Congress MLA Satish Sail & Karnataka HC 
ಸುದ್ದಿಗಳು

ಶಾಸಕ ಸತೀಶ್‌ ಸೈಲ್‌ ವೈದ್ಯಕೀಯ ಜಾಮೀನಿಗೆ ಆಕ್ಷೇಪ: ಅಫಿಡವಿಟ್‌ ಸಲ್ಲಿಸಲು ಇ ಡಿಗೆ ಹೈಕೋರ್ಟ್‌ ನಿರ್ದೇಶನ

ಇ ಡಿ ಸೂಚನೆಯಂತೆ ಮೂರು ಆಸ್ಪತ್ರೆಗಳಲ್ಲಿ ಸೈಲ್‌ ಅವರನ್ನು ಆರೋಗ್ಯ ತಪಾಸಣೆಗೆ ಒಳಪಡಿಸಿ, ಮೌಲ್ಯಮಾಪನ ವರದಿ ಪಡೆಯಲಾಗಿದೆ. ಅದಾಗ್ಯೂ, ಇ ಡಿ ವಿನಾ ಕಾರಣ ಕಾಲಹರಣ ಮಾಡುತ್ತಿದೆ ಎಂದು ಆಕ್ಷೇಪಿಸಿದ ಹಿರಿಯ ವಕೀಲ ಸಂದೇಶ್‌ ಚೌಟ.

Bar & Bench

ಬೇಲೆಕೇರಿ ಬಂದರಿನಿಂದ ಅಕ್ರಮವಾಗಿ ಅದಿರು ಸಾಗಣೆ ಮತ್ತು ಮಾರಾಟ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಅಕ್ರಮ ಹಣ ವರ್ಗಾವಣೆ ಆರೋಪ ಎದುರಿಸುತ್ತಿರುವ ಕಾಂಗ್ರೆಸ್‌ ಶಾಸಕ ಸತೀಶ್‌ ಸೈಲ್‌ ಅವರ ಆರೋಗ್ಯ ತಪಾಸಣೆಗೆ ಸಂಬಂಧಿಸಿದಂತೆ ಈಗಾಗಲೇ ಸಲ್ಲಿಸಲಾಗಿರುವ ವೈದ್ಯಕೀಯ ದಾಖಲೆಗಳ ಬಗ್ಗೆ ಅನುಮಾನಗಳಿದ್ದರೆ ನ್ಯಾಯಾಲಯಕ್ಕೆ ಅಫಿಡವಿಟ್‌ ಸಲ್ಲಿಸುವಂತೆ ಜಾರಿ ನಿರ್ದೇಶನಾಲಯಕ್ಕೆ (ಇ ಡಿ) ಕರ್ನಾಟಕ ಹೈಕೋರ್ಟ್‌ ಈಚೆಗೆ ನಿರ್ದೇಶಿಸಿದೆ.

ಸತೀಶ್‌ ಸೈಲ್‌ ಸಲ್ಲಿಸಿರುವ ಕ್ರಿಮಿನಲ್ ಅರ್ಜಿಯನ್ನು ನ್ಯಾಯಮೂರ್ತಿ ಎಸ್‌ ಸುನೀಲ್‌ ದತ್‌ ಯಾದವ್ ಅವರಿದ್ದ ಏಕಸದಸ್ಯ ಪೀಠ ವಿಚಾರಣೆ ನಡೆಸಿತು.

ಇ ಡಿ ಪರ ಹೆಚ್ಚುವರಿ ಸಾಲಿಸಿಟರ್‌ ಜನರಲ್‌ ಕೆ ಅರವಿಂದ ಕಾಮತ್‌ ಅವರು “ಅರ್ಜಿದಾರರನ್ನು ದೆಹಲಿಯ ಏಮ್ಸ್‌ಗೆ ಕರೆದುಕೊಂಡು ಹೋಗಬೇಕೊ ಅಥವಾ ಏಮ್ಸ್‌ ವೈದ್ಯರನ್ನು ಇಲ್ಲಿಗೆ ಕರೆಸಿ ಸೈಲ್‌ ಅವರ ಆರೋಗ್ಯ ತಪಾಸಣೆ ನಡೆಸಬೇಕೋ ಎಂಬುದರ ಕುರಿತು ಸಮನ್ವಯ ಸಾಧಿಸಬೇಕಿದೆ. ಆದ್ದರಿಂದ, ಅದಕ್ಕಾಗಿ ಇನ್ನಷ್ಟು ಸಮಯಾವಕಾಶ ನೀಡಬೇಕು” ಎಂದು ಮನವಿ ಮಾಡಿದರು.

