Amazon Warehouse
Amazon Warehouse 
ಸುದ್ದಿಗಳು

ರೂ.190ಕ್ಕೆ ಲ್ಯಾಪ್‌ಟಾಪ್‌ ನೀಡಲು ಸ್ವೀಕರಿಸಿದ್ದ ಆದೇಶ ರದ್ದು: ಗ್ರಾಹಕರ ಆಯೋಗದಿಂದ ಅಮೆಜಾನ್‌ಗೆ ರೂ. 45 ಸಾವಿರ ದಂಡ

Bar & Bench

ರಿಯಾಯಿತಿ ದರದಲ್ಲಿ 190 ರೂಪಾಯಿಗೆ ಲ್ಯಾಪ್‌ಟಾಪ್‌ ನೀಡಲು ಸ್ವೀಕರಿಸಿದ್ದ ಆದೇಶವನ್ನು ಕಾಯ್ದಿರಿಸಿದ ಕೆಲವೇ ಕ್ಷಣಗಳಲ್ಲಿ‌ ರದ್ದು ಮಾಡಿದ ಹಿನ್ನೆಲೆಯಲ್ಲಿ ನೊಂದ ಗ್ರಾಹಕರಾದ ಕಾನೂನು ವಿದ್ಯಾರ್ಥಿಯೊಬ್ಬರಿಗೆ 40,000 ರೂಪಾಯಿ ಪರಿಹಾರ ಪಾವತಿಸುವಂತೆ ಅಮೆಜಾನ್‌ ಸಂಸ್ಥೆಗೆ ಒಡಿಶಾದ ಗ್ರಾಹಕ ವ್ಯಾಜ್ಯ ಪರಿಹಾರ ಆಯೋಗವು ಆದೇಶಿಸಿದೆ. ಹೆಚ್ಚುವರಿಯಾಗಿ ಮೊಕದ್ದಮೆಯ ಶುಲ್ಕ ಎಂದು 5,000 ರೂಪಾಯಿ ಪಾವತಿಸುವಂತೆಯೂ ನಿರ್ದೇಶಿಸಲಾಗಿದೆ.

ಲ್ಯಾಪ್‌ಟಾಪ್‌ ಮಾರಾಟಗಾರರು ಮತ್ತು ವಿದ್ಯಾರ್ಥಿಯ ನಡುವಿನ ಒಪ್ಪಂದದ ಗೋಪ್ಯ ಮಾಹಿತಿಯ ಬಗ್ಗೆ ತನಗೆ ಅರಿವಿಲ್ಲ ಎಂಬ ಅಮೆಜಾನ್‌ ವಾದವನ್ನು ಆಯೋಗವು ತಿರಸ್ಕರಿಸಿದೆ. ಒಮ್ಮೆ ಒಪ್ಪಂದ (190 ರೂಪಾಯಿ ಲ್ಯಾಪ್‌ಟಾಪ್‌ ಮಾರಾಟ ಮಾಡುವುದು) ಪೂರ್ಣಗೊಂಡ ಬಳಿಕ ಅದರಿಂದ ಹಿಂದೆ ಸರಿಯುವಂತಿಲ್ಲ ಎಂದಿರುವ ಆಯೋಗವು ಒಪ್ಪಂದ ಉಲ್ಲಂಘಿಸಿರುವುದಕ್ಕೆ ನಷ್ಟ ತುಂಬಿಕೊಡಬೇಕು ಎಂದು ಹೇಳಿದೆ.

ಮಾರಾಟಗಾರರು ಅಮೆಜಾನ್‌ ಮೂಲಕ ತನ್ನ ಸರಕು ಮಾರಾಟ ಮಾಡುತ್ತಿರುವ ಹಿನ್ನೆಲೆಯಲ್ಲಿ ಸಂಸ್ಥೆಯು ತನ್ನ ಜವಾಬ್ದಾರಿಯಿಂದ ನುಣುಚಿಕೊಳ್ಳಲಾಗದು ಎಂದು ಆಯೋಗ ಹೇಳಿದ್ದು, ದೂರುದಾರರು ಅನುಭವಿಸಿರುವ ಮಾನಸಿಕ ಯಾತನೆ ಮತ್ತು ಕಿರುಕುಳಕ್ಕೆ 30,000 ರೂಪಾಯಿ ಹಾಗೂ 10,000 ರೂಪಾಯಿಗಳನ್ನು ಶಿಕ್ಷೆಯ ರೂಪದ ದಂಡ ಹಾಗೂ 5,000 ರೂಪಾಯಿಗಳನ್ನು ಮೊಕದ್ದಮೆ ಶುಲ್ಕವನ್ನಾಗಿ ಪಾವತಿಸುವಂತೆ ನಿರ್ದೇಶಿಸಿದೆ.

