Karnataka High Court 
ಸುದ್ದಿಗಳು

ಕೆಆರ್‌ಎಸ್‌ ಸಮೀಪ ಥೀಮ್‌ ಪಾರ್ಕ್‌ ನಿರ್ಮಾಣ ಟೆಂಡರ್‌ಗೆ ಆಕ್ಷೇಪ: ಕೇಂದ್ರ, ರಾಜ್ಯ ಸರ್ಕಾರಗಳಿಗೆ ಹೈಕೋರ್ಟ್‌ ನೋಟಿಸ್‌

ಮಂಡ್ಯ ಜಿಲ್ಲೆ ರೈತ ಹಿತರಕ್ಷಣಾ ಸಮಿತಿ ಸಂಘಟನಾ ಕಾರ್ಯದರ್ಶಿ ಸುನಂದಾ ಜಯರಾಂ 2024ರ ಸೆ. 2ರಂದು ಮುಖ್ಯಮಂತ್ರಿಯವರಿಗೆ ನೀಡಿರುವ ಮನವಿಯ ಅನುಸಾರ ಉದ್ದೇಶಿತ ಯೋಜನೆಯನ್ನು ಕೈಬಿಡುವಂತೆ ಸರ್ಕಾರಕ್ಕೆ ನಿರ್ದೇಶಿಸಬೇಕು ಎಂಬುದು ಅರ್ಜಿದಾರರ ಮನವಿ.

Bar & Bench

ಮಂಡ್ಯ ಜಿಲ್ಲೆಯ ಕೆಆರ್‌ಎಸ್‌ ಅಣೆಕಟ್ಟೆ ಸುತ್ತಮುತ್ತಲ ಪ್ರದೇಶದ 198 ಎಕರೆ ಕೃಷಿ ಜಮೀನು ವಶಪಡಿಸಿಕೊಂಡು, ಅಲ್ಲಿ ₹2,615 ಕೋಟಿಗೂ ಹೆಚ್ಚಿನ ವೆಚ್ಚದಲ್ಲಿ ಅಮ್ಯೂಸ್‌ಮೆಂಟ್‌ ಮತ್ತು ಥೀಮ್‌ ಪಾರ್ಕ್‌ (ಮನೋರಂಜನ ಉದ್ಯಾನ) ನಿರ್ಮಿಸುವ ಉದ್ದೇಶದಿಂದ ಕರೆಯಲಾಗಿರುವ ಟೆಂಡರ್‌ ಅಧಿಸೂಚನೆ ಪ್ರಶ್ನಿಸಲಾದ ಅರ್ಜಿಗೆ ಸಂಬಂಧಿಸಿದಂತೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ಮಂಗಳವಾರ ಕರ್ನಾಟಕ ಹೈಕೋರ್ಟ್‌ ನೋಟಿಸ್‌ ಜಾರಿಗೊಳಿಸಿದೆ.

ಟೆಂಡರ್‌ ಪ್ರಶ್ನಿಸಿ ಮಂಡ್ಯ ತಾಲ್ಲೂಕಿನ ಗೋಪಾಲಪುರ ಗ್ರಾಮದ ಕೃಷಿಕ ಕೆ ಬೋರಯ್ಯ ಸೇರಿದಂತೆ ಒಟ್ಟು ಐವರು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ನ್ಯಾಯಮೂರ್ತಿಗಳಾದ ಬಿ ಎಂ ಶ್ಯಾಮ್‌ಪ್ರಸಾದ್‌ ಮತ್ತು ಕೆ ವಿ ಅರವಿಂದ್‌ ಅವರ ನೇತೃತ್ವದ ರಜಾಕಾಲೀನ ವಿಭಾಗೀಯ ಪೀಠ ವಿಚಾರಣೆ ನಡೆಸಿತು.

ಅರ್ಜಿದಾರರ ಪರ ಹಿರಿಯ ವಕೀಲ ಎಂ ಶಿವಪ್ರಕಾಶ್‌ ಅವರು “ಉದ್ದೇಶಿತ ಅಮ್ಯೂಸ್‌ಮೆಂಟ್‌ ಮತ್ತು ಥೀಮ್‌ ಪಾರ್ಕ್‌ ನಿರ್ಮಾಣದಿಂದ ರಾಜ್ಯದ ಪ್ರತಿಷ್ಠೆಯ ಸಂಕೇತವಾಗಿರುವ ಮತ್ತು ಕೋಟ್ಯಂತರ ರೈತರ ಜೀವನಾಡಿಯಾದ ಕೆಆರ್‌ಎಸ್‌ ಅಣೆಕಟ್ಟೆಗೆ ಧಕ್ಕೆ ಉಂಟಾಗಲಿದೆ. ಹೀಗಾಗಿ, ನ್ಯಾಯಾಲಯ ನೀಡುವ ಮುಂದಿನ ಆದೇಶದವರೆಗೆ ಟೆಂಡರ್‌ ಅಧಿಸೂಚನೆಗೆ ಸಂಬಂಧಿಸಿದ ಎಲ್ಲ ಪ್ರಕ್ರಿಯೆಗಳಿಗೆ ತಡೆ ನೀಡಬೇಕು” ಎಂದು ಕೋರಿದರು.