ಇದಕ್ಕೆ ಸೈಲ್ ಪರ ಹಿರಿಯ ವಕೀಲ ಸಂದೇಶ್‌ ಚೌಟ ಅವರು ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. “ಅರ್ಜಿದಾರರನ್ನು ಕೇಂದ್ರ ಸರ್ಕಾರದ ಅಧೀನದಲ್ಲಿರುವ ಇಎಸ್‌ಐ ಆಸ್ಪತ್ರೆಯಲ್ಲೇ ತಪಾಸಣೆಗೆ ಒಳಪಡಿಸಿ ಆರೋಗ್ಯ ಮೌಲ್ಯಮಾಪನದ ದಾಖಲೆಗಳನ್ನು ಪಡೆಯಲಾಗಿದೆ. ಹೀಗಿರುವಾಗ ಪುನಾ ಅವರನ್ನು ದೆಹಲಿಗೆ ಕರೆದೊಯ್ದು ತಪಾಸಣೆಗೆ ಒಳಪಡಿಸಬೇಕು ಎಂಬ ವಾದ ಸರಿಯಲ್ಲ. ಬೇಕಾದರೆ ಈ ದಾಖಲೆಗಳು ಸುಳ್ಳು ಎಂದು ಇ ಡಿ ಹೇಳಲಿ” ಎಂದು ಆಕ್ಷೇಪಿಸಿದರು.

ಮುಂದುವರೆದು, ಇ ಡಿ ಸೂಚನೆಯಂತೆ ಮೂರು ಆಸ್ಪತ್ರೆಗಳಲ್ಲಿ ಸೈಲ್‌ ಅವರನ್ನು ಆರೋಗ್ಯ ತಪಾಸಣೆಗೆ ಒಳಪಡಿಸಿ, ಮೌಲ್ಯಮಾಪನ ವರದಿ ಪಡೆಯಲಾಗಿದೆ. ಅದಾಗ್ಯೂ, ಇ ಡಿ ವಿನಾ ಕಾರಣ ಕಾಲಹರಣ ಮಾಡುತ್ತಿದೆ ಎಂದು ಪ್ರತಿಭಟಿಸಿದರು.

ಆಗ ಪೀಠವು ಎಎಸ್‌ಜಿ ಕಾಮತ್‌ ಅವರನ್ನು ಕುರಿತು “ಇದು ತರವಲ್ಲ” ಎಂದು ಅಸಮಾಧಾನ ವ್ಯಕ್ತಪಡಿಸಿತು. “ಅರ್ಜಿದಾರರು ಸಲ್ಲಿಸಿರುವ ದಾಖಲೆಗಳ ಬಗ್ಗೆ ಅನುಮಾನಗಳಿದ್ದರೆ ಅದಕ್ಕಾಗಿ ಅಫಿಡವಿಟ್‌ ಸಲ್ಲಿಸಬೇಕು ಎಂದು ನಿರ್ದೇಶಿಸಿ ಮಧ್ಯಂತರ ವೈದ್ಯಕೀಯ ಜಾಮೀನು ವಿಸ್ತರಿಸಿ, ವಿಚಾರಣೆಯನ್ನು ಇದೇ 11ಕ್ಕೆ ಮುಂದೂಡಿತು.

ಅಕ್ರಮ ಹಣ ವರ್ಗಾವಣೆ ಆರೋಪದಡಿ ಇ ಡಿ ದಾಖಲಿಸಿರುವ ಇಸಿಐಆರ್‌ಗೆ (ಜಾರಿ ನಿರ್ದೇಶನಾಲಯ ಪ್ರಕರಣದ ಮಾಹಿತಿ ವರದಿ) ಸಂಬಂಧಿಸಿದಂತೆ ಶಾಸಕ ಸೈಲ್‌ಗೆ ನೀಡಲಾಗಿದ್ದ ಮಧ್ಯಂತರ ವೈದ್ಯಕೀಯ ಜಾಮೀನನ್ನು ಜನಪ್ರತಿನಿಧಿಗಳ ಸತ್ರ ನ್ಯಾಯಾಲಯ ರದ್ದುಪಡಿಸಿ, ಜಾಮೀನು ರಹಿತ ಬಂಧನದ ವಾರಂಟ್‌ ಹೊರಡಿಸಿದೆ. ಜಠರ ಮತ್ತು ಕರುಳಿಗೆ ಸಂಬಂಧಿಸಿದ ಕಾಯಿಲೆಯಿಂದ ಬಳಲುತ್ತಿದ್ದು ಹೆಚ್ಚಿನ ಚಿಕಿತ್ಸೆಗಾಗಿ ನಿಯಮಿತ (ರೆಗ್ಯುಲರ್‌) ಜಾಮೀನು ನೀಡಬೇಕು ಎಂದು ಸೈಲ್‌ ಕೋರಿದ್ದಾರೆ.