Justice K Natarajan and Karnataka HC
Justice K Natarajan and Karnataka HC 
ಸುದ್ದಿಗಳು

ರಾಜಕಾಲುವೆ ಒತ್ತುವರಿ ತೆರವಿಗೆ ಅಡ್ಡಿ: ಅಪಾರ್ಟ್‌ಮೆಂಟ್‌ ನಿವಾಸಿಗಳ ವಿರುದ್ಧದ ಪ್ರಕರಣ ರದ್ದಪಡಿಸಲು ಹೈಕೋರ್ಟ್‌ ನಕಾರ

Bar & Bench

ಬೆಂಗಳೂರಿನ ಮಹದೇವಪುರ ವ್ಯಾಪ್ತಿಯಲ್ಲಿ ನ್ಯಾಯಾಲಯದ ನಿರ್ದೇಶನದ ಹಿನ್ನೆಲೆಯಲ್ಲಿ ರಾಜಕಾಲುವೆ ಒತ್ತುವರಿ ತೆರವು ಮಾಡಲು ಸಮೀಕ್ಷೆ ನಡೆಸಲು ಮುಂದಾದ ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆಯ (ಬಿಬಿಎಂಪಿ) ಅಧಿಕಾರಿಗಳ ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪಕ್ಕೆ ಸಂಬಂಧಿಸಿದಂತೆ ಅಪಾರ್ಟ್‌ಮೆಂಟ್‌ ಒಂದರ ನಿವಾಸಿಗಳ ವಿರುದ್ಧ ದಾಖಲಾಗಿರುವ ಪ್ರಕರಣವನ್ನು ರದ್ದುಪಡಿಸಲು ಕರ್ನಾಟಕ ಹೈಕೋರ್ಟ್‌ ಈಚೆಗೆ ನಿರಾಕರಿಸಿದೆ.

ಮಹದೇವಪುರದ ಹೊರವರ್ತುಲ ರಸ್ತೆಯ ಚಿನ್ನಪ್ಪ ಬಡಾವಣೆಯಲ್ಲಿರುವ ಶಿಲ್ಪಿತಾ ಸ್ಪ್ಲೆಂಡರ್‌ ಅನೆಕ್ಸ್‌ ಅಪಾರ್ಟ್‌ಮೆಂಟ್‌ನ 23 ನಿವಾಸಿಗಳು ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಕೆ ನಟರಾಜನ್‌ ಅವರ ನೇತೃತ್ವದ ಏಕಸದಸ್ಯ ಪೀಠವು ವಜಾ ಮಾಡಿದೆ.

“ಅಪಾರ್ಟ್‌ಮೆಂಟ್‌ ನಿವಾಸಿಗಳಾದ ಅರ್ಜಿದಾರರು ಮನೆಯಲ್ಲಿರಬೇಕಿತ್ತು. ಆದರೆ, ಸರ್ಕಾರಿ ಅಧಿಕಾರಿಗಳು ಕೆಲಸ ನಿರ್ವಹಿಸುವುದಕ್ಕೆ ಅಡ್ಡಿಪಡಿಸುವ ಉದ್ದೇಶದಿಂದ ಅವರೆಲ್ಲರೂ ಒಟ್ಟಾಗಿ ಅಕ್ರಮ ಕೂಟ ರಚಿಸಿದ್ದು, ಇದು ಐಪಿಸಿ ಸೆಕ್ಷನ್‌ 149 (ಏಕೈಕ ಉದ್ದೇಶ) ಮತ್ತು 143ರ (ಕಾನೂನುಬಾಹಿರವಾಗಿ ಒಟ್ಟಾಗಿ ಸೇರುವುದು) ಅಡಿ ಅಪರಾಧವಾಗಿದೆ” ಎಂದು ನ್ಯಾಯಾಲಯ ಆದೇಶದಲ್ಲಿ ಹೇಳಿದೆ.