ಇದನ್ನು ಪುರಸ್ಕರಿಸಿದ ಪೀಠವು “ಟೆಂಡರ್‌ ಅಧಿಸೂಚನೆಯಲ್ಲಿ ಪ್ರಸ್ತಾಪಿಸಲಾಗಿರುವ ಸಾರ್ವಜನಿಕ ಖಾಸಗಿ ಸಹಭಾಗಿತ್ವದ (ಪಿಪಿಪಿ) ಯೋಜನೆಯ ರೂಪುರೇಷೆಗಳೇನು ಎಂಬುದನ್ನು ಮುಂದಿನ ವಿಚಾರಣೆಯಲ್ಲಿ ನ್ಯಾಯಾಲಯಕ್ಕೆ ಹಾಜರುಪಡಿಸಿ” ಎಂದು ರಾಜ್ಯ ಸರ್ಕಾರದ ಪರ ವಕೀಲರಿಗೆ ಮೌಖಿಕವಾಗಿ ನಿರ್ದೇಶಿಸಿತು. ಅಂತೆಯೇ, ಕೇಂದ್ರ ಜಲಶಕ್ತಿ ಸಚಿವಾಲಯದ ಕಾರ್ಯದರ್ಶಿ, ರಾಷ್ಟ್ರೀಯ ಅಣೆಕಟ್ಟೆ ಸುರಕ್ಷಾ ಪ್ರಾಧಿಕಾರದ ಅಧ್ಯಕ್ಷ ಮತ್ತು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಸೇರಿದಂತೆ ಒಟ್ಟು 17 ಪ್ರತಿವಾದಿಗಳಿಗೆ ನೋಟಿಸ್ ಜಾರಿಗೊಳಿಸಿ, ವಿಚಾರಣೆಯನ್ನು ಜೂನ್‌ 9ಕ್ಕೆ ಮುಂದೂಡಿತು.

ಅರ್ಜಿಯಲ್ಲಿ ಏನಿದೆ? ಉದ್ದೇಶಿತ ಮನೋರಂಜನಾ ಪಾರ್ಕ್‌ನಿಂದ ಕೆಆರ್‌ಎಸ್‌ ಅಣೆಕಟ್ಟೆಯ ಸುರಕ್ಷತೆಗೆ ತೀವ್ರ ಧಕ್ಕೆ ಉಂಟಾಗಲಿದೆ. ಸುತ್ತಮುತ್ತಲಿನ ಫಲವತ್ತಾದ 198 ಎಕರೆ ಕೃಷಿ ಜಮೀನನ್ನು ಇದಕ್ಕಾಗಿ ವಶಪಡಿಸಿಕೊಂಡರೆ ಇಲ್ಲಿರುವ ಜೀವವೈವಿಧ್ಯ ಮತ್ತು ಪರಿಸರ ಸಂರಕ್ಷಣೆಗೆ ಇನ್ನಿಲ್ಲದ ಹಾನಿಯಾಗಲಿದೆ. ಅಭಿವೃದ್ಧಿಯ ಹೆಸರಿನಲ್ಲಿ ವ್ಯಾಪಕವಾದ ವಾಣಿಜ್ಯ ಚಟುವಟಿಕೆಗಳಿಗೆ ಇಂಬು ನೀಡುವ ಮೂಲಕ ಸುತ್ತಲಿನ ಪರಿಸರದ ಅಸಮತೋಲನಕ್ಕೆ ದಾರಿ ಮಾಡಿಕೊಟ್ಟಂತಾಗುತ್ತದೆ’ ಎಂದು ಅರ್ಜಿದಾರರು ಟೆಂಡರ್‌ ಪ್ರಕ್ರಿಯೆಯನ್ನು ಬಲವಾಗಿ ಆಕ್ಷೇಪಿಸಿದ್ದಾರೆ.

