ಸುದ್ದಿಗಳು

ಅಶ್ಲೀಲ ಪದ ಬಳಕೆ ಪ್ರಕರಣ: ಸಿ ಟಿ ರವಿ ವಿರುದ್ಧದ ವಿಚಾರಣಾ ನ್ಯಾಯಾಲಯದ ಪ್ರಕ್ರಿಯೆಗೆ ಹೈಕೋರ್ಟ್‌ ತಡೆ

ಪ್ರಕರಣದಲ್ಲಿ ದೂರುದಾರೆಯಾಗಿರುವ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‌ ಅವರಿಗೆ ಹ್ಯಾಂಡ್‌ ಸಮನ್ಸ್‌ ಜಾರಿಗೊಳಿಸಿದ ಪೀಠವು ಅರ್ಜಿಗೆ ದೂರುದಾರರು ಆಕ್ಷೇಪಣೆ ಸಲ್ಲಿಸಬಹುದು ಎಂದು ಆದೇಶಿಸಿದೆ.

Bar & Bench

ಬೆಳಗಾವಿ ಸುವರ್ಣಸೌಧದಲ್ಲಿ ನಡೆದ ಅಧಿವೇಶನದ ವೇಳೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್‌ ವಿರುದ್ಧ ಅಶ್ಲೀಲ ಪದ ಬಳಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿಯ ವಿಧಾನ ಪರಿಷತ್‌ ಸದಸ್ಯ ಸಿ ಟಿ ರವಿ ವಿರುದ್ಧದ ವಿಚಾರಣಾಧೀನ ನ್ಯಾಯಾಲಯದಲ್ಲಿನ ಪ್ರಕ್ರಿಯೆಗೆ ಕರ್ನಾಟಕ ಹೈಕೋರ್ಟ್‌ ಗುರುವಾರ ತಡೆಯಾಜ್ಞೆ ನೀಡಿದೆ.

ಬೆಳಗಾವಿಯ ಬಾಗೇವಾಡಿ ಠಾಣಾ ಪೊಲೀಸರು ದಾಖಲಿಸಿರುವ ಎಫ್‌ಐಆರ್‌ ರದ್ದುಪಡಿಸುವಂತೆ ಕೋರಿ ಸಿ ಟಿ ರವಿ ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು  ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ಏಕಸದಸ್ಯ ಪೀಠ ನಡೆಸಿತು.

ಪ್ರಕರಣದಲ್ಲಿ ದೂರುದಾರೆಯಾಗಿರುವ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‌ ಅವರಿಗೆ ಹ್ಯಾಂಡ್‌ ಸಮನ್ಸ್‌ ಜಾರಿಗೊಳಿಸಿದ ಪೀಠವು ಅರ್ಜಿಗೆ ದೂರುದಾರರು ಆಕ್ಷೇಪಣೆ ಸಲ್ಲಿಸಬಹುದು ಎಂದಿತು.

ಇದಕ್ಕೂ ಮುನ್ನ, ತನಿಖಾಧಿಕಾರಿಗಳ ಪರ ಹಾಜರಿದ್ದ ರಾಜ್ಯ ಸರ್ಕಾರಿ ಅಭಿಯೋಜಕ -1 ಬಿ ಎ ಬೆಳ್ಳಿಯಪ್ಪ ಅವರು “ಅರ್ಜಿದಾರರ ವಿರುದ್ಧ ಯಾವುದೇ ಬಲವಂತದ ಕ್ರಮಜರುಗಿಸಬಾರದು ಎಂದು ಈ ಹಿಂದೆ ಹೈಕೋರ್ಟ್‌ ಮಧ್ಯಂತರ ಆದೇಶ ಮಾಡಿದೆ. ಇದರಿಂದ ಮ್ಯಾಜಿಸ್ಟ್ರೇಟ್‌ ನ್ಯಾಯಾಲಯದ ಕೈಗಳನ್ನು ಕಟ್ಟಿಹಾಕಲಾಗಿದೆ. ಮ್ಯಾಜಿಸ್ಟ್ರೇಟ್‌ ನ್ಯಾಯಾಲಯಕ್ಕೆ ಸಿ ಟಿ ರವಿ ಅವರ ಧ್ವನಿ ಮಾದರಿಯ ವರದಿ ಸಲ್ಲಿಸಬೇಕಾಗಿದೆ. ಅದರಂತೆ ಮ್ಯಾಜಿಸ್ಟ್ರೇಟ್‌ ನ್ಯಾಯಾಲಯ ಪ್ರಕ್ರಿಯೆ ಮುಂದುವರಿಯಲು ಅನುಮತಿಸಬೇಕು. ಪೊಲೀಸರು ಅರ್ಜಿದಾರರಿಗೆ ವಿಚಾರಣೆ ಕರೆಯುವುದಿಲ್ಲ” ಎಂದರು.

