High Court of Karnataka 
ಸುದ್ದಿಗಳು

ಜನವಸತಿ ಪ್ರದೇಶದಲ್ಲಿ ಎಲ್‌ಪಿಜಿ ಭರ್ತಿ ಘಟಕ ಸ್ಥಾಪನೆಗೆ ಆಕ್ಷೇಪ: ಕೇಂದ್ರ, ರಾಜ್ಯ ಸರ್ಕಾರಗಳಿಗೆ ಹೈಕೋರ್ಟ್‌ ನೋಟಿಸ್‌

ಮುಳ್ಳುಸೋಗೆ ವಸತಿ ಬಡಾವಣೆಯಲ್ಲಿ ನಿಯಮಗಳನ್ನು ಉಲ್ಲಂಘಿಸಿ ಎಲ್‌ಪಿಜಿ ವಿತರಣಾ ಘಟಕವನ್ನು ಆರಂಭಿಸಲಾಗುತ್ತಿದೆ. ಈ ಜಾಗಕ್ಕೆ ಹೊಂದಿಕೊಂಡಂತೆ ಚರ್ಚ್‌ ಕೂಡಾ ಇದೆ. ಇದರಿಂದ ಸ್ಥಳೀಯ ನಿವಾಸಿಗಳಿಗೆ ಸಾಕಷ್ಟು ತೊಂದರೆ ಉಂಟಾಗಲಿದೆ ಎಂದು ಆಕ್ಷೇಪ.

Bar & Bench

ಕೊಡಗಿನ ಕುಶಾಲನಗರದ ವಸತಿ ಪ್ರದೇಶದಲ್ಲಿ ಆಟೊ ರಿಕ್ಷಾಗಳಿಗೆ ಎಲ್‌ಪಿಜಿ (ದ್ರವೀಕೃತ ಪೆಟ್ರೊಲಿಯಂ ಅನಿಲ) ಭರ್ತಿ ಮಾಡುವ ಘಟಕ ಸ್ಥಾಪನೆಯನ್ನು ಪ್ರಶ್ನಿಸಲಾದ ಅರ್ಜಿಗೆ ಸಂಬಂಧಿಸಿದಂತೆ ಕೇಂದ್ರ ಹಾಗೂ ರಾಜ್ಯ ಸರ್ಕಾರಕ್ಕೆ ಕರ್ನಾಟಕ ಹೈಕೋರ್ಟ್‌ ಬುಧವಾರ ಆದೇಶಿಸಿದೆ.

ಕುಶಾಲನಗರದ ಮುಳ್ಳುಸೋಗೆಯ ಯು ಎಂ ಲಕ್ಷ್ಮಣ್‌ ಸೇರಿದಂತೆ ಸ್ಥಳೀಯ ಐವರು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ನ್ಯಾಯಮೂರ್ತಿಗಳಾದ ಎಸ್‌ ಜಿ ಪಂಡಿತ್‌ ಮತ್ತು ಎಸ್‌ ರಾಚಯ್ಯ ಅವರ ರಜಾಕಾಲೀನ ವಿಭಾಗೀಯ ಪೀಠ ಬುಧವಾರ ವಿಚಾರಣೆ ನಡೆಸಿತು.

ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲ ಎನ್‌ ಪಿ ಅಮೃತೇಶ್‌ ಅವರು ಮುಳ್ಳುಸೋಗೆ ವಸತಿ ಬಡಾವಣೆಯಲ್ಲಿ ನಿಯಮಗಳನ್ನು ಉಲ್ಲಂಘಿಸಿ ಎಲ್‌ಪಿಜಿ ವಿತರಣಾ ಘಟಕವನ್ನು ಆರಂಭಿಸಲಾಗುತ್ತಿದೆ. ಈ ಜಾಗಕ್ಕೆ ಹೊಂದಿಕೊಂಡಂತೆ ಚರ್ಚ್‌ ಕೂಡಾ ಇದೆ. ಇದರಿಂದ ಸ್ಥಳೀಯ ನಿವಾಸಿಗಳಿಗೆ ಸಾಕಷ್ಟು ತೊಂದರೆ ಉಂಟಾಗಲಿದೆ. ಆದ್ದರಿಂದ, ಘಟಕ ಸ್ಥಾಪನೆಗೆ ನೀಡಿರುವ ನಿರಾಕ್ಷೇಪಣ ಪತ್ರ (ಎನ್‌ಒಸಿ) ಹಾಗೂ ಪರವಾನಗಿ ವಾಪಸು ಪಡೆದುಕೊಳ್ಳುವಂತೆ ಸಕ್ಷಮ ಪ್ರಾಧಿಕಾರಗಳಿಗೆ ನಿರ್ದೇಶಿಸಬೇಕು ಎಂದು ಮನವಿ ಮಾಡಿದರು.

ಇದನ್ನು ಪುರಸ್ಕರಿಸಿದ ಪೀಠವು ಕೇಂದ್ರ ಪೆಟ್ರೋಲಿಯಂ ಮತ್ತು ವಾಣಿಜ್ಯ ಸಚಿವಾಲಯ ಹಾಗೂ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಸೇರಿದಂತೆ ಪ್ರಕರಣದ ಎಲ್ಲ ಪ್ರತಿವಾದಿಗಳಿಗೆ ನೋಟಿಸ್ ಜಾರಿಗೊಳಿಸಲು ಆದೇಶಿಸಿ ಆಕ್ಷೇಪಣೆ ಸಲ್ಲಿಸುವಂತೆ ಸೂಚಿಸಿತು. ವಿಚಾರಣೆಯನ್ನು ಇದೇ 21ಕ್ಕೆ ಮುಂದೂಡಲಾಗಿದೆ.