Mahesh Joshi
Mahesh Joshi 
ಸುದ್ದಿಗಳು

ಧ್ವಜಾರೋಹಣ ಕಾರ್ಯಕ್ರಮಕ್ಕೆ ಅಡ್ಡಿ: ಮಹೇಶ್‌ ಜೋಶಿ ದಾಖಲಿಸಿದ್ದ ಪ್ರಕರಣ ವಜಾ ಮಾಡಿದ ಬೆಂಗಳೂರು ನ್ಯಾಯಾಲಯ

Bar & Bench

ತಮ್ಮನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿ, ದೂರದರ್ಶನ ಕೇಂದ್ರದಲ್ಲಿ ನಡೆಯುತ್ತಿದ್ದ ರಾಷ್ಟ್ರ ಧ್ವಜಾರೋಹಣ ಕಾರ್ಯಕ್ರಮಕ್ಕೆ ಅಡ್ಡಿಯುಂಟು ಮಾಡಿದ್ದಾರೆ ಎಂದು ಆರೋಪಿಸಿ ದೂರದರ್ಶನ ಕಾರ್ಯಕ್ರಮ‌ದ ಉಪ ನಿರ್ದೇಶಕರಾಗಿದ್ದ ಎನ್ ಕೆ ಮೋಹನರಾಮ್‌ ಮತ್ತು ಪ್ರೊಡಕ್ಷನ್ ಸಹಾಯಕ ಎಸ್ ಬಿ ಭಜಂತ್ರಿ ವಿರುದ್ಧ ದೂರದರ್ಶನ ಕೇಂದ್ರದ ಅಂದಿನ ಹಿರಿಯ ನಿರ್ದೇಶಕ ಮಹೇಶ್ ಜೋಶಿ ದಾಖಲಿಸಿದ್ದ ಕ್ರಿಮಿನಲ್ ಪ್ರಕರಣವನ್ನುಬೆಂಗಳೂರಿನ ನ್ಯಾಯಾಲಯ ವಜಾಗೊಳಿಸಿದೆ.

ಮಹೇಶ್ ಜೋಶಿ ದಾಖಲಿಸಿದ್ದ ಖಾಸಗಿ ದೂರನ್ನು ಎಂಟನೇ ಹೆಚ್ಚುವರಿ ಮುಖ್ಯ ಮೆಟ್ರೊಪಾಲಿಟನ್‌ ಮ್ಯಾಜಿಸ್ಟ್ರೇಟ್‌ (ಎಸಿಎಂಎಂ) ನ್ಯಾಯಾಲಯದ ನ್ಯಾಯಾಧೀಶ ಕೆ ಎನ್‌ ಶಿವಕುಮಾರ್ ವಿಚಾರಣೆ ನಡೆಸಿ ಆರೋಪಿಗಳಾದ ಎನ್ ಕೆ ಮೋಹನರಾಮ್ ಮತ್ತು ಎಸ್ ಬಿ ಭಜಂತ್ರಿ ಅವರನ್ನು ಆರೋಪಮುಕ್ತಗೊಳಿಸಿ ಆದೇಶಿಸಿದ್ದಾರೆ.

ಆರೋಪಿಗಳ ವಿರುದ್ಧದ ಆಪಾದನೆಗಳನ್ನು ಪುಷ್ಟೀಕರಿಸುವ ಮತ್ತು ಸೂಕ್ತ ಸಾಕ್ಷ್ಯಗಳನ್ನು ಹಾಜರುಪಡಿಸುವಲ್ಲಿ ಫಿರ್ಯಾದುದಾರ ಮಹೇಶ್ ಜೋಶಿ ವಿಫಲವಾಗಿದ್ದಾರೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.

ದೂರನ್ನು ಗಮನಿಸಿದರೆ ಪರಸ್ಪರರ ಮಧ್ಯೆ ವೃತ್ತಿಪರ ವೈಮನಸ್ಸು ಇರುವುದು ಕಂಡುಬರುತ್ತಿದೆ. ಈ ಕಾರಣಕ್ಕಾಗಿಯೇ ಮಹೇಶ್ ಜೋಶಿ ಇಂತಹ ದೂರು ದಾಖಲಿಸಿರುವ ಸಂಶಯ ಮೂಡುತ್ತದೆ ಎಂದು ನ್ಯಾಯಾಧೀಶರು ಅಭಿಪ್ರಾಯಪಟ್ಟಿದ್ದಾರೆ.