ಅದಕ್ಕೆ ಪೀಠವು “ಒಂದು ಬಾರಿ ಪ್ರಕರಣವು ಹೈಕೋರ್ಟ್‌ನಲ್ಲಿ ವಿಚಾರಣೆಗೆ ಒಳಪಟ್ಟ ಬಳಿಕ ಮತ್ಯಾವುದೇ ಸಂಸ್ಥೆ ಅಥವಾ ನ್ಯಾಯಾಲಯಕ್ಕೆ ಪ್ರಕರಣದಲ್ಲಿ ಮುಂದುವರಿಯಲು ಅನುಮತಿಸಲಾಗದು. ತನಿಖಾಧಿಕಾರಿಗಳು ಮುಂದುವರಿಯಲು ಅನುಮತಿಸಿದರೆ ಹೈಕೋರ್ಟ್‌ ಮಂದಿರುವ ಪ್ರಕ್ರಿಯೆಗೆ ಅಡ್ಡಿ ಉಂಟಾಗುತ್ತದೆ” ಎಂದರು.

ಇದಕ್ಕೆ ಬೆಳ್ಳಿಯಪ್ಪ ಅವರು “ಈ ನಿಯಮವು ಪ್ರಕರಣದ ವಿಚಾರಣೆಗೆ ತಡೆಯಾಜ್ಞೆ ನೀಡಿದ ಸಂದರ್ಭದಲ್ಲಿ ಅನ್ವಯಿಸಲಿದೆ. ಆದರೆ, ಅರ್ಜಿದಾರರ ವಿರುದ್ಧ ಬಲವಂತದ ಕ್ರಮ ಜರುಗಿಸಬಾರದು ಎಂದಷ್ಟೇ ಹೈಕೋರ್ಟ್‌ ಆದೇಶಿಸಿದೆ. ಅದಕ್ಕಾಗಿ ಮಧ್ಯಂತರ ಆದೇಶ ತೆರವುಗೊಳಿಸಬೇಕು" ಎಂದು ಕೋರಿದರು.

ಆಗ ಪೀಠವು “ಹಾಗಾದರೆ ಈಗ ವಿಚಾರಣಾ ನ್ಯಾಯಾಲಯದ ವಿಚಾರಣಾ ಪ್ರಕ್ರಿಯೆಗೆ ತಡೆಯಾಜ್ಞೆ ನೀಡುತ್ತೇನೆ” ಎಂದು, ಆದೇಶ ಮಾಡಿದರು.

ವಿಚಾರಣೆ ವೇಳೆ ಅರ್ಜಿದಾರ ಪರ ಹಿರಿಯ ವಕೀಲ ಪ್ರಭುಲಿಂಗ ನಾವದಗಿ ಅವರು “ಶಾಸನಸಭೆಯಲ್ಲಿ ಶಾಸಕ ನೀಡಿದ ಹೇಳಿಕೆ ಅಥವಾ ಮಾಡಿದ ಚರ್ಚೆಗೆ ಸಂಬಂಧಿಸಿದಂತೆ ಕ್ರಿಮಿನಲ್‌ ಪ್ರಕರಣ ದಾಖಲಿಸಲು ಸಂವಿಧಾನದ 194(2) ನೇ ವಿಧಿ ಅಡಿಯಲ್ಲಿ ನಿರ್ಬಂಧವಿದೆ. ಕ್ರಿಮಿನಲ್‌ ಪ್ರಕರಣ ದಾಖಲಾಗಬಹುದು ಎಂಬ ಯಾವುದೇ ಭೀತಿಯಿಲ್ಲದೆ ಶಾಸಕರು ಶಾಸನಭೆಯಲ್ಲಿ ಮಾತನಾಡಬೇಕು ಎಂಬ ಉದ್ದೇಶದಿಂದ ಈ ನಿಯಮ ರೂಪಿಸಲಾಗಿದೆ” ಎಂದರು.

