಪಿಗೆ ಮಂಗಳವಾರ ಕರ್ನಾಟಕ ಹೈಕೋರ್ಟ್‌ ನೋಟಿಸ್‌ ಜಾರಿ ಮಾಡಿದೆ.

ಬಿಬಿಎಂಪಿಯು ಬೀದಿ ನಾಯಿಗಳಿಗೆ ಮೈಕ್ರೊಚಿಪ್‌ ಅಳವಡಿಕೆ ಮಾಡುತ್ತಿರುವುದು ಕಾನೂನಿಗೆ ವಿರುದ್ಧವಾಗಿದೆ. ಅಲ್ಲದೇ, ಪ್ರಾಣಿಗಳ ಜನನ ನಿಯಂತ್ರಣ ನಿಯಮಗಳಲ್ಲಿಯೂ ಅದಕ್ಕೆ ಅವಕಾಶವಿಲ್ಲ ಎಂದು ಆಕ್ಷೇಪಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ಎನ್‌ ವಿ ಅಂಜಾರಿಯಾ ಮತ್ತು ನ್ಯಾಯಮೂರ್ತಿ ಕೆ ವಿ ಅರವಿಂದ್‌ ಅವರ ವಿಭಾಗೀಯ ಪೀಠ ನಡೆಸಿತು.

ಅರ್ಜಿದಾರರನ್ನು ಪ್ರತಿನಿಧಿಸಿದ್ದ ವಕೀಲ ಕಿರೀಟ್‌ ಜವಳಿ ಅವರು “ಬಿಬಿಎಂಪಿಗೆ ಅಧಿಕಾರವಿಲ್ಲದಿದ್ದರೂ ಮೈಕ್ರೊಚಿಪ್‌ ಪೂರೈಕೆಗೆ ಬಿಡ್‌ ಆಹ್ವಾನಿಸಲಾಗಿದೆ. ಮೈಕ್ರೊಚಿಪ್‌ ಅಳವಡಿಸುವುದು ಸಾಕು ನಾಯಿಗಳಿಗೆ ಮಾತ್ರ. ಬೀದಿನಾಯಿಗಳನ್ನು ನಿಯಂತ್ರಿಸುವ ಉದ್ದೇಶದಿಂದ ಮೈಕ್ರೊಚಿಪ್‌ ಅಳವಡಿಕೆಯ ಪ್ರಾಯೋಗಿಕ ಯೋಜನೆ ನಡೆಸಲಾಗುತ್ತಿದೆ. ಸ್ಥಳೀಯವಾಗಿ ಪ್ರಾಣಿಗಳ ಜನನ ನಿಯಂತ್ರಣ ಸಮಿತಿಯನ್ನು ರಚಿಸಬೇಕು. ಅದು ತಿಂಗಳಿಗೊಮ್ಮೆ ಸಭೆ ನಡೆಸಬೇಕು ಎಂದು ಹೇಳಲಾಗಿದೆ. ಆದರೆ, ಅದನ್ನೂ ಮಾಡಿಲ್ಲ” ಎಂದು ಆರೋಪಿಸಿದರು.

“ಭಾರತೀಯ ಪ್ರಾಣಿಗಳ ಕಲ್ಯಾಣ ಮಂಡಳಿ, ಕೇಂದ್ರೀಯ ಪ್ರಾಣಿಗಳ ಜನನ ನಿಯಂತ್ರಣ ನಿಗಾ ಸಮಿತಿಯನ್ನು ಬಿಬಿಎಂಪಿ ಸಂಪರ್ಕಿಸಿಲ್ಲ. ಬಿಬಿಎಂಪಿ ಕಾಯಿದೆಗೆ ವಿರುದ್ಧವಾಗಿ ಬಿಡ್‌ ಆಹ್ವಾನಿಸಲಾಗಿದೆ” ಎಂದು ಆಕ್ಷೇಪಿಸಿದರು.

ಆಗ ಬಿಬಿಎಂಪಿ ಪರ ವಕೀಲರು ಸಂಬಂಧಿತರಿಂದ ಸೂಚನೆ ಪಡೆದು ವಾದ ಮಂಡಿಸಲಾಗುವುದು ಎಂದರು. ಈ ಹಿನ್ನೆಲೆಯಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರ ಹಾಗೂ ಬಿಬಿಎಂಪಿಗೆ ನೋಟಿಸ್‌ ಜಾರಿ ಮಾಡಿದ ನ್ಯಾಯಾಲಯವು ವಿಚಾರಣೆಯನ್ನು ಡಿಸೆಂಬರ್‌ 14ಕ್ಕೆ ಮುಂದೂಡಿತು.