2014ರಲ್ಲಿ ಅಮೆಜಾನ್‌ನಲ್ಲಿ 23,499 ರೂಪಾಯಿ ಮೊತ್ತದ ಲ್ಯಾಪ್‌ಟಾಪ್‌ 190 ರೂಪಾಯಿಗೆ ಲಭ್ಯವಿದೆ ಎಂಬ ವಿಚಾರ ಕಾನೂನು ವಿದ್ಯಾರ್ಥಿಯಾಗಿದ್ದ ಸುಪ್ರಿಯೋ ರಂಜನ್‌ ಮಹಾಪಾತ್ರ ಅವರ ಗಮನಕ್ಕೆ ಬಂದಿತ್ತು. ಈ ಹಿನ್ನೆಲೆಯಲ್ಲಿ ಲ್ಯಾಪ್‌ಟಾಪ್‌ ಕಾಯ್ದಿರಿಸಿದ್ದ ಮಹಾಪಾತ್ರ ಅವರಿಗೆ ಸರಕು ಖರೀದಿಸಿದ ಎರಡು ತಾಸಿನಲ್ಲೇ ಅಮೆಜಾನ್‌ ಗ್ರಾಹಕರ ವಿಭಾಗದ ಸೇವಾ ವಲಯದಿಂದ ಕರೆ ಬಂದಿದ್ದು, ಬೆಲೆ ಹಿಂಜರಿತ ಸಮಸ್ಯೆಯಿಂದಾಗಿ ತಮ್ಮ ಸರಕು ಖರೀದಿ ಆದೇಶವು ರದ್ದಾಗಿದೆ ಎಂದು ತಿಳಿಸಲಾಗಿತ್ತು. ಇದರಿಂದ ತೀರ ನಿರಾಸೆಗೊಂಡ ಅವರು ಅಮೆಜಾನ್‌ಗೆ ಕಾನೂನು ನೋಟಿಸ್‌ ಕಳುಹಿಸಿದ್ದರು. ಇದಕ್ಕೆ ಪ್ರತಿಕ್ರಿಯೆ ಬಾರದಿದ್ದಾಗ ಜಿಲ್ಲಾ ವೇದಿಕೆಯಲ್ಲಿ ತಾನು ಅನುಭವಿಸಿದ ಮಾನಸಿಕ ವೇದಿಕೆಗೆ 50,000 ರೂಪಾಯಿ ಪರಿಹಾರ ಮತ್ತು 10,000 ರೂಪಾಯಿ ಮೊಕದ್ದಮೆ ವೆಚ್ಚ ಕೊಡಿಸುವಂತೆ ಕೋರಿಕೆ ಸಲ್ಲಿಸಿದ್ದರು.