“ಶಾಸನಸಭೆಯಲ್ಲಿ ಚರ್ಚಿಸಿದ ವಿಚಾರಗಳ ಸಂಬಂಧ ಶಾಸಕರಿಗೆ ಸಂಪೂರ್ಣ ರಕ್ಷಣೆಯಿದೆ. ಒಂದು ವೇಳೆ ಯಾರಾದರೂ ಏನಾದರೂ ಮಾತನಾಡಿದರೆ ಸಭಾಪತಿಯು ಶಾಸಕರನ್ನು ಹೊರ ಹೊಕಬಹುದು ಅಥವಾ ಅವರ ವಿರುದ್ಧ ಕ್ರಮ ಜರುಗಿಸಬಹುದು. ಮಾನಹಾನಿ ಹೇಳಿಕೆ ನೀಡಿದ ಸಂದರ್ಭದಲ್ಲಿಯೂ ಸಭಾಧ್ಯಕ್ಷರು ಕ್ರಮ ಜರುಗಿಸಬೇಕಾಗುತ್ತದೆಯೇ ವಿನಾ ಹೊರಗಿನವರು ಅಲ್ಲ. ಪೊಲೀಸರು ಶಾಸಕರ ಮೇಲೆ ಪ್ರಕರಣ ದಾಖಲಿಸಲು ಅವಕಾಶವಿಲ್ಲ” ಎಂದು ವಿವರಿಸಿದರು.

ಇದಕ್ಕೆ ಆಕ್ಷೇಪಿಸಿದ ಬೆಳ್ಳಿಯಪ್ಪ ಅವರು “ಈ ಪ್ರಕರಣದಲ್ಲಿ ವಾಸ್ತವವಾಗಿ ಸದನವನ್ನು ಸಭಾಪತಿಗಳು ಮುಂದೂಡಿದ್ದರು. ಸದನದಲ್ಲಿ ಪ್ರತಿಭಟನೆ ನಡೆಯುತ್ತಿದ್ದಾಗ ಈ ಘಟನೆ ನಡೆದಿದೆ. ಇದರಿಂದ ಸದನದ ಚರ್ಚೆಗೂ ಸಿ ಟಿ ರವಿ ನೀಡಿರುವ ಹೇಳಿಕೆಗೆ ಸಂಬಂಧವಿಲ್ಲ. ಘಟನೆ ನಡೆದ ನಂತರ ಸಭಾಪತಿಗಳ ಮುಂದೆ ದೂರು ದಾಖಲಾಗಿವೆ. ಅವರು ಇಂತಹ ದುರುದೃಷ್ಟ ಘಟನೆ ನಡೆಯಬಾರದು ಎಂದಷ್ಟೇ ಹೇಳಿದ್ದಾರೆ ಹೊರತು ದೂರಿನ ಕುರಿತು ಪ್ರತಿಕ್ರಿಯಿಸಿಲ್ಲ. ಶಾಸನಭೆಯಲ್ಲಿ ಚರ್ಚೆಯಾಗುವ ವಿಚಾರಗಳಿಗೆ ಸೀಮಿತವಾಗಿ ಶಾಸಕರು ನೀಡಿದ ಹೇಳಿಕೆಗೆ ಯಾರೂ ಕ್ರಮ ಜರುಗಿಸುವಂತಿಲ್ಲ. ಆದರೆ, ಸದನದಲ್ಲಿ ಪ್ರತಿಭಟನೆ ನಡೆಯುತ್ತಿದ್ದಾಗ ಈ ಘಟನೆ ನಡೆದಿರುವುದರಿಂದ ಅರ್ಜಿದಾರರ ವಿರುದ್ಧ ಕ್ರಿಮಿನಲ್‌ ಪ್ರಕರಣ ದಾಖಲಿಸಲಾಗಿದೆ” ಎಂದು ಸಮರ್ಥಿಸಿದರು.

ವಾದ-ಪ್ರತಿವಾದ ಆಲಿಸಿದ ಪೀಠವು “ಪ್ರಕರಣದಲ್ಲಿ ಸಾಕಷ್ಟು ವಿಚಾರಗಳು ಅಡಗಿರುವುದರಿಂದ ಆ ಬಗ್ಗೆ ಪರಿಶೀಲಿಸಿ ಉತ್ತರಿಸಬೇಕಾಗಿದೆ.  ಇದರಿಂದ ಶೀಘ್ರಗತಿಯಲ್ಲಿ ವಿಚಾರಣೆ ನಡೆಸಿ ತೀರ್ಮಾನ ಕೈಗೊಳ್ಳಲಾಗದು” ಎಂದು ತಿಳಿಸಿ ಅರ್ಜಿ ವಿಚಾರಣೆಯನ್ನು ಫೆಬ್ರವರಿ 20ಕ್ಕೆ ಮುಂದೂಡಿತು.