ಈ ಟೆಂಡರ್ ಘೋಷಣೆ ಏಕಪಕ್ಷೀಯವಾಗಿದೆ. ರಾಜ್ಯ ಸರ್ಕಾರ ರಾಷ್ಟ್ರೀಯ ಅಣೆಕಟ್ಟೆ ಸುರಕ್ಷಾ ಪ್ರಾಧಿಕಾರದಿಂದ ಯಾವುದೇ ಪೂರ್ವಾನುಮತಿ ಪಡೆದಿರುವುದಿಲ್ಲ. ಈ ಪಾರ್ಕ್‌ ನಿರ್ಮಾಣದಿಂದ ಆಗಲಿರುವ ಲಾಭ–ನಷ್ಟಗಳನ್ನೂ ಸಾರ್ವಜನಿಕರ ಅವಗಾಹನೆಗೂ ತಂದಿರುವುದಿಲ್ಲ. ಈ ದಿಸೆಯಲ್ಲಿ ರಾಜ್ಯ ಸರ್ಕಾರ ಮತ್ತು ನೀರಾವರಿ ನಿಗಮವು ಇದೇ ಹೈಕೋರ್ಟ್‌ ಮುಖ್ಯ ನ್ಯಾಯಮೂರ್ತಿಯಾಗಿದ್ದ ಪಿ ಬಿ ವರಾಳೆ ಮತ್ತು ಕೃಷ್ಣ ಎಸ್‌.ದೀಕ್ಷಿತ್‌ ಅವರ ವಿಭಾಗೀಯ ಪೀಠದ ಆದೇಶವನ್ನು ಸ್ಪಷ್ಟವಾಗಿ ಉಲ್ಲಂಘಿಸಿದೆ ಎಂದು ಆರೋಪಿಸಿದ್ದಾರೆ.

ರಾಜ್ಯ ಸರ್ಕಾರ ಅಮ್ಯೂಸ್‌ಮೆಂಟ್‌ ಮತ್ತು ಥೀಮ್‌ ಪಾರ್ಕ್‌ (ಮನೋರಂಜನ ಉದ್ಯಾನ) ನಿರ್ಮಾಣದ ಉದ್ದೇಶಕ್ಕಾಗಿ 2024ರ ಸೆಪ್ಟೆಂಬರ್‌ ಮತ್ತು ಡಿಸೆಂಬರ್‌ನಲ್ಲಿ ಎರಡು ಬಾರಿ ಟೆಂಡರ್‌ ಆಹ್ವಾನಿಸಿತ್ತು. ಆದರೆ, ಇದಕ್ಕೆ ಸ್ಥಳಿಯ ರೈತ ಸಂಘ ಮತ್ತು ಕೃಷಿಕರಿಂದ ತೀವ್ರ ವಿರೋಧ ವ್ಯಕ್ತವಾದ ಬೆನ್ನಲ್ಲೇ ಈಗ ಕೆಆರ್‌ಎಸ್‌ ಅಣೆಕಟ್ಟೆ ಅಧೀನದಲ್ಲಿರುವ ಕಾವೇರಿ ಬೃಂದಾವನ ಉದ್ಯಾನವನದ ಅಭಿವೃದ್ಧಿ, ಉಸ್ತುವಾರಿ, ನಿರ್ವಹಣೆ ಹೆಸರಿನಲ್ಲಿ 2025ರ ಮಾರ್ಚ್ 15ರಂದು ₹2615.96 ಕೋಟಿ ಮೊತ್ತದ ಬೃಹತ್‌ ಟೆಂಡರ್‌ ಕರೆಯಲಾಗಿದೆ ಎಂದು ಅರ್ಜಿದಾರರು ಆರೋಪಿಸಿದ್ದಾರೆ.

ಮಂಡ್ಯ ಜಿಲ್ಲೆ ರೈತ ಹಿತರಕ್ಷಣಾ ಸಮಿತಿ ಸಂಘಟನಾ ಕಾರ್ಯದರ್ಶಿ ಸುನಂದಾ ಜಯರಾಂ ಅವರು 2024ರ ಸೆಪ್ಟೆಂಬರ್ 2ರಂದು ಮುಖ್ಯಮಂತ್ರಿಯವರಿಗೆ ನೀಡಿರುವ ಮನವಿಯ ಅನುಸಾರ ಉದ್ದೇಶಿತ ಯೋಜನೆಯನ್ನು ಕೈಬಿಡುವಂತೆ ಸರ್ಕಾರಕ್ಕೆ ನಿರ್ದೇಶಿಸಬೇಕು ಎಂದು ಅರ್ಜಿದಾರರು ಕೋರಿದ್ದಾರೆ.