“ಹೈಕೋರ್ಟ್‌ ಆದೇಶದಂತೆ ರಾಜಕಾಲುವೆ ಒತ್ತುವರಿ ತೆರವು ಮತ್ತು ಸಮೀಕ್ಷೆ ನಡೆಸಿ ಬಿಬಿಎಂಪಿ ಅಧಿಕಾರಿಗಳು ಮತ್ತು ಎಡಿಎಲ್‌ಆರ್‌ ಅವರು ಬೇಲಿ ಹಾಕಲು ಅಡ್ಡಿಪಡಿಸಿರುವುದಕ್ಕೆ ಐಪಿಸಿ ಸೆಕ್ಷನ್‌ 353 ಅನ್ವಯವಾಗುತ್ತದೆ. ಒತ್ತುವರಿ ತೆರವು ಮಾಡಿದ ಸ್ಥಳದಲ್ಲಿ ಬೇಲಿ ಹಾಕುವ ಸಂದರ್ಭದಲ್ಲೇ ಅರ್ಜಿದಾರರ ವಿರುದ್ಧ ಪ್ರಕರಣ ದಾಖಲಿಸಿರುವುದು ಒಪ್ಪಿತ ವಿಚಾರವಾಗಿದೆ. ಹೀಗಾಗಿ, ಅರ್ಜಿದಾರರ ವಿರುದ್ಧ ತನಿಖಾ ಪ್ರಕ್ರಿಯೆ ಮುಂದುವರಿಸಲು ಸಕಾರಣವಿಲ್ಲ ಎಂದು ಹೇಳಲಾಗದು” ಎಂದು ಪೀಠ ಹೇಳಿದೆ.

ಬಿಬಿಎಂಪಿ ಪ್ರತಿನಿಧಿಸಿದ್ದ ವಕೀಲರಾದ ಆರ್‌ ಡಿ ರೇಣುಕಾರಾಧ್ಯ ಮತ್ತು ಅಮಿತ್‌ ದೇಶಪಾಂಡೆ ಅವರು “ಹೈಕೋರ್ಟ್‌ ಆದೇಶ ಪಾಲನೆಗೆ ಮುಂದಾದ ಸರ್ಕಾರಿ ಅಧಿಕಾರಿಗಳ ಕರ್ತವ್ಯಕ್ಕೆ ಅಡ್ಡಿಪಡಿಸಿರುವುದು ಫೋಟೊ ಮತ್ತು ವಿಡಿಯೊ ಕ್ಲಿಪ್‌ಗಳಲ್ಲಿ ಸ್ಪಷ್ಟವಾಗಿದೆ. ಹೀಗಾಗಿ, ಅರ್ಜಿ ವಜಾ ಮಾಡಬೇಕು” ಎಂದು ಕೋರಿದ್ದರು.

ಪ್ರಕರಣದ ಹಿನ್ನೆಲೆ: ಮಹದೇವಪುರ ಗ್ರಾಮದ ಸರ್ವೆ ನಂ. 151/1, 151/4 ಮತ್ತು 119ರಲ್ಲಿ ರಾಜಕಾಲುವೆ ಒತ್ತುವರಿ ತೆರವುಗೊಳಿಸುವಂತೆ ಹೈಕೋರ್ಟ್‌ ನಿರ್ದೇಶಿಸಿತ್ತು. ಇದರ ಭಾಗವಾಗಿ ಒತ್ತುವರಿ ತೆರವು ಮಾಡಿ, ಬೇಲಿ ಹಾಕಲು 2020ರ ಮಾರ್ಚ್‌ 21ರಂದು ಬಿಬಿಎಂಪಿ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿದ್ದರು. ಈ ಸಂದರ್ಭದಲ್ಲಿ ಅರ್ಜಿದಾರರಾದ ಅಪಾರ್ಟ್‌ಮೆಂಟ್‌ ನಿವಾಸಿಗಳು ಕಾನೂನುಬಾಹಿರವಾಗಿ ಒಂದುಗೂಡಿ, ನ್ಯಾಯಾಲಯದ ಆದೇಶ ಪಾಲಿಸಲು ಮುಂದಾದ ಸರ್ಕಾರಿ ಅಧಿಕಾರಿಗಳ ಕರ್ತವ್ಯಕ್ಕೆ ಅಡ್ಡಿಪಡ್ಡಿಸಿದ್ದರು ಎಂದು ಬಿಬಿಎಂಪಿಯ ಕಾರ್ಯಕಾರಿ ಎಂಜಿನಿಯರ್‌ ಮಾಲತಿ ಅವರು ಅರ್ಜಿದಾರರ ವಿರುದ್ಧ ಐಪಿಸಿ ಸೆಕ್ಷನ್‌ಗಳಾದ 143, 353 ಮತ್ತು 149ರ ಅಡಿ ಪ್ರಕರಣ ದಾಖಲಿಸಿದ್ದರು. ಇದನ್ನು ವಜಾ ಮಾಡುವಂತೆ ಅಪಾರ್ಟ್‌ಮೆಂಟ್‌ ನಿವಾಸಿಗಳು ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್‌ ವಜಾ ಮಾಡಿದೆ.

ಅರ್ಜಿದಾರರನ್ನು ಹಿರಿಯ ವಕೀಲ ಸಿ ಕೆ ನಂದಕುಮಾರ್‌ ಮತ್ತು ವಕೀಲ ಅರ್ಜುನ್‌ ರಾವ್‌ ಪ್ರತಿನಿಧಿಸಿದ್ದರು.