ಈ ಸಂದರ್ಭದಲ್ಲಿ ಅಮೆಜಾನ್‌, ತನ್ನ ವೇದಿಕೆಯಲ್ಲಿ ವ್ಯವಹರಿಸುತ್ತಿರುವ ಮೂರನೇ ಮಾರಾಟಗಾರರು ಹಾಗೂ ಗ್ರಾಹಕರ ನಡುವಿನ ಒಪ್ಪಂದ ಇದಾಗಿದೆ. ಒಪ್ಪಂದದಲ್ಲಿ ತಾನು ಪಕ್ಷಕಾರನಲ್ಲ ಎಂಬ ನಿಲುವು ವ್ಯಕ್ತಪಡಿಸಿತ್ತು. ಕಾನೂನು ವಿದ್ಯಾರ್ಥಿಯು ಅಮೆಜಾನ್‌ ಆನ್‌ಲೈನ್‌ ಆಫರ್‌ ಒಪ್ಪಿಕೊಂಡು, ಹಣಪಾವತಿ ಮಾರ್ಗವನ್ನೂ ಆಯ್ದುಕೊಂಡಿದ್ದಾರೆ. ಅದಾಗ್ಯೂ, ಅಮೆಜಾನ್‌ ಸೇವೆ ನೀಡುವಲ್ಲಿ ಉಡಾಫೆಯಾಗಿ ವರ್ತಿಸಿದ್ದು, ಅನ್ಯಾಯದ ವ್ಯವಹಾರದ ಮಾರ್ಗದಲ್ಲಿ ತೊಡಗಿದೆ ಎಂದು ಜಿಲ್ಲಾ ವೇದಿಕೆ ಆದೇಶಿಸಿದ್ದು, 10,000 ರೂಪಾಯಿ ಪರಿಹಾರ ಮತ್ತು 2,000 ರೂಪಾಯಿ ಮೊಕದ್ದಮೆ ವೆಚ್ಚ ಪಾವತಿಸುವಂತೆ ಅಮೆಜಾನ್‌ಗೆ ಸೂಚಿಸಿತ್ತು. ಇದರಿಂದ ತೃಪ್ತರಾಗದ ಮಹಾಪಾತ್ರ ಅವರು ರಾಜ್ಯ ಆಯೋಗದ ಕದ ತಟ್ಟಿದ್ದರು.

ಜಿಲ್ಲಾ ವೇದಿಕೆಯ ಅಭಿಪ್ರಾಯಕ್ಕೆ ಸಹಮತ ವ್ಯಕ್ತಪಡಿಸಿದ್ದ ಆಯೋಗವು ಅಮೆಜಾನ್‌ ಹೊಣೆಗಾರಿಕೆಯನ್ನು ಗಮನದಲ್ಲಿಟ್ಟುಕೊಂಡು “ಪ್ರತಿಷ್ಠಿತ ಆನ್‌ಲೈನ್‌ ಸಂಸ್ಥೆಯಾದ ಅಮೆಜಾನ್‌ ತನ್ನಲ್ಲಿ ಲಭ್ಯ ಇರುವ ಸರಕುಗಳನ್ನು ಗಮನದಲ್ಲಿಟ್ಟುಕೊಂಡು ಜಾಹೀರಾತು ನೀಡಿ, ಆಫರ್‌ ಇಟ್ಟಿರುತ್ತದೆ. ಇದನ್ನು ಆಧರಿಸಿ ದೂರುದಾರರು ಸರಕು ಖರೀದಿ ಆದೇಶ ಮಾಡಿದ್ದು, ಅದಕ್ಕೆ ಒಪ್ಪಿಗೆಯೂ ದೊರೆತಿದೆ. ಅಲ್ಲಿಗೆ ಉಭಯತ್ರರ ನಡುವೆ ಒಪ್ಪಂದವಾಗಿದೆ,” ಎಂದು ಹೇಳಿದೆ.

ಖರೀದಿ ಆದೇಶಕ್ಕೆ ಒಪ್ಪಿಗೆ ನೀಡುವುದಕ್ಕೂ ಮುನ್ನ ಸರಕು ಖರೀದಿ ಆದೇಶ ರದ್ದುಗೊಂಡಿದ್ದರೆ ಪರಿಸ್ಥಿತಿಯು ಬೇರೆಯೇ ಇರುತ್ತಿತ್ತು ಎಂದು ಆಯೋಗ ಅಭಿಪ್ರಾಯಪಟ್ಟಿದೆ. ಮೇಲ್ಮನವಿಗೆ ಸಮ್ಮತಿ ವ್ಯಕ್ತಪಡಿಸಿರುವ ಆಯೋಗವು ಪರಿಹಾರದ ಮೊತ್ತದಲ್ಲಿ ಹೆಚ್ಚಳ ಮಾಡಿ ಆದೇಶ ಹೊರಡಿಸಿದೆ. ಗ್ರಾಹಕ ಸಂರಕ್ಷಣ ಕಾಯಿದೆ – 1986ರ ಅನ್ವಯ ಪ್ರಕರಣವನ್ನು ಬಗೆಹರಿಸಲಾಗಿದೆ.