ಆರೋಪಿಗಳ ವಿರುದ್ಧ ನಿಗದಿಪಡಿಸಲಾಗಿದ್ದ ಭಾರತೀಯ ದಂಡ ಸಂಹಿತೆ ಸೆಕ್ಷನ್‌ಗಳಾದ 186 (ಸರ್ಕಾರಿ ನೌಕರನ ಕಾರ್ಯ ನಿರ್ವಹಣೆಗೆ ಅಡ್ಡಿ), 504 (ಶಾಂತಿ ಭಂಗ ಹಾಗೂ ಉದ್ದೇಶಪೂರ್ವಕ ಅಪಮಾನ), 120-ಬಿ (ಅಪರಾಧಿಕ ಒಳಸಂಚು) ಮತ್ತು ರಾಷ್ಟ್ರೀಯ ಗೌರವಕ್ಕೆ ಅಪಮಾನ ಹಾಗೂ ಧಕ್ಕೆ ತಡೆ ಕಾಯಿದೆ ಅಡಿಯಲ್ಲಿನ ಆಪಾದನೆಗಳಿಂದ ಆರೋಪಿಗಳನ್ನು ದೋಷಮುಕ್ತಗೊಳಿಸಲಾಗಿದೆ.

ಪ್ರಕರಣ ಹಿನ್ನೆಲೆ: ಫಿರ್ಯಾದುದಾರ ಮಹೇಶ್ ಜೋಶಿ ಸದ್ಯ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರು. ಇವರು ಈ ಹಿಂದೆ 2008ರಲ್ಲಿ ಬೆಂಗಳೂರು ದೂರದರ್ಶನ ಕೇಂದ್ರದಲ್ಲಿ ಹಿರಿಯ ನಿರ್ದೇಶಕರಾಗಿದ್ದ ವೇಳೆ 2008ರ ಆಗಸ್ಟ್ 15ರಂದು ಬೆಳಗ್ಗೆ 7.45ರ ಸಮಯದಲ್ಲಿ ಧ್ವಜಾರೋಹಣ ಕಾರ್ಯಕ್ರಮದ ಪೂರ್ವಭಾವಿ ಸಿದ್ಧತೆ ನಡೆದಿತ್ತು. ಈ ಸಮಯದಲ್ಲಿ ಎನ್ ಕೆ ಮೋಹನ ರಾಮ್ ಮತ್ತು ಎಸ್ ಪಿ ಭಜಂತ್ರಿ ಹಾಗೂ ಎಂ ಬಾಲು (ಇವರು ಈಗಾಗಲೇ ಮೃತಪಟ್ಟಿದ್ದಾರೆ) ಅವರು ಜೋಶಿಯವರನ್ನು ಅವಾಚ್ಯವಾಗಿ ಬೈಯ್ಯುತ್ತಾ ಧ್ವಜಾರೋಹಣ ನಡೆಸದಂತೆ ಅಡ್ಡಿಯುಂಟು ಮಾಡಿದರು ಎನ್ನುವುದು ಆರೋಪ. ಅಂತೆಯೇ, ನಾನು ಧ್ವಜಾರೋಹಣ ನೆರವೇರಿಸಿ ಭಾಷಣ ಮಾಡುವಾಗ ನನ್ನ ಭಾಷಣಕ್ಕೆ ತದ್ವಿರುದ್ಧವಾಗಿ ಆರೋಪಿಗಳೂ ಭಾಷಣ ಶುರು ಮಾಡಿ ರಾಷ್ಟ್ರಧ್ವಜಕ್ಕೆ ಅಗೌರವ ಉಂಟು ಮಾಡಿರುತ್ತಾರೆ ಎಂದು ಆರೋಪಿಸಿ ಜೋಶಿ ಕ್ರಿಮಿನಲ್ ಸ್ವರೂಪದ ಖಾಸಗಿ ದೂರು ದಾಖಲಿಸಿದ್ದರು.